ಸೇಡಂ: ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೌಚಾಲಯವಿದೆ ಆದರೆ ಶುಚಿಯಾಗಿಲ್ಲ. ಗಬ್ಬೆದ್ದು ನಾರುತ್ತಿದೆ. ವರ್ಷಕ್ಕೊಮ್ಮೆ ತೊಳೆಯುತ್ತಾರೆ. ಕೊಠಡಿಗಳಿವೆ ಅಲ್ಲಿರುವ ಬೆಂಚುಗಳು ಮುರಿದಿವೆ. ಗ್ರಂಥಾಲಯವಿದೆ ಆದರೆ ಪುಸ್ತಕಗಳೇ ಇಲ್ಲ. ಕ್ರೀಡಾಂಗಣವಿದೆ ಆದರೆ ಆಟವಾಡುವ ಭಾಗ್ಯವಿಲ್ಲ.
ಇವು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತೆರೆದಿಟ್ಟ ಕಾಲೇಜಿನ ದುಸ್ಥಿತಿಯ ವಿಷಯಗಳು.
ಕಾಲೇಜು ಪರೀಕ್ಷಾ ಶುಲ್ಕ 260 ರಿಂದ ಹಠಾತ್ತನೇ 1400 ಕ್ಕೆ ಏರಿಸಿದ್ದನ್ನು ಖಂಡಿಸಿ ಕಾಲೇಜು ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರಾಂಶುಪಾಲರ ಎದುರು ತಮ್ಮ ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟಿದ್ದಾರೆ.
ಖಾಸಗಿ ಕಾಲೇಜುಗಳಲ್ಲಿ ಪರೀಕ್ಷಾ ಶುಲ್ಕ ಕಡಿಮೆ ಇದೆ. ಆದರೆ ಸರಕಾರಿ ಕಾಲೇಜಲ್ಲಿ ಐದು ಪಟ್ಟು ಜಾಸ್ತಿ ಇದೆ. ಅಲ್ಲದೆ ವಿನಾಯಿತಿ ಮತ್ತು ವಿದ್ಯಾರ್ಥಿ ವೇತನ ವರ್ಷಗಳೇ ಕಳೆದರೂ ಸಹ ಇನ್ನು ಬಿಡುಗಡೆ ಮಾಡಿಲ್ಲ. ಕೊವಿಡ್ ಕಾರಣ ಹೇಳಿ ವಿದ್ಯಾರ್ಥಿಗಳ ಹಣ ಲೂಟಿ ಮಾಡಲಾಗಿದೆ ಎಂದು ದೂರಿದರು.
ಈ ಮಧ್ಯೆ ಹಠಾತ್ತನೇ ಪರೀಕ್ಷಾ ಶುಲ್ಕ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪರೀಕ್ಷಾ ಶುಲ್ಕ ಕಡಿಮೆ ಮಾಡುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು. ನಂತರ ಪ್ರಾಂಶುಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ : ರಾಜ್ಯದ ಜನತೆಗೆ ವಿದ್ಯುತ್ ಶಾಕ್ : ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ
ಈ ವೇಳೆ ಮಾತನಾಡಿದ ಪ್ರಾಂಶುಪಾಲರು, ಪರೀಕ್ಷಾ ಶುಲ್ಕ ಹೆಚ್ಚಳ ಅಥವಾ ಕಡಿಮೆ ಮಾಡುವ ಅಧಿಕಾರ ತಮಗಿಲ್ಲ. ಇದು ಸರಕಾರದ ಮಟ್ಟದಲ್ಲಿ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಲ್ಯಾಪಟಾಪ್ ನೀಡಲಾಗಿದೆ ಅದಕ್ಕಾಗಿ ಗ್ರಂಥಾಲಯದಲ್ಲಿ ಪುಸ್ತಕಗಳು ಕಡಿಮೆಗೊಳಿಸಲಾಗಿದೆ. ಶೌಚಾಲಯವನ್ನು ಒಂದೆರಡು ದಿನದಲ್ಲಿ ಸ್ವಚ್ಚಗೊಳಿಸಲಾಗುವುದು.
ಬೇಡಿಕೆಗಳನ್ನು ಸರಕಾರಕ್ಕೆ ಮುಟ್ಟಿಸಲಾಗುವುದು ಎಂದರು.