Advertisement

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

03:02 PM Jan 10, 2025 | ಕೀರ್ತನ್ ಶೆಟ್ಟಿ ಬೋಳ |

ಕೋರ್ಟ್‌ ಆಣತಿಯಂತೆ ಕಂಬಳ 24 ಗಂಟೆಯಲ್ಲಿ ಮುಗಿಯಬೇಕು, ಆದರೂ 36 ಗಂಟೆ, 40 ಗಂಟೆ ನಡೆಯುತ್ತಿದೆ. ಕಂಬಳ ನಡೆಸಲು ಅನುಮತಿ ನೀಡಿದ ಕೋರ್ಟ್‌ ಅದರೊಂದಿಗೆ ಒಂದಿಷ್ಟು ಷರತ್ತುಗಳನ್ನೂ ವಿಧಿಸಿದೆ. ಜಿಲ್ಲಾ ಕಂಬಳ ಸಮಿತಿ ಕೂಡಾ ಒಂದಿಷ್ಟು ನಿಯಾಮವಳಿಗಳನ್ನು ಮಾಡಿದೆ. ಆದರೆ ಇದು ಚರ್ಚೆಗೆ ಮಾತ್ರ ಸೀಮಿತವೇ, ಈ ನಿಯಮಗಳು ಜಾರಿಗೆ ಬರುವುದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ.

Advertisement

ಕಂಬಳ ಸೀಸನ್‌ ಆರಂಭಕ್ಕೆ ಮೊದಲು ಹಲವು ಅಂಶಗಳನ್ನು ಒಳಗೊಂಡ ನಿಯಮಾವಳಿ ರೂಪಿಸಿತ್ತು. 24 ಗಂಟೆಯೊಳಗೆ ಕಂಬಳ ಕೂಟ ಮುಗಿಸಲು ತಂತ್ರಜ್ಞಾನದ ಮೊರೆ ಹೋಗಲಾಗಿತ್ತು. ಆದರೆ ಇದೀಗ ಆ ತಂತ್ರಜ್ಞಾನಕ್ಕೂ ಬೆಲೆ ನೀಡುವವರು ಇಲ್ಲ ಎನ್ನುವುದು ಕಂಬಳ ಪ್ರೇಕ್ಷಕರ ಅಳಲು.

ಇತ್ತೀಚೆಗೆ ನಡೆದ ಎರಡು ಮೂರು ಕಂಬಳಗಳಲ್ಲಿ ಸಮಯದ ಮಿತಿ ಮೀರಿದೆ. ಶನಿವಾರ ಬೆಳಗ್ಗೆ ಆರಂಭವಾದ ಕಂಬಳ ಭಾನುವಾರ ರಾತ್ರಿಯವರೆಗೆ ಸಾಗಿತ್ತು. ಕಂಬಳ ನಿಯಮ ಮೀರಿ ಸಾಗಲು ಕಾರಣ ಹಲವಿದೆ.

ವಿಳಂಬಕ್ಕೆ ಕಾರಣ ಹಲವು

ಕೋಣ ಸ್ಪರ್ಧೆಗೆ ಅಣಿಗೊಳಿಸಲು ಹೆಚ್ಚಿನ ಸಮಯ

Advertisement

ಕಂಬಳ ಕೂಟದ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಕೋಣಗಳನ್ನು ಓಟಕ್ಕೆ ಅಣಿಗೊಳಿಸುವುದು. ಎರಡು ಟ್ರ್ಯಾಕ್‌ ನಲ್ಲಿ ಕೋಣಗಳನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ ಓಟ ಆರಂಭಿಸುವುದು ಸವಾಲಿನ ಸಂಗತಿ. ಈ ಹಿಂದೆ ಸರಿಯಾಗಿ ನಿಲ್ಲಲು ಕೇಳದ ಕೆಲವು ಕೋಣಗಳಿದ್ದವು. ಆದರೆ ಈಗ ಹಾಗಲ್ಲ, ಅಂತಹ ಕೋಣಗಳಿಲ್ಲ. ಆದರೂ ಇಲ್ಲಿಯೇ ಕಂಬಳ ವಿಳಂಬವಾಗುತ್ತದೆ.

