Advertisement

ದಡಕ್ಕೆಳೆದ ಸಮುದ್ರಕಳೆ: ರಾಜ್ಯದಲ್ಲಿ ಮೊದಲ ಬೆಳೆ

07:35 AM Apr 18, 2018 | Karthik A |

ಕುಂದಾಪುರ: ತೀರಕ್ಕೆ ಸನಿಹ ಕಡಲಿನಲ್ಲಿ ಬೆಳೆಯುವ ಪಾಚಿ ವರ್ಗಕ್ಕೆ ಸೇರಿದ ಸಮುದ್ರ ಕಳೆಯ (ಸೀ ವೀಡ್‌) ಫ‌ಸಲನ್ನು ದಡಕ್ಕೆ ತಂದು ಹಾಕಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಸಮುದ್ರ ಕಳೆ ಬೆಳೆದ ಹೆಗ್ಗಳಿಕೆ ಭಟ್ಕಳ ಸನಿಹದ ಕರಿಕಲ್‌ ಗ್ರಾಮಕ್ಕೆ ಸಂದಿದೆ. ಬೆಳೆ ಕುರಿತು ‘ಉದಯವಾಣಿ’ ಕಳೆದ ನ. 2ರಂದು ವರದಿ ಮಾಡಿತ್ತು. ಧ. ಗ್ರಾ. ಯೋಜನೆ ಮೂಲಕ ಕರಿಕಲ್‌, ಸಣ್ಣಬಾವಿ, ಮಠದ ಹಿತ್ಲು ಪ್ರದೇಶದ ಸಮುದ್ರದಲ್ಲಿ ಪ್ರಾಯೋ ಗಿಕವಾಗಿ ಇದನ್ನು ಬೆಳೆಯಲಾಗಿದೆ. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ, ಕಾ.ನಿ. ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ ಸೂಚನೆಯಂತೆ, ಕೃಷಿ ನಿರ್ದೇಶಕ ಮನೋಜ್‌ ಮಿನೇಜಸ್‌ ಅವರು ಈ ಬೆಳೆಯ ಕುರಿತು ಅಧ್ಯಯನ ಮಾಡಿ, ಅನುಕೂಲ ಸಮೀಕ್ಷೆ ಮಾಡಿ, ಈ ಭಾಗದ ಗ್ರಾಮಸ್ಥರ ಜತೆ ಸಮಾಲೋಚನೆ ನಡೆಸಿ ಪ್ರೇರಣೆ ನೀಡಿದ್ದರು.

Advertisement


ಮಾಹಿತಿ
ರಾಮೇಶ್ವರಂ, ತೂತುಕುಡಿ, ಕನ್ಯಾಕುಮಾರಿ, ಪುದುಕೋಟೈಯಲ್ಲಿ ಸೀ ವೀಡ್‌ ಬೆಳೆ ನಿರ್ವಹಣೆ ಅನುಭವ ಹೊಂದಿರುವ ಅಕ್ವಾ ಅಗ್ರಿ ಪ್ರೊಸೆಸಿಂಗ್‌ ಪ್ರೈ.ಲಿ. ಸಂಸ್ಥೆ ಇಲ್ಲಿ ಮಾಹಿತಿ, ಮಾರ್ಗದರ್ಶನ ನೀಡಿದೆ. ಮಾ. 10ರಂದು ಸಮುದ್ರದಲ್ಲಿ ನಾಟಿ ಮಾಡಲಾಗಿತ್ತು. ಸಾಮಾನ್ಯವಾಗಿ 45 ದಿನದಲ್ಲಿ ಮೊದಲ ಬೆಳೆ ದೊರೆಯುತ್ತದೆ. ಈ ಬಾರಿ 30 ದಿನಗಳಲ್ಲಿಯೇ ಬಂಪರ್‌ ಬೆಳೆ ಬಂದಿದೆ. ಒಣಗಿಸಿದ ಬೆಳೆಯನ್ನು ಕೆ.ಜಿ.ಗೆ 30 ರೂ.ಗಳಂತೆ ಸಂಸ್ಥೆಯೇ ಖರೀದಿಸಲಿದೆ. ಬೆಳೆದವರಿಗೆ ತೊಂದರೆಯಾಗದಂತೆ ಗ್ರಾಮಾಭಿವೃದ್ಧಿ ಯೋಜನೆ ಮಾತು ಕತೆ ನಡೆಸಿದೆ ಎನ್ನುತ್ತಾರೆ ನಿರ್ದೇಶಕ ಲಕ್ಷ್ಮಣ್‌.

