Advertisement

ಇದೇ ಭಾರತ, ನೋಡಮ್ಮಾ…

08:59 AM Dec 01, 2019 | Lakshmi GovindaRaj |

ವೃದ್ಧ ತಂದೆ- ತಾಯಿಯನ್ನು ಹೊತ್ತು, ಯಾತ್ರೆ ಸಾಗಿದ ಶ್ರವಣ ಕುಮಾರನ ಕಥೆ ಕೇಳಿದ್ದೀರಿ. ಅಂಥದ್ದೇ ಒಬ್ಬ ಅಪರೂಪದ ಮಗ ಮೈಸೂರಿನ ಕೃಷ್ಣಕುಮಾರ್‌. ಅಡುಗೆಮನೆಯೇ ಜಗತ್ತು ಎಂದು ನಂಬಿಕೊಂಡಿದ್ದ ತಾಯಿಗೆ, ತಂದೆಯ ಚೇತಕ್‌ ಬಜಾಜ್‌ನಲ್ಲಿ ಭಾರತ ತೋರಿಸುತ್ತಿದ್ದಾರೆ. ಎರಡು ವರುಷದ ಈ ಪಯಣ ಸಾಗುತ್ತಲೇ ಇದೆ…

Advertisement

ಅರುಣಾಚಲ ಪ್ರದೇಶದ ಅಂಚು. ಕುಗ್ರಾಮದ ಪುಟ್ಟ ಮನೆಯಲ್ಲಿ ಕೆಎಸ್‌ನ ಕವಿತೆ ಕೇಳುತ್ತಿತ್ತು; “ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು…’. ಕನ್ನಡ ಪದ್ಯದ ಸಿಹಿಪದಗಳು ಕಿವಿಗೆ ಮೆಲ್ಲನೆ ಇಳಿಯುತ್ತಲೇ, ಬಿದಿರಿನ ಮಂಚದ ಮೇಲೆ ಹಗುರಾಗುತ್ತಿದ್ದ ಹಣ್ಣು ಜೀವದ ಹೆಸರು, ಚೂಡಾರತ್ನ. ಆ ತಾಯಿಯ ಕಾಲಿನ ಬುಡದಲ್ಲಿ ಮಗ. ಅಮ್ಮನ ಪಾದಗಳನ್ನು ಮೃದುವಾಗಿ ಒತ್ತುತ್ತಿದ್ದಾನೆ. ದಿನವಿಡೀ ಸುತ್ತಾಡಿ ದಣಿದ ಅಮ್ಮ, ಮರುದಿನ ಬೆಳಗಾಗೆದ್ದು, ಮತ್ತೆ ಅದೇ ಉಲ್ಲಾಸ ತುಂಬಿಕೊಂಡು ಓಡಾಡಬೇಕಲ್ಲ? ಅದಕ್ಕಾಗಿ, ಈ ಪಾದಸೇವೆ.

ಮೊಬೈಲಿನಿಂದ ಕನ್ನಡದ ಭಾವಗೀತೆಗಳು ಎದ್ದುಬರುವುದೂ ಅದಕ್ಕಾಗಿಯೇ. ಗಡ್ಡ ಇಳಿಬಿಟ್ಟು, ಕಾರುಣ್ಯದ ಕಂದೀಲು ಹಚ್ಚಿಕೊಂಡು ತನ್ನನ್ನು ಕಾಯುವ ಈ ಮಗನನ್ನು ನೋಡುತ್ತಾ, “ತ್ರೇತಾಯುಗದ ಶ್ರವಣ ಕುಮಾರನೇ ನನ್ನ ಹೊಟ್ಟೆಯಲ್ಲಿ ಹುಟ್ಟಿದನೋ ಏನೋ’ ಎನ್ನುವ ಪುಟ್ಟ ಗೊಂದಲದಲ್ಲಿ ತೇಲುತ್ತಿರುವಾಗಲೇ ತಾಯಿಯ ಕಣ್ಣಲ್ಲಿ ನಿದ್ರೆ. ಎರಡು ವರ್ಷದ ಹಿಂದೆ, ಆ ಮಗ ಹೀಗಿರಲಿಲ್ಲ. ಗಡ್ಡ ಬೋಳಿಸಿ ಟ್ರಿಮ್‌ ಆಗಿದ್ದ. ಬೆಂಗಳೂರಿನಲ್ಲಿ ಕೈತುಂಬಾ ಸಂಬಳ ಬರುವ ಕಾರ್ಪೊರೇಟ್‌ ಟೀಮ್‌ ಲೀಡರ್‌ ಆಗಿದ್ದ. ಗಡಿಯಾರದೊಂದಿಗೆ ಓಟಕ್ಕಿಳಿದಿದ್ದ.