ಇದಕ್ಕೆ ಪರಿಹಾರ ಸಿಗಬೇಕಾದರೆ ಆಯೋಜಕರು ಗಂತಿನಲ್ಲಿ (ಸ್ಪರ್ಧೆ ಆರಂಭವಾಗುವ ಸ್ಥಳ) ಉಪಸ್ಥಿತರಿರಬೇಕು. ಆಯಾ ಕಂಬಳದ ಆಯೋಜಕರು ಕಟ್ಟುನಿಟ್ಟಾಗಿ, ಖಡಕ್‌ ನಿರ್ಧಾರ ಕೈಗೊಂಡರೆ ಕಂಬಳ ಪೂರ್ಣಗೊಳ್ಳಲು 24ಯೂ ಗಂಟೆ ಬೇಡ. 22 ಗಂಟೆಯೊಳಗೆ ಮುಗಿದ ಉದಾಹರಣೆ ನಮ್ಮ ಮುಂದಿದೆ.

ಕಂಬಳ ಸಮಿತಿ ಮಾಡಿರುವ ನಿಯಮಗಳು ಕೇವಲ ಶೋಕಿಗಲ್ಲ. ಅದನ್ನು ಪಾಲನೆ ಮಾಡಬೇಕಿದೆ. ಸಭೆಯಲ್ಲಿ ಎಲ್ಲಾ ನಿಯಮಗಳಿಗೆ ಒಪ್ಪುವ ಕೋಣಗಳ ಯಜಮಾನರುಗಳು ತಮ್ಮ ಕೋಣ ಸ್ಪರ್ಧೆಗೆ ಬಂದಾಗ ಮಾತ್ರ ನಿಯಮಗಳನ್ನು ಮರೆಯುತ್ತಾರೆ ಎನ್ನುವ ವಾದವೂ ಇದೆ. ಇದು ವಾಸ್ತವ ಕೂಡಾ.

ಪ್ರತಿ ಕಂಬಳ ವಿಳಂಬವಾದಾಗ ಉಲ್ಲೇಖ ಮಾಡುವ ಹೆಸರು ವಾಮಂಜೂರು ಮತ್ತು ಜಪ್ಪಿನಮೊಗರು ಕಂಬಳಗಳದ್ದು. ಈ ಎರಡು ಕಂಬಳಗಳು 24 ಗಂಟೆಯ ಅವಧಿಯಲ್ಲಿ ನಡೆಯುತ್ತದೆ. ಇದಕ್ಕೆ ಕಾರಣ ಅಲ್ಲಿನ ಆಯೋಜಕರ ಗಟ್ಟಿ ನಿರ್ಧಾರಗಳು. ಈ ಎರಡು ಕಂಬಳಗಳಲ್ಲಿ ಪಾಲನೆಯಾಗುವ ನಿಯಮಗಳು ಬೇರೆ ಕಡೆ ಯಾಕೆ ಆಗುತ್ತಿಲ್ಲ? ಆಯೋಜಕರಿಗೆ ಮನಸ್ಸಿಲ್ಲವೋ? ಮನಸ್ಸಿದ್ದರೂ ಪಾಲನೆ ಮಾಡಲಾಗುತ್ತಿಲ್ಲವೋ? ಇದು ಯಕ್ಷ ಪ್ರಶ್ನೆ.

