Advertisement

ಕೇಜ್ರಿವಾಲ್‌ ನೋಡಿ ಪಕ್ಷ ಕಟ್ಟುವ ಸಂಕಲ್ಪ ತೊಡಿ

09:16 AM Feb 13, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಕಥೆ ಮುಗಿಯಿತು, ಜೆಡಿಎಸ್‌ ಮುಗಿಸಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಭ್ರಮೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷ ಮತ್ತೆ ಬಲಿಷ್ಠಗೊಳಿಸಿಯೇ ತೀರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ತಿಳಿಸಿದ್ದಾರೆ.

Advertisement

ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಅಂಗವಾಗಿ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಮಹಾಧಿವೇಶನದಲ್ಲಿ ಮಾತನಾಡಿ, ನಮ್ಮ ಕಾರ್ಯಕರ್ತರು, ಮುಖಂಡರು ದೆಹಲಿಯಲ್ಲಿ ಕೇಜ್ರಿವಾಲ್‌ ನೋಡಿ ಪಕ್ಷ ಕಟ್ಟುವ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು. ದೆಹಲಿಯಲ್ಲಿ ಯಾವುದೇ ಜಾತಿ ಕೆಲಸ ಮಾಡಿಲ್ಲ. ಜನರು ಪ್ರಾದೇಶಿಕ ಪಕ್ಷಕ್ಕೆ ಮಣೆ ಹಾಕಿದ್ದಾರೆ. ಬಿಜೆಪಿ ಏನೆಲ್ಲಾ ಮಾಡಿದರೂ ದೆಹಲಿ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಜನತಾ ಪರಿವಾರದಲ್ಲಿದ್ದು ಬೇರೆ ಪಕ್ಷಗಳಲ್ಲಿ ಹಂಚಿ ಹೋಗಿರುವವರು ಹಾಗೂ ತಟಸ್ಥರಾಗಿರುವವರನ್ನು ಮತ್ತೆ ಪಕ್ಷಕ್ಕೆ ಕರೆತರುತ್ತೇನೆ. ಕೇರಳದಲ್ಲಿ ಈಗಾಗಲೇ ಆ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ. ಕರ್ನಾಟಕದಲ್ಲೂ ನಾನೇ ಎಲ್ಲರ ಮನೆ ಬಾಗಿಲಿಗೆ ಹೋಗಿ ಕರೆತರುತ್ತೇನೆ. ಕಾಂಗ್ರೆಸ್‌, ಬಿಜೆಪಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 2023ಕ್ಕೆ ಚುನಾವಣೆ ಬರುತ್ತೋ ಅದಕ್ಕೂ ಮೊದಲು ಬರುತ್ತೋ, ಪಕ್ಷವನ್ನು ಸಜ್ಜುಗೊಳಿಸುವುದು ನನ್ನ ಮೊದಲ ಆದ್ಯತೆ ಎಂದರು.

ನಾನು ಯಾರ ಮುಲಾಜಿಗೂ ಒಳಗಾಗುವುದಿಲ್ಲ. ಹಿಂದೆ ಮಾಡಿದ ತಪ್ಪು ಮತ್ತೆ ಮಾಡುವುದಿಲ್ಲ. 224 ಕ್ಷೇತ್ರಗಳಲ್ಲಿ ಪಕ್ಷಕ್ಕಾಗಿ ಶ್ರಮಿಸುವ ನೈಜ ಕಾರ್ಯಕರ್ತರು, ಮುಖಂಡರನ್ನು ಗುರುತಿಸಿ ನಾಯಕತ್ವ ನೀಡುತ್ತೇನೆ. ಅವರಿಗೆ ಅವಕಾಶ ಕೊಡುತ್ತೇನೆಂದು ಹೇಳಿದರು. 1989ರಲ್ಲಿ ಪಕ್ಷದಿಂದ ನನ್ನನ್ನು ಹೊರಹಾಕಲಾಗಿತ್ತು. ನನ್ನ ಜತೆಗಿದ್ದ ಎಲ್ಲ ಸ್ನೇಹಿತರೂ ಹೊರಟು ಹೋಗಿದ್ದರು.

