Advertisement

Sedam Job Fair: ಉದ್ಯೋಗ ಆಧಾರಿತ ಕೌಶಲ್ಯ ನಮ್ಮ‌ ಗುರಿ; ಡಾ.ಶರಣಪ್ರಕಾಶ ಪಾಟೀಲ

03:10 PM Oct 13, 2023 | Team Udayavani |

ಕಲಬುರಗಿ: ಪ್ರತಿಯೊಬ್ಬ ನಿರುದ್ಯೋಗಿ ಅಭ್ಯರ್ಥಿಗೆ ಉದ್ಯೋಗ ಆಧಾರಿತ ಕೌಶಲ್ಯ ನೀಡುವುದು ನಮ್ಮ ಗುರಿಯಾಗಿದೆ. ನಿರುದ್ಯೋಗಿಗಳು ಜಿ.ಟಿ.ಟಿ.ಸಿ, ಕೆ.ಜಿ.ಟಿ.ಟಿ.ಐ ಮೂಲಕ ನೀಡಲಾಗುವ ಅಲ್ಪಾವಧಿ ಕೋರ್ಸ್ ಸೌಲಭ್ಯ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವರು ಹಾಗೂ ಸೇಡಂ ಶಾಸಕರಾದ ಡಾ. ಶರಣಪ್ರಕಾಶ ಪಾಟೀಲ ಕರೆ ನೀಡಿದರು.

Advertisement

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲೆಯ ಸೇಡಂ ಪಟ್ಟಣದ ಕೆ.ಇ.ಬಿ, ರಸ್ತೆಯಲ್ಲಿರುವ ಮಿನಿ ವಿಧಾನ ಸೌಧದ ಆಡಿಟೋರಿಯಂ ಸಭಾಂಗಣದಲ್ಲಿ ಜರುಗಿದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯವಾಗಿ ಉದ್ಯೋಗ ಸಿಗಬೇಕು, ಇಲ್ಲಿಯೇ ಕೆಲಸ ಮಾಡಬೇಕೆಂಬ ಮನೋಭಾವನೆ ಬಿಟ್ಟು ಎಲ್ಲಿ ಕೆಲಸ ಸಿಗುತ್ತದೋ ಅಲ್ಲಿ ಹೋಗಿ ಕೆಲಸ ಮಾಡುವ ಪ್ರವೃತ್ತಿ ಈ ಭಾಗದವರಲ್ಲಿ ಹೆಚ್ಚಬೇಕಿದೆ. ಇದರಿಂದ ಹೊಸ ಅನುಭವ ಜೊತೆಗೆ ಜೀವನ ರೂಪಿಸಿಕೊಳ್ಳಲು ವೇದಿಕೆ ಸಿಗಲಿದೆ. ಉದ್ಯೋಗ ಸಿಕ್ಕರು ಕೌಶಲ್ಯ ಹೆಚ್ಚಿಸಿಕೊಳ್ಳುವ ಕೆಲಸ‌ ನಿರಂತರವಾಗಿರಲಿ ಎಂದು ನಿರುದ್ಯೋಗಿಗಳಿಗೆ ಸಚಿವರು ಕಿವಿಮಾತು ಹೇಳಿದರು.

ಇಂದಿಲ್ಲಿ ಸುಮಾರು‌ 110 ಕ್ಕೂ ಹೆಚ್ಚು ಕಂಪನಿ ಬಂದಿವೆ. 7500 ಕ್ಕೂ ಹೆಚ್ಚು ಜನ ನೊಂದಣಿ ಮಾಡಿಕೊಂಡಿದ್ದಾರೆ. 10 ಸಾವಿರ ಜನ ನೊಂದಾಯಿಸುವ ಗುರಿ ಹೊಂದಿದ್ದೇವೆ. ಇಲ್ಲಿ ಕೆಲಸ‌ ಸಿಗದವರು ನಿರಾಶರಾಗಬಾರದು ಎಂದು ಅಭಯ ನೀಡಿದ ಸಚಿವರು, ಕೌಶಲ್ಯಾಭಿವೃದ್ದಿ ನಿಗಮದ ವೆನ್ ಸೈಟ್ ನಲ್ಲಿ ಅಥವಾ ಇಂದಿಲ್ಲಿ ಆಫಲೈನ್ ನೊಂದಣಿ ಆಗಿ ಕೆಲಸ‌ ಸಿಗದವರಿಗೆ ಕೌಶಲ್ಯಾಭಿವೃದ್ದಿ ಇಲಾಖೆ ಮುಂದಿನ ದಿನದಲ್ಲಿ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯ ತರಬೇತಿ ನೀಡಲಿದೆ ಎಂದರು.

