Advertisement

ಸೀಕ್ರೆಟ್‌ ಆಫ್ ಲಂಚಾವತಾರ

12:30 AM Mar 09, 2019 | |

 ಮಾಸ್ಟರ್‌ ಹಿರಣ್ಣಯ್ಯನವರಿಗೆ ಈಗ 85 ವರ್ಷ.  ಇದರಲ್ಲಿ ಶೇ.70ರಷ್ಟು ಬದುಕನ್ನು ಲಂಚಾವತಾರ ನಾಟಕದ ದತ್ತು ಪಾತ್ರದ ಜೊತೆಯಲ್ಲೇ ಕಳೆದಿದ್ದಾರೆ. ಅವರ ಮಗ ಬಾಬು ಹಿರಣ್ಣಯ್ಯ ಕೂಡ ಈ ನಾಟಕದ ಪ್ರಮುಖ ಪಿಲ್ಲರ್‌.  
ಈಗ ಲಂಚಾವತಾರ ನಾಟಕಕ್ಕೆ 60ರ ವಯಸ್ಸು.  ಈ ನಾಟಕ ಹುಟ್ಟಿದ್ದು ಹೇಗೆ? 11 ಸಾವಿರ ಪ್ರದರ್ಶನ ಕಂಡರೂ ಇಂಗದ ಜನಪ್ರಿಯತೆಯ ತುತ್ತು ತುದಿಯಲ್ಲಿ ನಿಂತ ಈ ಡ್ರಾಮಾ ಸೀಕ್ರೇಟ್‌ ಇಲ್ಲಿದೆ…

Advertisement

“ಹಲೋ, ನರಸಿಂಹಮೂರ್ತಿ, ನಾನು ನಿಜಲಿಂಗಪ್ಪ’
“ಹೇಳಿ ಮುಖ್ಯಮಂತ್ರಿಗಳೇ?’
“ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತ ಇದ್ದೀನಿ’
“ಅದ್ಯಾಕೆ ಅಂಥ ಮಾತಾಡ್ತಾ ಇದ್ದೀರ?’
“ಕೇಸಲ್ಲಿ ನೀವೇ ಗೆದ್ರಲ್ಲ?’ 
“ಅಯ್ಯೋ, ನೀವೇನು ತಪ್ಪು ಮಾಡಿದ್ರೀ? ಬಿಡಿ, ಆಗಿದ್ದು ಆಗೋಯ್ತು. ಒಂದು ಪಕ್ಷ ನೀವು ರಾಜಕಾರಣ ಬಿಟ್ಟರೆ, ಅಲ್ಲಿ ಭ್ರಷ್ಟಾಚಾರ ಇನ್ನೂ ಜಾಸ್ತಿ ಆಗಬಹುದು, ಅದಕ್ಕೆ ನೀವೂ ಪರೋಕ್ಷವಾಗಿ ಕಾರಣ ಆಗ್ತಿàರಿ? ‘ ಹೀಗೆ ಮಾಸ್ಟರ್‌ ಹಿರಣ್ಣಯ್ಯ ಪುಸಲಾಯಿಸಿ, ಮುಖ್ಯಮಂತ್ರಿ ಆಗಿದ್ದ  ನಿಜಲಿಂಗಪ್ಪನವರು ರಾಜೀನಾಮೆ ನಿರ್ಧಾರದಿಂದ ಹಿಂತೆಗೆಯುವಂತೆ ಮಾಡಿದರು.
 ಆವತ್ತು ಆಗಿದ್ದಾದರೂ ಏನು?

