Advertisement

ಭಾರತದ ಬ್ಯಾಟಿಂಗ್‌ ಭವಿಷ್ಯ ಭದ್ರ

12:22 PM Feb 22, 2017 | Team Udayavani |

ರಿಷಬ್‌ ಪಂತ್‌, ಪೃಥ್ವಿ ಶಾ, ಪ್ರಿಯಾಂಕ್‌ ಪಾಂಚಾಲ್‌, ಸಮಿತ್‌ ಗೋಯಲ್‌, ಶುಭಂ ಗಿಲ್‌, ಶ್ರೇಯಸ್‌ ಅಯ್ಯರ್‌…. ಈ ಹೆಸರುಗಳನ್ನು ನೋಡಿದರೆ ಸಾಕು ಭಾರತೀಯ ಕ್ರಿಕೆಟ್‌ ಭವಿಷ್ಯ ಭದ್ರವಾಗಿದೆ ಅನ್ನುವುದರಲ್ಲಿ ಯಾವುದೇ ಅನುಮಾನ ಕಾಡದು. ಇವರೆಲ್ಲ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಬ್ಲೂ ಜೆರ್ಸಿ ತೊಟ್ಟು ಭಾರತೀಯ ತಂಡ ಪ್ರತಿನಿಧಿಸಬೇಕೆಂಬ ಮಹದಾಸೆ ಹೊತ್ತು ವಯಸ್ಸಿಗೂ ಮೀರಿದ ಸಾಮರ್ಥ್ಯ ಪ್ರದರ್ಶಿಸಿ ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ. ಹೀಗಾಗಿ ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಯುವ ಕಲಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಚಿತ್ತ ನೆಡಬೇಕಿದೆ. 

Advertisement

ಪ್ರಿಯಾಂಕ್‌ ಪಾಂಚಾಲ್‌
ರಣಜಿ ಟೂರ್ನಿಯ ಈ ಸಾಲಿನಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿ 10 ಪಂದ್ಯಗಳಲ್ಲಿ 1,310 ರನ್‌ ಬಾರಿಸಿ ಅಗ್ರಸ್ಥಾನ ಪಡೆದಿರುವ ಪ್ರಿಯಾಂಕ್‌ ಪಾಂಚಾಲ್‌ ಟೆಸ್ಟ್‌ ಮಾದರಿಯ ಕ್ರಿಕೆಟಿಗೆ ಹೇಳಿ ಮಾಡಿಸಿದ ಆಟಗಾರ. ಗುಜರಾತ್‌ ಮೊದಲ ಬಾರಿಗೆ ರಣಜಿ ಚಾಂಪಿಯನ್‌ ಆಗುವಲ್ಲಿ ಮಹತ್ವದ ಪಾತ್ರವಹಿಸಿದ ಕ್ರಿಕೆಟಿಗ. ರಣಜಿಯಲ್ಲಿ ತ್ರಿಶತಕದ ಜತೆಗೆ 5 ಶತಕ ಹಾಗೂ 4 ಅರ್ಧ ಶತಕ ಬಾರಿಸಿದ ಸಾಧನೆ ಪಾಂಚಾಲ್‌ ಅವರದು. 

ರಿಷಬ್‌ ಪಂತ್‌
ದಿಲ್ಲಿಯ ರಿಷಬ್‌ ಪಂತ್‌ ಭಾರತೀಯ ಕ್ರಿಕೆಟಿನ ಭವಿಷ್ಯದ ಕೀಪರ್‌ ಎಂದೇ ಬಿಂಬಿತರಾಗಿದ್ದಾರೆ. ಈಗಾಗಲೇ ಒಂದು ಟಿ-20ಯಲ್ಲಿ ಆಡುವ ಬಳಗದಲ್ಲಿದ್ದರೂ ಸಾಮರ್ಥ್ಯ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಆದರೆ ಭವಿಷ್ಯದಲ್ಲಿ ಧೋನಿ ಅವರ ಸ್ಥಾನ ತುಂಬುವ ಭರವಸೆ ಮೂಡಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಪಂತ್‌ ರಣಜಿಯಲ್ಲಿ ತ್ರಿಶತಕ ಬಾರಿಸಿದ ಹೆಗ್ಗಳಿಕೆಯೊಂದಿಗೆ ಯಾವುದೇ ಪಂಥಾಹ್ವಾನಕ್ಕೂ ಸಿದ್ಧ ಎಂಬಂತಿದ್ದಾರೆ.

ಪೃಥ್ವಿ ಶಾ
ಅಂಡರ್‌-19 ಮಾದರಿಯ ಕ್ರಿಕೆಟಿನಲ್ಲಿ ಬೆಳಕಿಗೆ ಬಂದ ಮುಂಬಯಿ ಪ್ರತಿಭೆ. ಕಳೆದ ಅಂಡರ್‌-19 ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಗಮನ ಸೆಳೆದದ್ದು ಮಾತ್ರವಲ್ಲದೆ ಈ ಬಾರಿಯ ರಣಜಿಯ ಮಹತ್ವದ ಸೆಮಿಫೈನಲ್‌ನಲ್ಲಿ ಮುಂಬಯಿ ತಂಡಕ್ಕೆ ಆಯ್ಕೆಯಾದ ಪ್ರತಿಭಾವಂತ ಆಟಗಾರ. 17ನೇ ವಯಸ್ಸಿನಲ್ಲೇ ರಣಜಿ ಆಡುವ ಅವಕಾಶ ಗಿಟ್ಟಿಸಿದ ಶಾ ಶತಕ ಬಾರಿಸಿ, ತನ್ನ ತಂಡವನ್ನು ಫೈನಲ್‌ಗೇರಿಸಿ ಆಯ್ಕೆಯನ್ನು ಸಮರ್ಥಿಸಿದ ದಿಟ್ಟತನ ಮೆರೆದಿದ್ದರು. ಅದಲ್ಲದೆ ಚಿಕ್ಕ ವಯಸ್ಸಿನಲ್ಲೇ ರಣಜಿ ಶತಕ ಬಾರಿಸಿದ ಹೆಗ್ಗಳಿಕೆ ಶಾ ಅವರದು. 

