Advertisement

ಬೀಜ-ಗೊಬ್ಬರ ವ್ಯತ್ಯಯ ಆಗದಿರಲಿ

11:16 AM May 26, 2018 | Team Udayavani |

ದಾವಣಗೆರೆ: ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಬೇಕಾದ ಪರಿಕರ, ಗೊಬ್ಬರ, ಬೀಜ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಡಿಸಿ ಡಿ.ಎಸ್‌. ರಮೇಶ್‌ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಶುಕ್ರವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರಸಗೊಬ್ಬರ ಮಾರಾಟಗಾರರು, ಉತ್ಪಾದಕರು, ಸಹಕಾರ ಸಂಘಗಳ ನಿಬಂಧಕರು, ಸಾಗಾಣಿಕೆದಾರರು, ರಾಜ್ಯ ಸಹಕಾರ ಮಹಾಮಂಡಳಿ ನಿಗಮ, ಕೃಷಿ ಇಲಾಖೆ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದೆ. ರೈತರು ಉತ್ಸುಕರಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಗೊಬ್ಬರ, ಬೀಜ, ಪರಿಕರ ಕೊರತೆ ಆಗದಂತೆ ಎಚ್ಚರ ವಹಿಸಿ ಎಂದರು.

ಒಂದು ವೇಳೆ ರಸಗೊಬ್ಬರ ಕೊರತೆ ಕಂಡುಬಂದರೆ ಹೆಚ್ಚಿನ ಸರಬರಾಜಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ಈ ಬಾರಿ ರಸಗೊಬ್ಬರ ವಿತರಣೆ ಪಿಒಎಸ್‌ ಮೂಲಕ ನಡೆಯುತ್ತಿದ್ದು, ಎಲ್ಲಾ ಮಾರಾಟಗಾರರಿಗೆ ಉಪಕರಣ ನೀಡಲಾಗಿದೆ. ಎಲ್ಲಾ ರೈತರು ಗೊಬ್ಬರ ಖರೀದಿಗೆ ತಮ್ಮ ಆಧಾರ್‌ ಕಾರ್ಡ್‌ ನೀಡಬೇಕು ಎಂದರು. 

ಬೀಜ ದಾಸ್ತಾನಿನಲ್ಲೂ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಿ. ಬಿಡಿಯಾಗಿ ಬೀಜ ಹಾವಳಿ ತಡೆಯಲು ತಾಲೂಕುವಾರು ತಂಡ ರಚನೆ ಮಾಡಿ ಎಂದು ಸೂಚಿಸಿದರು.
 
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದ್ಗಲ್‌ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ವಾಡಿಕೆಯಂತೆ ಈವರೆಗೆ 92 ಎಂಎಂ ಮಳೆ ಆಗಬೇಕಿತ್ತು. ಇದರ ಜಾಗದಲ್ಲಿ 159 ಎಂಎಂ ಮಳೆಯಾಗಿದೆ. ಬಿತ್ತನೆಗೆ ಪೂರಕವಾದ ವಾತಾವರಣ ಇದೆ ಎಂದರು. ಮುಂಗಾರು ಹಂಗಾಮಿಗೆ ಜಿಲ್ಲೆಗೆ 1,45,637 ಟನ್‌ ರಸಗೊಬ್ಬರ ಬೇಕು. ಮೇ ತಿಂಗಳಲ್ಲಿ 22,650 ಟನ್‌ ರಸಗೊಬ್ಬರದ ಬೇಡಿಕೆ ಇದೆ. ಈಗಾಗಲೇ ಖಾಸಗಿ ಮಾರಾಟದಲ್ಲಿ 26 ಸಾವಿರ ಟನ್‌ ದಾಸ್ತಾನು ಇದೆ. ರಾಜ್ಯ ಸಹಕಾರ ಮಹಾ ಮಂಡಳಿ ನಿಗಮದಲ್ಲಿ ಕಾಪು ದಾಸ್ತಾನು ಯೋಜನೆಯಡಿ 18,598 ಟನ್‌ ಇದೆ. ಹಾಗಾಗಿ ರಸಗೊಬ್ಬರಕ್ಕೆ ಯಾವುದೇ ಕೊರತೆ ಉಂಟಾಗುವುದಿಲ್ಲ
ಎಂದು ಅವರು ಸಭೆಯ ಗಮನಕ್ಕೆ ತಂದರು.

ಬಿತ್ತನೆ ಬೀಜ ಸಹ ಸಾಕಷ್ಟು ದಾಸ್ತಾನು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಮುಂಗಾರಿಗೆ 49,103 ಕ್ವಿಂಟಾಲ್‌ ಬಿತ್ತನೆ ಬೀಜ ಬೇಕು. ಕೆಎಸ್‌ಎಸ್‌ಸಿ, ಕೆಒಎಫ್‌, ಎನ್‌ಎಸ್‌ಸಿ, ಖಾಸಗಿ ಮಾರಾಟಗಾರರಲ್ಲಿ ಎಲ್ಲಾ ಬಿತ್ತನೆ ಬೀಜ ಲಭ್ಯ ಇವೆ. ಯಾವುದೇ ಕೊರತೆ ಇರುವುದಿಲ್ಲ. 24 ರೈತ ಸಂಪರ್ಕ ಕೇಂದ್ರ, 13 ಸಹಕಾರ ಸಂಘ, 9 ಹೆಚ್ಚುವರಿ ಕೇಂದ್ರಗಳ ಮೂಲಕ ಬೀಜ ವಿತರಣೆ ಮಾಡಲು ಸಹ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್‌
ವರಿಷ್ಠಾಧಿಕಾರಿ ಉದೇಶ್‌, ಸಹಾಯಕ ಕೃಷಿ ನಿರ್ದೇಶಕಿ ಹಂಸವೇಣಿ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next