  ಆಗ ತಾನೆ ಭಾರತ-ಚೀನಾ ಯುದ್ಧ ಮುಗಿದಿತ್ತು. ಹೀಗಾಗಿ, ರಕ್ಷಣಾ ನಿಧಿಗೆ ಪ್ರತಿಯೊಬ್ಬರೂ ದೇಣಿಗೆ ನೀಡುತ್ತಿದ್ದರು. ಹಿರಣ್ಣಯ್ಯನವರೂ, ಪ್ರತಿದಿನದ ಒಂದಷ್ಟು ಕಲೆಕ್ಷನ್‌ ಎತ್ತಿಟ್ಟು ದೇಣಿಗೆ ನೀಡುವ  ತೀರ್ಮಾನ ಮಾಡಿದ್ದರು. ಆಗ ಮೈಸೂರಲ್ಲಿ “ಲಂಚಾವತಾರ’ ನಾಟಕ ನಡೆಯುತ್ತಿತ್ತು. ಗೆಳೆಯರು ಯಾರೋ- ನರಸಿಂಹಮೂರ್ತಿ, ಹಣ ಏಕೆ ಕೊಡ್ತಿಯೋ. ನೀನು ಎಷ್ಟು ಕೆ.ಜಿ ಇದ್ದೀಯೋ, ಅಷ್ಟು ಬೆಳ್ಳಿ ಕೊಡು’ ಅಂದರು. ಇದು ಸರಿ ಎನಿಸಿ, 70 ಕೆ.ಜಿ ತೂಗುತ್ತಿದ್ದ ಹಿರಣ್ಣಯ್ಯ, ಅಷ್ಟೇ ತೂಕದ ಬೆಳ್ಳಿ ಗುಡ್ಡೆ ಹಾಕಿ, ತರಾಸು ಸಲಹೆ ಮೇರೆಗೆ, ಮುಖ್ಯಮಂತ್ರಿಗಳನ್ನೇ ನಾಟಕ ನೋಡಲು ಕರೆಸಿ, ದೇಣಿಗೆ ಕೊಡುವುದು ಅಂತ ಆಯಿತು.  ಮುಖ್ಯಮಂತ್ರಿಗಳು ಬಂದರು, ನಾಟಕ ನೋಡಿದರು. ಕೊನೆಗೆ ದೇಣಿಗೆ ಸಮರ್ಪಣೆ ಕಾರ್ಯಕ್ರಮದಲ್ಲಿ ಹಿರಣ್ಣಯ್ಯನವರು- ನಾನು,  ನಮ್ಮ ಕಂಪನಿ ಪರವಾಗಿ, ನಿಜಲಿಂಗಪ್ಪನವರ ಕೈಗೆ ದೇಣಿಗೆ ಕೊಡುತ್ತಿದ್ದೇನೆ. ಅದು ಅವರು ಪ್ರಧಾನಿ, ರಕ್ಷಣಾಸಚಿವರ ಮೂಲಕ ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತದೆ. ಅಲ್ಲಿಗೆ ಹೋಗೋ ಹೊತ್ತಿಗೆ ಎಷ್ಟು ಸೇರುತ್ತದೋ ಗೊತ್ತಿಲ್ಲ. ಪೂರ್ತಿ ಅವರಿಗೇ ಸೇರುವಂತಾಗಲಿ ಅನ್ನೋದು ನಮ್ಮ ಆಶಯ’ ಅಂತ ತಮಾಷೆಯಾಗಿ ಹೇಳಿದರು. ನಿಜಲಿಂಗಪ್ಪನವರ ಪಿತ್ತ ನೆತ್ತಿಗೆ ಏರಿತೋ ಏನೋ, ವೇದಿಕೆಯಲ್ಲೇ “ನರಸಿಂಹಮೂರ್ತಿಗಳೇ, ನಿಮ್ಮ ಮಾತುಗಳಲ್ಲಿ ಕಾಂಗ್ರೆಸ್‌ ವಿರುದ್ಧ ದೋರಣೆ ಕಾಣುತ್ತಿದೆ. ಅದಕ್ಕೆ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡ್ತೇನೆ’ ಅಂದು ಬಿಟ್ಟರು. ಹಿರಣ್ಣಯ್ಯ ಬಿಡಬೇಕಲ್ಲ, “ಮುಖ್ಯಮಂತ್ರಿಗಳೇ, ಎಲ್ಲೋ ಏಕೆ ಕೊಡ್ತೀರಿ. ನೀವು ಜನಗಳಿಂದ ಆಯ್ಕೆಯಾದವರು, ನಾನು ಜನಗಳಿಗೋಸ್ಕರವೇ ನಾಟಕ ಆಡುತ್ತಿರುವವನು. ನಿಮ್ಮನ್ನು ಗೆಲ್ಲಿಸಿದವರು, ನನ್ನನ್ನು ಉಳಿಸಿದವರು ಇವರೇ.  ಅವರು ಮುಂದೆ, ಇಲ್ಲೇ, ಇವತ್ತೇ ಏನು ಮಾಡ್ತೀರ ಅಂತ ಹೇಳಿಬಿಡಿ’ ಪಂಥಾಹ್ವಾನ ನೀಡಿದರು.