ಶುಭಂ ಗಿಲ್‌
ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಪಳಗು ತ್ತಿರುವ ಕಿರಿಯರ ತಂಡದ ಪಂಜಾಬ್‌ ಆಟಗಾರ ಶುಭಂ ಗಿಲ್‌. ಇಂಗ್ಲೆಂಡ್‌ ವಿರುದ್ಧದ ಅಂಡರ್‌-19 ಸರಣಿಯಲ್ಲಿ ಸತತ 2 ಶತಕ ಬಾರಿಸಿ ಸುದ್ದಿಯಲ್ಲಿ ದ್ದಾರೆ. ಪಂಜಾಬ್‌ನ ದೇಶಿ ಪಂದ್ಯಾವಳಿಯಲ್ಲಿ ಸಾವಿರ ರನ್‌ ಬಾರಿಸಿದ ಸರದಾರನೂ ಹೌದು. 18ರ ಹರೆಯದ ಗಿಲ್‌ ಆಡಿರುವ 6 ಅಂಡರ್‌-19 ಪಂದ್ಯಗಳಲ್ಲಿ  ತಲಾ 2 ಶತಕ, ಅರ್ಧ ಶತಕದೊಂದಿಗೆ 499 ರನ್‌ ಬಾರಿಸಿದ್ದಾರೆ. 

Advertisement

ಸಮಿತ್‌ ಗೋಯಲ್‌
ರಣಜಿ ಚಾಂಪಿಯನ್‌ ಗುಜರಾತ್‌ ತಂಡದ ಆಟಗಾರನಾಗಿರುವ ಸಮಿತ್‌ ಗೋಯಲ್‌ ಈ ಸಾಲಿನ ರಣಜಿಯಲ್ಲಿ ಒಂದು ತ್ರಿಶತಕದೊಂದಿಗೆ 2 ಶತಕ ಹಾಗೂ 3 ಅರ್ಧ ಶತಕ ಬಾರಿಸಿದ್ದಾರೆ. 10 ಪಂದ್ಯಗಳಲ್ಲಿ 914 ಪೇರಿಸಿದ್ದಾರೆ. ಅದಲ್ಲದೆ ಆರಂಭಿಕನಾಗಿ ಕಣಕ್ಕಿಳಿದು ತ್ರಿಶತಕ ಬಾರಿಸಿ ತಂಡದ ಎಲ್ಲ ಆಟಗಾರರು ಔಟ್‌ ಆದರೂ ತಾನು ಅಜೇಯನಾಗಿ ಉಳಿದು 117 ವರ್ಷಗಳ ದಾಖಲೆಯನ್ನು ಮೀರಿಸಿದ್ದಾರೆ. 

ಶ್ರೇಯಸ್‌ ಅಯ್ಯರ್‌
ಸಾಮಾನ್ಯವಾಗಿ ಒನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬರುವ ಮುಂಬಯಿಯ ಶ್ರೇಯಸ್‌ ಅಯ್ಯರ್‌ ಕಳೆದ ಋತುವಿನಿಂದಲೇ ಟೀಮ್‌ ಇಂಡಿಯಾದ ಬಾಗಿಲು ಬಡಿಯುತ್ತಿದ್ದಾರೆ. ಇವರ ನೈಜ ತಾಕತ್ತು ಏನೆಂಬುದಕ್ಕೆ ಮೊನ್ನೆ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯ ಸಾಕ್ಷಿಯೊದಗಿಸಿತು. ಕಾಂಗರೂಗಳ ಬಲಿಷ್ಠ ಬೌಲಿಂಗ್‌ ಸರದಿಯನ್ನು ಚಚ್ಚಿ ಪುಡಿಗುಟ್ಟಿದ ಅಯ್ಯರ್‌ ಅಜೇಯ ದ್ವಿಶತಕ ಬಾರಿಸಿ ಮೆರೆದರು. 

ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಅಯ್ಯರ್‌ 100 ರನ್‌ ಹೊಡೆದಿದ್ದರು. ತಂಡದಲ್ಲಿ ಆವರ್ತನ ಪದ್ಧತಿಯಂತೆ ಕೆಲ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಒಬ್ಬರು ಅಥವಾ ಇಬ್ಬರು ಯುವ ಆಟಗಾರರಿಗೆ ಅವ ಕಾಶ ನೀಡುವ ನಿಯಮವನ್ನು ಆಯ್ಕೆ ಸಮಿತಿ ಅನುಸರಿಸಿದರೆ ಹೊಸಬರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಕ್ಕಂತಾಗುತ್ತದೆ. ಒಂದೆರಡು ಪಂದ್ಯಗಳಲ್ಲಿ ಮಿಂಚಿದ ಕೂಡಲೇ ರಾಷ್ಟ್ರೀಯ ತಂಡದಲ್ಲಿ ಕರೆದು ಅವಕಾಶ ನೀಡವುದು ಸರಿ ಅಲ್ಲದಿದ್ದರೂ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಪ್ರವರ್ಧಮಾನಕ್ಕೆ ಬರಲು ಅವಕಾಶ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಸಚಿನ್‌, ಕೊಹ್ಲಿ ಅವರಂಥ ಶ್ರೇಷ್ಠ ಕ್ರಿಕೆಟ್‌ ಕಲಿಗಳ ಉದಯವಾಗಬಹುದು.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next