Advertisement

ತಾರಸಿಯ ತೋಟದಲಿ ಚಂದಿರ ಕಂಡ !

12:30 AM Mar 04, 2019 | |

ಕೃಷಿಯಿಂದ ಖುಷಿಯಿಲ್ಲ ಅನ್ನುತ್ತಾ ರೈತರು ದೂರುತ್ತಿರುವ ಸಂದರ್ಭದಲ್ಲಿಯೇ, ತಾರಸಿ ಕೃಷಿಯಿಂದ ಕೈ ತುಂಬ ಲಾಭ ಪಡೆಯುತ್ತಿರುವ ವಿಜಯಕುಮಾರ್‌, ಹಲವರಿಗೆ ಮಾದರಿ ಆಗಬಲ್ಲರು. 

Advertisement

ಮೈಸೂರಿನ ವಿವೇಕಾನಂದ ನಗರದ ನಿಮಿಷಾಂಬಾ ಬಡಾವಣೆಯ ವಿಜಯಕುಮಾರ್‌ ನಾಗನಾಳ ಮಾರ್ಕೆಟ್‌ನಿಂದ ತರಕಾರಿಗಳನ್ನು ತರುವುದಿಲ್ಲ. ಹೀಗೇಕೆ? ಅಂತ ಕೇಳಿದರೆ- ಎಲ್ಲವೂ ಔಷಧ ಪೂರಿತ ಅನ್ನುತ್ತಾರೆ. ಇದಕ್ಕೆ ಪರಿಹಾರ ಎಂಬಂತೆ ವಿಜಯಕುಮಾರ್‌, ತಾರಸಿಯನ್ನೇ ತೋಟವನ್ನಾಗಿಸಿಕೊಂಡಿದ್ದಾರೆ.  ಹಲವು ದಶಕಗಳಿಂದ ವಿವಿಧ ಬಗೆಯ ಸೊಪ್ಪು, ತರಕಾರಿ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ಅಲ್ಲದೇ, ಬಗೆ ಬಗೆಯ ಹೂವಿನ ಗಿಡಗಳೂ ಇವರ ಟೆರೇಸ್‌ ಅನ್ನು ಅಲಂಕರಿಸಿವೆ.

ತಾರಸಿಯಲ್ಲಿ ಏನೇನಿದೆ?
ವಿಜಯಕುಮಾರ್‌ ಮೂಲತಃ ಕೃಷಿ ಕುಟುಂಬದಿಂದ ಬಂದ ವ್ಯಕ್ತಿ.  ಕೋಲಾರ ತಾಲೂಕಿನ ನಾಗನಾಳ ಇವರ ಗ್ರಾಮ. ಜೋಳ, ರಾಗಿ, ರೇಷ್ಮೆ ಬೇಸಾಯ ಮಾಡುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆಯಲ್ಲಿ ನಿರ್ದೇಶಕರಾಗಿರುವ ಇವರಿಗೆ ನಗರ ಜೀವನ ಅನಿವಾರ್ಯ. ಆದರೆ ಮೂಲ ಕಸುಬಿನ ಅಭ್ಯಾಸ ಬಲ ಇವರನ್ನು ಸುಮ್ಮನಿರಲು ಬಿಡುತ್ತಿಲ್ಲ. ಓದಿರುವುದು ಕೃಷಿ ಪದವಿ. ಹಾಗಾಗಿಯೇ ಮನೆಯ ತಾರಸಿಯನ್ನೇ ಕೃಷಿ ಭೂಮಿಯನ್ನಾಗಿಸಿ ನಿತ್ಯ ಹಸಿರಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ದಶಕಗಳ ಕಾಲ ನಗರ ಜೀವನಕ್ಕೆ ಅಂಟಿಕೊಂಡಿರುವ ಇವರಿಗೆ ಇನ್ನೊಂದು ಆತಂಕವಿದೆ. ಪಟ್ಟಣದಲ್ಲಿಯೇ ಬೆಳೆಯ ಮಕ್ಕಳಿಬ್ಬರೂ ಕುಲ ಕಸುಬು ಕೃಷಿಯನ್ನು ಕಡೆಗಣಿಸಬಾರದು ಎನ್ನುವ ಅಭಿಲಾಷೆ ಇವರದು. 