ವಾರಾಂತ್ಯ ಬಂದರೆ, ಗೆಳೆಯರೊಂದಿಗೆ ಹತ್ತೂರು ತಿರುಗುತ್ತಿದ್ದ. ವೃತ್ತಿಯ 13 ವರುಷ ಕಳೆದ ಮೇಲೆ, ಒಮ್ಮೆ ಮೈಸೂರಿನ ಮನೆಗೆ ಹೋದಾಗ, ಯಾಕೋ ಅಮ್ಮನಿಗೆ ಕೇಳಿಬಿಟ್ಟ. “ಅಮ್ಮಾ, ನೀನೂ ತಿರುವಣ್ಣಾಮಲೈ, ತಿರುವಾರಂಗಂ, ತಿರುಪತಿಗಳನ್ನೆಲ್ಲ ನೋಡಿದ್ದೀಯೇನಮ್ಮಾ?’. ಅಮ್ಮನ ಹಣ್ಣುಹುಬ್ಬುಗಳು ಮೇಲೆದ್ದವು. “ಅಯ್ಯೋ, ನಾನು ಪಕ್ಕದ ಬೇಲೂರು- ಹಳೇಬೀಡನ್ನೇ ನೋಡಿಲ್ಲ ಕಣಪ್ಪಾ…’ ಅಂದಳು, ನಗುತ್ತಾ. ಕಾಡಿನಲ್ಲಿ ಪರಿವೇ ಇಲ್ಲದೆ ಹರಿದ ನದಿಯಂತೆ; ಅಡುಗೆ ಮನೆಯಲ್ಲಿ ಮೂಕಿಚಿತ್ರದ ಪಾತ್ರದಂತೆ ಬದುಕಿ, ನಾಲ್ಕು ಗೋಡೆಗಳ ನಡುವೆ ಕಳೆದುಹೋಗಿದ್ದ ಜೀವ;

ಬೆಳಗ್ಗೆ 5ಕ್ಕೆ ಎದ್ದು ರಾತ್ರಿ 11 ಆದರೂ ಅವಳ ಕೆಲಸದ ಶಿಫ್ಟು ಮುಗಿಯುವುದಿಲ್ಲ. 67 ವರ್ಷದಿಂದ ಮನೆಬಿಟ್ಟು, ಆಚೆಗೆ ಹೆಚ್ಚು ಕಾಲಿಟ್ಟವಳಲ್ಲ. ಅಪ್ಪನೂ ಕಣ್ಮುಚ್ಚಿದ ಮೇಲೆ, ಅವಳ ಆಸೆಗಳೆಲ್ಲ ಆವಿಯಾಗಿದ್ದವು. ನಾನು ಇಷ್ಟೆಲ್ಲ, ಸುತ್ತಿದ್ದೇನೆ; ನೋಡಿದ್ದೇನೆ. ನನಗೆ ಜನ್ಮ ಕೊಟ್ಟ ತಾಯಿ, ಪಕ್ಕದ ಬೇಲೂರನ್ನೇ ನೋಡಿಲ್ವಲ್ಲ ಎನ್ನುವ ನೋವು ಮಗನನ್ನು ಜಗ್ಗಿತು. “ಅಮ್ಮಾ ಬೇಲೂರು ಒಂದೇ ಅಲ್ಲ, ಇಡೀ ಭಾರತವನ್ನೇ ನಿನಗೆ ತೋರಿಸ್ತೀನಿ’ ಎಂದವನು 30 ದಿನಗಳ ರಜೆ ಬರೆದು, ಉತ್ತರ ಭಾರತದ ಕಡೆಗೆ ತಾಯಿಯ ಜತೆ ಮೊದಲ ಹಂತದ ಯಾತ್ರೆ ಕೈಗೊಂಡ.

