ಕಲಬುರಗಿ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಸುಪ್ರಿಂಕೋರ್ಟ್ ಸೂಚನೆಯಂತೆ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ನಾಲ್ಕೈದು ತಿಂಗಳಿಂದ ವೇತನ ಬಾಕಿಯಿದ್ದು, ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದರು.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ಹಣ ಮಂಜೂರಾಗಿ 8-10 ತಿಂಗಳಾದರೂ ಈ ವರೆಗೂ ಸಂದಾಯವಾಗಿಲ್ಲ. ನೌಕರರ ವೇತನದಲ್ಲಿ ಹೆಚ್ಚಳದ ದಿನದಿಂದಲೂ ನೌಕರರ ಮೇಲೆ ಅಧಿಕಾರಿಗಳು ಒಂದಿಲ್ಲೊಂದು ರೀತಿಯಲ್ಲಿ ಶೋಷಣೆ ಮಾಡುತ್ತಿದ್ದು,
ವಿನಾಕಾರಣ ಕೆಲಸದಿಂದ ತೆಗೆಯುವುದು ಹಾಗೂ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಕೆಲಸದಿಂದ ನೌಕರರನ್ನು ವಜಾ ಮಾಡಬಾರದು ಹಾಗೂ ವಜಾ ಮಾಡಿದ ಕೆಲಸಗಾರರನ್ನು ಪುನಃ ಸೇರಿಸಿಕೊಳ್ಳಬೇಕು ಎಂದರು. ಪ್ರತಿಭಟನೆಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಮಹಾದೇವಿ ಸಾಗರ, ಮೇಘರಾಜ ಕಠಾರೆ, ಜಯಶ್ರೀ ಕಟ್ಟಿಮನಿ ಹಾಗೂ ಇತರರು ಪಾಲ್ಗೊಂಡಿದ್ದರು.