Advertisement

ಭದ್ರತಾ ಸಿಬಂದಿ ಕೊರತ :ವಿಮಾನ ಟೇಕಾಫ್‌, ಲ್ಯಾಂಡಿಂಗ್‌ನಲ್ಲಿ ವಿಳಂಬ !

11:43 AM Apr 25, 2017 | Harsha Rao |

ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬಂದಿ ಕೊರತೆ‌ 
ಮಂಗಳೂರು: ರಾಜ್ಯದ 2ನೇ ಅತಿದೊಡ್ಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಭದ್ರತಾ ಸಿಬಂದಿ ಕೊರತೆಯಿಂದಾಗಿ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯಗಳಾಗುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ !

Advertisement

ಸಾಮಾನ್ಯವಾಗಿ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬಂದಿ ಕೊರತೆಯಿಂದಾಗಿ ವಿಮಾನಗಳ ಲ್ಯಾಂಡಿಂಗ್‌ ಮತ್ತು ಟೇಕ್‌ಆಫ್‌ನಲ್ಲಿ ಸಾಕಷ್ಟು ವಿಳಂಬವಾಗುತ್ತಿವೆ ಅಂದರೆ ಅದು ಕೇವಲ ಪ್ರಯಾಣಿಕರ ಹಿತದೃಷ್ಟಿಯಿಂದ ಮಾತ್ರವಲ್ಲ; ನಿಲ್ದಾಣದ ಸುರಕ್ಷತೆ ವಿಚಾರದಿಂದಲೂ ಅತ್ಯಂತ ಗಂಭೀರ ವಿಚಾರ.

ಆದರೆ ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುವ ಪ್ರಯಾಣಿಕರಿಗೆ ಅದೊಂದು ನಿತ್ಯದ ಗೋಳಾಗಿ ಹೋಗಿದೆ. ಬಹುಶಃ ಇದೇ ಕಾರಣಕ್ಕೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಕೂಡ ಮಂಗಳೂರು ವಿಮಾನ ನಿಲ್ದಾಣದ‌
ಭದ್ರತಾ ವೈಫಲ್ಯ ಸರಿಪಡಿಸುವಂತೆ ಖುದ್ದು ಕೇಂದ್ರ ಗೃಹ ಸಚಿವಾಲಯಕ್ಕೆ ಇತ್ತೀಚೆಗೆ ಪತ್ರ ಬರೆದಿರುವುದು.

ಒಬ್ಬ ಸಂಸದರು, ಕೇಂದ್ರದಲ್ಲಿ ತಮ್ಮದೇ ಸರಕಾರವಿರುವಾಗ, ಏಕೆ ಬಹಿರಂಗವಾಗಿ ಮಂಗಳೂರು ವಿಮಾನ ನಿಲ್ದಾಣದ ಭದ್ರತೆ ಬಗ್ಗೆ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟ “ಉದಯವಾಣಿ’ಗೆ ಈ ಆತಂಕಕಾರಿ ವಿಚಾರ ಗೊತ್ತಾಗಿದೆ. 

ಅದೇನೆಂದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಗಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸಿಬಂದಿಯನ್ನು ನಿಯೋಜಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಭದ್ರತೆಗಾಗಿ ಒಟ್ಟು 226 ಸಿಐಎಸ್‌ಎಫ್‌ ಸಿಬಂದಿ ನಿಯೋಜನೆಯಾಗಿರಬೇಕಿತ್ತು. ಆದರೆ ಸದ್ಯಕ್ಕೆ ಇಲ್ಲಿ ಕೆಲಸ ಮಾಡುತ್ತಿರುವ ಭದ್ರತಾ ಸಿಬಂದಿ ಸಂಖ್ಯೆ ಕೇವಲ 203 ಮಂದಿ. ಅವರ ಪೈಕಿಯೂ ಸುಮಾರು 10 ಮಂದಿಯನ್ನು ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಗಮನಕ್ಕೂ ತರದೆ ಬೇರೆಡೆಗೆ ವರ್ಗಾಯಿಸಲಾಗಿದೆ. ಹೀಗಾಗಿ ಈ ಭದ್ರತಾ ಕೊರತೆ ನೀಗಿಸಲು ಇರುವ ಸಿಬಂದಿಯೇ ಹೆಚ್ಚಿನ ಪಾಳಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. 

