ಶ್ರೀನಗರ್: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಟಾಪ್ 10 ಉಗ್ರರ ಪಟ್ಟಿಯನ್ನು ಜಮ್ಮು-ಕಾಶ್ಮೀರ ಭದ್ರತಾ ಪಡೆ ಮಂಗಳವಾರ ಬಿಡುಗಡೆ ಮಾಡಿದೆ. ಕಣಿವೆ ರಾಜ್ಯದಲ್ಲಿ ಉಗ್ರರ ಚಟುವಟಿಕೆಯನ್ನು ಮಟ್ಟಹಾಕಲು ಭದ್ರತಾ ಏಜೆನ್ಸಿ ಮುಂದಾಗಿದೆ.
2010ರಿಂದ ಭಯೋತ್ಪಾದನಾ ಸಂಘಟನೆ ಜೊತೆ ಶಾಮೀಲಾಗಿರುವ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ರಿಯಾಝ್ ಅಹ್ಮದ್ ಟಾಪ್ 10 ಪಟ್ಟಿಯಲ್ಲಿ ಮೊದಲಿಗನಾಗಿದ್ದಾನೆ ಎಂದು ವರದಿ ತಿಳಿಸಿದೆ.
ಇನ್ನುಳಿದಂತೆ ಈ ಪಟ್ಟಿಯಲ್ಲಿ ಶ್ರೀನಗರದ ಮೊಹಮ್ಮದ್ ಅಶ್ ರಖ್ ಖಾನ್, ಬಾರಾಮುಲ್ಲಾದ ಮೆಹ್ರಾಜ್ ಉದ್ ದಿನ್, ಶ್ರೀನಗರದ ಡಾ.ಸೈಫುಲ್ಲಾ, ಕುಪ್ವಾರದ ಅಜಾಜ್ ಅಹ್ಮದ್ ಮಲಿಕ್ ಮತ್ತು ಪುಲ್ವಾಮಾದ ಅರ್ಷಿದ್ ಉಲ್ ಹಕ್ ಹೆಸರುಗಳಿವೆ.
ಅಷ್ಟೇ ಅಲ್ಲ ಶೋಪಿಯಾನ್ ನಲ್ಲಿ ಕಾರ್ಯಾಚರಿಸುತ್ತಿರುವ ಲಷ್ಕರ್ ಎ ತೊಯ್ಬಾದ ವಾಸಿಂ ಅಹ್ಮದ್ ಅಲಿಯಾಸ್ ಓಸ್ಮಾ, ಜೈಶ್ ಎ ಮೊಹಮ್ಮದ್ ನ ಹಫೀಜ್ ಉಮರ್, ಝಾಹಿದ್ ಶೇಖ್, ಅಲ್ ಬದರ್ ನ ಜಾವೇದ್ ಅಹ್ಮದ್ ಮಾಟ್ಟೂ ಹೆಸರು ಟಾಪ್ ಟೆನ್ ಪಟ್ಟಿಯಲ್ಲಿದೆ ಎಂದು ವರದಿ ವಿವರಿಸಿದೆ.
ಕಣಿವೆ ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸುಮಾರು 86 ಉಗ್ರರನ್ನು ಈವರೆಗೆ ಹೊಡೆದುರುಳಿಸಲಾಗಿದೆ ಎಂದು ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಇತ್ತೀಚೆಗೆ ಮಾಹಿತಿ ನೀಡಿದ್ದರು. ಉಗ್ರರ ವಿರುದ್ಧದ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದರು.