Advertisement

ಕಡಿಮೆ ಸಂಬಳದವರಿಗೆ ಭದ್ರತೆ ಅಗತ್ಯ

12:41 PM Feb 06, 2017 | Team Udayavani |

ಕಲಬುರಗಿ: ಕಡಿಮೆ ವೇತನದಲ್ಲಿ ದುಡಿಯುತ್ತಿರುವವರಿಗೆ ಕನಿಷ್ಠ ಸೇವಾ ಭದ್ರತೆ ಒದಗಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು. 

Advertisement

ನಗರದ ಆಳಂದ ರಸ್ತೆಯ ವಿಶ್ವರಾಧ್ಯ ಕಲ್ಯಾಣ ಮಂಟಪದಲ್ಲಿ ಐಒಸಿಎಲ್‌ ಟ್ಯಾಂಕರ್‌ ಹಾಗೂ ಕ್ಲೀನರ್‌ ಅಸೋಶಿಯೇಶನ್‌ ಉದ್ಘಾಟಿಸಿ ಮಾತನಾಡಿದ ಅವರು, ಕಡಿಮೆ ವೇತನದಲ್ಲಿ  ದುಡಿವ ಕಾರ್ಮಿಕರು ಸೇವಾ ಅಭದ್ರತೆಗೆ ಒಳಗಾಗುವ ಮೂಲಕ ಹೆಚ್ಚು ಸಂಕಷ್ಟಗಳನ್ನು ಅನುಭವಿಸುವ ಜೊತೆಗೆ ಶೋಷಣೆಗೆ ಈಡಾಗುತ್ತಿದ್ದಾರೆ ಎಂದರು.

 ಖಾಸಗೀಕರಣದ ಪರಿಣಾಮ ಕಾರ್ಮಿಕರಿಗೆ ಕಡಿಮೆ ಸಂಬಳ ಸಿಗುತ್ತಿದೆ. ಕನಿಷ್ಠ ಸೌಲಭ್ಯಗಳಿಲ್ಲದಿದ್ದರೂ ಸಹ ಕೆಲಸದ ಅಭದ್ರತೆ ವಾತಾವರಣದ ಮಧ್ಯೆ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಈ ವರೆಗೆ ಸರ್ಕಾರಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು. 

ಚಾಲಕರ ಪರವಾನಿಗಿಗೆ ಸರ್ಕಾರ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿರುವುದಕ್ಕೆ ಆಕ್ಷೇಪಿಸಿದ ಅವರು, ಇದು ದುಡಿವ ವರ್ಗಕ್ಕೆ ತೀವ್ರ ಹಿನ್ನಡೆ ತಂದಿದೆ. ಈ ರೀತಿಯ ತೊಂದರೆ ನೀಡುವುದು ಸರಿಯಲ್ಲ, ಸರ್ಕಾರದಲ್ಲಿ ಕೆಲಸ ಮಾಡುವವರು ಅಕ್ರಮ, ಅವ್ಯವಹಾರದಲ್ಲಿ ತೊಡಗಿದ್ದರೂ ಅವರನ್ನು ಏನು ಮಾಡದ ಸರ್ಕಾರ ರೈತರ ಮಕ್ಕಳು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಕನಿಷ್ಠ ಚಾಲಕರಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುಡಿವ ವರ್ಗಕ್ಕೆ ಯಾವುದೇ ಜಾತಿ ಹಾಗೂ ಧರ್ಮಗಳಿಲ್ಲ. ಎಲ್ಲಾ ಧರ್ಮ, ಜಾತಿಯಲ್ಲಿ ದುಡಿವ ವರ್ಗವಿದೆ. 12 ನೇ ಶತಮಾನದಲ್ಲಿ ಬಸವಾದಿ ಶರಣರು ದುಡಿವ ವರ್ಗಗಳನ್ನೆಲ್ಲ ಒಂದೇ ವೇದಿಕೆಯಡಿ ತಂದರು. ಆದ್ದರಿಂದ ದುಡಿವ ವರ್ಗದವರು ಒಂದೇ ವೇದಿಕೆಯಲ್ಲಿ ಸೇರಿ ಸಂಘಟಿತ ಹೋರಾಟ ರೂಪಿಸಿದಾಗ, ಹಕ್ಕುಗಳನ್ನು ಪಡೆಯಲು ಸಾಧ್ಯವಾಗುವುದು ಎಂದರು. 

Advertisement

ಸರ್ಕಾರದಲ್ಲಿ ಕೊಳ್ಳೆ ಹೊಡೆಯುವ ಅಧಿಕಾರಿಗಳನ್ನು ನಿಯಂತ್ರಿಸಬೇಕು. ಕನಿಷ್ಠ ವೇತನದಲ್ಲಿ ದುಡಿಯುವವರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದ ಅವರು, ದುಡಿವ ವರ್ಗವನ್ನು ಒಡೆದಾಳುವ ರಾಜಕೀಯದಿಂದಾಗಿ ಅವರ ಸ್ಥಿತಿ ಚಿಂತಾಜನಕವಾಗಿದೆ. ಇದರ ವಿರುದ್ಧ ಹೋರಾಟ ಮಾಡಬೇಕು ಎಂದರು.

ಅಸೋಶಿಯೇಶನ್‌ ಕಾರ್ಯದರ್ಶಿ ಆರ್‌. ಮಂಜೇಗೌಡ, ಖಜಾಂಚಿ ಜಿ.ತಿಮ್ಮಯ್ಯ, ಎಂಎಚ್‌ಎಸ್‌ಎಸ್‌ ಕಾಲೇಜಿನ ಪ್ರಾಂಶುಪಾಲ ಡಾ| ಶಿವಶರಣ ಮೂಳೆಗಾಂವ ಭಾಗವಹಿಸಿದ್ದರು. ಅಸೋಶಿಯೇಶನ್‌ ಅಧ್ಯಕ್ಷ ಗಣಪತಿ ಕೋಡ್ಲಿ ಅಧ್ಯಕ್ಷತೆ ವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next