Advertisement

ಇಂಧೋರ್‌ನ ಜ್ಯೋತಿರ್ಲಿಂಗ, ಜೈಪುರ, ಅಮೃತಸರ್‌, ಪಟಿಯಾಲ, ಕಾಶ್ಮೀರದ ದಾಲ್‌ ಲೇಕ್‌, ನೆಹರು ಪಾರ್ಕು, ಖೀರ್‌ ಭವಾನಿ ದೇಗುಲ, ಗುಲ್‌ಮಾರ್ಗ್‌, ಶಂಕರಾಚಾರ್ಯ ಬೆಟ್ಟ, ಕಾಟ್ರಾದ ವೈಷ್ಣೋದೇವಿ ಬೆಟ್ಟ… ಒಂದನ್ನೂ ಬಿಡಲಿಲ್ಲ ಪುಣ್ಯಾತ್ಮ. ಅಮ್ಮನಿಗೆ ಯಾವುದೇ ದೇವಸ್ಥಾನ ತೋರಿಸಿದರೂ ಬಹಳ ಉತ್ಸಾಹದಿಂದ, ಆಸಕ್ತಿ ಕಳಕೊಳ್ಳದೆ, ನೋಡುತ್ತಿದ್ದಳು. ಅಲ್ಲೇನಿದೆ, ಇಲ್ಲೇನಿದೆ ಎನ್ನುತ್ತಾ ಮೂಲೆಯ ಶಿಲ್ಪದ ಪದತಲದಲ್ಲೂ ಅದರ ಚರಿತ್ರೆ ಹುಡುಕುತ್ತಿದ್ದಳು.

ಅಮ್ಮನಿಗೆ ಇಡೀ ಭಾರತವನ್ನು ದರ್ಶಿಸಲು ಈ ಒಂದು ತಿಂಗಳೆಲ್ಲಿ ಸಾಕು? ಎಂದುಕೊಂಡ ಮಗ, ಕೈತುಂಬಾ ಸಂಬಳ ಕೊಡುತ್ತಿದ್ದ ವೃತ್ತಿಗೇ ರಾಜೀನಾಮೆ ಬರೆದುಕೊಟ್ಟ. ಮಾಯಾನಗರದ ತನ್ನೆಲ್ಲ ವರ್ಣಸಂಕೋಲೆಗಳನ್ನು ಕಳಚಿ, ಪುತ್ರ ಕೃಷ್ಣಕುಮಾರ್‌ ಅವರ “ಮಾತೃ ಸೇವಾ ಸಂಕಲ್ಪ ಯಾತ್ರೆ’ ಶುರುವಾಯಿತು. ವೃದ್ಧಾಪ್ಯದಲ್ಲಿ ಅಮ್ಮನನ್ನು ಘನತೆಯಿಂದ ನೋಡಿಕೊಳ್ಳಬೇಕು ಎನ್ನುವ ಆಂತರಂಗದ ಆಸೆ ಭಾರತ ದರ್ಶನಕ್ಕೆ ಪ್ರೇರೇಪಿಸಿತು.

ಬಜಾಜ್‌ ಚೇತಕ್‌ ಅಲ್ಲ, ಅದು ಅಪ್ಪ!: ಕಾಶ್ಮೀರಕ್ಕೆ ಹೋದಾಗ, ಅಮ್ಮನ ಬ್ಯಾಗ್‌ನಲ್ಲಿ ಅಪ್ಪನ ಫೋಟೋವೂ ಜತೆಗೆ ಬಂದಿತ್ತು. “ಯಾಕೆ ಅಮ್ಮಾ ಈ ಫೋಟೊವನ್ನು ಇಲ್ಲಿಯ ತನಕ ಇಟ್ಕೊಂಡಿದ್ದೀಯಲ್ಲ?’ ಎಂದು ಮಗ ಕೇಳಿದ್ದಕ್ಕೆ, “ನಿನ್ನ ತಂದೆಯೂ ಅಷ್ಟೇ ಕಣಪ್ಪಾ. ಕುಟುಂಬಕ್ಕಾಗಿ ದುಡಿದೇ ಜೀವನ ಮುಗಿಸಿದರು. ಹೊರಜಗತ್ತನ್ನೇ ನೋಡಿಲ್ಲ’ ಎಂದಳು ಅಮ್ಮ. ಈ ಕಾರಣಕ್ಕಾಗಿ ಅಪ್ಪ ಓಡಿಸುತ್ತಿದ್ದ ಚೇತಕ್‌ ಬಜಾಜ್‌ ಅನ್ನೇ ಭಾರತ ಯಾತ್ರೆಗೆ ರಥ ಮಾಡಿಕೊಂಡರು ಕೃಷ್ಣಕುಮಾರ್‌.

ತಾಯಿ, ಮಗ, ಸಾಕ್ಷಾತ್‌ ತಂದೆಯಂತೆಯೇ ಇರುವ ಚೇತಕ್‌ ಬಜಾಜ್‌ನಲ್ಲಿ ಈಗಾಗಲೇ 50,100 ಕಿ.ಮೀ. ಭಾರತವನ್ನು ಸುತ್ತಿದ್ದಾರೆ. 2018 ಜನವರಿ 16ಕ್ಕೆ ಚಾಮುಂಡಿ ಬೆಟ್ಟದಿಂದ ಹೊರಟ ಚೇತಕ್‌, 21 ರಾಜ್ಯಗಳಲ್ಲದೆ, ಪಕ್ಕದ ಭೂತಾನ್‌, ನೇಪಾಳ, ಮ್ಯಾನ್ಮಾರ್‌ ದೇಶಗಳನ್ನೂ ತೋರಿಸಿದೆ. ತವಾಂಗ್‌, ಮೇಚುಕಾ, ಚೀನಾದ ಗಡಿಗಳನ್ನೂ ಅದು ನೋಡಿದೆ. ಅರುಣಾಚಲದ ಅಂಚಿನ ಪುಟ್ಟ ರಸ್ತೆಗಳ ಗುಂಡಿಗಳನ್ನು ಹತ್ತಿಳಿದು, ಓಲಾಡುತ್ತಾ ಸಾಗುವ ಚೇತಕ್‌ಗೆ ಅಲ್ಲಿನ ಜನರ ಸ್ವಾಗತ ಸಿಗುತ್ತಿದೆ.

ನಮ್ಮ “ಪುಷ್ಪಕ ವಿಮಾನ’: ಸ್ಕೂಟರಿನ ಹಿಂಬದಿಯ ಸೀಟಿಗೆ ಮಗ, ರಗ್ಗು ಹಾಸಿದ್ದಾನೆ. ಕೂರಲು ಮೆತ್ತಗಿದೆ. ಆಚೆಈಚೆ ಎರಡು ಕಾಲು ಹಾಕಿಕೊಂಡು, ಜೀನ್ಸ್‌- ಚೂಡಿ ಧರಿಸಿದ ಹುಡುಗಿಯರು ಕೂರುತ್ತಾರಲ್ಲ, ಹಾಗೆ ಕೂರುತ್ತಾರೆ ತಾಯಿ. ಬೆನ್ನಿಗೆ ಆತುಕೊಂಡಂತೆ ಸ್ಟೆಪ್ನಿಯ ಚಕ್ರಗಳಿವೆ. ಅತಿ ಅವಶ್ಯಕ ಎನಿಸಿದ ವಸ್ತುಗಳನ್ನು ತುಂಬಿಕೊಂಡ 6 ಬ್ಯಾಗುಗಳಿವೆ. ಅರ್ಧ ಲಕ್ಷ ಕಿ.ಮೀ. ಓಡಿದರೂ, ಇಲ್ಲಿಯ ತನಕ ಐದು ಸಲವಷ್ಟೇ ಪಂಕ್ಚರ್‌ ಆಗಿದೆ. ಕಾಬೋರೇಟರ್‌ ಅನ್ನು 15 ದಿನಕ್ಕೊಮ್ಮೆ ಕ್ಲೀನ್‌ ಮಾಡ್ತಾರೆ. ಜನರಲ್‌ ಚೆಕಪ್‌, ನಟ್ಟು- ಬೋಲ್ಟನ್ನು ಆಗಾಗ್ಗೆ ಟೈಟ್‌ ಮಾಡಿಕೊಳ್ಳುವ ಪ್ರಾಥಮಿಕ ಮೆಕಾನಿಕ್‌ ವಿದ್ಯೆಗಳನ್ನು ಮಗ ಬಲ್ಲರು.

