Advertisement

ಸಂವಿಧಾನದ ಆಶಯಕ್ಕೆ ಸಂದ ಗೆಲುವು; ದಶಕಗಳ ಹೋರಾಟಕ್ಕೆ ಸಂದ ಜಯ

03:31 PM Sep 07, 2018 | Sharanya Alva |

ಭಾರತೀಯ ಸಮಾಜದ ಮಟ್ಟಿಗೆ ಅತ್ಯಂತ ಮಹತ್ವದ ತೀರ್ಪೊಂದು ಸರ್ವೋಚ್ಚ ನ್ಯಾಯಾಲಯದಿಂದ ಹೊರಬಿದ್ದಿದೆ. ಸಮ್ಮತಿಯ ಸಲಿಂಗರತಿಯು ಭಾರತೀಯ ದಂಡ ಸಂಹಿತೆಯ 377ನೇ ಕಲಮಿನ ವ್ಯಾಪ್ತಿಯಿಂದ  ಮುಕ್ತಗೊಳ್ಳುವುದರೊಂದಿಗೆ, ಬಹುಕಾಲದ ಹೋರಾಟವೊಂದಕ್ಕೆ ಮೊದಲ ಹಂತದ ಗೆಲುವು ದೊರಕಿದೆ. ನಿಜ! ಸಲಿಂಗರತಿ ಇನ್ನು ಮುಂದೆ ಅಪರಾಧವಲ್ಲ. ಎಂದರೆ, ಇಬ್ಬರು ವಯಸ್ಕರ ನಡುವೆ (ಅವರು ಯಾವುದೇ  ಲಿಂಗದವರಿರಲಿ) ಪರಸ್ಪರ ಸಮ್ಮತಿಯಿಂದ ನಡೆಯುವ ಲೈಂಗಿಕ ಕ್ರಿಯೆ ಇನ್ನು ಕಾನೂನುಬಾಹಿರವಲ್ಲ! ಐದು ಮಂದಿ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿರುವ ಈ ತೀರ್ಪು, ದಶಕಗಳಿಂದ ಸಮುದಾಯವೊಂದರ ವಿರುದ್ಧದ ಅನ್ಯಾಯಕ್ಕೆ ಸಿಕ್ಕ ಸಣ್ಣ ಮಟ್ಟಿಗಿನ ಪರಿಹಾರವಾಗಿದೆ. ಅಡಗೂಲಜ್ಜಿಯ ಕಾಲದ, ಬ್ರಿಟಿಷ್‌ ವಸಾಹತುಶಾಹಿಯ ಪಳೆಯುಳಿಕೆಯಂತಿದ್ದ ಕಾಯ್ದೆಯೊಂದಕ್ಕೆ ಮಾರ್ಪಾಡುಗಳನ್ನು ಮಾಡುವುದರೊಂದಿಗೆ, ಸಂವಿಧಾನ ಕೊಡಮಾಡುವ ಮೂಲಭೂತ ಹಕ್ಕುಗಳು ಎಲ್ಲರಿಗೂ ಸಮನಾಗಿ ಅನ್ವಯವಾಗುವಂತಾಗಿದೆ.

Advertisement

1861ನೆ ಇಸವಿಯಲ್ಲಿ ಬ್ರಿಟಿಷ್‌ ಸಂಸತ್ತು ಜಾರಿಗೊಳಿಸಿದ್ದ 377ನೇ ಕಲಮು ನಿಸರ್ಗದ ನಿಯಮದ ವಿರುದ್ಧವಾಗಿ ನಡೆಯುವ ಎಲ್ಲಾ ಬಗೆಯ ಲೈಂಗಿಕ ಕ್ರಿಯೆಗಳನ್ನು ಅಪರಾಧವೆಂದು ಪರಿಗಣಿಸುತ್ತದೆ ಮತ್ತು ಇದು ಪರಸ್ಪರ ಸಮ್ಮತಿ ಮತ್ತು ಖಾಸಗಿತನಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ವಿಚಿತ್ರವೆಂದರೆ, ಸದರಿ ಕಾಯ್ದೆಯನ್ನು ಜಾರಿಮಾಡಿದ ಯುನೈಟೆಡ್‌ ಕಿಂಗ್ಡಮ್‌ ಕೂಡ ಇದನ್ನು ಅಮಾನ್ಯಗೊಳಿಸಿ ಅರ್ಧ ಶತಮಾನದ ಮೇಲಾಗಿದೆ.