 ಇಕ್ಕಳಕ್ಕೆ ಸಿಕ್ಕಿಕೊಂಡ ಮಂತ್ರಿಗಳು”ನಿಮ್ಮ ಲಂಚಾವತಾರ ನಾಟಕ ಪ್ರದರ್ಶನವನ್ನೇ ಬ್ಯಾನ್‌ ಮಾಡಿಸ್ತೇನೆ’  ಅಂದರು. “ನೀವು ಆ ಕೆಲಸ ಮಾಡಿದರೆ ಇನ್ನು ಮುಂದೆ ನಾನು ಬಣ್ಣ ಹಚ್ಚುವುದೇ ಇಲ್ಲ, ನೀವು ಸೋತರೆ ಏನು ಮಾಡ್ತೀರ’? ಅಂತ ಪ್ರಶ್ನೆ ಎಸೆದರು ಹಿರಣ್ಣಯ್ಯ. ” ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ’ ಉತ್ತರ ಕೊಟ್ಟರು ನಿಜಲಿಂಗಪ್ಪ.  ನಂತರ, ಈ ವಿಚಾರ ಅಧಿವೇಶನದಲ್ಲಿ ಚರ್ಚೆ ಆಯ್ತು. ನೀವು ಲಂಚವತಾರ ನಾಟಕ ಪ್ರದರ್ಶನ ಬ್ಯಾನ್‌ ಮಾಡಿದರೆ ಭ್ರಷ್ಟಾಚಾರದ ಪರ ನಿಂತ ಹಾಗೇ ಆಗುತ್ತೆ ಅನ್ನೋ ಸಲಹೆ ಬಂದು, ಕೊನೆಗೆ ಕೋರ್ಟಿನ ಮೆಟ್ಟಿಲೇರಿ, ಅಲ್ಲಿ ತೀರ್ಪು ಹಿರಣ್ಣಯ್ಯನವರ ಪರ ಬಂದಾಗ ನಿಜಲಿಂಗಪ್ಪನವರು ಕುರ್ಚಿ ತ್ಯಜಿಸುವ ಇರಾದೆ ಮುಂದಿಟ್ಟರು. 

Advertisement

   ಇದು “ಲಂಚಾವತಾರ’ದ ನಾಟಕದ ಪರಿಣಾಮದ ಸ್ಯಾಂಪಲ್‌.
 ಇದೇ “ಲಂಚಾವತಾರ’ದ ಮೊದಲ ಶೋನ ಕಥೆಯೇ ಬೇರೆ.  ಅದನ್ನು ಹಿರಣ್ಣಯ್ಯನವರ ಮಗ, ಬಾಬು ಹಿರಣ್ಣಯ್ಯ ಹೀಗೆ ನೆನಪಿಸಿಕೊಳ್ಳುತ್ತಾರೆ. 
   “ಮೊದಲ ಶೋ ನಡೆದದ್ದು ಶಿವಮೊಗ್ಗದಲ್ಲಿ. ಅಲ್ಲಿಗೆ ಕಮಲಾ ತ್ರೀರಿಂಗ್‌ ಸರ್ಕಸ್‌ ಬಂದಿತ್ತು. ಅಂದರೆ, ಮೂರು ಕಡೆ ಒಂದೇ ಆಟ ಆಡುವುದು. ಇದೊಂಥರಾ ನೋಡುಗರಿಗೆ ಥ್ರಿಲ್‌ ಆಗಿದ್ದರಿಂದ ನಾಟಕಕ್ಕೆ ಯಾರೂ ಕ್ಯಾರೆ ಅನ್ನುತ್ತಿರಲಿಲ್ಲ. 

