Advertisement

ಸೇಡಂ: ಜಿವಿಆರ್‌ ನಿರ್ಲಕ್ಷ್ಯಾಕ್ಕೆ ಹೆಚ್ಚಿದ ಅಪಘಾತ

12:19 PM Jan 03, 2019 | Team Udayavani |

ಸೇಡಂ: ಅಕ್ರಮ ಮಾಡಿದರೆ ಶಿಕ್ಷೆ ಇದೆ. ಆದರೆ ಸಾವು ಬಂದರೆ ಜೀವ ಮತ್ತೆ ಬರಲು ಸಾಧ್ಯವೇ?. ಈ ಪ್ರಶ್ನೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಮತ್ತು ಅಧಿಕಾರಿಗಳು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ, ಕೇವಲ ರಸ್ತೆ ನಿರ್ಮಿಸಿದರೆ ಸಾಲದು, ಅಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಅಪಘಾತ ಸಂಭವಿಸುವುದು ಕಟ್ಟಿಟ್ಟ ಬುತ್ತಿ. ಇದಕ್ಕೆ ಜೀವಂತ ನಿದರ್ಶನ ವಾಗ್ಧಾರಿಯಿಂದ ರಿಬ್ಬನಪಲ್ಲಿವರೆಗೆ ಜಿ.ವಿ.ಆರ್‌. ಖಾಸಗಿ ಸಂಸ್ಥೆ ನಿರ್ಮಿಸಿರುವ ರಸ್ತೆ.

Advertisement

ಈ ರಸ್ತೆ ನಿರ್ವಹಣೆ ದೃಷ್ಟಿಯಿಂದ ಸಂಗ್ರಹಿಸುವ ಟೋಲ್‌ಗೆ ಬರ ಇಲ್ಲ. ಆದರೆ ರಸ್ತೆಯಲ್ಲಿ ಹೋಲ್‌ಗ‌ಳು ಮಾತ್ರ ಜಾಸ್ತಿ ಇವೆ. ರಸ್ತೆ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೂ ದುರಸ್ತಿ ಮಾಡಿ ವರ್ಷಗಳೇ ಗತಿಸಿವೆ. ಎಲ್ಲೆಂದರಲ್ಲಿ ತಗ್ಗು, ದಿನ್ನೆಗಳು ಏರ್ಪಟ್ಟಿವೆ. ಅನೇಕ ಕಡೆಗಳಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಇದಕ್ಕೂ ಮಿಗಿಲಾಗಿ ವಾಹನಗಳ ಸುರಕ್ಷತಾ ದೃಷ್ಟಿಯಿಂದ ರಸ್ತೆಗಳ ಮೇಲೆ ಸೂಚಿಸುವ ಬಿಳಿ ಗೆರೆಗಳು ಮಾಯವಾಗಿ ವರ್ಷಗಳೇ ಗತಿಸಿವೆ. ರಸ್ತೆ ಮಧ್ಯೆ ಮತ್ತು ಅಕ್ಕ ಪಕ್ಕದಲ್ಲಿ ಹಾಕುವ ಬಿಳಿ ಗೆರೆಗಳ ಸೂಚನೆಗಳ ಆಧಾರದ ಮೇಲೆ ವಾಹನ ಚಲಾಯಿಸಿದರೆ ಅಪಘಾತಗಳ ಪ್ರಮಾಣ ಕಡಿಮೆ ಎನ್ನುವ ಅಂಶ ಗೊತ್ತಿದ್ದರೂ ಗೆರೆಗಳು ಅಳಿಸಿ ಹೋದರೂ ಜಿ.ವಿ.ಆರ್‌. ಮತ್ತು ಅದನ್ನು ನಿಯಂತ್ರಿಸುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಈ ರೀತಿಯ ಅಧಿಕಾರಿಗಳ ನಡೆಯು ಒಂದೆಡೆ ಅನುಮಾನಕ್ಕೆ ಎಡೆಮಾಡಿಕೊಟ್ಟರೆ ಮತ್ತೂಂದೆಡೆ ಸಾಯುವ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ಪೋಲಿಸ್‌ ಇಲಾಖೆ ಪ್ರಕಾರ ವರ್ಷವೊಂದರಲ್ಲಿ ಕನಿಷ್ಟ ಎಂದರೂ 60 ರಿಂದ 80 ಸಾವು ನೋವುಗಳು ಇದೇ ರಸ್ತೆಯಲ್ಲಿ ಸಂಭವಿಸುತ್ತಿವೆ.