ಜಿ.ಟಿ.ಟಿ.ಸಿ ಯಲ್ಲಿ ಡಿಪ್ಲೋಮಾ ಪಡೆದವರಿಗೆ ಶೇ.100ರಷ್ಟು ಉದ್ಯೋಗ ಖಾತ್ರಿಯಾಗಿದ್ದು, ಪ್ರವೇಶಕ್ಕೆ ಬೇಡಿಕೆ ಇರುವ ಕಾರಣ ಈ ವರ್ಷದಿಂದ ರಾಜ್ಯದ 33 ಜಿ.ಟಿ.ಟಿ.ಸಿಯಲ್ಲಿ ಕೆ.ಇ.ಎ. ಮೂಲಕ ಪಾರದರ್ಶಕವಾಗಿ ಪ್ರವೇಶಾತಿ ಕಲ್ಪಿಸಿದೆ. ಸುಮಾರು 3,000ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೆ.ಜಿ.ಟಿ.ಟಿ‌.ಐ ನಲ್ಲಿಯೂ 3 ರಿಂದ 6 ತಿಂಗಳ ಉಪಯುಕ್ತ ಉಚಿತ ತರಬೇತಿ ಲಭ್ಯವಿದೆ. ರಾಜ್ಯದ 150 ಐ.ಟಿ.ಯ ಸಂಸ್ಥೆಯನ್ನು ಉನ್ನತಿಕರಿಸಿದ್ದು, ಇಂಡಸ್ಟ್ರಿ 4.0 ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Advertisement

ಡಿಸೆಂಬರ್‌ನಲ್ಲಿ ಯುವ ನಿಧಿ ಜಾರಿಗೆ: ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಪಂಚ ಗ್ಯಾರಂಟಿಯಲ್ಲಿ ಈಗಾಗಲೆ ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ ಜಾರಿಗೊಳಿಸಿದೆ. ಡಿಸೆಂಬರ್ ಮಾಹೆಯಲ್ಲಿ ಡಿಪ್ಲೋಮಾ ನಿರುದ್ಯೋಗಿಗಳಿಗೆ ಮಾಸಿಕ 1,500 ರೂ. ಮತ್ತು ಪದವೀಧರರಿಗೆ ಮಾಸಿಕ 3,000 ರೂ. ನೀಡುವ ಯುವ ನಿಧಿ ಯೊಜನೆ ಜಾರಿಗೊಳಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಕ್ಷೇತ್ರದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮಹಾದಾಸೆಯಿಂದ ಇಂದಿಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ. ಐ.ಟಿ.ಐ, ಡಿಪ್ಲೋಮಾ, ಪದವೀಧರರಿಗೆ ಪ್ರತ್ಯೇಕ ಕಂಪನಿವಾರು ಸ್ಟಾಲ್ ತೆಗೆಯಲಾಗಿದೆ. ಈ ಉದ್ಯೋಗ ಮೇಳದ ವಿಶೇಷ ಏನೆಂದರೆ  ಸಂದರ್ಶನದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ ನೇಮಕಾತಿ ಆಗಿರುವ ಬಗ್ಗೆ ಅಥವಾ ಆಗದಿರುವ ಬಗ್ಗೆ ಫೀಡ್ ಬ್ಯಾಕ್ ನಲ್ಲಿ ಕಂಪನಿ ಅಧಿಕಾರಿಗಳು ನಮೂದಿಸಲಿದ್ದಾರೆ. ನೇಮಕ ಆಗದವರಿಗೆ ಕೌಶಲ್ಯ ಕೊರತೆ ನೀಗಿಸಲು ಮುಂದಿನ 2-3 ದಿನದಲ್ಲಿ ನಿಗಮವು ಸೂಕ್ತ ತರಬೇತಿ ನೀಡಿ ಉದ್ಯೋಗ ಅರ್ಹತೆ ಹೆಚ್ಚಿಸುವ ಕೆಲಸ ಮಾಡಲಿದೆ ಎಂದರು.