ಯಾವುದೇ ಟಾರ್ಗೆಟ್‌ ಇಲ್ಲ…: ಕೃಷ್ಣಕುಮಾರ್‌ ಬ್ರಹ್ಮಚಾರಿ. ಅವರಿಗೆ ನಾಳೆಗಳ ಕನಸಿಲ್ಲ. ತಾಯಿಯೇ ಪ್ರಪಂಚ ಎಂದು ನಂಬಿದವರು. ಬೆಳಗ್ಗೆ ಹೊರಟವರು, ಸಂಜೆಯ ಐದರೊಳಗೆ ಯಾವುದಾದರೂ ಒಂದು ಊರನ್ನು ಸೇರುತ್ತಾರೆ. ದಿನಕ್ಕೆ ಸ್ಕೂಟರ್‌ ಇಷ್ಟೇ ಕಿ.ಮೀ. ಕ್ರಮಿಸಬೇಕೆಂಬ ಹಠ, ಆತುರಗಳಿಲ್ಲ. ಆತ್ಮತೃಪ್ತಿಯಿಂದ ಅಮ್ಮ ಆರಾಮವಾಗಿ ಭಾರತವನ್ನು ನೋಡಬೇಕು ಎನ್ನುವ ಕಾಳಜಿ ಮಗನಿಗೆ. ನಿಧಾನಕ್ಕೆ ಹೋಗುವವರು ಸುತ್ತಮುತ್ತ ನೋಡಿದಂತೆ, ಓಡಿಹೋಗುವವರು ಗಮನಿಸೋದಿಕ್ಕೆ ಆಗುವುದಿಲ್ಲ ಎನ್ನುವ ಪಿಲಾಸಫಿ.

ಮಕ್ಕಳಿಗೆ ಜೀವನಪಾಠ: ಕೃಷ್ಣಕುಮಾರ್‌ರ ಚೇತಕ್‌ನ ಸುದ್ದಿ ಈಗಾಗಲೇ ಈಶಾನ್ಯ ರಾಜ್ಯಗಳ ಹಳ್ಳಿ ಹಳ್ಳಿಗಳಲ್ಲೂ ಹಬ್ಬಿದೆ. ಹೋದಲ್ಲೆಲ್ಲ ತಾಯಿ- ಮಗನಿಗೆ ಸ್ವಾಗತ ಸಿಗುತ್ತದೆ. “ನಮ್ಮನೆಗೆ ಊಟಕ್ಕೆ ಬನ್ನಿ’, “ಇಂದು ಇಲ್ಲೇ ಉಳಿಯಿರಿ’ ಎನ್ನುವ ಪ್ರೀತಿಯ ಆಹ್ವಾನಗಳೇ ಹೊಟ್ಟೆ ತುಂಬಿಸುತ್ತವೆ. ಕಾಣದೂರಿನಲ್ಲಿ ಕಾಲಿಟ್ಟಲ್ಲೆಲ್ಲ ಬಂಧುಗಳೇ ಕಾಣಿಸುತ್ತಾರೆ. ಕೃಷ್ಣಕುಮಾರ್‌ರ ಚೇತಕ್‌ ಹಾದಿಯಲ್ಲಿ ಸಿಕ್ಕ ಶಾಲೆಗಳ ಮುಂದೆ ನಿಲ್ಲುತ್ತದೆ. ಅಲ್ಲಿ ಮಕ್ಕಳಿಗೆ, ಹಿರಿಯರನ್ನು ಏಕೆ ಗೌರವಿಸಬೇಕು? ವೃದ್ಧಾಪ್ಯದ ತಂದೆ- ತಾಯಿಗಳನ್ನು ಹೇಗೆ ನೋಡಿಕೊಳ್ಳಬೇಕು? ಎನ್ನುವ ಪಾಠ. ಶಾಲೆಯಿಂದ ಹೊರಡುವಾಗ, ಮಕ್ಕಳು ಆರತಿ ಎತ್ತಿ, ಪುಟ್ಟ ಕೈಗಳಿಂದ ನಮಸ್ಕರಿಸಲು ಬಾಗಿದಾಗ, ಅಮ್ಮನ ಕಂಗಳು ಜಿನುಗುತ್ತವೆ.

ದಿನಕ್ಕೊಂದು ಬಿಪಿ ಮಾತ್ರೆ ನುಂಗಿಕೊಂಡು, ಹೋದಲ್ಲೆಲ್ಲ ಅಲ್ಲಿನ ಆಹಾರವನ್ನು ಸವಿದು, ಏನೂ ಸಿಗದಿದ್ದರೆ ಕರ್ನಾಟಕದ ಶೈಲಿಯಲ್ಲಿ ಅವಲಕ್ಕಿಗೆ, ಮೊಸರನ್ನು ಕಲಿಸಿ ತಿಂದರೆ, ಅಮ್ಮನ ಹೊಟ್ಟೆ ತಂಪಾಗುತ್ತದೆ. ಮಠ, ಮಂದಿರ, ಆಶ್ರಮಗಳಲ್ಲಿ, ಪ್ರೀತಿಯಿಂದ ಆಹ್ವಾನಿಸಿದವರ ಮನೆಗಳಲ್ಲಿ, ರಾತ್ರಿ ಬೆಳಗಾಗುತ್ತದೆ. ಸಣ್ಣಪುಟ್ಟ ಮಳೆಗೆ ಚೇತಕ್‌ ನಿಲ್ಲುವುದಿಲ್ಲ. ಅಡುಗೆಮನೆ. ನಾಲ್ಕುಗೋಡೆ. ಆರು ದಶಕಗಳಿಂದ ಪುಟ್ಟದಾಗಿದ್ದ ಇದೇ ಜಗತ್ತಿಗೀಗ ಗೋಡೆಗಳೇ ಇಲ್ಲ. ಪ್ರತಿಸಲ ಹೆಲ್ಮೆಟ್‌ ತೆಗೆದಾಗ ತಾಯಿಯ ಕೂದಲು ಕೆದರಿರುತ್ತೆ. ಆಗ ಮಗನೇ ತಲೆ ಬಾಚುತ್ತಾನೆ. ಮುಖ ಬೆವತಿರುತ್ತೆ; ಒರೆಸುತ್ತಾನೆ. ಮತ್ತೆ ಕಾಣದ ಊರಿನ ಭೇಟಿ. ಕಾಣದ ಮುಖಗಳು. ಈ ಬದುಕು ಸುಂದರ.

ಜೀವನ ಹೇಗೆ?: ಕೃಷ್ಣಕುಮಾರ್‌, 13 ವರ್ಷ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾಗ ಸ್ಯಾಲರಿ, ಇನ್ಸೆಂಟಿವ್ಸ್‌ಗಳನ್ನೆಲ್ಲ ತಾಯಿಯ ಹೆಸರಿನಲ್ಲೇ ಇಟ್ಟಿದ್ದರು. ಪ್ರತಿ ತಿಂಗಳು ಇದರಿಂದ ಬಡ್ಡಿ ಸಿಗುತ್ತದೆ. ಆ ಹಣದಿಂದಲೇ ಅಮ್ಮನಿಗೆ ಈಗ ಭಾರತ ದರ್ಶನವಾಗುತ್ತಿದೆ.

ಚೇತಕ್‌ನಲ್ಲಿ ಕುಳಿತು ಅಮ್ಮ ನೋಡಿದ್ದು…
– ಕೇರಳ, ತಮಿಳುನಾಡು, ಪಾಂಡಿಚೇರಿ, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಒರಿಸ್ಸಾ, ಛತ್ತೀಸ್‌ಗಢ, ಜಾರ್ಖಂಡ್‌, ಬಿಹಾರ್‌, ವೆಸ್ಟ್‌ ಬೆಂಗಾಲ್‌, ಸಿಕ್ಕಿಂ, ಅಸ್ಸಾಂ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್‌, ಮಣಿಪುರ್‌, ಮಿಜೋರಾಂ, ಈಗ ಅರುಣಾಚಲ ಪ್ರದೇಶದ ಹಳ್ಳಿಗಳು.

– ನೇಪಾಳ, ಭೂತಾನ್‌, ಮ್ಯಾನ್ಮಾರ್‌ ದೇಶಗಳು.

ಮಾತೃಸೇವಾ ಸಂಕಲ್ಪ ಯಾತ್ರೆ
ಆರಂಭ ತಾಣ: ಚಾಮುಂಡಿ ಬೆಟ್ಟ, ಮೈಸೂರು
ಈಗ ಸೇರಿದ್ದು: ಚಾಂಗ್‌ಲಾಂಗ್‌, ಅರುಣಾಚಲ ಪ್ರದೇಶ
ಕ್ರಮಿಸಿದ ಹಾದಿ: 50,100 ಕಿ.ಮೀ.

ನನಗೆ ಇಂಥ ಮಗ ಸಿಕ್ಕಿರೋದು, ನನ್ನ ಸೌಭಾಗ್ಯ. ಶ್ರೀಕೃಷ್ಣ ಅರ್ಜುನನಿಗೆ ವಿಶ್ವರೂಪ ತೋರಿಸಿದನಲ್ಲ, ಅಷ್ಟು ಖುಷಿ ಆಗುತ್ತಿದೆ ನನಗೆ. ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಎಲ್ಲವನ್ನೂ ತೋರಿಸಿದ್ದಾನೆ.
-ಚೂಡಾರತ್ನ, 70 ವರ್ಷ

* ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next