ಟೈಮರ್‌ ಸದ್ದು ಈಗ ಕೇಳುತ್ತಿಲ್ಲ

ಈ ಬಾರಿ ಹೊಸ ತಂತ್ರಜ್ಞಾನದ ಅಂಗವಾಗಿ ಟೈಮರ್‌ ಅಳವಡಿಸಲಾಗಿದೆ. ಪ್ರತಿ ಓಟಕ್ಕೆ ಮೊದಲು ಸಮಯ ನಿಗದಿ ಮಾಡಿ ಅದರೊಳಗೆ ಓಟ ಆರಂಭಿಸಬೇಕು ಎಂಬ ನಿಯಮ. ಇಲ್ಲದಿದ್ದಲ್ಲಿ ಕೊನೆಯ ಹತ್ತು ಸೆಕೆಂಡ್‌ ಗಳಲ್ಲಿ ಜೋರಾಗಿ ಕೌಂಟ್‌ ಡೌನ್‌ ಸದ್ದು ಬರುತ್ತದೆ. ಈ ಸೀಸನ್‌ ನ ಮೊದಲೆರಡು ಕೂಟಗಳಲ್ಲಿ ಟೈಮರ್‌ ಸಮಯ ಮುಗಿಯುವ ಒಳಗೆ ಓಟ ಆರಂಭವಾಗಿತ್ತು. ಆದರೆ ಇದೀಗ ಟೈಮರ್‌ ಕೇಳುವವರು ಇಲ್ಲ. ಅದರ ಕೌಂಟ್‌ ಡೌನ್‌ ಸದ್ದು ಕಡಿಮೆ ಮಾಡಲಾಗಿದೆ.

ಗಂತಿಗೆ ಬರುವಾಗ ವಿಳಂಬ

ಇದು ಅಗತ್ಯವಾಗಿ ಕೋಣಗಳ ಯಜಮಾನರುಗಳು ಗಮನ ಕೊಡಬೇಕಾದ ವಿಚಾರ. ಒಂದು ಸ್ಪರ್ಧೆಗೆ ಗಂಟೆಗೆ ಮೊದಲು ಯಾವ ಸಮಯದಲ್ಲಿ ಸ್ಪರ್ಧೆ ನಡೆಯುತ್ತದೆ ಎಂದು ತೀರ್ಪುಗಾರರು ಸೂಚನೆ ನೀಡಿರುತ್ತಾರೆ. ಇನ್ನೆರಡು ಸ್ಪರ್ಧೆ ಬಾಕಿ ಇರುವಂತೆ ಕಾಮೆಂಟರಿಯಲ್ಲಿ ಇದ್ದವರು ಘೋಷಣೆ ಮಾಡುತ್ತಿರುತ್ತಾರೆ. ಆದರೂ ಹಲವು ಬಾರಿ ಸ್ಪರ್ಧೆಗೆ ಕೋಣಗಳು ಬಾರದೆ ಕರೆ ಖಾಲಿ ಇರುತ್ತದೆ. ಇದು ತಪ್ಪಿಸಲೇಬೇಕಾದ ಮತ್ತು ತಪ್ಪಿಸಬಹುದಾದ ತಪ್ಪು.

ಒಂದು ವೇಳೆ ಸ್ಪರ್ಧೆಯ ಸಮಯಕ್ಕೆ ಸರಿಯಾಗಿ ಒಂದು ಜತೆ ಕೋಣಗಳು ಬಂದು, ಮತ್ತೊಂದು ಜತೆ ಬಾರದೆ ಇದ್ದರೆ ಎರಡು ನಿಮಿಷ ಕಾದು, ಬಾರದೆ ಇದ್ದಲ್ಲಿ ಕೋಣಗಳಿಗೆ ವಾಕ್‌ ಓವರ್‌ ನೀಡುವ ನಿಯಮ ಕಂಬಳ ಸಮಿತಿ ಮಾಡಿದೆ. ಆದರೆ ಇದರ ಪಾಲನೆ ಎಲ್ಲೂ ಮಾಡಿದಂತೆ ಕಾಣುತ್ತಿಲ್ಲ. ಆಯೋಜಕರು ಇದನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ಕಂಬಳದಲ್ಲಿ ಪ್ರಸ್ತುತ ಎದುರಾಗಿದೆ.

