ಹಾನಗಲ್ಲ: ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು, ಜೂನ್ ಆರಂಭದಲ್ಲಿ ಮಳೆ ಬರುವ ನಿರೀಕ್ಷೆ ಇದೆ. ರಸಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸದೇ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಎಂ.ಗಂಗಪ್ಪ ಹೇಳಿದರು.
ಶುಕ್ರವಾರ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ ಆಯೋಜಿಸಿದ್ದ ಬೀಜ-ಗೊಬ್ಬರಗಳ ಮಾರಾಟಗಾರರ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹೆಚ್ಚಿನ ಹಣ ಮಾರಾಟ ಬೇಡ: ಐಎಸ್‌ಐ ಮಾರ್ಕ್ ಇಲ್ಲದ, ಪ್ರಮಾಣೀಕರಿಸಲಾರದಂತಹ ನಕಲಿ ಕಂಪನಿಗಳ ಯಾವುದೇ ಬಿತ್ತನೆ ಬೀಜ ಮಾರುವಂತಿಲ್ಲ. ಅಭಾವ ಸೃಷ್ಟಿಸಿ ಬೀಜ-ಗೊಬ್ಬರಗಳನ್ನು ಬೇರೆ ಸ್ಥಳಗಳಲ್ಲಿ ಸಂಗ್ರಹಿಸುವುದು, ಹೆಚ್ಚಿನ ಹಣಕ್ಕೆ ಮಾರಾಟ ಮಾಡುವಂತಿಲ್ಲ. ಪರವಾನಗಿ ಇಲ್ಲದೇ ಅನಧಿಕೃತವಾಗಿ ಮಾರಾಟ ಮಾಡಬಾರದು. ಒಂದು ವೇಳೆ ಮಾರಿದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬೇಡಿಕೆ-ದಾಸ್ತಾನು ಮಾಹಿತಿ: ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹಕ್ಲಪ್ಪನವರ ಮಾತನಾಡಿ, ಈಗಾಗಲೇ ಮಾರಾಟಗಾರರಿಗೆ ರಸಗೊಬ್ಬರ ಬೇಡಿಕೆ ಹಾಗೂ ದಾಸ್ತಾನುಗಳ ಮಾಹಿತಿ ನೀಡಲಾಗಿದೆ. ರೈತರು ಬೀಜ, ಗೊಬ್ಬರ ಖರೀದಿಸುವ ಸಂದರ್ಭದಲ್ಲಿ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ತಿಳಿಸಿದರು.
ಮಳೆಯ ಪ್ರಮಾಣ ಗಮನಿಸಿ ರೈತರು ಬಿತ್ತನೆ ಬೀಜಗಳ ಆಯ್ಕೆ ಮಾಡುತ್ತಾರೆ. ಅದಕ್ಕನುಗುಣವಾಗಿ ಬೀಜಗಳ ದಾಸ್ತಾನು ಕೈಗೊಳ್ಳಿ. ಪ್ರತಿ ಸೋಮವಾರ ಕೃಷಿ ಇಲಾಖೆಗೆ ಮಾರಾಟದ ಮಾಹಿತಿ ಸಲ್ಲಿಸಬೇಕು. ಅವಧಿ ಮೀರಿದ ಬೀಜ, ಕ್ರಿಮಿನಾಶಕ ಮಾರಬಾರದು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದರು.
ಯಂತ್ರ ನಿರ್ವಹಣೆ ಮಾಹಿತಿ: ಸ್ಪಿಕ್ ಕಂಪನಿ ಅಧಿಕಾರಿ ಅಮರನಾಥ ಮಾತನಾಡಿ, ರಸಗೊಬ್ಬರ ಮಾರಾಟಗಾರರಿಗೆ ಪಾಸ್ ಮಷೀನ್ ನೀಡಲಾಗಿದ್ದು, ಅವುಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಗಿದೆ. ಅದರಲ್ಲಿ ಗೊಬ್ಬರ ಮಾರಾಟ ದಾಖಲಿಸಿ, ರೈತರ ಹೆಬ್ಬೆಟ್ಟು ಗುರುತು ಸಂಗ್ರಹಿಸಿಕೊಳ್ಳಬೇಕು. ಇದರ ಮೂಲಕ ರಸಗೊಬ್ಬರ ಮಾರಾಟ ವಿವರ ದೊರಕಲಿದೆ. ಹಾವೇರಿ ಜಿಲ್ಲೆಗೆ 470 ಮಷೀನ್ ವಿತರಿಸಲಾಗಿದ್ದು, ಹಾನಗಲ್ಲ ತಾಲೂಕಿಗೆ 78 ನೀಡಲಾಗಿದೆ. ಇವುಗಳಲ್ಲಿ 30 ನಿಷ್ಕ್ರಿಯವಾಗಿವೆ. ಅವುಗಳನ್ನು ಮಾರಾಟಗಾರರು ಬಳಸಿಕೊಳ್ಳದಿದ್ದಲ್ಲಿ ಕೃಷಿ ಅಧಿಕಾರಿಗಳು ಹಿಂಪಡೆದು ಬೇರೆಯವರಿಗೆ ಹಸ್ತಾಂತರಿಸಲಿದ್ದಾರೆ ಎಂದರು.
ಮಾರಾಟಗಾರರ ಸಂಘದ ಅಧ್ಯಕ್ಷ ಎಸ್.ಎಚ್. ಕೋಟಿ, ದ್ಯಾಮಣ್ಣ ಬೆಟಗೇರಿ, ರಾಜಣ್ಣ ಗೌಳಿ, ಜಗದೀಶ ಸಿಂಧೂರ ಸೇರಿದಂತೆ 40ಕ್ಕೂ ಅಧಿಕ ಮಾರಾಟಗಾರರು ಸಭೆಯಲ್ಲಿ ಇದ್ದರು.