ಉಡುಪಿ: ಕೋವಿಡ್-19 ಸೊಂಕು ತಡೆಗೆ ವಿಧಿಸಿರುವ ಲಾಕ್‌ಡೌನ್‌ನಿಂದ ಬಡವರು, ಮಧ್ಯಮ ವರ್ಗದವರು, ರೈತರು ಎಲ್ಲ ವರ್ಗದವರು ತೊಂದರೆಗೆ ಒಳಗಾಗಿದ್ದಾರೆ. ಈ ಸೋಂಕು ಯಾವುದೇ ಧರ್ಮ, ಜಾತಿ ನೋಡಿ ಬರುವುದಿಲ್ಲ. ಎಲ್ಲರೂ ಸೇರಿ ಈ ಸೋಂಕು ಹೊಡೆದೋಡಿಸುವಲ್ಲಿ ಕೈ ಜೋಡಿಸಬೇಕು ಎಂದು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಪಕ್ಷದ ಕಚೇರಿ, ಕುಮಾರ ಕೃಪಾದಲ್ಲಿ ಸೋಮವಾರ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳ ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಆಹಾರ ಕಿಟ್ ಅನ್ನು ವಿತರಿಸುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾದವರಿಗೆ ಸರಕಾರ, ಸಂಘ ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳು ತಮ್ಮದೆ ಆದ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಅದರಂತೆ ಜಾತ್ಯತೀತ ಜನತಾದಳ ಕೂಡ ತಾಲೂಕು ಮಟ್ಟದಲ್ಲಿ ದಿನಸಿ, ಊಟ ವಿತರಣೆಯ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ನಗರದಲ್ಲಿ 250 ಮಂದಿ ಸಮಸ್ಯೆಗೆ ಒಳಗಾದ ಕುಟುಂಬಗಳಿಗೆ ದಿನಸಿ ವಿತರಿಸಲಾಗುತ್ತಿದೆ ಎಂದರು.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸಹಿತ ಎಲ್ಲ ವಿಭಾಗಗಳ ಅಧಿಕಾರಿಗಳು, ಸಿಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಜಿಲ್ಲಾಡಳಿತಕ್ಕೆ ಪಕ್ಷ ಅಭಿನಂದನೆ ಸಲ್ಲಿಸುತ್ತದೆ ಎಂದರು.
ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಪ್ರ.ಕಾರ್ಯದರ್ಶಿ ಜಯರಾಮ ಆಚಾರ್ಯ, ಅಲ್ಪ ಸಂಖ್ಯಾಕರ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಅತ್ರಾಡಿ, ಕಾಪು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಯೂಸುಫ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ರಜಾಕ್ ಉಚ್ಚಿಲ, ರಂಗ ಎನ್ ಕೋಟ್ಯಾನ್, ಉಡುಪಿ ಜೆಡಿಎಸ್ ಬ್ಲಾಕ್ ಕಾರ್ಯದರ್ಶಿ ಉಮೇಶ್ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಖರ್ ಕೋಟ್ಯಾನ್, ಯುವ ಜನತಾದಳದ ಜಿಲ್ಲಾ ಕಾರ್ಯದರ್ಶಿ ಶಂಶುದ್ದಿನ್ ಮಜೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಿರ್ತಿ ಮೊದಲಾದವರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರಿಗೆ ದೌರ್ಜನ್ಯ:ಖಂಡನೆ
ಜಾತಿ ಧರ್ಮ ಮೀರಿ ಬಂದಿರುವ ಸೋಂಕು ವಿರುದ್ಧ ಸಾಮೂಹಿಕ ಹೋರಾಟ ಅಗತ್ಯ. ಈ ನಡುವೆ ಕೆಲವು ಕಡೆಗಳಲ್ಲಿ ಆಶಾ ಕಾರ್ಯಕರ್ತರ ಮೇಲೆ ದಬ್ಟಾಳಿಕೆ ನಡೆಸಿ ತೊಂದರೆ ನೀಡುತ್ತಿದ್ದಾರೆ. ಇದು ಸರಿಯಲ್ಲಿ ಅಂತಹ ಕೃತ್ಯಗಳನ್ನು ಪಕ್ಷ ಕಟುವಾಗಿ ಖಂಡಿಸುತ್ತದೆ ಎಂದು ಯೋಗೀಶ್ ವಿ.ಶೆಟ್ಟಿ ಹೇಳಿದರು.