ಆದರೆ, ಭಾರತದಲ್ಲಿ ಅದರ ಸಲುವಾಗಿ ಅತಿ ದೀರ್ಘ‌ವಾದ ಹೋರಾಟವನ್ನೇ ಮಾಡಬೇಕಾಗಿ ಬಂತು. ವ್ಯಕ್ತಿಯೊಬ್ಬರನ್ನು ಅವರ ಲೈಂಗಿಕ ಪ್ರವೃತ್ತಿಯ ಆಧಾರದ ಮೇಲೆ ಅಪರಾಧಿಯೆಂದು ಪರಿಗಣಿಸುವುದು, ಒಂದೆಡೆ ಎಲ್ಲ ಪ್ರಜೆಗಳಿಗೆ ವೈಯಕ್ತಿಕ ಸ್ವಾತಂತ್ರ್ಯವನ್ನು ಕೊಡಮಾಡುವ ಸಂವಿಧಾನದ 21ನೇ ಕಲಮಿನ ಸ್ಪಷ್ಟ ಉಲ್ಲಂಘನೆಯಾದರೆ, ಮತ್ತೊಂದೆಡೆ, ಲಿಂಗಾಧಾರಿತ  ಭೇದಭಾವವನ್ನು ಅಮಾನ್ಯಗೊಳಿಸುವ ಸಂವಿಧಾನದ 15ನೇ ವಿಧಿ, ಸಮಾನತೆಯನ್ನು ಕೊಡಮಾಡುವ 14ನೇ ವಿಧಿ ಮತ್ತು ಸ್ವಾತಂತ್ರ್ಯವನ್ನು ನೀಡುವ 19ನೆ ವಿಧಿಯನ್ನು ಕೂಡ ಅಲಕ್ಷ್ಯ ಮಾಡುತ್ತದೆ. ಹಲವಾರು ನೆಲೆಗಳಲ್ಲಿ ಖಾಸಗಿ ಅಭಿವ್ಯಕ್ತಿಗೆ ಚ್ಯುತಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ಈ ತೀರ್ಪು, ಸಮಾನತೆ ಮತ್ತು ಸರ್ವರ ಒಳಗೊಳ್ಳುವಿಕೆಯೆಡೆಗೆ ನಮಗಿರ ಬೇಕಾದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. 1994ನೇ ಇಸವಿಯಲ್ಲಿ, ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಆರಂಭವಾದ ಈ ಹೋರಾಟವು, ಕಳೆದ ಎರಡೂವರೆ ದಶಕದಲ್ಲಿ ಹಲವಾರು ಎಡರು ತೊಡರನ್ನು ಎದುರಿಸಿತು, 2009ರಲ್ಲಿ ನಿರಪರಾಧೀಕರಣಗೊಂಡಿದ್ದ ಸಲಿಂಗಾಸಕ್ತಿಯು, 2013ರಲ್ಲಿ ಮತ್ತೆ ಅಪರಾಧವೆಂದು ಪರಿಗಣಿಸಲ್ಪಟ್ಟಿತು. ನಂತರ ನಡೆದ ಕಾನೂನು ಸಮರದ ಫ‌ಲ ನಮ್ಮ ಕಣ್ಣಮುಂದಿದ್ದು, ಪ್ರತೀ ನಾಗರಿಕನೂ ಸಂವಿಧಾನ ಮತ್ತು ನ್ಯಾಯಾಂಗದಲ್ಲಿ ನಂಬಿಕೆ ಇರಿಸಬಹುದು ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದಂತಾಗಿದೆ.

ಬಹುಮುಖ್ಯವಾಗಿ, ಲೈಂಗಿಕತೆ ಬಗೆಗೆ ಅತಿಯಾದ ಮಡಿವಂತಿಕೆ ಹೊಂದಿರುವ ಭಾರತೀಯ ಸಮಾಜವು ತನ್ನ ಆದ್ಯತೆ ಮತ್ತು ಮೌಲ್ಯಗಳನ್ನು ವೈಯಕ್ತಿಕ ಸ್ವಾತಂತ್ರ್ಯಮತ್ತು ಸಮಾನತೆಯ ನೆಲೆಯ ಸುತ್ತ ಪುನರ್ನಿರ್ಮಿಸಿಕೊಳ್ಳುವ ಅಗತ್ಯವನ್ನು ಸಾರಿ ಹೇಳಿದೆ. ಸದರಿ ಕಾಯ್ದೆಯನ್ನು ಮಾರ್ಪಾಡುಗೊಳಿಸುವ ಸಂದರ್ಭ ದಲ್ಲಿ, ಮುಖ್ಯ ನ್ಯಾಯಮೂರ್ತಿಗಳು, ಲೈಂಗಿಕ ಪ್ರವೃತ್ತಿ ನೈಸರ್ಗಿಕವಾದ ಭಾವನೆಯಾಗಿದ್ದು, ಅದು ವ್ಯಕ್ತಿಗಳ ನಿಯಂತ್ರಣವನ್ನು ಮೀರಿರುವುದಾಗಿದೆ ಮತ್ತು ಅದನ್ನು  ನಿಯಂತ್ರಿಸಲೆತ್ನಿಸುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿರುತ್ತಾರೆ.

ಇದನ್ನು ಸರಳವಾಗಿ ಹೇಳುವುದಾದರೆ, ಹಸಿವು, ನೀರಡಿಕೆ, ನಿದ್ರೆಗಳ ಹಾಗೆ, ಲೈಂಗಿಕ ಆಸಕ್ತಿ ಕೂಡ ಸಹಜವಾದ ಪ್ರಕೃತಿಕ ಕ್ರಿಯೆ. ಹೇಗೆ ನಾವು ಏನು ತಿನ್ನುತ್ತೇವೆ, ಕುಡಿಯುತ್ತೇವೆ ಮತ್ತು ಎಷ್ಟು ಹೊತ್ತು ಮಲಗುತ್ತೇವೆ ಎಂಬುದನ್ನು ಮತ್ತೂಬ್ಬರು ನಿಯಂತ್ರಿಸಬಾರದೋ, ಹಾಗೆ, ನಾವು ಯಾವ ಬಗೆಯ ಲೈಂಗಿಕ ಬಯಕೆ ಹೊಂದಿದ್ದೇವೆ ಮತ್ತು ಯಾವ ರೀತಿಯ ಲೈಂಗಿಕ ಕ್ರಿಯೆ ನಡೆಸುತ್ತೇವೆ ಎಂಬು ದನ್ನು ಕೂಡ ಮತ್ತೂಬ್ಬರು ನಿರ್ಧಾರ ಮಾಡುವುದು ತಪ್ಪು ಎಂಬುದು ನ್ಯಾಯಮೂರ್ತಿಗಳ ಮಾತಿನ ತಾತ್ಪರ್ಯ. ತನ್ನ ನಿಯಂತ್ರಣದಲ್ಲೇ ಇರದಿರುವ ವಿಷಯವೊಂದಕ್ಕೆ ವ್ಯಕ್ತಿಯೊಬ್ಬ ನನ್ನು ತಪ್ಪಿತಸ್ಥನೆಂದು ಕರೆದು ಶಿಕ್ಷೆಗೊಳಪಡಿಸುವುದು ಎಷ್ಟರ ಮಟ್ಟಿಗೆ ಸರಿ? ಹಾಗೆ ಮಾಡಿದಾಗ ತನ್ನ ಪ್ರಕೃತಿಗೆ ತಕ್ಕಂತೆ
ನಡೆದುಕೊಳ್ಳುತ್ತಿರುವ ಜೀವಿಯೊಂದಕ್ಕೆ ವಿನಾಕಾರಣ ಅಪರಾಧಿಯೆಂಬ ಹಣೆಪಟ್ಟಿ ಕಟ್ಟಿದ ಹಾಗಾಗುತ್ತದೆ. ಲೈಂಗಿಕ ಕ್ರಿಯೆಗಳಲ್ಲಿ ಒಂದಾದ ಮುಖಮೈಥುನವನ್ನೂ ತಪ್ಪೆಂದು ಬಗೆಯುವ ಸದರಿ ಕಾಯ್ದೆಯು, ಸಲಿಂಗಾಸಕ್ತರಿಗಷ್ಟೇ ಅಲ್ಲದೇ, ಭಿನ್ನ ಲಿಂಗಗಳೆಡೆಗೆ ಆಸಕ್ತರಾಗಿರುವವರಿಗೂ ಸಮನಾಗಿ  ಅನ್ವಯವಾಗುತ್ತದೆ ಎಂಬುದು ಎಲ್ಲರಿಗೂ ತಿಳಿಯದ ವಿಷಯಗಳಲ್ಲೊಂದು.