1994ರಲ್ಲಿ ಮತ್ತೆ ಪಕ್ಷದ ರಾಜ್ಯಾಧ್ಯಕ್ಷನಾಗಿ 115 ಸೀಟುಗಳೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತಂದೆ. ಆಗ ಯಾರೂ ಪಕ್ಷ ಕಟ್ಟಲು ನನಗೆ ನಯಾ ಪೈಸೆ ಕೊಡಲಿಲ್ಲ, ಸಿಂಧ್ಯಾ, ಜೀವರಾಜ್‌ ಆಳ್ವಾ, ಜಾಲಪ್ಪ ಅವರು ತಲಾ ಹತ್ತು ಲಕ್ಷ ರೂ. ನೀಡಿದ್ದರು ಅಷ್ಟೇ. ಆದರೆ ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ತಂದು ಜನರ ಆಶೀರ್ವಾದದಿಂದ ಪ್ರಧಾನಿಯಾಗಿಯೂ ಕೆಲಸ ಮಾಡಿದೆ. ನನಗೆ ಸೋಲು-ಗೆಲುವು ಹೊಸದಲ್ಲ, ಪಕ್ಷ ಕಟ್ಟುವುದು ಹೊಸದಲ್ಲ ಎಂದು ತಿಳಿಸಿದರು.

Advertisement

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್‌ ಮಾತನಾಡಿ, ಜೆಡಿಎಸ್‌ ಪಕ್ಷ ಎಚ್‌.ಡಿ.ದೇವೇಗೌಡರ ಶ್ರಮದಿಂದ ಉಳಿದಿದೆ. 87ನೇ ವಯಸ್ಸಿನಲ್ಲಿಯೂ ಪಕ್ಷ ಕಟ್ಟಲು ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ. ಅವರು ನಮ್ಮ ಪಕ್ಷದ ಶಕ್ತಿ. ಅವರ ಮಾರ್ಗದರ್ಶನದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರಬೇಕು ಎಂದರು. ಜೆಡಿಎಸ್‌ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಕೇರಳ, ಮಹಾರಾಷ್ಟ್ರ, ಗುಜರಾತ್‌, ಹರಿಯಾಣ, ಉತ್ತರಪ್ರದೇಶ ಸೇರಿ ದೇಶಾದ್ಯಂತ ಜೆಡಿಎಸ್‌ಗೆ ಶಕ್ತಿಯಿದೆ.

14 ತಿಂಗಳು ಕುಮಾರಸ್ವಾಮಿ ನೇತೃತ್ವದ ಸರ್ಕಾರ ನೀಡಿರುವ ಸಾಧನೆ ಕಡಿಮೆಯೇನಲ್ಲ ಎಂದು ಹೇಳಿದರು. ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಜನತಾಪರಿವಾರದಲ್ಲಿದ್ದು ರಾಜಕೀಯವಾಗಿ ತಟಸ್ಥರಾಗಿ ರುವವರನ್ನು ಮತ್ತೆ ಪಕ್ಷಕ್ಕೆ ಕರೆತರಬೇಕು. ಚುನಾವಣೆ ಬಂದಾಗ ಮಾತ್ರ ಪಕ್ಷ ಸಂಘಟನೆ ಮಾಡದೆ ನಿರಂತರವಾಗಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಘಟಕ ಪಕ್ಷ ಸಂಘಟನೆ ಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್‌.ವಿ.ದತ್ತಾ ಮಾತನಾಡಿ, ದೆಹಲಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಆಮ್‌ ಆದ್ಮಿ ಪಾರ್ಟಿ ಮೂರನೇ ಬಾರಿಗೆ ಗೆಲುವು ಸಾಧಿಸಿರುವುದು ಜೆಡಿಎಸ್‌ಗೆ ಸ್ಫೂರ್ತಿ. ಪ್ರಾದೇಶಿಕ ಪಕ್ಷಗಳಿಗೆ ಜನ ಮನ್ನಣೆ ಇದೆ ಎಂಬುದು ಇದರಿಂದ ಸಾಬೀತಾಗಿದೆ. ರಾಜ್ಯದಲ್ಲೂ ಜೆಡಿಎಸ್‌ಗೆ ಭವಿಷ್ಯವಿದೆ ಎಂದರು.

