ನೋಯ್ಡಾ: ಗುರುತು ಪರಿಶೀಲನೆಗಾಗಿ ಪಾಕಿಸ್ತಾನಿ ಪ್ರಜೆ ಸೀಮಾ ಗುಲಾಮ್ ಹೈದರ್‌ನಿಂದ ವಶಪಡಿಸಿಕೊಂಡ ದಾಖಲೆಗಳನ್ನು ದೆಹಲಿಯ ಪಾಕಿಸ್ತಾನಿ ರಾಯಭಾರಿ ಕಚೇರಿಗೆ ಕಳುಹಿಸಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ. ಪಬ್ಜಿ ಮೂಲಕ ಪರಿಚಿತನಾದ ನೋಯ್ಡಾ ನಿವಾಸಿ ಸಚಿನ್ ಮೀನಾರೊಂದಿಗೆ ಪ್ರೀತಿಯಲ್ಲಿ ಬಿದ್ದ ಸೀಮಾ, ತನ್ನ ನಾಲ್ವರು ಮಕ್ಕಳೊಂದಿಗೆ ಮೇನಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದಾಳೆ.
ಉತ್ತರಪ್ರದೇಶದ ಉಗ್ರ ನಿಗ್ರಹದಳದ ಅಧಿಕಾರಿಗಳು ಸೀಮಾ, ಆತನ ಪ್ರಿಯಕರ ಸಚಿನ್ ಮತ್ತು ಸಚಿನ್ ತಂದೆ ನೇತ್ರಾಪಾಲ್ ಸಿಂಗ್‌ನನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ. ಆಕೆಯಿಂದ ಐದು ಪಾಸ್‌ಪೋರ್ಟ್, ಹೆಸರು ಮತ್ತು ವಿಳಾಸ ಪೂರ್ಣವಿಲ್ಲದ ಒಂದು ಬಳಸದ ಪಾಸ್‌ಪೋರ್ಟ್, ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಒಂದು ಗುರುತಿನ ಪತ್ರವನ್ನು ಎಟಿಎಸ್ ವಶಪಡಿಸಿಕೊಂಡಿದೆ.
ಹಲವು ಅನುಮಾನಗಳಿಗೆ ಕಾರಣ: ಸೀಮಾ ತಾನು ಐದನೇ ತರಗತಿ ಮಾತ್ರ ಓದಿರುವುದಾಗಿ ಹೇಳುತ್ತಾರೆ. ಆದರೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಮತ್ತು ಟೆಕ್ಸ್ಟ್ ಮಾಡುತ್ತಾರೆ. ಎಟಿಎಸ್ ಅಧಿಕಾರಿಗಳು ಪರೀಕ್ಷಿಸಿದಾಗಲೂ ಸುಲಲಿತವಾಗಿ ಇಂಗ್ಲೀಷ್‌ನಲ್ಲಿ ಮಾತನಾಡಿದ್ದಾರೆ. ಅಲ್ಲದೇ ಹಿಂದಿಯನ್ನು ಕೂಡ ಸ್ಪಷ್ಟವಾಗಿ ಮಾತನಾಡುತ್ತಾರೆ. ಸೀಮಾ ಅವರ ಸಹೋದರ ಮತ್ತು ಚಿಕ್ಕಪ್ಪ ಪಾಕ್ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ನಾಲ್ಕು ಮೊಬೈಲ್‌ಗಳನ್ನು ಆಕೆ ಹೊಂದಿದ್ದು, ಅವುಗಳ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೀಮಾ ಪತಿ ಗುಲಾಮ್ ಹೈದರ್ ಸದ್ಯ ಸೌದಿ ಅರೇಬಿಯದಲ್ಲಿ ನೆಲೆಸಿದ್ದಾರೆ. ಈಕೆ ಪಾಕಿಸ್ತಾನದಿಂದ ದುಬೈಗೆ ತೆರಳಿ, ಅಲ್ಲಿಂದ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಇನ್ನೊಂದೆಡೆ, ಆಕೆ ನಾಲ್ವರು ಮಕ್ಕಳನ್ನು ಮೊದಲು ನೇಪಾಳದಿಂದ ಭಾರತಕ್ಕೆ ಕಳುಹಿಸಿ, ನಂತರ ಆಕೆ ಪ್ರತ್ಯೇಕವಾಗಿ ಭಾರತಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಅಂಶಗಳು ಅನುಮಾನ ಮೂಡಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಿಯಕರನನ್ನು ಭೇಟಿಯಾಗಲು ಪಾಕ್‌ಗೆ ತೆರಳಿದ ಭಾರತೀಯ ಮಹಿಳೆ!
ರಾಜಸ್ಥಾನದ ವಿವಾಹಿತ ಮಹಿಳೆಯೊಬ್ಬಳು, ಫೇಸ್‌ಬುಕ್ ಮೂಲಕ ಪರಿಚಯವಾದ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಅಪ್ಪರ್‌ದಿರ್ ಜಿಲ್ಲೆಗೆ ತೆರಳಿದ್ದಾರೆ.
ಉತ್ತರಪ್ರದೇಶ ಮೂಲದ ಅಂಜು (34), ಕ್ರೈಸ್ತಮತಕ್ಕೆ ಮತಾಂತರಗೊಂಡು, ಅರವಿಂದ್ ಎಂಬುವವರನ್ನು ಮದುವೆಯಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ವಾಸವಿದ್ದಾರೆ. ಕೆಲ ತಿಂಗಳ ಹಿಂದೆ ಅಂಜು ಅವರಿಗೆ ಫೇಸ್‌ಬುಕ್ ಮೂಲಕ ಪಾಕಿಸ್ತಾನದ ನಸ್ರುಲ್ಲಾ (29) ಪರಿಚಯವಾಗಿದೆ. ಇದು ಪ್ರೇಮಕ್ಕೆ ತಿರುಗಿದೆ. ಆತನನ್ನು ಕಾಣಲು ಪಾಕ್ ವೀಸಾದೊಂದಿಗೆ ಆಕೆ ಪಾಕಿಸ್ತಾನಕ್ಕೆ ತೆರಳಿದ್ದಾರೆ.
“ಅಂಜು ಅವರ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಎಲ್ಲವೂ ಕ್ರಮಬದ್ಧವಾಗಿದೆ. ಅವರು ಒಂದು ತಿಂಗಳ ವೀಸಾ ಪಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅವರಿಗೆ ಭದ್ರತೆ ನೀಡಲಾಗಿದೆ’ ಎಂದು ಪಾಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.