ಇಂಥ ಸಂದರ್ಭದಲ್ಲಿ ಏನಾದರೂ ಮಾಡಲೇ ಬೇಕಲ್ಲ ಅಂತ ನಮ್ಮ ತಂದೆ “ಗುಮಾಸ್ತ’ ಅಂತ ಅರ್ಧ ಬರೆದಿಟ್ಟ ನಾಟಕವನ್ನು ಪೂರ್ತಿ ಮಾಡಿ ಅದಕ್ಕೆ “ಲಂಚಾವತಾರ’ ಅಂತ ಹೆಸರಿಟ್ಟರು. ಆ ತನಕ ರಾಜಕೀಯವನ್ನು ಯಾರೂ ಕೂಡ ನಾಟಕಕ್ಕೆ ಬೆರೆಸಿರಲಿಲ್ಲ. ಅಂಥ ಪ್ರಯತ್ನ ಮಾಡಿದವರಲ್ಲಿ ಅಪ್ಪನೇ ಮೊದಲು.  ಮೊದಲ ಶೋ ನಡೆದಾಗ ಟೈಂ ರಿಹರ್ಸಲ್‌ ಆಗಿರಲಿಲ್ಲ. ಹೀಗಾಗಿ, ತಡ ರಾತ್ರಿ 2 ಗಂಟೆಯಾದರೂ ಇಂಟರ್‌ವಲ್‌ ಬಿಡಲಿಲ್ಲ.

ಬೆಳಗ್ಗೆ ತನಕ ನಾಟಕ ಆಡಬೇಕೋ ಬೇಡವೋ? ಅನ್ನೋ ಗೊಂದಲ.  ಒಂದು ಕೆಲಸ ಮಾಡೋಣ.  ಆಗಿರುವ ತಪ್ಪನ್ನು ಪ್ರೇಕ್ಷಕರ ಮುಂದೆ ಹೇಳ್ಳೋಣ. ಒಂದು ವೇಳೆ ಅವರು,  ನೀವು ನಾಟಕ ಮುಂದುವರಿಸಿ ಅಂದರೆ ಮುಂದುವರಿಸೋಣ. ಬೇಡ ಅಂದರೆ ನಾಳೆಗೆ ಮುಂದೂಡೋಣ ಅಂತ ತೀರ್ಮಾನಿಸಿ, ನಮ್ಮ ತಂದೆಯೇ ವೇದಿಕೆಗೆ ಬಂದು, ಹೀಗೀಗಾಯ್ತು ಅಂತ ಹೇಳಿದರು. ಆವತ್ತು ನಾಟಕ ನೋಡಲು ಡಿಸಿ ಸಾಹೇಬ್ರು ಬೇರೆ ಬಂದಿದ್ದರು. ಕೊನೆಗೆ, ಪ್ರೇಕ್ಷಕರ ಮಧ್ಯೆ ಇದ್ದ ಪೈಲ್‌ವಾನ್‌ ” ನಾಟಕ ಪೊಗದಸ್ತಾಗಿ ಬರ್ತಾ ಐತೆ. ಮುಂದುವರಿಸಿ’  ಅಂತೆಲ್ಲ ಹೇಳಿದ. ಇಡೀ ಪ್ರೇಕ್ಷಕ ಸಮುದ್ರ ತಲೆಯಾಡಿಸಿತು. ಆ ಪೈಲ್ವಾನ್‌ ಸೈಡ್‌ವಿಂಗ್‌ನಲ್ಲಿ ಬಂದು ಅಪ್ಪನ ಕಿವಿಯಲ್ಲಿ ಪಿಸು ಪಿಸು ಅಂದ.   ಆವತ್ತಿನ ಕಡೆ ಸೀನ್‌ನಲ್ಲಿ ನಮ್ಮ ತಂದೆ ಆ್ಯಂಟಿ ಕರಪ್ಷನ್‌ ಅಧಿಕಾರೀನ ತರಾಟೆ ತೆಗೆದುಕೊಳ್ಳುವ ಪ್ರಸಂಗ ಬಂದಾಗ- “ಲಂಚ ಹಣವಾಗಿದ್ದರೆ ಪಡೆದವನ ಕೈಯನ್ನು ಪರೀಕ್ಷೆ ಮಾಡಿ, ಬಣ್ಣದ ಮೂಲಕ ಹಿಡೀತೀರಿ. ಆದರೆ, ಅಧಿಕಾರಿ ಹೆಂಡ್ತಿಗೆ ಲಂಚವಾಗಿ ನಕ್ಲೇಸ್‌ ಕೊಟ್ಟರೆ, ಹೆಂಗಸಿನ ಕುತ್ತಿಗೆಗೆ ಕೈ ಹಾಕಿ ಟೆಸ್ಟ್‌ ಮಾಡ್ತೀರಾ?’ ಅಂದು ಬಿಟ್ಟರು.  ಹೀಗೆ ಹೇಳಿದ್ದೇ ಸಕಲ ದಿಕ್ಕಿನಿಂದ ಜೋರಾದ ನಗೆಯ ನದಿ ಹರಿಯಿತು.  ಅಲ್ಲಿಗೆ ನಾಟಕವೂ ಮುಗೀತು.  ಇದರ ಪರಿಣಾಮ ಗೊತ್ತಾಗಿದ್ದು ಮಧ್ಯಾಹ್ನ  12 ಗಂಟೆಗೆ.  ರಿಹರ್ಸಲ್‌ನಲ್ಲಿದ್ದ ನಮ್ಮ ತಂದೆಗೆ  ಡಿ.ಸಿ ಆಫೀಸಿನ ಗುಮಾಸ್ತ ಬಂದು “ನಿಮ್ಮ ಲೈಸೆನ್ಸ್‌ ಕ್ಯಾನ್ಸಲ್‌ ಆಗಿದೆ’ ಅಂದ.  ಹೋಗಿ ನೋಡಿದರೆ, ಡಿ.ಸಿ ಸಾಹೇಬರು, ಅಲಿÅà, ಬಾಯಿಗೆ ಬಂದಾಗೆ ಡೈಲಾಗ್‌ ಹೊಡೀತೀರ. ನಿಮಗೆ ಬುದ್ಧಿ ಬೇಡ್ವ? ಅಂತೆಲ್ಲ ಬೈದರು. ಕಾರಣ ತಿಳಿಯಲಿಲ್ಲ.   ಅಯ್ಯೋ ಶಿವನೆ, ಅಂತ ನಮ್ಮ ತಂದೆ ಬೆಂಗಳೂರಿನ ಗೆಳೆಯರನ್ನು ಸಂಪರ್ಕಿಸಿ, ಕಮೀಷನರ್‌  ಹತ್ತಿರ ಮಾತನಾಡಿ ಕೊನೆಗೆ ರದ್ದಾದ ಲೈಸನ್ಸ್‌ ಅನ್ನು ಸರಿಪಡಿಸಿಕೊಂಡರು. 