ತಾರಸಿಯ ಒಂದು ಭಾಗ ಸೊಪ್ಪು ತರಕಾರಿ ಬೆಳೆಸಲು ಮೀಸಲು. ಇಪ್ಪತ್ತು ಅಡಿ ಉದ್ದ ಮತ್ತು ಅಷ್ಟೇ ಅಗಲವಿರುವ ಪ್ಲಾಸ್ಟಿಕ್‌ ಹಾಳೆಯನ್ನು ಹಾಸಿಕೊಂಡು ಅದರ ಮೇಲೆ ಅರ್ಧ ಅಡಿಗಳಷ್ಟು ಎತ್ತರವಿರುವ ಏರುಮಡಿ ಸಿದ್ಧಪಡಿಸಿಕೊಳ್ಳುತ್ತಾರೆ. ಮಣ್ಣಿನೊಂದಿಗೆ ಎರೆಗೊಬ್ಬರ, ತಿಪ್ಪೆಗೊಬ್ಬರ ಹಾಗೂ ಜೈವಿಕ ಜೀವಾಣು ಗೊಬ್ಬರದ ಮಿಶ್ರಣ ಬಳಕೆ ಮಾಡುತ್ತಾರೆ. ಈ ಮಣ್ಣಿನಲ್ಲಿ ಸೊಪ್ಪು ತರಕಾರಿಯ ಬೀಜಗಳನ್ನು ಬಿತ್ತುವುದು ನಂತರದ ಹಂತ.

ಇಪ್ಪತ್ತು ಅಡಿ ಘನಾಕೃತಿಯ ಮಡಿಯನ್ನು ನಾಲ್ಕು ಭಾಗವಾಗಿ ವಿಂಗಡಿಸಿಕೊಂಡಿದ್ದಾರೆ. ಒಂದು ಭಾಗದಲ್ಲಿ ಹರಿವೆ ಬಿತ್ತನೆ. ವಾರದ ನಂತರ ಇನ್ನೊಂದು ಭಾಗದಲ್ಲಿ ಪಾಲಕ್‌ ಬೀಜ ಮಣ್ಣಿಗಿಳಿಸುತ್ತಾರೆ. ವಾರದ ನಂತರ ಇನ್ನೊಂದು ಭಾಗಕ್ಕೆ ಮೆಂತ್ಯ ಬೀಜಗಳನ್ನು ಊರುತ್ತಾರೆ. ನಾಲ್ಕನೆಯ ಭಾಗದಲ್ಲಿ ಮಗದೊಂದು ವಾರ ಬಿಟ್ಟು ಪಾಲಕ್‌ ಬೀಜ ಬಿತ್ತುತ್ತಾರೆ.

Advertisement

ಸಡಿಲ ಮಣ್ಣಿನ ತಾರಸಿ ಭೂಮಿಯಲ್ಲಿ ಸೊಪ್ಪಿನ ಗಿಡಗಳು ಪೊಗದಸ್ತಾಗಿ ಬೆಳೆಯುತ್ತವೆ. ಪೊದೆ ಪೊದೆಯಾಗಿ ಅಚ್ಚ ಹಸಿರನ್ನು ಹೊದ್ದು ಮೇಲೇಳುವ ಗಿಡಗಳು ಭೂಮಿಯಲ್ಲಿ ಬೆಳೆದಿರುವ ಗಿಡಗಳಿಗಿಂತ ಭಿನ್ನವಾಗಿರುತ್ತವೆ. ವಾರಕ್ಕೊಂದು ಬಾರಿ ನೀರುಣಿಸುತ್ತಾರೆ. ರೋಗ ಭಾದೆ ಇಲ್ಲದೇ ಬಿತ್ತಿದ ಮೂವತ್ತು ದಿನಕ್ಕೆ ಸೊಪ್ಪುಗಳು ಕಟಾವಿಗೆ ಲಭ್ಯವಾಗುತ್ತವೆ. ಬಿತ್ತನೆಯ ನಡುವೆ ವಾರದ ಅಂತರವಿದ್ದುದರಿಂದ ಬಗೆ ಬಗೆಯ ಸೊಪ್ಪುಗಳು ತಿಂಗಳು ಪೂರ್ತಿ ಕಟಾವಿಗೆ ಲಭ್ಯ.