Advertisement

ಹಾಗಾಗಿ, ಸಲಿಂಗಿಗಳು ಮಾತ್ರವಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಲೈಂಗಿಕ ಬದುಕಿನ ಘನತೆಯನ್ನು ಕಸಿದುಕೊಳ್ಳುವ ಯಾವುದೇ ನಿಯಮವೂ ಮಾನ್ಯವಾಗಬಾರದು. ಅತ್ಯಂತ ಖಾಸಗಿ ಯಾದ ವಿಷಯವೊಂದರಲ್ಲಿ ಸರ್ಕಾರ ಅಥವಾ ಕಾನೂನು  ಪಾಲಕರು ಮೂಗು ತೂರಿಸಬಾರದು ಎಂಬ ಕನಿಷ್ಠ ಪ್ರಜ್ಞೆಯ ವಿಷಯವನ್ನಷ್ಟೇ ಸದ್ಯದ ತೀರ್ಪು ಮತ್ತೆ ನೆನಪಿಸಿದೆ. ಹಾಗೆಯೇ, ಯಾವುದು ನೈಸರ್ಗಿಕ ಮತ್ತು ಯಾವುದು ನೈತಿಕ ಎಂಬುದನ್ನು ನಿರ್ಧರಿಸುವ ಹಕ್ಕನ್ನು ಹೊಂದಿರುವುದು ನಿಸರ್ಗವಷ್ಟೇ ಹೊರತು, ಮತ್ತಾರೂ ಅಲ್ಲವೆಂಬ ವಿವೇಕದ ಮಾತನ್ನು ಎತ್ತಿಹಿಡಿಯುತ್ತದೆ.