 ನಿಜವಾದ ಕಥೆ ಏನೆಂದರೆ, ಆ ನಕ್ಲೇಸ್‌ ಅನ್ನು ಲಂಚವಾಗಿ ಪಡೆದವರು ಇದೇ ಡಿ.ಸಿ ಸಾಹೇಬರು. ಆವತ್ತು ಸೈಡ್‌ವಿಂಗ್‌ನಲ್ಲಿ ಪೈಲ್ವಾನ್‌ ನಮ್ಮಪ್ಪನ ಕಿವಿಯಲ್ಲಿ ಉಸಿರಿದ್ದು ಇದನ್ನೇ.  ಅಪ್ಪ ಯಾವಾಗ ಡೈಲಾಗ್‌ ಹೊಡೆದರೋ ಡಿ.ಸಿ ಸಾಹೇಬರು, ಜೊತೆಯಲ್ಲಿ ಕೂತಿದ್ದ ಹೆಂಡತಿಗೂ ಈ ಡೈಲಾಗ್‌ನ ಬಾಣ ನಾಟಿಬಿಟ್ಟಿತ್ತು.  

  ಲಂಚಾವತಾರದ ವಿಶೇಷ ಎಂದರೆ, ನಮ್ಮ, ನಿಮ್ಮ ಊರಿನಲ್ಲಿ ಅವಿತುಕೊಂಡಿರುತ್ತಿದ್ದ ಭ್ರಷ್ಟರ ಕಥೆಗಳು ಕೂಡ ನಾಟಕವಾಗಿಬಿಡುತ್ತಿದ್ದದ್ದು. ಎಷ್ಟೋ ಸಲ ಊರಿನ  ಜನರೇ  ಹಿರಣ್ಣಯ್ಯಗೆ ಬಂದು ಹೇಳುತ್ತಿದ್ದರಂತೆ.  “ಬೆಳಗಿನ ಹೊತ್ತು ನಾವು ಒಂದಷ್ಟು ಜನ ಊರೆಲ್ಲಾ ತಿರುಗೋಕೆ ಹೋಗ್ತಿದ್ವಿ. ಆಗ ಆಸಕ್ತಿಕಾರಕ ವಿಷಯಗಳನ್ನು ತಂದು ನಾಟಕಕ್ಕೆ ಪೋಣಿಸುತ್ತಿದ್ದೆವು.  ನಾಟಕದಲ್ಲಿ ಯಾವ ಪಾತ್ರದ ಡೈಲಾಗ್‌ಗೆ ಹೆಚ್ಚು ಪ್ರತಿಕ್ರಿಯೆ ಬರುತ್ತದೆ ಅನ್ನೋದನ್ನು ಅಪ್ಪ ಗಮನಿಸಿ, ವೇದಿಕೆ ಹಿಂದೆ ಬಂದಾಗ ” ಆ ಡೈಲಾಗ್‌ ಕಾಯಂ ಮಾಡ್ಕೊ. ಒಳ್ಳೆ ಜಾಗದಲ್ಲಿದೆ’  ಅನ್ನೋರು. ಈ ಥರ ಯಾರು ಬೇಕಾದರೂ ಸೇರಿಸಬಹುದಿತ್ತು.  ಸರಿ ಬರಲಿಲ್ಲ ಅಂದರೆ ಅವರೇ ತಿದ್ದಿ ತೀಡೋರು…’ ಬಾಬು ನೆನಪಿಸಿಕೊಳ್ಳುತ್ತಾರೆ.