ಸೊಪ್ಪು ತರಕಾರಿಗಳೊಂದಿಗೆ ಬದನೆ, ಟೊಮೆಟೊ, ನಿಂಬೆ, ಕರಿಬೇವು, ಮೆಣಸು ಮತ್ತಿತರ ಗಿಡಗಳನ್ನು ಬೆಳೆಸಿದ್ದಾರೆ. ಹಳೆಯ ಪ್ಲಾಸ್ಟಿಕ್‌ ಬಕೆಟ್‌ ಹಾಗೂ ಕುಂಡಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಬಣ್ಣ ಬಣ್ಣದ ಹೂವಿನ ಗಿಡಗಳಿಂದಲೂ ತಾರಸಿ ಅಲಂಕೃತಗೊಂಡಿದೆ. ಐದು ಬಗೆಯ ಗುಲಾಬಿ ಗಿಡಗಳು, ನಾಲ್ಕು ಬಣ್ಣಗಳ ದಾಸವಾಳ ಗಿಡಗಳ ವೈಭವವನ್ನೂ ಇವರ ತಾರಸಿ ತೋಟದಲ್ಲಿ ಕಾಣಬಹುದು. ಮನೆಯ ಒಳಾಂಗಣದಲ್ಲಿಯೂ ವಿವಿಧ ಗಿಡಗಳ ಕುಂಡಗಳನ್ನಿಟ್ಟಿದ್ದಾರೆ. ಗೋಡೆಯ ಮೂಲೆಗಳು, ಕಿಟಕಿಗಳ ಪಾರ್ಶ್ವ, ಮೆಟ್ಟಿಲುಗಳ ಸಂದುಗಳ ನಡುವೆ ಹೀಗೆ ಎಲ್ಲಿ ಸಾಧ್ಯವಾಗುತ್ತೋ ಅಲ್ಲಿ ಗಿಡಗಳ ಕುಂಡಗಳನ್ನಿಟ್ಟು ಮನೆಯ ಸೌಂದರ್ಯವನ್ನು ಹಸಿರೀಕರಣ ಮಾಡಿದ್ದಾರೆ. ಇಪ್ಪತ್ತು ಬಗೆಯ ಗಿಡಗಳು ಮನೆಯ ಒಳಾಂಗಣವನ್ನು ಅಲಂಕರಿಸಿವೆ.

ವಿಶೇಷ ಕರಿಬೇವಿನ ಗಿಡ
ನಾಟಿ ತಳಿಯ ಕರಿಬೇವು ಗಿಡವೊಂದು ಇವರಲ್ಲಿರುವ ಪ್ರಮುಖ ಆಕರ್ಷಣೆ. ಹತ್ತು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನಲ್ಲಿರುವಾಗ ಗಮನ ಸೆಳೆದ ಒಂದು ಕರಿಬೇವು ಗಿಡವನ್ನು ತಂದು ಮನೆಯೆದುರು ಕುಂಡದಲ್ಲಿ ನಾಟಿ ಮಾಡಿದ್ದರು. ಕಡಿಮೆ ಜೋಪಾನದಲ್ಲಿಯೇ ಬೆಳೆದ ಅದು ಈಗಲೂ ತನ್ನ ಅಸ್ಥಿತ್ವವನ್ನುಳಿಸಿಕೊಂಡಿದೆ. ಮೂರು ಅಡಿಗಳಷ್ಟು ಎತ್ತರವಿರುವ ಈ ಗಿಡದಲ್ಲಿ ಬೆಳೆದ ಕರಿಬೇವಿನ ಎಲೆಗಳನ್ನು ನಿತ್ಯ ಕತ್ತರಿಸಿ ಅಡುಗೆಗೆ ಬಳಸುತ್ತಾರೆ. ಆಗಾಗ ಕತ್ತರಿಸಲ್ಪಟ್ಟ ಗಿಡ ಕುಬjವಾಗಿದ್ದರೂ ಯತೇಚ್ಚ ಎಲೆಗಳ ಇಳುವರಿ ನೀಡುತ್ತಿದೆ.

