Advertisement

ಕೂರಿಗೆ ವಿಧಾನದ ಶೇಂಗಾ ಬಿತ್ತನೆ: ಅಧ್ಯಯನ

12:24 PM Dec 23, 2017 | |

ಕೋಟ: ಶೇಂಗಾ (ನೆಲಗಡಲೆ) ಬೆಳೆ ಕರಾವಳಿಯಲ್ಲಿ ಅತ್ಯಂತ ಲಾಭದಾಯಕ ವ್ಯವಸಾಯವಾಗಿ ಗುರುತಿಸಿಕೊಂಡಿದೆ.  ಮಳೆಗಾಲದ ಅನಂತರ ಇಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಶೇಂಗಾ ಕೃಷಿ ಕೈಗೊಳ್ಳುತ್ತಾರೆ. ಪ್ರಸ್ತುತ ಎಲ್ಲ  ಕೃಷಿಗಳಂತೆ ಶೇಂಗಾಕ್ಕೂ ಕೂಡ  ದೊಡ್ಡ  ಪ್ರಮಾಣದಲ್ಲಿ  ಕಾರ್ಮಿಕರ ಕೊರತೆ ಎದುರಾಗಿದೆ ಹಾಗೂ ಇದನ್ನು  ಸಾಂಪ್ರದಾಯಿಕ ವಿಧಾನದ ಮೂಲಕ  ನಾಟಿ ಮಾಡಲು ಕೋಣಗಳನ್ನು  ಅವಲಂಬಿಸಬೇಕಾದ ಅನಿವಾರ್ಯತೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಇವೆಲ್ಲದರ ನಡುವೆ  ಇದೀಗ ಜನಪ್ರಿಯಗೊಳ್ಳುತ್ತಿರುವ ಕೂರಿಗೆ ಪದ್ಧತಿಯು ಶೇಂಗಾ ಬೆಳೆಗಾರರಿಗೆ ವರದಾನವಾಗಿದೆ.

Advertisement

ಎನಿದು ಕೂರಿಗೆ ಪದ್ಧತಿಯ ನಾಟಿ
ಯಾಂತ್ರೀಕೃತ ವಿಧಾನದ ಮೂಲಕ ಶೇಂಗಾವನ್ನು ನಾಟಿ ಮಾಡುವ ವಿಧಾನಕ್ಕೆ  ಕೂರಿಗೆ ನಾಟಿ ಎಂದು ಹೆಸರು. ಭತ್ತದಲ್ಲಿ  ಯಾಂತ್ರೀಕೃತ  ಸಾಲು ನಾಟಿಯ ರೀತಿಯಲ್ಲಿ  ಕೂರಿಗೆ ಯಂತ್ರ ಮೂಲಕ ಶೇಂಗಾ ಬೀಜವನ್ನು  ನಾಟಿ ಮಾಡಲಾಗುತ್ತದೆ. ಯಂತ್ರದ ಮೇಲಾºಗದಲ್ಲಿರುವ ಡಬ್ಬದಲ್ಲಿ ಬೀಜವನ್ನು ಸಂಗ್ರಹಿಸಲಾಗುತ್ತದೆ ಹಾಗೂ ಟಿಲ್ಲರ್‌ ಅಥವಾ ಟ್ರ್ಯಾಕ್ಟರ್‌ ಚಾಲನೆಗೊಂಡಂತೆ  ಬೀಜವು  ಮಣ್ಣಿನ ಅಡಿಭಾಗದಲ್ಲಿ  ಬಿತ್ತಲ್ಪಡುತ್ತದೆ. ಕೂರಿಗೆ ಯಂತ್ರದಲ್ಲಿ ಎರಡು ವಿಧಗಳಿದೆ. ಒಂದು ಟ್ರ್ಯಾಕ್ಟರ್‌ ಚಾಲಿತ ಕೂರಿಗೆ ಯಂತ್ರ ಹಾಗೂ ಟಿಲ್ಲರ್‌ ಚಾಲಿತ ಕೂರಿಗೆ ಯಂತ್ರ. ಟ್ರ್ಯಾಕ್ಟರ್‌ ಚಾಲಿತ ಕೂರಿಗೆ ಯಂತ್ರ ಸುಮಾರು 20 ವರ್ಷಗಳಿಂದ ಚಾಲ್ತಿಯಲ್ಲಿದೆ. ಆದರೆ ಟಿಲ್ಲರ್‌ ಚಾಲಿತ ಯಂತ್ರ ಕಳೆದ ಮೂರು ವರ್ಷದ ಹಿಂದೆ ಆವಿಷ್ಕರಿಸಲ್ಪಟ್ಟಿದೆ. ಬೀಜ ಹಾಗೂ ರಾಸಾಯನಿಕವನ್ನು ಒಟ್ಟಿಗೆ ಬಿತ್ತನೆ ಮಾಡುವ ಸಂಯುಕ್ತ ಕೂರಿಗೆ ಯಂತ್ರಗಳು ಕೂಡ ಇದೀಗ ಜನಪ್ರಿಯಗೊಳ್ಳುತ್ತಿವೆ.