ವಿದೇಶಗಳಲ್ಲಿ ಉಪಯೋಗ
– ಚಟ್ನಿ, ಸೂಪ್‌, ಸಿಹಿತಿಂಡಿ, ರೊಟ್ಟಿ, ಪಾನೀಯ, ಸಾಸ್‌ಗಳು, ಮಾಂಸಾಹಾರಿ, ಮೀನು ಉತ್ಪನ್ನಗಳಲ್ಲಿ ರುಚಿಕಾರಕವಾಗಿ ಬಳಕೆ.

– ಡೈರಿ ಉತ್ಪನ್ನಗಳು ಮತ್ತು ಬೇಯಿಸಿದ ಸರಕುಗಳ ಸಂರಕ್ಷಕವಾಗಿ ಬಳಕೆ .

– ಪೈಂಟ್‌, ಟೂತ್‌ಪೇಸ್ಟ್‌, ಪ್ರಸಾಧನ, ಡಯಟ್‌ ಮಾತ್ರೆಗಳಲ್ಲಿ ಬಳಕೆ.

Advertisement

– ಕಾಂಪೋಸ್ಟ್‌ ಗೊಬ್ಬರವಾಗಿ ಉಪಯೋಗ. 

ಸಮುದ್ರದ ಉಪ್ಪು ನೀರಿನ ಅಲೆಗಳ ಹೊಡೆತವೇ ಬೆಳೆಗೆ ಪ್ರಮುಖ ಆಧಾರ. ಸಿಹಿನೀರು ಸೇರುವ ಸಮುದ್ರ ಜಾಗದಲ್ಲಿ ಬೆಳೆ ಅಷ್ಟಾಗಿ ಬರುವುದಿಲ್ಲ. ಲೈನ್‌ ವಿಧಾನದಲ್ಲಿ ಹೆಚ್ಚಿನ ಬೆಳೆ ಸಾಧ್ಯ ಎನ್ನುತ್ತಾರೆ ಯೋಜನೆಯ ಉಡುಪಿ ಪ್ರಾ. ನಿರ್ದೇಶಕ ಮಹಾವೀರ ಅಜ್ರಿ.

ಹೀಗಾಯಿತು ಬೆಳೆ 
ನಾಟಿ:

– 100 ಕೆ.ಜಿ.ಯಷ್ಟು ಸಮುದ್ರ ಕಳೆ ರಾಫ್ಟ್  ಮತ್ತು ಲೈನ್‌ ವಿಧಾನದಲ್ಲಿ ನಾಟಿ.
– 4 ಬಿದಿರು ಗಣೆಗಳನ್ನು ಆಯತಾಕಾರದಲ್ಲಿ ಕಟ್ಟಿ ಕಳೆ ಬೀಳದಂತೆ, ಮೀನು ತಿನ್ನದಂತೆ ಬಲೆ ಅಳವಡಿಸಿ ಹಗ್ಗದಲ್ಲಿ ಪೋಣಿಸಿ ಸಮುದ್ರದಲ್ಲಿ ಕಲ್ಲು ಕಟ್ಟಿ ಬಿಡುವುದು ರಾಫ್ಟ್  ವಿಧಾನ.
– ನೈಲಾನ್‌ ಹಗ್ಗದಲ್ಲಿ ಕಳೆ ಕಟ್ಟಿ ನಾಟಿ ಮಾಡುವುದು ಲೈನ್‌ ವಿಧಾನ.