 ಎಷ್ಟೋ ಸಲ ಈ ನಾಟಕದ ಸ್ಕ್ರಿಪ್ಟ್ ವೇದಿಕೆಯಲ್ಲೇ ಬದಲಾಗಿ, ಅಲ್ಲೇ ಹೊಸ ಡೈಲಾಗ್‌ ಹುಟ್ಟಿಕೊಳ್ಳೋದು.  ಹೀಗಾಗಿ, ಇತರೆ ಕಲಾವಿದರು ಹಿರಣ್ಣಯ್ಯನವರನ್ನು ಮೈಯೆಲ್ಲ ಕಣ್ಣಾಗಿ ಗಮನಿಸುತ್ತಿದ್ದರು. ಬದಲಾಯ್ತು ಅನ್ನೋದನ್ನು ಚಿಟಿಕೆ ಹಾಕಿ, ಆಂಗಿಕವಾಗಿ ಸಿಗ್ನಲ್‌ ಕೊಡುವ ಮೂಲಕ ಎಚ್ಚರಿಸುತ್ತಿದ್ದರಂತೆ.  

 ಸಮಾಜ ಶುದ್ಧ ಆಯ್ತಾ ?
ಲಂಚಾವತಾರದ ಡೈಲಾಗ್‌ಗಳನ್ನು ಕೇಳಿದ ಎಂಥ ಲಂಚಗುಳಿಗಳಿಗೂ ಮಾನಸಿಕ ಕಿರಿಕಿರಿ ತಪ್ಪಿದ್ದಲ್ಲ. ಎಷ್ಟೋ ಸಲ, ನಾಟಕ ನೋಡುತ್ತಿದ್ದವರು ಎದ್ದು ಹೊರಗೆ ಹೋಗಿ ನಗೆಪಾಟಲಾಗುತ್ತಿದ್ದದ್ದೂ ಉಂಟಂತೆ. ಇದು ಯಾವ ಕೋರ್ಟ್‌ ಕೂಡ ಕೊಡದ ಶಿಕ್ಷೆಯೇ ಸರಿ. “ಮೊದಲು ನಮ್ಮ ಕುಟುಂಬ ಶುದ್ಧವಾಗಿದೆ.  ಇಲ್ಲೀ ತನಕ ಲಂಚ ಕೊಟ್ಟು ಯಾವ ಕೆಲಸವನ್ನೂ ಮಾಡಿಸಿಕೊಂಡಿಲ್ಲ. ನಮ್ಮಪ್ಪ, ಪ್ರಶಸ್ತಿ ಸನ್ಮಾನ ಸ್ವೀಕರಿಸಿ, ಅದರ ಮೊತ್ತವನ್ನು ಆಯಾ ಸಂಸ್ಥೆಗೇ ಕೊಟ್ಟು ಬಂದಿದ್ದಾರೆ. ಥಿಯೇಟರ್‌ ನಿರ್ಮಾಣ ಮಾಡಲು ಜಾಗ ಕೊಡುವ ಸೌಲಭ್ಯವಿದೆ. ಆವು ಯಾವುದನ್ನೂ ಕೇಳಲಿಲ್ಲ.  ಈಗಿರುವ ನಮ್ಮ ಮನೆ ನಾವೇ ಕೊಂಡ ಸೈಟೇ. ಹೀಗೆ, ಭ್ರಷ್ಟಾಚಾರ ನಮ್ಮ ಮನೆ ಹೊಸ್ತಿಲು ಮೆಟ್ಟಲು ಬಿಟ್ಟಿಲ್ಲ.  ಹಿರಣ್ಣಯ್ಯನವರೇ, ಎಷ್ಟು ದಿನ ಹೀಗೆ ಬೈತಾ ಇರ್ತೀರಿ. ಬನ್ನಿ ಎಂಎಲ್‌ಸಿ ಮಾಡ್ತೀನಿ ಅಂತ ಕೇಳಿದ ರಾಜಕೀಯ ವ್ಯಕ್ತಿಗಳಿದ್ದಾರೆ.  ಅವರಿಗೆಲ್ಲ ಒಂದೇ ಉತ್ತರ- ನಾನು ಶಾಶ್ವತವಾಗಿ ಪ್ರತಿಪಕ್ಷ ನಾಯಕನಾಗಿದ್ದೇನೆ. ಅದೇ ಸಾಕು ಎಂದು ಬಿಡುತ್ತಿದ್ದರು’ ಎಂದು ನೆನಪಿಸಿಕೊಂಡರು ಬಾಬು ಹಿರಣ್ಣಯ್ಯ. 

