Advertisement

ಕಚೇರಿ ಸಹಾಯಕನ ಕೊಂದ ಸೆಕ್ಯೂರಿಟಿ ಗಾರ್ಡ್‌

11:52 AM Oct 30, 2018 | Team Udayavani |

ಬೆಂಗಳೂರು: ಖಾಸಗಿ ಕಂಪನಿಯ ಸೆಕ್ಯೂರಿಟಿ ಗಾರ್ಡ್‌ ಹಾಗೂ ಕಚೇರಿ ಸಹಾಯಕನ ನಡುವಿನ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಲ್ಯಾವೆಲ್ಲೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಬಂಗಾರಪೇಟೆ ಮೂಲದ ದಿಲೀಪ್‌ ಪ್ರದೀಪ್‌ (21) ಕೊಲೆಯಾದವನು. ದಿಲೀಪ್‌ನ ಕತ್ತುಕುಯ್ದು ಕೊಲೆಮಾಡಿದ ಆರೋಪಿ ತ್ರಿಪುರ ಮೂಲದ ಬಿಜೋಯ್‌ ಬಿಸ್ವಾಸ್‌ (21)ನನ್ನು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿ ಬಿಜೋಯ್‌, ದಿಲೀಪ್‌ನನ್ನು ಕೊಲೆ ಮಾಡಲೆಂದೇ 20 ದಿನಗಳ ಹಿಂದೆ ಆನ್‌ಲೈನ್‌ ಮಾರಾಟ ತಾಣದಿಂದ ತನ್ನ ಸ್ನೇಹಿತನ ಮೂಲಕ ಚಾಕು ಖರೀದಿಸಿದ್ದ ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲ್ಯಾವೆಲ್ಲೆ ರಸ್ತೆಯ 4ನೇ ಕ್ರಾಸ್‌ನಲ್ಲಿರುವ ಸಿನೆರಮಾ ಸಂಸ್ಥೆಯಲ್ಲಿ ಬಂಗಾರಪೇಟೆ ಮೂಲದ ಪ್ರದೀಪ್‌ ಕಚೇರಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಮೂರು ತಿಂಗಳ ಹಿಂದಷ್ಟೇ ಮ್ಯಾಕ್‌ ಸೆಕ್ಯೂರಿಟಿ ಏಜೆನ್ಸಿಯಿಂದ ಆರೋಪಿ ಬಿಯೋಜ್‌, ಕಂಪನಿಯ ಸೆಕ್ಯೂರಿಟಿ¿ ಗಾರ್ಡ್‌ ಆಗಿ ಸೇರಿಕೊಂಡಿದ್ದ.

ಇಬ್ಬರಿಗೂ ಕಂಪನಿಯ ಮೂರನೇ ಮಹಡಿಯಲ್ಲಿ ಊಟ-ತಿಂಡಿ ಮಾಡಲು, ಬಟ್ಟೆ ಬದಲಿಸಲು ಕೊಠಡಿ ನೀಡಲಾಗಿತ್ತು. ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಎಂದಿನಂತೆ ಊಟಕ್ಕೆ ತೆರಳಿದಾಗ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಬಿಜೋಯ್‌, ಚಾಕುವಿನಿಂದ ಪ್ರದೀಪ್‌ ಹೊಟ್ಟೆಗೆ ಎರಡು ಬಾರಿ ಇರಿದಿದ್ದಾನೆ. ಆತ ಕೆಳಗೆ ಬಿದ್ದ ಕೂಡಲೇ ಕತ್ತು ಕುಯ್ದಿದ್ದಾನೆ. ಕೊಲೆ ಮಾಡುವ ವೇಳೆ ಪ್ರದೀಪ್‌ ತಪ್ಪಿಸಿಕೊಳ್ಳಲು ಮೆಟ್ಟಿಲುಗಳ ಮೇಲೆ ಉರುಳಿದ್ದರಿಂದ ಎರಡನೇ ಫ್ಲೋರ್‌ವರೆಗೂ ರಕ್ತ ಹರಿದಿದೆ.

ಕೂಡಲೇ ಕಂಪನಿ ಸಿಬ್ಬಂದಿ ಹೊರಬಂದು ನೋಡಿದಾಗ ಪ್ರದೀಪ್‌ ಮೃತಪಟ್ಟಿದ್ದ. ಬಿಜೋಯ್‌ ಚಾಕು ಹಿಡಿದು ನಿಂತುಕೊಂಡಿದ್ದ. ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಿಜೋಯ್‌ನನ್ನು ಬಂಧಿಸಿದ್ದಾರೆ. ಪ್ರದೀಪ್‌ ಶವವನ್ನು ಬೌರಿಂಗ್‌ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಮಿತಿ ಮೀರಿದ ತಮಾಷೆ: ಕಂಪನಿ ಗೇಟ್‌ ಬಳಿ ಕುಳಿತಿರುತ್ತಿದ್ದ ಬಿಜೋಯ್‌ ಮೇಲೆ, ಪ್ರದೀಪ್‌ ತಮಾಷೆಗೆ ನೀರೆರಚುವುದು, ಆತನ ಬಟ್ಟೆ, ಶೂ ಬಚ್ಚಿಡುವುದನ್ನು ಮಾಡುತ್ತಿದ್ದ. ಬಿಜೋಯ್‌ ಕೂಡ ಪ್ರದೀಪ್‌ಗೆ ತಮಾಷೆ ಮಾಡುತ್ತಿದ್ದ. ಆದರೆ ತಮಾಷೆ ಅತಿಯಾದಾಗ ಇಬ್ಬರ ನಡುವೆ ಹಲವು ಬಾರಿ ಜಗಳವಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಹೊಡೆದಾಟ ನಡೆದಿತ್ತು. ಕಂಪನಿ ಅಧಿಕಾರಿಗಳು ಇಬ್ಬರಿಗೂ ತಿಳಿ ಹೇಳಿದ್ದರು.

Advertisement

ಸೋಮವಾರ ಬೆಳಗ್ಗೆ ಪ್ರದೀಪ್‌, ಬಿಜೋಯ್‌ನ ಶೂ ಬಚ್ಚಿಟ್ಟಿದ್ದ. ಹಲವು ಬಾರಿ ಕೇಳಿದರೂ “ನನಗೆ ಗೊತ್ತಿಲ್ಲ’ ಎಂದು ದಬಾಯಿಸಿದ್ದ. ಹೀಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ, ಶೂ ಹುಡುಕಿಕೊಂಡ ಬಿಜೋಯ್‌ ಕೆಲಸಕ್ಕೆ ತೆರಳಿದ್ದ. ಮಧ್ಯಾಹ್ನ ಇಬ್ಬರೂ ಊಟಕ್ಕೆ ರೂಮ್‌ಗೆ ತೆರಳಿದಾಗ ಮತ್ತೆ ಜಗಳವಾಗಿದ್ದು, ಬಿಜೋಯ್‌, ಪ್ರದೀಪ್‌ನನ್ನು ಕೊಲೆಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ 

ಘಟನೆ ಸಂಬಂಧ ಕಂಪನಿ ಸಿಬ್ಬಂದಿಯಿಂದ ಮಾಹಿತಿ ಪಡೆದು, ತನಿಖೆ ಮುಂದುವರಿಸಲಾಗಿದೆ. ಇಬ್ಬರ ನಡುವಿನ ಜಗಳ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ಬಿಜೋಯ್‌ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂಬುದು ತನಿಖೆ ಬಳಿಕ ಖಚಿತವಾಗಲಿದೆ.
-ಡಿ.ದೇವರಾಜು, ಕೇಂದ್ರ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next