ಸ್ವಲ್ಪ ದಪ್ಪಗಿದ್ದವರು ಸ್ಲಿಮ್ ಅಂಡ್ ಫಿಟ್ ಆಗಿ ಕಂಡರೆ ಎಲ್ಲರು ಕೇಳುವ ಪ್ರಶ್ನೆ ಎಂದರೆ, ಸ್ಲಿಮ್ ಆಗೋಕೆ ಏನ್ ಮಾಡಿದ್ರಿ ಎಂದು…ಈ ತರಹದ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತದೆ. ಅದರಲ್ಲೂ ಸಿನಿಮಾ ಮಂದಿಗಂತೂ ಸ್ವಲ್ಪ ಹೆಚ್ಚೇ ಪ್ರಶ್ನೆಗಳು ಎದುರಾಗುತ್ತವೆ.
ನಟ ಜಗ್ಗೇಶ್ ಅವರಲ್ಲೂ ಈ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚೇ ಇದೆ. ಅದಕ್ಕೆ ಕಾರಣ ಅವರು ಸ್ಲಿಮ್ ಆದ ರೀತಿ. ಸ್ವಲ್ಪ ದಪ್ಪಗಿದ್ದ ಜಗ್ಗೇಶ್ ಡಯೆಟ್, ವರ್ಕೌಟ್ ಮಾಡಿ ಬರೋಬ್ಬರಿ 24ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅಲ್ಲಿಗೆ 94 ಕೆಜಿ ತೂಕವಿದ್ದ ಜಗ್ಗೇಶ್ 70 ಕೆಜಿಗೆ ಬಂದಿದ್ದಾರೆ. ಎಲ್ಲಾ ಓಕೆ ಜಗ್ಗೇಶ್ ಇಷ್ಟೊಂದು ಸ್ಲಿಮ್ ಆಗಿದ್ದು ಹೇಗೆ, ಅವರ ಡಯೆಟ್ ಹೇಗಿತ್ತು… ