Advertisement

5 ವರ್ಷಗಳ ಕೆಲಸ ನೋಡಿ, ಮತ ಕೊಡಿ: ಡಿ.ಕೆ.ಸುರೇಶ್‌

06:13 PM Apr 08, 2019 | Team Udayavani |

ರಾಮನಗರ: ಕಳೆದ 5 ವರ್ಷಗಳಲ್ಲಿ ತಮ್ಮ ಕೆಲಸ ನೋಡಿ ಮತಕೊಡುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಹೇಳಿದರು. ನಗರದ ಗಾಂಧಿನಗರ ಸರ್ಕಲ್‌ನಲ್ಲಿ ನಡೆಸಿದ ರೋಡ್‌ ಶೋದಲ್ಲಿ ಅವರು ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಇಂದು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು.

Advertisement

ರಾಷ್ಟ್ರೀಯ ಹೆದ್ದಾರಿ 275ಕ್ಕೆ ರಾಮನಗರ ಮತ್ತು ಚನ್ನಪಟ್ಟಣ ನಗರಗಳ ಹೊರಗೆ ಬೈಪಾಸ್‌ ನಿರ್ಮಾಣವಾಗಲಿದೆ. ನಂತರ ರಾಮನಗರ ಮತ್ತು ಚನ್ನಪಟ್ಟಣ ನಗರ ವ್ಯಾಪ್ತಿಯ ಮೂಲಕ ಹಾದು ಹೋಗಿರುವ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ತಾವು ಕೇಂದ್ರದ ಮೇಲೆ ಒತ್ತಡ ಹೇರಿದ್ದರಿಂದ ವಿಸ್ತರಣಾ ಕಾರ್ಯ ನಡೆಯುತ್ತಿದೆ. ಈ ಕಾಮಗಾರಿ ಹಿಂದೆ ತಮ್ಮ ಶ್ರಮವಿದೆ ಎಂದರು.

ಬಿಜೆಪಿ ಕುತಂತ್ರ, ರಾಜೀವ್‌ ವಿವಿ ವಿಳಂಬ: ರಾಜೀವ್‌ ಗಾಂಧಿ ಆರೋಗ್ಯ ವಿವಿ ಮತ್ತು ಆಸ್ಪತ್ರೆ ಸ್ಥಾಪನೆ ವಿಳಂಬವನ್ನು ಪ್ರಸ್ತಾಪಿಸಿದ ಅವರು, ಈ ವಿಳಂಬಕ್ಕೆ ಬಿಜೆಪಿ ಕುತಂತ್ರ ಕಾರಣ. ಬೆಂಗಳೂರು ಮಲ್ಲೇಶ್ವರದ ಬಿಜೆಪಿ ಶಾಸಕರು ಅಡ್ಡಗಾಲು ಹಾಕಿರುವುದರಿಂದ ವಿವಿ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ರಾಮನಗರದಲ್ಲಿ ಕಂದಾಯ ಭವನ ಮತ್ತು ಜಿಪಂ ಭವನಗಳ ನಡುವೆ 60 ಕೋಟಿ ರೂ., ವೆಚ್ಚದ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಜಿಲ್ಲಾಸ್ಪತ್ರೆ ಸೇವೆ ಜನರಿಗೆ ಲಭ್ಯವಾಗಲಿದೆ ಎಂದರು.

ಇದೇ ವೇಳೆ ನೆರೆದಿದ್ದ ನಾಗರಿಕರು ನೀರು ಕೊಡಿ, ನೀರು ಕೊಡಿ ಎಂದು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ರಾಮನಗರಕ್ಕೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ರಾಮನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಸಿಗಲಿದೆ ಎಂದರು.

Advertisement

ಸುಳ್ಳು ಹೇಳುವ ಪ್ರಧಾನಿ: ಕೋಮುವಾದಿ ಬಿಜೆಪಿ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಬೇಕಾದ ಅಗತ್ಯವಿದೆ. ಹೀಗಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಒಂದಾಗಿವೆ. ಸುಳ್ಳು ಭರವಸೆ ಕೊಟ್ಟು ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿ ಮತ್ತೂಬ್ಬರಿಲ್ಲ ಎಂದರು. ಬೆಲೆ ಏರಿಕೆಗೆ ಕಡಿವಾಣ ಬಿದ್ದಿಲ್ಲ ಎಂದ ಅವರು ಕೇಬಲ್‌ ಟಿವಿ ಉದಾಹರಣೆ ನೀಡಿದರು. 200 ರೂ.,ಗಳಿಗೆ ಸಿಗುತ್ತಿದ್ದ ಕೇಬಲ್‌ ಸೇವೆ ಇದೀಗ 400 ರೂ., 500 ಆಗಿದೆ ಎಂದರು.

ನೀರು, ನಿವೇಶನ, ಮನೆ ಎಲ್ಲಾ ಸಿಗಲಿದೆ – ಶಾಸಕಿ ಅನಿತಾ: ರೋಡ್‌ ಶೋದಲ್ಲಿ ಭಾಗವಹಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ ಚುನಾವಣೆ ನಂತರ ನಿವೇಶನ ರಹಿತರಿಗೆ ನಿವೇಶನ, ಮನೆ ರಹಿತರಿಗೆ ಮನೆ ಮಂಜೂರಾಗಲಿದೆ.

ಕುಡಿಯುವ ನೀರಿನ ವ್ಯವಸ್ಥೆಯಲ್ಲಿಯೂ ಸುಧಾರಣೆ ಆಗಲಿದೆ. 13 ವರ್ಷಗಳ ಹಿಂದೆ ಮನೆಗಾಗಿ 5100 ರೂ., ಪಾವತಿ ಮಾಡಿರುವ ಫ‌ಲಾನುಭವಿಗಳಿಗೂ ಮನೆಗಳು ಸಿಗಲಿದೆ ಎಂದರು. ತಾವು ರಾಮನಗರ ಕ್ಷೇತ್ರದ ಶಾಸಕರಾದ ನಂತರ ಮೂಲ ಸೌಕರ್ಯ ವೃದ್ಧಿಗಾಗಿ ಸರ್ಕಾರದಿಂದ 400 ಕೋಟಿ ರೂ., ಅನುದಾನ ಬಿಡುಗುಡೆಯಾಗಿದೆ.

ಲೋಕಸಭೆ ಚುನಾವಣೆ ನಂತರ ಅಭಿವೃದ್ಧಿ ಕಾಮಗಾರಿಗಳು ಜನರ ಕಣ್ಣಿಗೆ ಗೋಚರವಾಗಲಿದೆ ಎಂದರು. ಏ.18ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಡಿ.ಕೆ.ಸುರೇಶ್‌ರಿಗೆ ಮತ ಹಾಕುವಂತೆ ಮನವಿ ಮಾಡಿದರು.

ರೋಡ್‌ ಶೋನಲ್ಲಿ ಎಂಎಲ್‌ಸಿ ಎಸ್‌.ರವಿ, ಪ್ರಮುಖರಾದ ಕೆ.ಶೇಷಾದ್ರಿ, ಇಕ್ಬಾಲ್‌ ಹುಸೇನ್‌, ರಾಜಶೇಖರ್‌, ಬಿ.ಉಮೆಶ್‌, ಸಿಎನ್‌ಆರ್‌ ವೆಂಕಟೇಶ್‌, ನರಸಿಂಹಯ್ಯ, ಕೆ.ರಮೇಶ್‌, ಪಾಪಣ್ಣ, ಪಿ.ನಾಗರಾಜ್‌, ಸೊಮಶೇಖರ (ಮಣಿ), ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next