ಬ್ರಹ್ಮಾವರದಲ್ಲಿ  ಟಿಲ್ಲರ್‌ ಕೂರಿಗೆ ಆವಿಷ್ಕಾರ
ಕರಾವಳಿಯಲ್ಲಿ  ಹೆಚ್ಚಿನವು ತುಂಡು ಭೂಮಿಗಳಾಗಿರುವುದರಿಂದ ಟ್ರ್ಯಾಕ್ಟರ್‌ ಚಾಲಿತ ಕೂರಿಗೆಯಲ್ಲಿ ಕಾರ್ಯ ನಿರ್ವಹಿಸುವುದು ಸ್ವಲ್ಪ ಕಷ್ಟ ಸಾಧ್ಯವಾಗಿತ್ತು. ಹೀಗಾಗಿ ಕರಾವಳಿಯ ಭೂಮಿಗೆ ಹೊಂದಿಕೆಯಾಗುವಂತೆ ಮೂರು ವರ್ಷದ ಹಿಂದೆ ಬ್ರಹ್ಮಾವರದ ಕೃಷಿ ಸಂಶೋಧನ ಕೇಂದ್ರದಲ್ಲಿ ಟಿಲ್ಲರ್‌ ಚಾಲಿತ ಕೂರಿಗೆ ಯಂತ್ರ ಆವಿಷ್ಕಾರಗೊಂಡಿತು. ಇದೀಗ ಕರಾವಳಿಯಲ್ಲಿ ಈ ಯಂತ್ರವು ಅತ್ಯಂತ ಜನಪ್ರಿಯಗೊಂಡಿದ್ದು, ಇಲ್ಲಿನ ಭೂಮಿಗೆ ಸೂಕ್ತವಾಗಿ ಹೊಂದಾಣಿಕೆಯಾಗಿದೆ.

