ನಿರ್ದೇಶಕ ಹರ್ಷ ಮೊಗದಲ್ಲಿ ಮಂದಹಾಸ ಮೂಡಿದೆ. ಅವರಷ್ಟೇ ಅಲ್ಲ, ‘ಸೀತಾರಾಮ ಕಲ್ಯಾಣ’ ಚಿತ್ರತಂಡದಲ್ಲೂ ಅದು ಮನೆ ಮಾಡಿದೆ. ಹೌದು, ‘ಸೀತಾರಾಮ ಕಲ್ಯಾಣ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಗಳಿಕೆಯಲ್ಲೂ ಚಿತ್ರ ಹಿಂದೆ ಬಿದ್ದಿಲ್ಲ ಎಂಬ ಖುಷಿ ಚಿತ್ರತಂಡದ್ದು. ಆ ಉತ್ಸಾಹದಲ್ಲೇ ಚಿತ್ರವನ್ನು ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಲು ಮಾಧ್ಯಮ ಮುಂದೆ ಬಂದಿತ್ತು ಚಿತ್ರತಂಡ.
ಈ ವೇಳೆ ಸಿನಿಮಾ ಕುರಿತು ಮಾತಿಗಿಳಿದ ಕಾರ್ಯಕಾರಿ ನಿರ್ಮಾಪಕ ಸುನೀಲ್ ಗೌಡ, ‘ಸೀತಾರಾಮ ಕಲ್ಯಾಣ’ ಚಿತ್ರ ಗಳಿಕೆಯಲ್ಲಿ ಉತ್ತಮವಾಗಿದೆ. ವಿತರಕರಿಗೂ ಒಳ್ಳೆಯ ಲಾಭವಾಗಿದೆ. ಹಾಕಿದ ಬಂಡವಾಳಕ್ಕಿಂತ ಶೇ. 20ರಷ್ಟು ಹೆಚ್ಚು ಗಳಿಕೆಯಾಗಿದೆ. ಅಲ್ಲದೆ ಟಿವಿ ಹಕ್ಕು ಮಾರಾಟ ಕೂಡ ಒಳ್ಳೆಯ ಬೆಲೆಗೆ ಹೋಗಿದೆ ಎಂಬ ವಿಷಯ ಬಿಚ್ಚಿಟ್ಟರು.
ನಾಯಕ ನಟ ನಿಖಿಲ್ ಕುಮಾರ್ ಅವರಿಗೆ ಚಿತ್ರ ಗೆಲುವು ಕೊಟ್ಟ ಖುಷಿ. ಅದೇ ಖುಷಿಗೆ ಮಾತಿಗಿಳಿದ ಅವರು, ‘ಚಿತ್ರವನ್ನು ನೋಡಿ ಬೆಂಬಲಿಸಿದ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು’ ಎಂದರು.
ಇನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕುಟುಂಬ ಸಮೇತ ಮೊಮ್ಮಗ ನಿಖೀಲ್ ಅಭಿನಯದ ‘ಸೀತಾರಾಮ ಕಲ್ಯಾಣ’ ಸಿನಿಮಾ ವೀಕ್ಷಿಸಿ ಪ್ರಶಂಸಿಸಿದ್ದಾರೆ. ಸಿನಿಮಾದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಬೆಳಕು ಚೆಲ್ಲಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ನಿಖಿಲ್ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಹಾಗೇ ಚಿತ್ರದ ಇತರ ಕಲಾವಿದರು, ತಂತ್ರಜ್ಞರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಚಿತ್ರ ಪ್ರೀಮಿಯರ್ ಶೋ ವೀಕ್ಷಿಸಿದ ರಾಜ್ಯದ ಪ್ರಮುಖ ರಾಜಕಾರಣಿಗಳು ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರದ ಹಾಡುಗಳು ಸಖತ್ ಹಿಟ್ ಆಗಿದ್ದು ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.
ಅದರಲ್ಲೂ ಅರೆರೆ ಮುದ್ದು ಗಿಣಿ ಮನಸ್ಸು ಕದ್ದ ಮನ್ಮೋಹಿನಿ ಹಾಡು ಸಖತ್ ಹಿಟ್ ಆಗಿದೆ. ಈ ಹಾಡಿನ ಸಂಪೂರ್ಣ ವಿಡಿಯೋವನ್ನು ಚಿತ್ರತಂಡ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು ಒಂದೆ ದಿನದಲ್ಲಿ 17 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈವರೆಗೆ 20 ಲಕ್ಷದಷ್ಟು ಜನ ಹಾಡನ್ನು ವೀಕ್ಷಿಸಿರುವುದು ಚಿತ್ರತಂಡಕ್ಕೆ ಇನ್ನಷ್ಟು ಸಂತಸ ಹೆಚ್ಚಿಸಿದೆ. ಚಿತ್ರದ ನಿರ್ದೇಶಕ ಹರ್ಷ, ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದು ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿ ಚಿತ್ರ ಗೆಲ್ಲಿಸಿದ್ದಕ್ಕೆ ಪ್ರೇಕ್ಷರಿಗೆ ಧನ್ಯವಾದ ಹೇಳಿದರು.