ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಗಣ್ಯರ ಜೀವಕ್ಕೆ ಅಪಾಯ ಇದ್ದಿರುವುದಾಗಿ ಗುಪ್ತಚರ ಇಲಾಖೆಗೆ ಸುಳಿವು ಲಭ್ಯವಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಬಾಬರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಒಡೆಯಬೇಕು: ಸ್ವಾಮೀಜಿ ವಿವಾದಾತ್ಮಕ ಹೇಳಿಕೆ
ಗುಪ್ತಚರ ಇಲಾಖೆ ನೀಡಿರುವ ಒಂಬತ್ತು ಪುಟಗಳ ಮಾಹಿತಿಯಲ್ಲಿ, 75ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಗಣ್ಯರ ಜೀವಕ್ಕೆ ಅಪಾಯ ಇದ್ದಿರುವುದಾಗಿ ಮುನ್ನೆಚ್ಚರಿಕೆ ನೀಡಿರುವುದಾಗಿ ಇಂಡಿಯಾ ಟುಡೇ ವರದಿ ವಿವರಿಸಿದೆ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಐದು ಮಧ್ಯ ಏಷ್ಯಾ ದೇಶಗಳಾದ ಕಝಕಿಸ್ತಾನ್, ಕರ್ಜೈಸ್ತಾನ್, ತಜಕಿಸ್ತಾನ್, ತುರ್ಕ್ ಮನಿಸ್ತಾನ್ ಹಾಗೂ ಉಜ್ಭೇಕಿಸ್ತಾನ್ ನ ಮುಖ್ಯಸ್ಥರನ್ನು ಮುಖ್ಯ ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ್/ಅಫ್ಘಾನಿಸ್ತಾನ್ ಮೂಲದ ಭಯೋತ್ಪಾದಕ ಸಂಘಟನೆಗಳಿಂದ ಈ ಬೆದರಿಕೆ ಬಂದಿರುವುದಾಗಿ 9ಪುಟಗಳ ಮಾಹಿತಿಯಲ್ಲಿ ವಿವರಿಸಲಾಗಿದೆ. ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ, ವಿಶೇಷ ಗಣ್ಯರು ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದೆ.
ಅತ್ಯಾಧುನಿಕ ಡ್ರೋನ್ ಬಳಸಿ ದಾಳಿ ನಡೆಸುವ ಸಾಧ್ಯತೆ ಇದ್ದಿರುವುದಾಗಿ ಗುಪ್ತಚರ ಇಲಾಖೆ ತಿಳಿಸಿದೆ. ಲಷ್ಕರ್ ಎ ತೊಯ್ಬಾ, ಜೈಶ್ ಇ ಮೊಹಮ್ಮದ್, ಹರ್ಕತ್ ಉಲ್ ಮುಜಾಹಿದೀನ್ ಮತ್ತು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗಳು ದಾಳಿಯ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಕೂಡಾ ಪಂಜಾಬ್ ಹಾಗೂ ಇತರ ರಾಜ್ಯಗಳಲ್ಲಿ ದಾಳಿ ನಡೆಸುವ ಸಂಚು ರೂಪಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಭೆ ಹಾಗೂ ಪ್ರವಾಸದ ವೇಳೆ ದಾಳಿ ನಡೆಸುವ ಗುರಿ ಹೊಂದಿರುವುದಾಗಿ ತಿಳಿಸಿದೆ.