ಸಲಿಂಗರತಿಯ ವಿರುದ್ಧ ಎದ್ದ ಧ್ವನಿಗಳಲ್ಲಿ ಪ್ರಮುಖವಾದದ್ದು, ಅದು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ, ದೇಶದ ಭಾರತೀಯತೆಗೆ ಘಾಸಿಯುಂಟುಮಾಡುತ್ತದೆ ಎಂಬುದು. ಬೇರೆಲ್ಲಾ  ಸಂದರ್ಭದಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಪ್ರತಿನಿಧಿಗಳು, ಸಲಿಂಗಕಾಮದ ವಿಚಾರದಲ್ಲಿ ಮಾತ್ರ ಕಂಡುಕೇಳರಿಯದ ಒಗ್ಗಟ್ಟು ಪ್ರದರ್ಶಿಸಿದ್ದು ಪರಿಸ್ಥಿತಿಯ ವ್ಯಂಗ್ಯವನ್ನು ಮತ್ತು ಕುರುಡು ಧಾರ್ಮಿಕತೆಯ ಟೊಳ್ಳುತನವನ್ನು ಎತ್ತಿ ತೋರಿಸಿತು. ಭಾರತೀಯ ಪುರಾಣ ಮತ್ತು ಇತಿಹಾಸದ ನೆಲೆಗಟ್ಟಿನಲ್ಲಿ ಹೇಳುವುದಾದರೆ, ಸಲಿಂಗಾಸಕ್ತಿಯನ್ನು ಎಂದಿಗೂ ಅನೈತಿಕವೆಂದು ನೋಡಿರುವ ದಾಖಲೆಗಳು ಸಿಕ್ಕುವು  ದಿಲ್ಲ, ಮತ್ತು ಇದಕ್ಕೆ ಖಜುರಾಹೋವಿನಲ್ಲಿ ದೊರೆಯುವ ಸಲಿಂಗಕಾಮವನ್ನು ಬಿಂಬಿಸುವ ಶಿಲ್ಪಗಳೇ ಸಾಕ್ಷಿಯಾಗಿವೆ. ಅಲ್ಲದೆ, ಹಲವಾರು ಪೌರಾಣಿಕ ಕಥೆ ಮತ್ತು ಪ್ರಸಂಗದಲ್ಲಿ ಸಲಿಂಗ ಸಂಬಂಧ ಮತ್ತು ಲಿಂಗ ಪರಿವರ್ತನೆಯ ಉಲ್ಲೇ ಖ ದೊರೆಯುತ್ತದೆ (ಮಹಾಭಾರತದ ಶಿಖಂಡಿಯನ್ನೊಮ್ಮೆ ನೆನಪಿಸಿಕೊಳ್ಳಿ). ಹಾಗಾಗಿ, ಸಲಿಂಗಕಾಮವನ್ನು ತಪ್ಪೆಂದು ಬಗೆಯುವ ಕಾನೂನಿಗೂ, ಭಾರತೀಯ ಪರಂಪರೆಗೂ ಸಂಬಂಧ ಕಲ್ಪಿಸುವುದು ತರವಲ್ಲ ಮಾತ್ರವಲ್ಲ, ಅದು ಅಭಾಸಕಾರವೂ ಹೌದು. ಈ ಕಾರಣಕ್ಕಾಗಿ ಕೂಡ 377 ಕಲಮನ್ನು ವಿರೋಧಿಸುವುದು ಮತ್ತು ಸಲಿಂಗಾಸಕ್ತಿ ಯನ್ನು ನೈಸರ್ಗಿಕವೆಂದು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. 

