ಹುಣಸೂರು: ಈ ಹಿಂದಿನ 25 ವರ್ಷಗಳ ಅವಧಿಯಲ್ಲಿ ಸಂಸದರು ಮಾಡಿರುವ ಕೆಲಸ ಹಾಗೂ ತಮ್ಮ ಐದು ವರ್ಷಗಳ ಅವಧಿಯ ಅಭಿವೃದ್ಧಿ ಕೆಲಸಗಳು ನಿಮ್ಮ ಮುಂದಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ತಿಳಿಸಿದರು.
ತಾಲೂಕಿನ ಗುರುಪುರ ಹಾಗೂ ಹೊಸೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಮೈಸೂರು ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಹಿನಕಲ್ ಬಳಿ ಫ್ಲೈಓವರ್ ನಿರ್ಮಿಸಲಾಗಿದೆ. ರೈಲ್ವೆ ಡಬ್ಲಿಂಗ್ ಕಾಮಗಾರಿ ಮುಗಿಸಿದ್ದೇನೆ. ದೇಶದ ಮೊದಲ ಮೈಸೂರಿನಲ್ಲಿ ಪೋಸ್ಟ್‌ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ ತೆರೆದು 42 ಸಾವಿರ ಮಂದಿಗೆ ಪಾಸ್ ನೀಡಲು ನೆರವಾಗಿದ್ದೇನೆ ಎಂದರು.
ಜಿಲ್ಲೆಯಲ್ಲಿ 95 ಸಾವಿರ ಮಂದಿಗೆ ಉಚಿತ ಅಡುಗೆ ಅನಿಲ ವಿತರಿಸಲಾಗಿದೆ. ಉಳಿದವರಿಗೆ ಅಕ್ಟೋಬರ್ 2 ರೊಳಗೆ ವಿತರಣೆಯಾಗಲಿದೆ. ಗ್ರಾಮ ಪಂಚಾಯ್ತಿಗೆ ಅನುದಾನ ಬರುವುದಿಲ್ಲವೆಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರದಿಂದ ನೇರವಾಗಿ ಗ್ರಾಪಂಗಳಿಗೆ ಅನುದಾನ ಬರುತ್ತಿದೆ.
ಇನ್ನು ಉದ್ಯೋಗ ಖಾತರಿ ಯೋಜನೆಯಡಿ 26 ಕಾಮಗಾರಿಗಳನ್ನು ಸೇರಿಸಿರುವುದರಿಂದ ಸಾಕಷ್ಟು ಮಂದಿಗೆ ಅನುಕೂಲವಾಗಿದೆ. ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಬೇಡಿಕೆ ಸಲ್ಲಿಸಿದಲ್ಲಿ ಮನೆ-ನಿವೇಶನ, ರಸ್ತೆ, ಚರಂಡಿ ಅಭಿವೃದ್ಧಿ ಪಡಿಸಿಕೊಳ್ಳಲು ಗ್ರಾಪಂಗೆ ಅಧಿಕಾರ ನೀಡಿರುವುದು ಕೇಂದ್ರ ಸರ್ಕಾರದ ಸಾಧನೆಯಾಗಿದೆ ಎಂದರು.
ಕಮಿಷನ್ ದಂಧೆ: ಇಲ್ಲಿನ ರಾಜಕಾರಣಿಗಳು ಕಮಿಷನ್ ಇಲ್ಲದೇ ಕೆಲಸ ಮಾಡುವುದಿಲ್ಲ. ಆ ಪಕ್ಷ-ಈ ಪಕ್ಷ ಎನ್ನುತ್ತಾರೆ, ಭರವಸೆ ನೀಡಿ, ಹಣಕೊಟ್ಟು ಓಟು ಖರೀದಿ ಮಾಡುತ್ತಾರೆ. ದೇವರಾಜ ಅರಸರ ಹೆಸರೇಳುವ ಇವರು ಅವರಂತೆ ಕೆಲಸ ಮಾಡಿದ್ದರೆ, ಕ್ಷೇತ್ರ ಗಂಧದ ನಾಡಾಗುತ್ತಿತ್ತು. ಇನ್ನು ಐಟಿಸಿ ಕಪಿಮುಷ್ಟಿಯಲ್ಲಿರುವ ತಂಬಾಕು ಮಂಡಳಿಯನ್ನು ಮುಕ್ತ ಮಾಡಬೇಕಿದೆ. ಐಟಿಸಿಯವರ ಹತ್ತಿರ ಕಮಿಷನ್ ಪಡೆಯದ ಯಾವ ಸಂಸದರಿದ್ದಾರೆ ತೋರಿಸಿ ಎದೆಮುಟ್ಟಿಕೊಂಡು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಏರ್ ಸರ್ಜಿಕಲ್ ಸ್ಟ್ರೈಕ್ ಮೂಲಕ ದಿಟ್ಟ ಉತ್ತರ ನೀಡಲಾಗಿದೆ. ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು. ಇದೇ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತೊರೆದ ಹತ್ತಕ್ಕೂ ಹೆಚ್ಚು ಮಂದಿ ಸಂಸದರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ತಂಬಾಕು ಮಂಡಳಿ ಸದಸ್ಯ ಕಿರಣ್‌ಕುಮಾರ್, ಜಿಪಂ ಮಾಜಿ ಸದಸ್ಯ ಜಾಬಗೆರೆ ರಮೇಶ್, ನಾಗರಾಜ ಮಲ್ಲಾಡಿ, ರಾಜೇಂದ್ರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೆಂಕಟಮ್ಮ, ಮುಖಂಡರಾದ ಪ್ರಪುಲ್ಲಾ ಮಲ್ಲಾಡಿ ಶಿವಣ್ಣ, ದೊಡ್ಡೇಗೌಡ, ದಿನೇಶ್, ನಾರಾಯಣಗೌಡ ಇತರರಿದ್ದರು.