ವಾಗರಿ-ರಿಬ್ಬನಪಲ್ಲಿ ರಸ್ತೆ ಮಹಾರಾಷ್ಟ್ರ ಗಡಿಯಿಂದ ತೆಲಂಗಾಣ ಗಡಿವರೆಗೂ ಇದ್ದು, ಆಳಂದ, ಕಲಬುರಗಿ, ಮಾಡಬೂಳ, ಚಿತ್ತಾಪುರ, ಮಳಖೇಡ, ಸೇಡಂ, ಕುರಕುಂಟಾ, ಮುಧೋಳದ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಹಾಯ್ದು ಹೋಗುತ್ತದೆ. ಈ ಎಲ್ಲ ಠಾಣೆಗಳಲ್ಲಿ ದಾಖಲಾಗಿರುವ ಅಪಘಾತಗಳಿಗೆ ಯಾರು ಹೊಣೆ ಎನ್ನುವ ಪ್ರಶ್ನೆ ಈಗ ಉಲ್ಬಣಿಸಿದೆ. 

 ಜಿವಿಆರ್‌ ವಿರುದ್ಧ ಕ್ರಮ ಕೈಗೊಳ್ಳಿ: ಒಂದೆಡೆ ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿರುವ ಜಿ.ವಿ.ಆರ್‌. ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿವೆ. ಇನ್ನೊಂದೆಡೆ ರಸ್ತೆಗಳಲ್ಲಿ ಭಾರಿ ಗಾತ್ರದ ವಾಹನಗಳು ಕೆಟ್ಟು ನಿಂತು ಎರಡೂಮೂರು ದಿನವಾದರೂ ತೆರವುಗೊಳಿಸುತ್ತಿಲ್ಲ. ಇದರಿಂದಲೂ ಅಪಘಾತಗಳು ಹೆಚ್ಚುತ್ತಿವೆ. ಪ್ರತಿನಿತ್ಯ ಜಿ.ವಿ.ಆರ್‌. ಸಿಬ್ಬಂದಿ ರಸ್ತೆ ಪರಿಶೀಲನೆ ನಡೆಸಬೇಕು. ಇದನ್ನು ಸಹ ಜಿವಿಆರ್‌ ಮಾಡದೇ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. 

Advertisement

ನಿಯಮ ಪಾಲಿಸಲು ಜಿವಿಆರ್‌ಗೆ ಮನವಿ ಜಿ.ವಿ.ಆರ್‌. ನವರು ಟೋಲ್‌ ಸಂಗ್ರಹಿಸುವ ಜೊತೆ ಜೊತೆಗೆ ಸುರಕ್ಷತಾ ಕ್ರಮ ಅನುಸರಿಸಬೇಕು. ಅನೇಕ ಕಡೆಗಳ ರಸ್ತೆಯಳಲ್ಲಿ ತಗ್ಗುಗಳು ನಿರ್ಮಾಣವಾಗಿವೆ. ಇವುಗಳ ಮೇಲೆ ಸಂಚರಿಸಲು ತೊಂದರೆಯಾಗುತ್ತಿದೆ. ವಾಹನ ಚಾಲಕರ ಶ್ರೇಯಸ್ಸನ್ನು ಬಯಸುವ ನಿಟ್ಟಿನಲ್ಲಿ ಜಿ.ವಿ.ಆರ್‌. ಸಿಬ್ಬಂದಿ ಕೆಲಸ ಮಾಡಬೇಕು. ಜಿ.ವಿ.ಆರ್‌. ನಿರ್ಲಕ್ಷ್ಯಕ್ಕೆ ಬೇಸತ್ತು ಲಿಖೀತ ಮನವಿ ಸಲ್ಲಿಸಿದ್ದೇನೆ.
 ರಮೇಶ ಮಾಲಪಾಣಿ, ಅಧ್ಯಕ್ಷ, ಲಯನ್ಸ್‌ ಕ್ಲಬ್‌

ಈ ಕುರಿತು ನಮಗೂ ಮಾಹಿತಿ ಇದೆ. ಆದರೆ ರಸ್ತೆಗಳ ಮೇಲಿರುವ ಗೆರೆಗಳು ಅಳಿಸುವುದರಿಂದ ಅಪಘಾತಗಳು ಸಂಭವಿಸುವುದಿಲ್ಲ. ನಾವೂ ಸಹ ಅಪಘಾತ ತಡೆಯುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಬರುವ ಏಪ್ರಿಲ್‌ ಅಥವಾ ಮೇನಲ್ಲಿ ಅಳಿಸಿಹೋಗಿರುವ ಗೆರೆಗಳನ್ನು ಮತ್ತೆ ಹಾಕಲಾಗುವುದು. ತಗ್ಗು ದಿನ್ನೆಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು.
 ಗೋಪಿ, ಸಿವಿಲ್‌ ಇಂಜಿನಿಯರ್‌, ಜಿವಿಆರ್‌

ಶಿವಕುಮಾರ ಬಿ. ನಿಡಗುಂದಾ

Advertisement

Udayavani is now on Telegram. Click here to join our channel and stay updated with the latest news.

Next