Advertisement

ಭೂಮಿ ಕಳೆದುಕೊಳ್ಳುವವರಿಗೆ ಪುನರ್ವಸತಿಗೆ ಆಗ್ರಹ

09:24 PM Aug 03, 2019 | Team Udayavani |

ದೊಡ್ಡಬಳ್ಳಾಪುರ: ಎತ್ತಿನ ಹೊಳೆ ಯೋಜನೆ ನೀರು ಸಂಗ್ರಹಕ್ಕೆ ಉದ್ದೇಶಿಸಲಾಗಿರುವ ಭೈರಗೊಂಡ್ಲು ಡ್ಯಾಂ ನಿರ್ಮಾಣಕ್ಕೆ ಮುಂದಾಗುವ ಮುನ್ನ ಮನೆ, ಜಮೀನು ಕಳೆದುಕೊಳ್ಳುವ ಗ್ರಾಮಸ್ಥರಿಗೆ ಪುನರ್ವಸತಿ ಹಾಗೂ ಪುನರ್‌ ಜೀವನ ನಿರ್ಮಾಣ ಮಾಡಿ ಕೊಡಬೇಕು ಎಂದು ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯ ಆಲಪನಹಳ್ಳಿ ಗ್ರಾಮಸ್ಥ ಮಂಜುನಾಥ್‌ ಒತ್ತಾಯಿಸಿದರು.

Advertisement

ತಾಲೂಕಿನ ಭಕ್ತರಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಎತ್ತಿನ ಹೊಳೆ ಯೋಜನೆ ಕುರಿತಂತೆ ಭೈರಗೊಂಡ್ಲು ಡ್ಯಾಂ ನಿರ್ಮಾಣದ ಹಿನ್ನಲೆಯಲ್ಲಿ ಸಾಮಾಜಿಕ ಪರಿಣಾಮ ನಿರ್ಧಾರ ಅಧ್ಯಯನ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ಪರಿಹಾರ ಸಮರ್ಪಕವಾಗಿದ್ದರೆ ಮಾತ್ರ ಜಮೀನು: ಡ್ಯಾಂ ನಿರ್ಮಾಣದಿಂದ ಭಕ್ತರಹಳ್ಳಿ ವ್ಯಾಪ್ತಿಯ ಅಲಪನಹಳ್ಳಿ, ಭೈಯಪ್ಪನಹಳ್ಳಿ, ಅಂಕೋನಹಳ್ಳಿ, ನರಸಾಪುರ ಗ್ರಾಮಗಳ ಜತೆಗೆ ಸಣ್ಣಪುಟ್ಟ ಹತ್ತಕ್ಕೂ ಹೆಚ್ಚು ಗ್ರಾಮಗಳ ಜಮೀನು ಹಿನ್ನೀರಿನಲ್ಲಿ ಮುಳುಗಡೆಯಾಗುವ ಸಂಭವವಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಿಲುವು ಎನು ಎಂಬುದು ತಿಳಿದಿಲ್ಲ. ಸಾಸಲು ಹೋಬಳಿಯಲ್ಲಿ ತಾಲೂಕಿನ ಎಲ್ಲಾ ಹೋಬಳಿಗಿಂತ ಭೂಮಿಯ ಬೆಲೆ ಕಡಿಮೆ ಇದೆ.

ಡ್ಯಾಂ ನಿರ್ಮಾಣಕ್ಕೆ 8 ಲಕ್ಷದ ಬೆಲೆಗೆ ನಾಲ್ಕು ಪಟ್ಟು ಹೆಚ್ಚೆಂದರೆ ಕೇವಲ 32 ಲಕ್ಷ ಆಗುತ್ತದೆ. ಆದರೆ ದೊಡ್ಡಬೆಳವಂಗಲ ಹೋಬಳಿಯಲ್ಲಿ ಭೂಮಿಯ ಬೆಲೆ ಕೋಟಿ ರೂ. ಮೀರಿದೆ. ನೀವು ನೀಡುವ ಪರಿಹಾರದಲ್ಲಿ ಮತ್ತೆ ಜಮೀನುಕೊಳ್ಳಲು ಅಸಾಧ್ಯವಾಗುತ್ತದೆ. ಸಮಮರ್ಪಕವಾಗಿ ಪರಿಹಾರ ವ್ಯವಸ್ಥೆ ಒದಗಿಸದ ಹೊರತು ಗ್ರಾಮ ಹಾಗೂ ಜಮೀನನ್ನು ನಿಡಲು ಸಾಧ್ಯವಿಲ್ಲ. 2013ರ ಭೂ ಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ಹಾಗೂ ಜನರ ಅಭಿಪ್ರಾಯಕ್ಕೆ ಅಧಿಕಾರಿಗಳು ಮನ್ನಣೆ ನೀಡಬೇಕಿದೆ ಎಂದರು.

