ತೆಲುಗಿನಲ್ಲಿ ಕೆಲವು ವರ್ಷಗಳ ಹಿಂದೆ “ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು’ ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ಈಗ ಅದೇ ತರಹದ ಹೆಸರಿರುವ ಚಿತ್ರವೊಂದು ಕನ್ನಡದಲ್ಲಿ ಬರುತ್ತಿದೆ. ಅದೇ “ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’. ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರವಿದು. ಚಿತ್ರದ ಶೀರ್ಷಿಕೆ ಕೇಳಿದಾಗಲೇ, ಇದು ಕಲಾತ್ಮಕ ಜಾತಿಯ ಸಿನಿಮಾ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಿರ್ದೇಶಕ ಅಶೋಕ್ ಕೆ. ಕಡಬ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇನ್ನು, ಇಂತಹ ಚಿತ್ರಗಳಿಗೆ ಹಣ ಹಾಕುವ ನಿರ್ಮಾಪಕರ ಸಂಖ್ಯೆ ತೀರಾ ವಿರಳ.
ಹನುಮಂತರರಾಜು ಬಿ. ಅವರು ನಿರ್ದೇಶಕರ ಕಥೆ ಮೆಚ್ಚಿಕೊಂಡು ಚಿತ್ರಕ್ಕೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರ ಪೂರ್ಣಗೊಂಡಿದೆ. ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ತಮ್ಮ ತಂಡದೊಂದಿಗೆ ಆಗಮಿಸಿದ್ದರು ನಿರ್ದೇಶಕರು. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕ ಪಿ.ಶೇಷಾದ್ರಿ, ಅನಿರುದ್ಧ, ಭಾವನಾ, ಲಹರಿ ಆಡಿಯೋ ಸಂಸ್ಥೆಯ ಮುಖ್ಯಸ್ಥ ವೇಲು ಇತರರು ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು. ಚಿತ್ರತಂಡ ಈ ವೇಳೆ ಸಾ.ರಾ.ಗೋವಿಂದು, ಅನಿರುದ್ಧ, ಪಿ. ಶೇಷಾದ್ರಿ ಅವರನ್ನು ಸನ್ಮಾನಿಸಿ, ಗೌರವಿಸಿತು.
ಆಡಿಯೋ ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳೆಂಬ ಭೇದಭಾವ ಇರಬಾರದು. ಜನರು ಇಷ್ಟಪಟ್ಟರೆ ಎಂಥಾ ಚಿತ್ರವೂ ಗೆದ್ದು ಬಿಡುತ್ತೆ. ಈ ಚಿತ್ರ ಕಲಾತ್ಮಕವಾದರೂ, ಶೀರ್ಷಿಕೆ ಗಮನ ಸೆಳೆಯುತ್ತೆ.
ಈಗಂತೂ ಯಾವ ಚಿತ್ರಗಳೂ ಚಿತ್ರಮಂದಿರದಲ್ಲಿ ಹೆಚ್ಚು ಕಾಲ ನಿಲ್ಲುತ್ತಿಲ್ಲ. ವರ್ಷಕ್ಕೆ ಅತೀ ಹೆಚ್ಚು ಚಿತ್ರಗಳ ಬಿಡುಗಡೆಯೇ ಇದಕ್ಕೆ ಕಾರಣ. ತಾಂತ್ರಿಕತೆ ಬೆಳೆದಿದೆ. ಚಿತ್ರರಂಗವೂ ಬೆಳೆಯುತ್ತಿದೆ. ಆದರೆ, ಚಿತ್ರಗಳ ಯಶಸ್ಸು ಮಾತ್ರ ಇಲ್ಲ. ಬಿಡುಗಡೆ ವೇಳೆ ಯಾರೋ ಬಳಿ ಹೋಗಿ ಒದ್ದಾಡುವುದಕ್ಕಿಂತ, ಮಂಡಳಿ ಸಂಪರ್ಕಿಸಿದರೆ, ಸಲಹೆಗಳು ಸಿಗುತ್ತವೆ.
ಹೊಸಬರು ಎಚ್ಚರಿಕೆಯಿಂದ ಸಿನಿಮಾ ಮಾಡಬೇಕು’ ಎಂಬುದು ಸಾ.ರಾ.ಗೋವಿಂದು ಅವರ ಕಿವಿಮಾತು. ನಿರ್ದೇಶಕ ಅಶೋಕ್ ಕೆ ಕಡಬ, “ಚಿತ್ರದ ಹೀರೋ ಇಲ್ಲಿ ಪತ್ರಕರ್ತ. ಒಂದು ಸುದ್ದಿ ಬೆನ್ನತ್ತಿ ಒಂದು ಊರಿಗೆ ಹೋಗುತ್ತಾನೆ. ಗೆಳಯನ ಹೆಂಡತಿ ವಿಧವೆ ಅನ್ನೋದು ಗೊತ್ತಾಗುತ್ತೆ. ಕೊನೆಗೆ ಅವನು ಹುಡುಕಿ ಹೊರಟ ಸುದ್ದಿ ಸಿಗುತ್ತಾ, ತನ್ನ ಗೆಳೆಯನ ಹೆಂಡತಿಗೆ ಹೊಸ ಬಾಳು ಕಲ್ಪಿಸಿಕೊಡಲು ಮುಂದಾಗುತ್ತಾನಾ ಎಂಬುದು ಕಥೆ.
ನಂದೀಶ್ ಚಿತ್ರದ ಹೀರೋ. ಅವರಿಗೆ ಮೊದಲ ಚಿತ್ರ. ಅವರು ವೃತ್ತಿಯಲ್ಲಿ ವಕೀಲರು. ಇನ್ನು, ನಾಯಕಿ ಸಂಹಿತಾಗೆ ಇದು ಎರಡನೇ ಚಿತ್ರ. ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಮೂರು ಹಾಡುಗಳ ಪೈಕಿ ಒಂದು ಹಾಡನ್ನು ಗಾಯಕ ಸಿ.ಅಶ್ವತ್ಥ್ ಅವರಿಗೆ ಅರ್ಪಿಸಲಾಗಿದೆ’ ಎಂದು ವಿವರ ನೀಡಿದರು.