Advertisement

ಉಳ್ಳಾಲದ ಸೀವೇವ್‌ ಬ್ರೇಕರ್‌ ಸದ್ಯಕ್ಕೆ 200 ಮೀ.ಗೆ ಸೀಮಿತ

11:40 PM Feb 21, 2023 | Team Udayavani |

ಮಂಗಳೂರು: ಉಳ್ಳಾಲದ ಬಟ್ಟಪಾಡಿ ಕಡಲತೀರದಲ್ಲಿ ಕಡಲ್ಕೊರೆತ ಶಾಶ್ವತ ತಡೆಗೆ ಪ್ರಾಯೋಗಿಕವಾಗಿ ಕೈಗೊಳ್ಳಲು ಉದ್ದೇಶಿಸಿದ್ದ ಸೀವೇವ್‌ ಬ್ರೇಕರ್‌ ಯೋಜನೆಯನ್ನು ಸದ್ಯ ಪೂರ್ಣ
ಪ್ರಮಾಣದಲ್ಲಿ ಕೈಗೊಳ್ಳುವ ಬದಲು ಕೇವಲ 200 ಮೀಟರ್‌ಗೆ ಸೀಮಿತಗೊಳಿ ಸಲು ನಿರ್ಧರಿಸಲಾಗಿದೆ.

Advertisement

24 ಕೋಟಿ ರೂ. ವೆಚ್ಚದಲ್ಲಿ 1 ಕಿ.ಮೀ. ಉದ್ದಕ್ಕೆ ಸೀವೇವ್‌ ಬ್ರೇಕರ್‌ ನಿರ್ಮಾಣಕ್ಕೆ ಈ ಮೊದಲು ಬಂದರು ಇಲಾಖೆಯಿಂದ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯ ಯೋಗ್ಯವೆನ್ನುವ ಬಗ್ಗೆ ಸಂಸ್ಥೆಯೊಂದರ ಮೂಲಕ ಅಧ್ಯಯನ ನಡೆಸಲಾಗುತ್ತಿದೆ. ಅದರ ಅಂತಿಮ ವರದಿ ಇನ್ನೂ ಬಂದಿಲ್ಲ. ಸದ್ಯ 200 ಮೀ. ಮಾತ್ರ ನಿರ್ಮಿಸಿ ಅದರ ಯಶಸ್ಸಿನ ಮೇಲೆ ಉಳಿದ ಭಾಗಕ್ಕೆ ವಿಸ್ತರಿಸುವ ಯೋಚನೆ ಸರಕಾರದ್ದು.

ಈ ಕುರಿತು ಬಂದರು ಸಚಿವ ಎಸ್‌. ಅಂಗಾರ ಅಧ್ಯಕ್ಷತೆಯಲ್ಲಿ ಕಳೆದ ವಾರ ಸಭೆ ನಡೆದಿದ್ದು, 200 ಮೀಟರ್‌ಗೆ ಮತ್ತೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ 200 ಮೀ.ಗೆ 6.5 ಕೋ.ರೂ.ನ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ.

ಪ್ರಾಥಮಿಕ ವರದಿ
ಕಾಸರಗೋಡು ಜಿಲ್ಲೆಯ ನೆಲ್ಲಿಕುನ್ನು ಎಂಬಲ್ಲಿ ಉದ್ಯಮಿ ಯು.ಕೆ. ಯೂಸುಫ್‌ ತಮ್ಮದೇ ಪೇಟೆಂಟ್‌ನ ಸೀವೇವ್‌ ಬ್ರೇಕರ್‌ ಅನ್ನು ವರ್ಷದ ಹಿಂದೆ ನಿರ್ಮಿಸಿದ್ದರು. ಆ ತಂತ್ರಜ್ಞಾನವನ್ನು ಸಚಿವ ಅಂಗಾರ ಪರಿಶೀಲಿಸಿ ಅಳವಡಿಸಿಕೊಳ್ಳಲು ಆಸಕ್ತಿ ತೋರಿದ್ದರು.

ಕಳೆದ ಮಳೆಗಾಲದಲ್ಲಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ವಿಧಾನದಲ್ಲೇ ಕಡಲ್ಕೊರೆತ ತಡೆ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದರು. ಆದರೆ ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸಾಧ್ಯತೆಯ ಪರಾಮರ್ಶೆ ನಡೆಸದೆ ನೇರವಾಗಿ ಕಾಮಗಾರಿ ಕೈಗೊಳ್ಳುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದ್ದರಿಂದ ಈ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಎಂಜಿನಿಯರಿಂಗ್‌ ರಿಸರ್ಚ್‌ ಸ್ಟೇಷನ್‌(ಕೆಇಆರ್‌ಎಸ್‌)ಗೆ ಒಪ್ಪಿಸಲಾಗಿದೆ. ಸದ್ಯ ಕೆಇಆರ್‌ಎಸ್‌ನವರು ಪ್ರಾಥಮಿಕ ವರದಿಯನ್ನು ನೀಡಿದ್ದು, ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

Advertisement

ಕೆಇಆರ್‌ಎಸ್‌ ಸಲಹೆಯೇನು?
1 ಕಿ.ಮೀ. ಉದ್ದಕ್ಕೆ ಸೀವೇವ್‌ ಬ್ರೇಕರ್‌ ಹಾಕಲು ಹೆಚ್ಚಿನ ಸ್ಥಿರತೆ ಅಗತ್ಯ, ಅಲೆಗಳ ಅಬ್ಬರ ಹೆಚ್ಚಾದರೆ ಸೀವೇವ್‌ ಬ್ರೇಕರ್‌ ದೃಢತೆ ಸಾಕಾಗದು, ಹಾಗಾಗಿ ವಿನ್ಯಾಸದಲ್ಲಿ ಬದಲಾವಣೆ ಬೇಕಾಗಬಹುದು. ಬುಡದಲ್ಲಿ ಬಂಡೆ ಹಾಕುವುದು ಅಲ್ಲದೆ ಗೋಡೆಯ ಎತ್ತರ ಹೆಚ್ಚಿಸಬೇಕು.

ಕಳೆದ ವಾರವಷ್ಟೇ ಸಚಿವರೂ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆದಿದೆ. ಸದ್ಯಕ್ಕೆ 200 ಮೀಟರ್‌ಗೆ ಸೀವೇವ್‌ ಬ್ರೇಕರ್‌ ನಿರ್ಮಿಸುವ ಬಗ್ಗೆ ಚರ್ಚಿಸಲಾಗಿದ್ದು, ಪ್ರಸ್ತಾವನೆಯನ್ನೂ ಕಳುಹಿಸಿದ್ದೇವೆ. ಕೆಇಆರ್‌ಎಸ್‌ನವರ ಅಂತಿಮ ವರದಿಯೂ ಕೆಲವು ದಿನಗಳಲ್ಲಿ ಕೈಸೇರುವ ನಿರೀಕ್ಷೆ ಇದೆ.
– ಟಿ.ಎಸ್‌. ರಾಥೋಡ್‌, ಮುಖ್ಯ ಎಂಜಿನಿಯರ್‌, ಬಂದರು, ಒಳನಾಡು ಸಾರಿಗೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next