ಈ ವಿಚಾರವಾಗಿ ಉಲ್ಲೇ ಖಬಂದಾಗ, ನ್ಯಾಯಮೂರ್ತಿಯೊಬ್ಬರು ಪ್ರತಿವಾದಿಯೊಬ್ಬರಿಗೆ, “ನೀವು ನಿಮ್ಮ ಧರ್ಮ ಪಾಲಿಸಿ ಸ್ವಾಮಿ, ಸಲಿಂಗಾಸಕ್ತಿಯಿಂದ ನಿಮಗೇನು ತೊಂದರೆ?’ ಎಂದು ಕೇಳಿದ ಪ್ರಸಂಗ ಅತ್ಯಂತ ಮಾಮೂಲಿಯಾಗಿ ಕಂಡರೂ ಕಡ್ಡಿಯನ್ನು ಗುಡ್ಡ ಮಾಡುವ ಮೂಲಭೂತವಾದಿಗಳ ಆಷಾಡಭೂತಿತನವನ್ನು ಲೇವಡಿ ಮಾಡುತ್ತದೆ. ಸಲಿಂಗಾಸಕ್ತರಲ್ಲದೆ, 377ನೇ ಕಲಮು ಹೆಚ್ಚಾಗಿ ಬಾಧಿಸುವುದು, ಹೊಟ್ಟೆಹೊರೆಯುವುದಕ್ಕೆ ಲೈಂಗಿಕ ವ್ರತ್ತಿಯನ್ನೇ ಅವಲಂಬಿಸಿರುವ ಲಿಂಗ ಪರಿವರ್ತಿತರಿಗೆ. ಸಾಮಾಜಿಕ ಛೀದರಿಕೆ ಮಾತ್ರವಲ್ಲದೇ, ಆರ್ಥಿಕ ಅಭದ್ರತೆಯನ್ನೂ ಎದುರಿಸುವ ಲೈಂಗಿಕ ಅಲ್ಪಸಂಖ್ಯಾತರು ಈ ಪೈಶಾಚಿಕ ಕಾಯ್ದೆಯಿಂದಾಗಿ ಹೆಚ್ಚಿನ ಕಿರುಕುಳ ಅನುಭವಿಸುವುದಾದರೂ ತಪ್ಪಲಿ ಎಂದು ಈ ಸಂದರ್ಭದಲ್ಲಿ ಆಶಿಸಬಹುದು.

ಸದರಿ ಅಡಗೂಲಜ್ಜಿ ಕಾಲದ ಕಾಯ್ದೆಯ ವಿರುದ್ಧದ ಹೋರಾಟಕ್ಕೆ ಬಲಬಂದಿದ್ದು, ಇತ್ತೀಚೆಗೆ ಹೊರಬಂದ ಖಾಸಗಿತನಕ್ಕೆ ಸಂಬಂಧಿಸಿದ (ಕೆ. ಎನ್‌. ಪುಟ್ಟಸ್ವಾಮಿ) ತೀರ್ಪಿನಿಂದ. ಲೈಂಗಿಕ ಪ್ರವೃತ್ತಿಯು ವ್ಯಕ್ತಿಯೊಬ್ಬನ ಖಾಸಗಿ ಆಯ್ಕೆ ಎಂದು ಮೊಟ್ಟಮೊದಲಿಗೆ ನ್ಯಾಯಾಲಯ ಹೇಳಿತ್ತು. ಖಾಸಗಿತನವನ್ನು ಭಾರತೀಯರ ಮೂಲಭೂತ ಹಕ್ಕುಗಳಲ್ಲಿ ಸೇರಿಸುವ ಸಮಯ ದಲ್ಲಿ ಪ್ರಜೆಯೊಬ್ಬನು, ತಾನು ಬಯಸಿದ ಸಂಗಾತಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲದಿರುವ ಸಂ ದರ್ಭದಲ್ಲಿ, ವ್ಯಕ್ತಿಯೊಬ್ಬ ತನ್ನ ಮನೆಯೊಳಗೇ ನಡೆಸುವ ಕ್ರಿಯೆಗಾಗಿ ಜೈಲು ಸೇರಬೇಕಾಗುವ ಪರಿಸ್ಥಿತಿಯಲ್ಲಿ, ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಪರಿಗಣಿಸುವುದಾದರೂ ಹೇಗೆ? ಎಂಬ ವಾದವು ಸಲಿಂಗ ಕಾಮದ ಬಗೆಗಿನ ನ್ಯಾಯಾಲಯದ ಆವರೆವಿಗಿನ ಕಠಿಣ ನಿಲುವನ್ನು ಮೆದುವಾಗಿಸಿರಬೇಕು. ಅಲ್ಲದೆ, ಈ ಬಾರಿ ಸಲಿಂಗಕಾಮದ ಬಗೆಗಿನ ಅರ್ಜಿಯು ನ್ಯಾಯಾಲಯದ ಮುಂದೆ ಬಂದಾಗ, ಕೇಂದ್ರ ಸರ್ಕಾರವು ಅದನ್ನು ವಿರೋಧಿಸದೆ ಇದ್ದದ್ದು ಕೂಡ ಸದರಿ ಹೋರಾಟವನ್ನು ಬಲಪಡಿಸಿತಾದರೂ, ಸರ್ಕಾರ ಸಲಿಂಗಾ ಸಕ್ತಿಯನ್ನು ಬೆಂಬಲಿಸಲೂ ಇಲ್ಲ ಎಂಬುದಿಲ್ಲಿ ಗಮನಾರ್ಹ.