ಕೂರಿಗೆ ಯಂತ್ರದಿಂದ ರೈತನಿಗೆ ಹೆಚ್ಚಿನ ಲಾಭ 
ಕೂರಿಗೆ ಯಂತ್ರದ ಮೂಲಕ ಶೇಂಗಾವನ್ನು ನಾಟಿ ಮಾಡಲು ಕಡಿಮೆ ಅವಧಿ ಸಾಕಾಗುತ್ತದೆ ಹಾಗೂ ಸಾಂಪ್ರದಾಯಿಕ ವಿಧಾನದಲ್ಲಿ  ಎಕ್ರೆಗೆ 60 ಕೆ.ಜಿ. ಶೇಂಗಾ ಬೀಜ ಬೇಕಾಗುತ್ತದೆ ಆದರೆ ಕೂರಿಗೆ ವಿಧಾನದಲ್ಲಿ 38-40 ಕೆ.ಜಿ. ಬೀಜ ಸಾಕು ಹಾಗೂ ಅತ್ಯಂತ ಕಡಿಮೆ ಸಂಖ್ಯೆಯ ಕಾರ್ಮಿಕರು ಸಾಕು ಸುಲಭದಲ್ಲಿ  ಕಳೆ ನಾಶಗೊಳಿಸಬಹುದು. ಒಟ್ಟಾರೆಯಾಗಿ ಕೂರಿಗೆ ಪದ್ಧತಿ ಶೇಂಗಾ ಬೇಸಾಯಕ್ಕೆ ಅನುಕೂಲಕರವಾಗಿದ್ದು ಕಾರ್ಮಿಕ ಕೊರತೆ, ಸಮಯ, ಹಣ ಉಳಿತಾಯದ ದೃಷ್ಟಿಯಲ್ಲಿ  ರೈತ ಸ್ನೇಹಿಯಾಗಿದೆ.

ಶೇಂಗಾದ ಕಣಜ 
ರಾಜ್ಯದ ಬೇರೆ ಭಾಗದಲ್ಲಿ  ಒಂದು ಎಕ್ರೆಗೆ ಶೇಂಗಾ  6ರಿಂದ 8 ಕ್ವಿಂಟಾಲ್‌ ಇಳುವರಿ ಬರುತ್ತದೆ. ಆದರೆ ಕೋಟ ಮುಂತಾದ ಕರಾವಳಿ ಭಾಗದಲ್ಲಿ ಎಕ್ರೆಗೆ 12ರಿಂದ 16 ಕ್ವಿಂಟಾಲ್‌ ಇಳುವರಿ ಪಡೆಯುವ ರೈತರಿದ್ದಾರೆ. ಹಾಗೂ ಈ ಭಾಗದಲ್ಲಿ ಹೇರಳವಾಗಿ ಶೇಂಗಾ ಬೆಳೆಯಲಾಗುತ್ತದೆ.  ಹೀಗಾಗಿ ರಾಜ್ಯದಲ್ಲೇ ಅತೀ ಹೆಚ್ಚು  ಶೇಂಗಾ ಇಳುವರಿ ನೀಡುವ ಪ್ರದೇಶ ಕೋಟ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ ಮತ್ತು ಕೂರಿಗೆ ವಿಧಾನವನ್ನು ಇಲ್ಲಿ ಸಮರ್ಪಕವಾಗಿ ಅಳವಡಿಸಿಕೊಳ್ಳಲಾಗಿದೆ.

Advertisement

ಇಂದು ಅಧ್ಯಯನಕ್ಕಾಗಿ ಕೃಷಿ ಸಚಿವರ ಆಗಮನ
ಕೂರಿಗೆ ವಿಧಾನದ ಮೂಲಕ ಶೇಂಗಾ ಬಿತ್ತನೆಯ ಕುರಿತು ಮಾಹಿತಿ ಹಾಗೂ ಅಧ್ಯಯನ ನಡೆಸುವ ಸಲುವಾಗಿ ಡಿ.23ರಂದು ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಕೋಟ ಪಡುಕರೆಗೆ ಆಗಮಿಸಲಿದ್ದಾರೆ. ಈ ವಿಧಾನದ ಲಾಭ-ನಷ್ಟಗಳು ಹಾಗೂ ಇದನ್ನು ಯಾವ ರೀತಿಯಲ್ಲಿ ಇನ್ನಷ್ಟು ಅನುಕೂಲಕರ ರೀತಿಯಲ್ಲಿ ಬಳಸಿಕೊಳ್ಳಬಹುದು ಎನ್ನುವುದನ್ನು ಈ ಸಂದರ್ಭ ಅವಲೋಕಿಸಲಾಗುತ್ತದೆ.

ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next