Advertisement

ಈ ರೀತಿಯ ನಿಯಮಕ್ಕೆ ತಕ್ಕಷ್ಟು ಭದ್ರತಾ ಸಿಬಂದಿ ಇಲ್ಲದಿರುವ ಕಾರಣ ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಈ ಸಮಸ್ಯೆ ಬಿಸಿ ಸಾಮಾನ್ಯ ಪ್ರಯಾಣಿಕರಿಗಷ್ಟೇ ಅಲ್ಲ ಸ್ಥಳೀಯ ಸಂಸದರಿಗೂ ತಟ್ಟಿದೆ ಎನ್ನುವುದು ಗಮನಾರ್ಹ. 

ಸಿಐಎಸ್‌ಎಫ್‌ ಭದ್ರತಾ ಸಿಬಂದಿ ಎರಡು ಪಾಳಿಗಳಲ್ಲಿ ಅಂದರೆ ಬೆಳಗ್ಗೆ 5ರಿಂದ ರಾತ್ರಿ 9ರ ವರೆಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಮೂರನೇ ಪಾಳಿಗೆ ಸಿಬಂದಿ ಕೊರತೆ ಎದುರಾಗಿರುವ ಕಾರಣ ಹೆಚ್ಚುವರಿ ವಿಮಾನಗಳ ಹಾರಾಟ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ರಾತ್ರಿ ಹಾರಾಟ ನಡೆಸುತ್ತಿದ್ದ ವಿಮಾನಗಳ ವೇಳಾಪಟ್ಟಿಯನ್ನೇ ಬದಲಾವಣೆ ಮಾಡಲಾಗಿತ್ತು ಎಂದು ಮಂಗಳೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. 

ಈ ನಡುವೆ ಏರ್‌ ಇಂಡಿಗೊ ಕಂಪೆನಿಯು ಮಂಗಳೂರಿನಿಂದ ರಾತ್ರಿ ಸುಮಾರು 9.40ಕ್ಕೆ ಹೊಸ ವಿಮಾನ ಹಾರಾಟ
ಆರಂಭಿಸಬೇಕೆಂದು ಯೋಚಿಸಿತ್ತು. ಆದರೆ ಭದ್ರತಾ ಸಿಬಂದಿ ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವ ಕಾರಣಕ್ಕೆ ಈ ಹೊಸ ವಿಮಾನ ಸಂಚಾರವನ್ನೂ ಮುಂದೂಡಲು ಕಂಪನಿ ನಿರ್ಧರಿಸಿದೆ ಎಂದು ವಿಶ್ವಸನೀಯ ಮೂಲಗಳು ಪತ್ರಿಕೆಗೆ ತಿಳಿಸಿವೆ.

ಶೀಘ್ರ ಸಿಬಂದಿ ನೇಮಕ
ನಾನು ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ವೇಳೆ ನಿಲ್ದಾಣದಲ್ಲಿ ಭದ್ರತಾ ಸಿಬಂದಿ ಕೊರತೆಯಿರುವ ಬಗ್ಗೆ ಅಲ್ಲಿನ ಸಿಬಂದಿ ನನ್ನ ಗಮನಕ್ಕೆ ತಂದಿದ್ದರು. ಈ ಸಮಸ್ಯೆ ಗಂಭೀರತೆ ಅರಿತು ತತ್‌ಕ್ಷಣ ಗೃಹ ಇಲಾಖೆಗೆ ಪತ್ರ ಬರೆದಿದ್ದೆ. ಆ ಬಳಿಕ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬಂದಿ ಕೆಲಸದ ಪಾಳಿ ಹೆಚ್ಚು ಮಾಡುವಂತೆ ಗೃಹ ಇಲಾಖೆಯು ಸಿಐಎಸ್‌ಎಫ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹೀಗಾಗಿ ಸದ್ಯಕ್ಕೆ ಸಿಬಂದಿ ಕೊರತೆಗೆ ಪರಿಹಾರ ಕಲ್ಪಿಸಲಾಗಿದೆ. ಆದರೆ ನಿಲ್ದಾಣದಲ್ಲಿ ಭದ್ರತೆ ಕೊರತೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಿನ ಹತ್ತು ದಿನಗಳಲ್ಲಿ ಹೊಸ ಸಿಬಂದಿ ನೇಮಕ ಪ್ರಕ್ರಿಯೆಗೆ ವಿಮಾನ ನಿಲ್ದಾಣ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
- ನಳಿನ್‌ ಕುಮಾರ್‌ ಕಟೀಲು, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next