ಈಗ ಹೊರಬಿದ್ದಿರುವ ತೀರ್ಪಿನಿಂದ ಸಲಿಂಗಕಾಮದ ಪರವಾದ ಹೋರಾಟಕ್ಕೆ ಸಂಪೂರ್ಣ ಗೆಲುವೇನೂ ದೊರೆತಿಲ್ಲ. 377ನೇ ಕಲಮಿನಡಿಯಲ್ಲಿ ಅಮಾಯಕರನ್ನು ಬಂಧಿಸುವ, ಬೆದರಿಸುವ ಮತ್ತು ಶೋಷಣೆ ಮಾಡುವ ಅಪಾಯದಿಂದ ಸಲಿಂಗಾಸಕ್ತರು ಮತ್ತು ಲಿಂಗಪರಿವರ್ತಿತರು ಪಾರಾಗಿದ್ದಾರೆ  ಯಾದರೂ, ಇತರ ನಾಗರಿಕ ಸವಲತ್ತುಗಳಾದ ವಿವಾಹ, ಆಸ್ತಿ ಹಕ್ಕು, ದತ್ತು ತೆಗೆದುಕೊಳ್ಳುವಿಕೆ ಮುಂತಾದ ವಿಷಯಗಳನ್ನು
ಈಗಿನ ತೀರ್ಪು ಪ್ರಸ್ತಾಪಿಸಿಲ್ಲ, ಅಲ್ಲದೇ ಕೇಂದ್ರ ಸರ್ಕಾರ ಕೂಡ ಈ ವಿಚಾರವನ್ನು ಮುಂದೂಡುವ ಲಕ್ಷಣಗಳು ಸ್ಪಷ್ಟವಾಗಿವೆ. ಆದಾಗ್ಯೂ, ದಶಕಗಳ ಹೋರಾಟಕ್ಕೆ ಈಗ ದೊರೆತಿರುವ ಗೆಲುವು ಸಣ್ಣ ಮಟ್ಟದ್ದೇನೂ ಅಲ್ಲ! ಹಲವು ಜನರ ಮೇಲೆ, ಹಲವು ಬಗೆಗಳಲ್ಲಿ ಹಲವು ದಶಕಗಳಿಂದ ನಡೆದುಕೊಂಡು ಬಂದಿರುವ ವಿನಾಕಾರಣ ಅನ್ಯಾಯವನ್ನು ಸರಿಪಡಿಸುವುದು ಸಾಧ್ಯವಿಲ್ಲವಾದರೂ, ಅಂಥವರ ಅಸ್ತಿತ್ವಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿರುವುದು ಪ್ರಸ್ತುತ ಅಸಹನೆಯ ವಾತಾವರಣದಲ್ಲಿ ಖಂಡಿತ ವಾಗಿಯೂ ಒಂದು ಸಕಾರಾತ್ಮಕ ಬೆಳವಣಿಗೆ.

*ಕಾರ್ತಿಕ್‌ ಆರ್‌

Advertisement

Udayavani is now on Telegram. Click here to join our channel and stay updated with the latest news.

Next