ಬಳ್ಳಿ ತರಕಾರಿ ಒಳ್ಳೆಯದು
ಮಳೆಗಾಲ ಕೊನೆಗೊಳ್ಳುತ್ತಿದ್ದಂತೆ ಬಳ್ಳಿ ತರಕಾರಿಗಳನ್ನು ಬೆಳೆಯುವತ್ತ ಇವರ ಚಿತ್ತ ಹೊರಳುತ್ತದೆ. ಹೀರೆ, ಹಾಗಲ, ಸೌತೆ, ಸೋರೆಕಾಯಿ ಗಿಡಗಳನ್ನು ಬೆಳೆಸುತ್ತಾರೆ. ಕಂಬಗಳನ್ನು ಹುಗಿದು ಬಳ್ಳಿಯನ್ನು ಕಟ್ಟಿ ಶಿಸ್ತುಬದ್ದವಾಗಿ ಮೇಲೇರುವ ಬಳ್ಳಿಗಳಿಗೆ ಆಸರೆ ನೀಡಿ ಚಪ್ಪರವನ್ನಾಗಿಸುವ ಕಲೆ ಇವರಿಗೆ ಕರಗತ. ಮಕ್ಕಳಿಬ್ಬರ  ಓದು, ಆಟ ಈ ಬಳ್ಳಿ ಚಪ್ಪರದ ಕೆಳಗೆ ವರ್ಗಾವಣೆಗೊಳ್ಳುತ್ತದೆ. ತಾರಸಿ ಕೃಷಿಯಲ್ಲಿ ತೊಡಗುವವರು ಮಳೆಗಾಲದಲ್ಲಿ ಎಚ್ಚರವಿರಬೇಕು ಎನ್ನುವ ಕಿವಿಮಾತು ಹೇಳುತ್ತಾರೆ. ಪ್ಲಾಸ್ಟಿಕ್‌ ಹಾಳೆಯ ಮೇಲೆ ಮಣ್ಣು ಸುರಿದು ಗಿಡ ನಾಟಿ ಮಾಡಿರುವಾಗ ಮಳೆ ಸುರಿದರೆ ಮಣ್ಣು ತೊಳೆದು ಹೋಗಿ ಪೈಪ್‌ಗ್ಳು  ಬ್ಲಾಕ್‌ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆದಷ್ಟು ಮಳೆ ಬೀಳುವ ಸಮಯದಲ್ಲಿ ಟ್ರೇಗಳಲ್ಲಿ ಅಥವಾ ಬಕೆಟ್‌ ಗಳಲ್ಲಿ ಗಿಡಗಳನ್ನು ಬೆಳೆಸುವುದು ಒಳಿತು ಎನ್ನುತ್ತಾರೆ.

ತಾರಸಿ ಕೃಷಿಯನ್ನು ಕಡಿಮೆ ಖರ್ಚಿನಲ್ಲಿ ಮಾಡಬಹುದು. ಹಳೆಯ ಬಕೆಟ್‌, ಬಳಸಿ ಬಿಸಾಡುವ ಪ್ಲಾಸ್ಟಿಕ್‌ ವಸ್ತುಗಳು ಗಿಡ ಬೆಳೆಸಲು ಸಾಕು. ತೆಳ್ಳನೆಯ ಪ್ಲಾಸ್ಟಿಕ್‌ ತಾಡಪಾಲ್‌ಗ‌ಳಿದ್ದರೆ ಬಿತ್ತನೆ ಭೂಮಿಯನ್ನು ಸೃಷ್ಟಿಸಿ ಬಿಡಬಹುದು.