ಕಂಪನಿಗಳೇ ಮನೆ ಬಾಗಿಲಿಗೆ ಬಂದಿವೆ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಸಾಮಾನ್ಯವಾಗಿ ಈ ಭಾಗದ ಜನ ಉದ್ಯೋಗ ಅರಸಿ ದೂರದ ಬೆಂಗಳೂರು, ಹೈದ್ರಾಬಾದಿಗೆ ಹೋಗ್ತಾರೆ. ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಇಚ್ಛಾಶಕ್ತಿ ಪರಿಣಾಮ ಇಂದಿಲ್ಲಿಗೆ ಕೆಲಸ‌ ನೀಡುವ ಕಂಪನಿಗಳೆ‌ ನಿಮ್ಮ ಮನೆ ಬಾಗಿಲಿಗೆ ಬಂದಿವೆ. ಸ್ಥಳೀಯ ನಿರುದ್ಯೋಗಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಉದ್ಯೋಗ ಆಧಾರಿತ ಕೌಶಲ್ಯ ಪಡೆಯಲಯ ಮುಂದಗಾಬೇಕು ಎಂದು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿ.ಟಿ.ಟಿ.ಸಿ. ಎಂ.ಡಿ ವಿದ್ಯಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು,  ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಳಿಧರ ರತ್ನಗಿರಿ, ರಾಜೇಶ್ರೀ ಸಿಮೆಂಟ್  ಎಚ್.ಆರ್. ಅಧಿಕಾರಿ ನಾರಾಯಣ, ಡಿ.ವೈ.ಎಸ್.ಪಿ. ಕೆ.ಬಸವರಾಜ, ಮುಖಂಡರಾದ ಬಸವರಾಜ ಪಾಟೀಲ  ಇದ್ದರು. ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಸ್ವಾಗತಿಸಿದರು.

ಉದ್ಯೋಗ ಮೇಳದಲ್ಲಿ 108 ಕ್ಕೂ ಹೆಚ್ಚು ಕಂಪನಿಗಳು ಭಾಗಿ: ಪ್ರಮುಖವಾಗಿ ಎಲ್. ಆಂಡ್ ಟಿ ಫೈನಾನ್ಸ್, ಮಲಬಾರ್ ಗೋಲ್ಡ್ ಆಂಡ್ ಡೈಮೆಂಡ್ಸ್, ಜೆ.ಎಸ್‌ .ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ಟ್ರೇಡೆಂಟ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಆದಿತ್ಯ ಬಿರ್ಲಾ ಸನ್‌ ಲೈಫ್ ಇನ್ಸುರೆನ್ಸ್ ಕಂಪನಿ, ಕೆ.ಬಿ.ಎಲ್ ಸರ್ವಿಸಸ್ ಲಿಮಿಟೆಡ್, ಎಲ್‌ಐಸಿ ಆಫ್ ಇಂಡಿಯಾ, ಮಹೇಂದ್ರ ಆಂಡ್ ಮಹೇಂದ್ರಾ ಎ.ಡಿ.-ಜಹೀರಾಬಾದ್, ಅಲ್ಟಾಟೆಕ್ ಸಿಮೆಂಟ್ ಲಿಮಿಟೆಡ್, ಸೇಡಂ ತಾಲೂಕಿನ ಕೊಡ್ಲಾದ ಶ್ರೀ ಸಿಮೆಂಟ್ ಹಾಗೂ ಲೇಬರ್‌ನೆಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳು ಭಾಗವಹಿಸಿದ್ದವು.

ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ: ಸೇಡಂ ಉದ್ಯೋಗ ಮೇಳಕ್ಕೆ ಉದ್ಯೋಗ ಅಕಾಂಕ್ಷಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಪ್ರತಿ ಸಂದರ್ಶನ ಕೌಂಟರ್ ಅಭ್ಯರ್ಥಿಗಳಿಂದ ತುಂಬಿದ ದೃಶ್ಯ ಸಾಮಾನ್ಯವಾಗಿತ್ತು. ಸ್ಥಳೀಯರು ಸೇರಿದಂತೆ ಜಿಲ್ಲೆಯ ಇತರೆ ಭಾಗಗಳಿಂದ ಉದ್ಯೋಗ ಅರಸಿ ಬಂದಿದ್ದರು. ಉದ್ಯೋಗ ಮೇಳಕ್ಕೆ ಬಂದವರಿಗೆ ಪದವಿ ಕಾಲೇಜು ಕ್ರೀಡಾಂಗಣದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next