ಶಿವಮೊಗ್ಗ: ಸಾವಿರಾರು ವರ್ಷಗಳ ಇತಿಹಾಸ ಇರುವ ಲಂಬಾಣಿ ಭಾಷೆಗೆ ಲಿಪಿಯ ಗೌರವ ತಂದುಕೊಡುವ ಕುರಿತು ತಜ್ಞರೊಂದಿಗೆಸಮಾಲೋಚಿಸಲಾಗುವುದು ಎಂದು ಕೆಪಿಸಿಸಿಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ತಾಲೂಕಿನ ಕುಂಚೇನಹಳ್ಳಿ ತಾಂಡಾದಲ್ಲಿ ಗುರುವಾರ ಲಂಬಾಣಿಸಮುದಾಯದವರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಬಣಜಾರ ಸಮುದಾಯದವರು ರಾಜ್ಯದಲ್ಲಿ ಅಲ್ಲದೆ ಹೊರ ರಾಜ್ಯಗಳಲ್ಲೂ ಇದ್ದಾರೆ. ಈ ಸಮುದಾಯದ ಲಂಬಾಣಿ ಭಾಷೆಗೆ ಲಿಪಿಯ ಗೌರವ ತಂದುಕೊಡುವುದರಿಂದ ಅದನ್ನು ಮತ್ತಷ್ಟು ಶ್ರೀಮಂತಗೊಳಿಸಿದಂತಾಗಲಿದ್ದು, ಈ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಭಾಗದಲ್ಲಿ ಹಲವು ವರ್ಷಗಳಿಂದ ಜೀವಂತ ವಾಗಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ಜನಾಂಗದವರಿಗೆ ಸವಲತ್ತು ಒದಗಿಸುವುದು, ಆರೋಗ್ಯ ಕೇಂದ್ರ, ಪ್ರೌಢಶಾಲೆ ಮತ್ತು ಇತರೆ ಬೇಡಿಕೆಗಳ ಪಟ್ಟಿಮಾಡಿಕೊಳ್ಳಲಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿದ್ದುನಿಮ್ಮ ಧ್ವನಿಯಾಗಿ ಸರಕಾರದ ಮೇಲೆ ಒತ್ತಡ ತಂದು ಈ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.
ಮುಂದಿನ ವಿಧಾನಸಭೆ ಚುನಾವಣೆ ವೇಳೆ ಲಂಬಾಣಿ ಸಮುದಾಯದ ಸಾರ್ವತ್ರಿಕ ಬೇಡಿಕೆಗಳನ್ನು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಇದಕ್ಕೂ ಮೊದಲು ಅವರು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್,ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮಾಜಿಸಚಿವ ಶಿವಮೂರ್ತಿ ನಾಯ್ಕ, ಗ್ರಾಮ ಮುಖಂಡ ನಾಗೇಶ್ ನಾಯ್ಕ ಮತ್ತಿತರರು ಇದ್ದರು.