ರೋಗಬಾಧೆ ಕಂಡುಬಂದರೆ ಮನೆ ಕಷಾಯ ಸಿಂಪರಣೆ ಮಾಡುತ್ತಾರೆ. ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು ತೆಗೆದುಕೊಂಡು ಚೆನ್ನಾಗಿ ಹೆಚ್ಚಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಇಂಗನ್ನು ಸೇರಿಸಿ ಇದಕ್ಕೆ ಅಗತ್ಯವಿರುವಷ್ಟು ನೀರನ್ನು ಬೆರೆಸಿ ಕೀಟ, ರೋಗ ಬಾಧೆ ಕಂಡು ಬರುವ ಗಿಡಗಳಿಗೆ ಸಿಂಪರಣೆ ಮಾಡುತ್ತಾರೆ. 

ಬಿಡುವಿನಲ್ಲಿ ತಾರಸಿ ಮಂತ್ರ
ಬಿಡುವಿದ್ದಾಗ ಇವರ ಮನೆಯವರೆಲ್ಲರೂ ತಾರಸಿ ಮಂತ್ರ ಜಪಿಸುತ್ತಿರುತ್ತಾರೆ. ಮಕ್ಕಳಾದ ದೀಪ್ತಿಪೂರ್ಣ ಹಾಗೂ ಅನ್ನಪೂರ್ಣ ತಾರಸಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಶಾಲೆ ಮುಗಿದ ಬಳಿಕ ಇವರ ಓಟ ತಾರಸಿಯ ಮೇಲೆ. ಬೆಳೆ ಕಟಾವು ಮಾಡಿ ಒಪ್ಪ ಓರಣವಾಗಿ ಜೋಡಿಸಿ ಅಡುಗೆ ಮನೆಗೆ ಸಾಗಿಸುವುದು, ತೆರವುಗೊಂಡ ಪ್ಲಾಸ್ಟಿಕ್‌ ಟ್ರೇಗಳಲ್ಲಿ ಮಣ್ಣಿಗೆ ಗೊಬ್ಬರ ಸೇರಿಸುವುದು, ಬೀಜ ಬಿತ್ತುವುದು, ರೋಸ್‌ ಕ್ಯಾನ್‌ ಮೂಲಕ ನೀರುಣಿಸುವುದು àಗೆ ಉತ್ಸಾಹದಿಂದ ತಾರಸಿ ತೋಟದ ಕೆಲಸ ಪ್ರೀತಿಸುತ್ತಾರೆ.

ಪ್ರೌಢಶಾಲೆಯೊಂದರಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿರುವ ವಿಜಯಕುಮಾರರ ಪತ್ನಿ ಗೀತಾ ಅವರಿಗೂ ತಾರಸಿ ಕೃಷಿಯಲ್ಲಿ ವಿಶೇಷ ಆಸಕ್ತಿ. ಪತಿಯ ಕೃಷಿ ಆಸಕ್ತಿಗೆ ಇವರೂ ನೀರೆರೆಯುತ್ತಾರೆ. ಕೃಷಿ ಭೂಮಿ ಇರುವ ಹಳ್ಳಿಯ ರೈತರು ಕೃಷಿಯನ್ನು ಮರೆತು ಅಗತ್ಯ ತರಕಾರಿಗಳಿಗಾಗಿ ನಗರಗಳಿಗೆ ತೆರಳುವ ಇಂದಿನ ದಿನಗಳಲ್ಲಿ, ಮನೆಯ ತಾರಸಿಯಲ್ಲಿ ಕೃಷಿ ಮಾಡುವ  ನಾಗನಾಳರ ಆಸಕ್ತಿ ಮಾದರಿ ಎನಿಸುತ್ತದೆ.

– ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next