ಪ್ರತಿ ವರ್ಷ ಕೋಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೆಚ್ಚಿನ ಆಸಕ್ತಿಯಲ್ಲಿ ಯುವಕರು ಸ್ಪರ್ಧೆಗೆ ಕೋಣಗಳನ್ನು ತರುತ್ತಿದ್ದಾರೆ. ಜ್ಯೂನಿಯರ್‌ ವಿಭಾಗದಲ್ಲಿ ಹೆಚ್ಚಿನ ಕೋಣಗಳಿವೆ. ಸೀನಿಯರ್‌ ವಿಭಾಗದಲ್ಲೂ ಒಂದೇ ಯಜಮಾನರ ಎ- ಬಿ- ಸಿ- ಡಿ ಕೋಣಗಳ ಸ್ಪರ್ಧೆಗಳಿವೆ. ಹೀಗಾಗಿ ವಿಳಂಬವಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವೀಪ್ರಸಾದ್‌ ಶೆಟ್ಟಿ ಬೆಳಪು.

ಆವರ್ತನ ಪದ್ದತಿಯಲ್ಲಿ ರೆಫ್ರಿಗಳು

ಇದು ಸದ್ಯ ಚರ್ಚೆಯಲ್ಲಿರುವ ವಿಚಾರ. ಓಟಕ್ಕೆ ಹಸಿರು ನಿಶಾನೆ ತೋರುವ ಫ್ಲ್ಯಾಗ್‌ ನ ರೆಫ್ರಿಗಳನ್ನು ರೊಟೇಶನ್‌ ಪದ್ದತಿಯಲ್ಲಿ ಕೆಲಸ ಮಾಡಿಸಿದರೆ ಕಂಬಳ ಇನ್ನಷ್ಟು ಬೇಗ ನಡೆಸಬಹುದು ಎನ್ನುವ ವಾದವಿದೆ. ಈಗ ಇರುವ ರೆಫ್ರಿಗಳಲ್ಲದೆ ಇನ್ನಷ್ಟು ಮಂದಿ ಕಂಬಳ ರೆಫ್ರಿಗಳಾಗಿ ಮುಂದೆ ಬಂದರೆ ಇದು ಸಾಧ್ಯ. ಪ್ರತಿ ಕಂಬಳದಲ್ಲಿ ಆವರ್ತನ ಪದ್ದತಿಯಲ್ಲಿ ರೆಫ್ರಿಗಳು ಫ್ಲ್ಯಾಗ್‌ ಕೆಲಸ ನಿರ್ವಹಿಸಿದರೆ ಅದು ಸಮಯದ ಉಳಿತಾಯಕ್ಕೆ ಪರೋಕ್ಷವಾಗಿಯೂ ಸಹಾಯ ಮಾಡುತ್ತದೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಕಂಬಳ ಪ್ರೇಕ್ಷಕರ ಮಾತು.

ಸೆಮಿ ಸ್ಪರ್ಧೆಗಳು ಮುಗಿದು 20 ನಿಮಿಷದೊಳಗೆ ಫೈನಲ್ ಸ್ಪರ್ಧೆ ಆರಂಭವಾಗಬೇಕು. ಕೆಲವು ಕಂಬಳ ಕೂಟಗಳಲ್ಲಿ ಫೈನಲ್‌ ಸ್ಪರ್ಧೆ ಆರಂಭಕ್ಕೆ ಒಂದು ಗಂಟೆ ಸಮಯ ಹಿಡಿದ ಉದಾಹರಣೆಯೂ ಇದೆ. ಹಗ್ಗ ವಿಭಾಗದ ಕೋಣಗಳಿಗೆ ಮರ ಕಟ್ಟಲು ಹೆಚ್ಚಿನ ಸಮಯ ಹಿಡಿಯುವ ಕಾರಣ ಹಗ್ಗ ವಿಭಾಗದ ಸೆಮಿ ರೇಸ್‌ ಮುಗಿಸಿ ಬಳಿಕ ನೇಗಿಲು ವಿಭಾಗ ನಡೆಸಿದರೆ ಸಮಯ ಉಳಿಸಬಹುದು.