ಗ್ರಾಮಸ್ಥರನ್ನು ನಿರ್ಗತಿಕರನ್ನಾಗಿಸಬೇಡಿ: ಅಲಪನಹಳ್ಳಿ ಹನುಮಂತರಾಯಪ್ಪ ಮಾತನಾಡಿ, ಪೂರ್ವಿಕರ ಕಾಲದಿಂದ ಭಾವನಾತ್ಮಕ ಒಡನಾಟ ಇಟ್ಟುಕೊಂಡಿರುವ ಗ್ರಾಮವನ್ನು ತೆರವುಗೊಳಿಸುವ ಬದಲು ಯೋಜನೆಯಡಿ ಡ್ಯಾಂ ನಿರ್ಮಾಣಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ. ಕಣಕೇನಹಳ್ಳಿ ಸಮೀಪ ಸುಮಾರು 5 ಸಾವಿರ ಎಕರೆ ಅರಣ್ಯ ಪ್ರದೇಶವಿದೆ. ಅದೂ ಕೂಡ ನಾಶವಾಗುತ್ತದೆ.

Advertisement

ಜತೆಗೆ ಡ್ಯಾಂ ನಿರ್ಮಿಸಿ ಜನರನ್ನು ನಿರ್ಗತಿಕರನ್ನಾಗಿಸುವುದನ್ನು ತಪಿಸಬೇಕು ಎಂದರು. ಅಲಪನಹಳ್ಳಿ ಬೋಗರಾಯಪ್ಪ ಮಾತನಾಡಿ, ಪರಿಹಾರ ಹಣ ಹಾಗೂ ಪುನರ್‌ರ್ವಸತಿ ಕಲ್ಪಿಸದ ಹೊರತು ಡ್ಯಾಂ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧವಿದೆ. ಒಂದೇ ಕಂತಿನಲ್ಲಿ ಪರಿಹಾರ ವಿತರಿಸಬೇಕಿದೆ. ನಮಗೆ ಜನಪರ ಯೋಜನೆಯ ಬಗ್ಗೆ ವಿರೋಧವಿಲ್ಲ. ಆದರೆ ಜನರನ್ನು ನಿರ್ಗತಿಕರನ್ನಾಗಿಸಬೇಡಿ ಎಂದು ಮನವಿ ಮಾಡಿದರು.

ನೀರಿನ ಬವಣೆ ತಪ್ಪಿಸಲು ಡ್ಯಾಂ ಯೋಜನೆ: ಎತ್ತಿನಹೊಳೆ ಯೋಜನೆ ಅನುಷ್ಠಾನ ಸಮಾಲೋಚಕ ಸತೀಶ್‌ಚಂದ್ರ ಮಾತನಾಡಿ, ಕುಡಿಯುವ ನೀರಿನ ಬವಣೆ ತಪ್ಪಿಸಲು ಸರ್ಕಾರ ಈ ಯೋಜನೆ ಜಾರಿಗೊಳಿಸಿದೆಯೇ ಹೊರತು ಜನರನ್ನು ನಿರ್ಗತಿಕರನ್ನಾಗಿಸುವುದಿಲ್ಲ. ಪರಿಹಾರದ ಹಣ ವಿತರಣೆ ಜಿಲ್ಲಾಧಿಕಾರಿಗಳ ವಿವೇಚನೆ ಬಿಟ್ಟ ವಿಚಾರವಾಗಿದೆ. ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಈ ಸಭೆ ನಡೆಸಲಾಗುತ್ತಿದೆ. ಭೂ ಸ್ವಾಧೀನಕ್ಕೂ ಮುನ್ನ ಪುನರ್‌ ವಸತಿ ಅ ಥ ವಾ ಪುನರ್‌ ನಿರ್ಮಾಣ ಮಾಡಲು ಸರ್ಕಾರ ಉದ್ದೇಶ ಹೊಂದಿದೆ ಎಂದರು.

ನರಸಾಪುರ ಮನೋಹರ್‌ ಮಾತನಾಡಿ, ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕದ ಕೆಳಭಗದಲ್ಲಿ ಡ್ಯಾಂ ನಿರ್ಮಾಣ ಮಾಡಲು ಉದ್ದೇಶಿಸಿರುವುದು ಅವಿಜ್ಞಾನಿಕ, ರಾಸಾಯನಯುಕ್ತ ತ್ಯಾಜ್ಯ ನೀರು ಡ್ಯಾಂಗೆ ಸೇರಿ ಜನರ ಜೀವದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಡ್ಯಾಂ ನಿರ್ಮಾಣ ಬೇರೆಡೆ ಮಾಡಿ ಇಲ್ಲವೇ ತ್ಯಾಜ್ಯ ಘಟಕ ತೆರವುಗೊಳಿಸಿ ಎಂದು ಒತ್ತಾಯಿಸಿದರು.

ಎತ್ತಿನ ಹೊಳೆ ಯೋಜನೆ ತಹಸೀಲ್ದಾರ್‌ ನರಸಿಂಹಪ್ಪ,ವಿಶ್ವೇಶ್ವರಯ್ಯ ಜಲನಿಗಮದ ಸ ಹಾಯಕ ಕಾರ್ಯಪಾಲಕ ಅಭಿಯಂತರರಾದ ಎಸ್‌.ಜಿ.ಬೆಟ್ಟಸ್ವಾಮಿ,ವಿನಯ್‌ ಕುಮಾರ್‌,ಭಕ್ತರಹಳ್ಳಿ ಗ್ರಾ.ಪಂ ಪಿಡಿಒ ಲಕ್ಷ್ಮಿನರಸಯ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next