ವಿದ್ಯಾನಗರ: ನೀರು ಹರಿಯುವ ಚರಂಡಿಯ ತುಂಬ ಕಸಕಡ್ಡಿ, ಹೋಟೇಲುಗಳ ತ್ಯಾಜ್ಯ. ಬೇಸಗೆಯಲ್ಲೂ ಕಟ್ಟಿನಿಂತ ನೀರಿನಲ್ಲಿ ಹುಳುಗಳು ತುಂಬಿ ಪರಿಸರದಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಮಳೆಗಾಲಕ್ಕಾಗುವಾಗ ಈ ಕಸಕಡ್ಡಿಗಳ ರಾಶಿಯಿಂದಾಗಿ ಮಳೆನೀರು ಚರಂಡಿಯಲ್ಲಿ ಸುಸೂತ್ರವಾಗಿ ಹರಿಯಲಾಗದೆ ಉಂಟಾಗಬಹುದಾದ ಸಮಸ್ಯೆ ಜನರ ಆತಂಕಕ್ಕೆ ಕಾರಣವಾದರೆ, ತ್ಯಾಜ್ಯ ಉಂಟುಮಾಡಬಹುದಾದ ಸಾಂಕ್ರಾಮಿಕ ರೋಗದ ಭೀತಿ ಇನ್ನೊಂದೆಡೆ. ಆ ಮೂಲಕ ಇಂದು ಸೀತಾಂಗೋಳಿ ಪೇಟೆ ಸದ್ದಿಲ್ಲದೆ ಸಾಂಕ್ರಾಮಿಕ ರೋಗಗಳ ತಾಣವಾಗಿ ಬದಲಾಗುತ್ತಿದೆ.
ನಾಡಿನೆಲ್ಲೆಡೆ ಪರಿಸರ ಶುಚಿತ್ವದ ಮಹತ್ವದ ಬಗ್ಗೆ ಜಾಗƒತಿ ಮೂಡಿಸುತ್ತಿದ್ದರೂ ಕೆಲವರು ಕಿವಿಯಿದ್ದು ಕಿವುಡಾಗುವ, ಕಣ್ಣಿದ್ದು ಕುರುಡಾಗುತ್ತಿದ್ದಾರೆ. ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ಹಾವಳಿ ಬಗ್ಗೆ ಜನಜಾಗƒತಿ ಮೂಡಿಸುವ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೀತಾಂಗೋಳಿ ಪೇಟೆಯ ಚರಂಡಿಯಲ್ಲಿ ತುಂಬಿಕೊಂಡಿರುವ ಮಲಿನ ಜಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಿರುವುದು ವಿಪರ್ಯಾಸ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪುತ್ತಿಗೆ ಹಾಗೂ ಬದಿಯಡ್ಕ ಗ್ರಾಮ ಪಂಚಾಯತ್‌ನ ಗಡಿಭಾಗವಾಗಿರುವ ಸೀತಾಂಗೋಳಿ ಪೇಟೆಯಲ್ಲಿ ಮಳೆನೀರು ಹರಿಯುವ ಚರಂಡಿ ಇಂದು ಮಲಿನಜಲ ದಾಸ್ತಾನುಗೊಳ್ಳುವ ತಿಪ್ಪೆಯಾಗಿ ಬದಲಾಗಿದೆ. ಮಲಿನ ನೀರಿನೊಂದಿಗೆ ಹೊಟೇಲುಗಳಿಂದ ಬರುವ ನೀರು, ಆಹಾರ ತ್ಯಾಜ್ಯ, ಕೊಳೆತ ತರಕಾರಿ, ಮತ್ತಿತರ ತ್ಯಾಜ್ಯಗಳೂ ಸೇರಿ ಗಬ್ಬುವಾಸನೆ ಪೇಟೆಯನ್ನು ಆವರಿಸುತ್ತಿದೆ. ಚರಂಡಿ ಸಮೀಪದಲ್ಲೇ ಬದಿಯಡ್ಕ ಭಾಗಕ್ಕೆ ತೆರಳುವ ಬಸ್ಸು ತಂಗುದಾಣವಿದ್ದು ಪ್ರಯಾಣಿಕರು ಮೂಗುಮುಚ್ಚಿಕೊಂಡು ಇಲ್ಲಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ.
ಚರಂಡಿಯ ಕೊಳಚೆ ನೀರಿನಲ್ಲಿ ಹುಳಗಳು ಹುಟ್ಟಿಕೊಂಡಿದ್ದು ಸಂಜೆಯಾಗುತ್ತಿದ್ದಂತೆ ವಿಪರೀತ ಕಾಟಕೊಡುವ ಸೊಳ್ಳೆಗಳು ಇಲ್ಲಿನ ನಿವಾಸಿಗಳಿಗೂ, ಪ್ರಯಾಣಿಕರಿಗೂ ಬಹುದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಮಾತ್ರವಲ್ಲದೆ ರಸ್ತೆಬದಿಯ ಈ ತೆರೆದ ಚರಂಡಿಯ ಸನಿಹ ಆಹಾರ ಪದಾರ್ಥಗಳ ಮಾರಾಟವೂ ಜೋರಾಗಿ ನಡೆಯುತ್ತಿದೆ. ಇದರಿಂದಾಗಿ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಕೊಂಡಿದ್ದು ಸ್ಥಳೀಯ ವ್ಯಾಪಾರಿಗಳು ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಾಣುವಂತೆ ಒತ್ತಾಯಿಸುತ್ತಿದ್ದಾರೆ.
ನಾಡು ರೋಗ ಭೀತಿಯಿಂದ ಕಂಗೆಟ್ಟಿರುವ ಸಂದರ್ಭದಲ್ಲೂ ಸಾಂಕ್ರಾಮಿಕ ರೋಗ ಉತ್ಪಾಧನಾ ಕೇಂದ್ರವಾಗಿ ಬದಲಾಗುತ್ತಿರುವ ಈ ಚರಂಡಿಯನ್ನು ಸ್ವತ್ಛಗೊಳಿಸುವತ್ತ ಗಮನ ಹರಿಸದ ಆರೋಗ್ಯ ಇಲಾಖೆ ಹಾಗೂ ಸ್ಥಳಿಯಾಡಳಿತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊರೋನಾ ಎಂಬ ಮಹಾಮಾರಿಯನ್ನು ಬಡಿದೋಡಿಸಲು ಸ್ವಚ್ಚತೆಗೆ ನೀಡುವ ಆದ್ಯತೆ ಇನ್ನೂ ಜನರ ಕಣ್ಣು ತೆರೆಸುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ.
ಜಿಲ್ಲಾಧಿಕಾರಿಗೆ ದೂರು
ಸೀತಾಂಗೋಳಿ ಪೇಟೆಯ ಈ ದುರವಸ್ಥೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು ಅವರಿಗೆ ದೂರು ಸಲ್ಲಿಸಿದ್ದು ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸುವಂತೆ ಕೇಳಿಕೊಳ್ಳಲಾಗಿದೆ. ಕ್ಲಬ್ ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯನ್ನಿಟ್ಟಿದ್ದು ಈ ಪ್ರದೇಶದ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣುವತ್ತ ಶ್ರಮಿಸುತ್ತಿದೆ ಎಂದು ಸೀತಾಂಗೊಳಿ ಸಂತೋಷ್ ಆರ್ಟ್ಸ್ ಆಂಡ್ ನ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು ಥೋಮಸ್.ಡಿ”ಸೋಜಾ ಹೇಳಿದ್ದಾರೆ.