ಕೇರಳದಲ್ಲಿ ಸಚಿವರಾಗಿರುವ ಮ್ಯಾಥೂ ಥಾಮಸ್‌, ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಮಾಜಿ ಸಚಿವರಾದ ಎಚ್‌.ಡಿ.ರೇವಣ್ಣ, ಲೀಲಾದೇವಿ ಆರ್‌. ಪ್ರಸಾದ್‌, ಎಂ.ಎಂ.ನಬಿ, ಕೋನರೆಡ್ಡಿ, ಶೀಲಾನಾಯಕ್‌, ವಿಧಾನಪರಿಷತ್‌ ಸದಸ್ಯರಾದ ಬಿ.ಎಂ.ಫ‌ರೂಕ್‌, ರಮೇಶ್‌ಗೌಡ, ಆರ್‌.ಪ್ರಕಾಶ್‌ ಉಪಸ್ಥಿತರಿದ್ದರು.

ಪ್ರತಿನಿಧಿಗಳ ಆಗ್ರಹ: ರಾಷ್ಟ್ರೀಯ ಮಹಾಧಿವೇಶನದಲ್ಲಿ ಮಾತನಾಡಿದ ಕೇರಳ, ಮಹಾರಾಷ್ಟ್ರ, ಗುಜರಾತ್‌, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು, ಎಚ್‌.ಡಿ.ದೇವೇಗೌಡರು ದೆಹಲಿಗೆ ಬರಬೇಕು. ಬಿಜೆಪಿ ವಿರುದ್ಧದ ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು. ಪ್ರಾದೇಶಿಕ ಹಾಗೂ ಜಾತ್ಯತೀತ ಪಕ್ಷಗಳನ್ನು ಒಟ್ಟುಗೂಡಿಸಬೇಕು ಎಂದು ಆಗ್ರಹಪಡಿಸಿದರು. ದೇಶ ಸಂಕಷ್ಟ ಪರಿಸ್ಥಿತಿಯಲ್ಲಿದ್ದು ನಿಮ್ಮ ನೇತೃತ್ವ ಅಗತ್ಯವಾಗಿದೆ. ನೀವು ಕರ್ನಾಟಕಕ್ಕೆ ಸೀಮಿತವಲ್ಲ, ಇಡೀ ದೇಶಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕರು ಗೈರು: ಜ್ವರದಿಂದ ಬಳಲುತ್ತಿದ್ದ ಕಾರಣ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರು ಮಹಾಧಿವೇಶನಕ್ಕೆ ಬಂದಿರಲಿಲ್ಲ. ಮಧು ಬಂಗಾರಪ್ಪ ಹಾಗೂ ಜಿ.ಟಿ.ದೇವೇಗೌಡ ಸೇರಿ ಬಹುತೇಕ ಶಾಸಕರು ಗೈರು ಹಾಜರಾಗಿದ್ದರು.

ನಿರ್ಣಯಗಳು
* ಮಹಾಧಿವೇಶನದಲ್ಲಿ ಆರ್ಥಿಕ ಹಾಗೂ ರಾಜಕೀಯ ಸೇರಿ 4 ನಿರ್ಣಯಗಳನ್ನು ಅಂಗೀಕರಿಸಲಾಯಿತು. ಆರ್ಥಿಕ ನಿರ್ಣಯದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆರ್ಥಿಕ ನೀತಿ ಇದಕ್ಕೆ ಕಾರಣ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ, ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಮಧ್ಯಮ ಹಾಗೂ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರ ನೀತಿ ರೂಪಿಸಬೇಕು. ಕಾರ್ಮಿಕ, ಕೈಗಾರಿಕಾ, ಕೃಷಿ ಕಲ್ಯಾಣ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಲಾಗಿದೆ.

* ರಾಜಕೀಯ ನಿರ್ಣಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜನ ಹಾಗೂ ದೇಶ ವಿರೋಧಿ. ದೇಶಾದ್ಯಂತ ಸಿಎಎ ವಿರುದ್ಧ ಹೋರಾಟಗಳು ನಡೆಯು ತ್ತಿವೆ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳು, ಜಾತ್ಯತೀತ ಶಕ್ತಿಗಳು ಒಂದಾಗಿ ಹೋರಾಟ ಮಾಡಬೇಕು. ಕೇಂದ್ರ ಸರ್ಕಾರವು ಜನರ ಭಾವನೆಗೆ ಬೆಲೆ ಕೊಟ್ಟು ತಕ್ಷಣ ಸಿಎಎ ಕಾಯ್ದೆ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next