ಕಲಬುರಗಿ: ನಂದಿ ಎನಿಮಲ್ ವೆಲ್ಫೇರ್ ಸೊಸೈಟಿ ಮುಖ್ಯಸ್ಥ ಹುಣಚಿರಾಯ (ಕೇಶವ) ಮೋಟಗಿ ಅವರಿಗೆ ಅವಾಚ್ಯ ಶಬ್ದಗಳಿಂದ ಫೋನ್‌ನಲ್ಲಿ ನಿಂದನೆ ಮಾಡಿದ ಆರೋಪದ ಮೇರೆಗೆ ಸೇಡಂ ಪಿಎಸ್‌ಐ ನಾನಾಗೌಡ ಪಾಟೀಲ ಅವರ ವಿರುದ್ಧ ನಗರ ಪೊಲೀಸ್ ಆಯಕ್ತಾಲಯದ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಪ್ರಕರಣ ದಾಖಲಾಗಿದೆ.
ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 47 ದನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅವುಗಳಿಗೆ ಜಿಲ್ಲಾಡಳಿತದ ಸೂಚನೆ ಮೇರೆಗೆ ನಂದಿ ಎನಿಮಲ್ ವೆಲ್ಫೇರ್ ಸೊಸೈಟಿಗೆ ಸೇರಿದ ಗೋಶಾಲೆಯಲ್ಲಿ ಆಶ್ರಯ ನೀಡಲಾಗಿತ್ತು.
ಆದರೆ, ಇದರಲ್ಲಿ ಒಂದು ಜಾನುವಾರು ಸಾಗಾಟ ಮಾಡುವ ವೇಳೆ ಮೃತಪಟ್ಟಿತ್ತು. ಈ ಬಗ್ಗೆ ಫೋನ್ ಕರೆ ಮಾಡಿದ್ದ ಪಿಎಸ್‌ಐ ನಾನಾಗೌಡ, ಜಾನುವಾರುಗಳನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದುದರಿಂದ ಮೃತಪಟ್ಟಿದೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹುಣಚಿರಾಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ :ಮಾಜಿ ಸಂಸದ ಜಿ.ಮಾದೇಗೌಡರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದೆ. ನ್ಯಾಯಾಲಯದ ಆದೇಶದ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.