ಬೆಳೆ:
– ಎ. 10ರಂದು ಬೆಳೆ ದಡಕ್ಕೆ ತಂದಾಗ ರಾಫ್ಟ್ ವಿಧಾನದಲ್ಲಿ 100 ಗ್ರಾಂನಷ್ಟು ಬಿತ್ತಿದ ಕಳೆ 700 ಗ್ರಾಂನಷ್ಟು ಇಳುವರಿ ಕೊಟ್ಟಿದೆ.
– ಲೈನ್‌ ವಿಧಾನದಲ್ಲಿ ನಾಟಿ ಮಾಡಿದ 150 ಗ್ರಾಂ. ಕಳೆ 1.3 ಕೆ.ಜಿ. ಬೆಳೆದಿದೆ. 

ಮಾರಾಟ:
– ಕಟಾವಾದ ಕಳೆ ಒಣಗಿಸಿ ಮಾರಾಟ. 
– 10 ಕೆ.ಜಿ. ಹಸಿಕಳೆ ಒಣಗಿ 1 ಕೆ.ಜಿ.

ಎಳವೆಯಿಂದ ಮೀನುಗಾರಿಕೆಯೇ ಉದ್ಯೋಗ. ಸಮುದ್ರಕಳೆ ವರ್ಷದ 8 ತಿಂಗಳು ಬೆಳೆಯಬಹುದು. ಪ್ರಾಯೋಗಿಕವಾದ ಕಾರಣ ಇನ್ನೂ ಧೈರ್ಯ ಬಂದಿಲ್ಲ. ಲಾಭ ಬಂದರೆ ಖಂಡಿತ ಮುಂದುವರಿಸುತ್ತೇವೆ. ಪರ್ಯಾಯ ಆದಾಯ ಎನ್ನುವುದರಲ್ಲಿ ಸಂಶಯ ಇಲ್ಲ. 
– ಅನಂತ್‌, ಮಂಜುನಾಥ್‌, ಕರಿಕಲ್ಲು, ಮೀನುಗಾರರು 

ಕರ್ನಾಟಕದ 300 ಕಿ.ಮೀ. ಕರಾವಳಿಯಲ್ಲಿ ಇದೇ ಮೊದಲ ಬಾರಿ ಇಂತಹ ಪ್ರಯೋಗಾತ್ಮಕ ಬೆಳೆ ಬೆಳೆಯಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಜನರ ಸ್ವಾವಲಂಬನೆಗೆ ಅನುಕೂಲವಾಗುವ ಇಂತಹ ಎಲ್ಲ ಪ್ರಯೋಗಗಳಲ್ಲೂ ಮುಂದಿರುತ್ತದೆ. ಮೀನುಗಾರಿಕೆ ಕಾರ್ಯದ ಬಳಿಕ ಈ ಉಪ ಆದಾಯ ಮೀನುಗಾರರಿಗೆ ಶಕ್ತಿ ತುಂಬಬಲ್ಲುದು. ಪ್ರಧಾನಿಯವರು ನಮ್ಮ ಕಾರ್ಯಕ್ರಮಕ್ಕೆ ಬಂದಾಗ ಕೊಟ್ಟ ಸಲಹೆಯಂತೆ, ಡಾ| ಹೆಗ್ಗಡೆಯವರ ಸೂಚನೆಯಂತೆ ಇದನ್ನು ಮಾಡಲಾಗಿದೆ. 
– ಡಾ| ಎಲ್‌.ಎಚ್‌. ಮಂಜುನಾಥ್‌, ಕಾ.ನಿ ನಿರ್ದೇಶಕರು, ಗ್ರಾ. ಯೋ.

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next