ಎಲ್ಲಾ ವಿಭಾಗಕ್ಕೂ ಒಂದೇ ನಿಯಮ ಇರಬೇಕು ಎಂಬ ಮಾತುಗಳು ಹಲವು ಬಾರಿ ಕೇಳಿಬರುತ್ತದೆ. ಕಿರಿಯ ವಿಭಾಗಕ್ಕೆ ಒಂದು ನಿಯಮ, ಹಿರಿಯ ವಿಭಾಗಕ್ಕೆ ಹೆಚ್ಚಿನ ನಿಯಮ ಸಡಿಲಿಕೆ ಸರಿಯಲ್ಲ ಎಂಬ ಮಾತುಗಳೂ ಇದೆ. ಇದರ ಬಗ್ಗೆ ಕಂಬಳ ಸಮಿತಿ ಗಮನ ಹರಿಸಬೇಕಾದ ಅನಿವಾರ್ಯತೆಯಿದೆ.

ಕಂಬಳದ ಇಂದಿನ ಪರಿಸ್ಥಿತಿಯ ಬಗ್ಗೆ ಮಾತನಾಡುವ ಕಂಬಳ ತೀರ್ಪುಗಾರರ ಸಂಚಾಲಕ ವಿಜಯ್‌ ಕುಮಾರ ಕಂಗಿನಮನೆ, ಕಂಬಳ ಎಂದರೆ ಸಂಘಟಿತ ಪ್ರಯತ್ನ. ಕಂಬಳ ಸಮಿತಿಯ ನಿಯಮಗಳ ಜೊತೆಗೆ ಪ್ರತಿ ಕಂಬಳ ಆಯೋಜನೆ ಮಾಡುವವರು ಕೂಡಾ ಮುಖ್ಯವಾಗುತ್ತಾರೆ. ಅವರು ಗಟ್ಟಿ ನಿರ್ಧಾರ ಮಾಡಿದರೆ ಸಮಯಕ್ಕೆ ಸರಿಯಾಗಿ ಕೂಟ ನಡೆಸಿ ಬಹುಮಾನ ನೀಡಬಹುದು ಎನ್ನುತ್ತಾರೆ.

ಕಂಬಳಕ್ಕೆ ತೊಡಕಾದರೆ ಎಲ್ಲರಿಗೂ ಸಮಸ್ಯೆ. ಎಲ್ಲರೂ ಅದನ್ನು ಮನಸ್ಸಿನಲ್ಲಿ ಇರಿಸಬೇಕು. ಅದನ್ನು ಕೋಣಗಳ ಯಜಮಾನರುಗಳು ಅರ್ಥ ಮಾಡಬೇಕು.  ಪ್ರಯತ್ನದಲ್ಲಿದ್ದೇವೆ. 30 ಗಂಟೆಯೊಳಗೆ ಆದರೂ ಮುಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಂಬಳ ಆಯೋಜಕರು, ಯಜಮಾನರುಗಳು, ಓಟಗಾರರು ಕೋಣಗಳನ್ನು ಪಳಗಿಸುವವರು ಮನಸ್ಸು ಮಾಡಬೇಕಿದೆ ಎನ್ನುತ್ತಾರೆ ದೇವೀಪ್ರಸಾದ್‌ ಶೆಟ್ಟಿ ಬೆಳಪು.

ಒಟ್ಟಿನಲ್ಲಿ ಕಂಬಳ ಸರಿಯಾಗಿ ನಡೆಯಬೇಕು. ಕೋರ್ಟ್‌ ಆಣತಿಯಂತೆ ಕಂಬಳ ಆಯೋಜನೆಯಾಗುತ್ತಿದ್ದರೂ ಕರಿಛಾಯೆ ಮಾತ್ರ ಇದ್ದೇ ಇದೆ. ಭಾಷಣದಲ್ಲಿ ಹೇಳುವಂತೆ ಸೂರ್ಯ ಚಂದ್ರರು ಇರುವವರೆಗೆ ಕಂಬಳ ಇರಬೇಕಾದರೆ ಇನ್ನಾದರೂ ನಮ್ಮನ್ನು ನಾವು ಪ್ರಶ್ನೆ ಮಾಡಬೇಕಾದ ಅನಿವಾರ್ಯತೆಯಿದೆ.

ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next