ಅಪ್ಪನ ಪ್ರಭಾವ ಇಲ್ಲ…
ನಮ್ಮಪ್ಪ, ಮಗನಿಗೆ ಪಾರ್ಟ್‌ ಕೊಡಿ ಅಂತ ಯಾವತ್ತೂ ಹೇಳಲಿಲ್ಲ. ಮುಲಾಜು ಇರಬಾರದು ಅಂತಲೇ ಪ್ರಾಕ್ಟೀಸ್‌ ಮ್ಯಾನೇಜರ್‌ ಆಗಿ ಯೋಗಾನರಸಿಂಹ ಮೂರ್ತಿ ಇದ್ದರು. ಅವರ ಬಳಿ ಹೋಗಿ, ಎಲ್ಲ ಪಾತ್ರಗಳ ಡೈಲಾಗ್‌ ಒಪ್ಪಿಸಬೇಕು. ಚೆನ್ನಾಗಿ ಹೇಳಿದರಷ್ಟೇ ಪಾತ್ರ. ಬೆಳಗ್ಗೆ 11 ಗಂಟೆಗೆ ರಿಹರ್ಸಲ್‌ಶುರು ಮಾಡೋರು. ಮುನಿಯಪ್ಪ, ಮುಸುರಿ ಕೃಷ್ಣಮೂರ್ತಿ, ನಾಗರತ್ನಮ್ಮ, ಪರಮಶಿವನ್‌ರಂಥ ಘಟಾನುಘಟಿಗಳೆಲ್ಲ ಇರೋರು. ಪ್ರಾಕ್ಟೀಸ್‌ ಅಂದರೆ ಹೇಗಂತೀರಿ? ದಾಸಣ್ಣನ ಪಾತ್ರ ಮಾಡೋರು ಸತ್ಯಮೂರ್ತಿ ಡೈಲಾಗ್‌ ಹೇಳಬೇಕು, ಸತ್ಯಮೂರ್ತಿ ದಾಸಣ್ಣನದ್ದು, ದತ್ತು ಪಾತ್ರದವರು, ದಣಿಯ ಡೈಲಾಗ್‌, ದಣಿ ರಾಮಣ್ಣನ ಡೈಲಾಗ್‌ ಹೇಳಬೇಕು. ಹೀಗೆ ಇಡೀ ಸ್ಕ್ರಿಪ್ಟ್, ಪಾತ್ರ ಎಲ್ಲರ ಬಾಯಲ್ಲಿ. ಹೀಗಾಗಿ, ವೇದಿಕೆಯಲ್ಲಿ ಪಾತ್ರಕ್ಕೆ ತಕ್ಕ ಎಕ್ಸ್‌ಪ್ರೆಷನ್‌ಗಳೂ ಮೂಡುತ್ತಿದ್ದರಿಂದಲೇ ಲಂಚಾವತಾರ ಇವತ್ತಿಗೂ ಪ್ರಸ್ತುತವಾಗಿರೋದು. 

– ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next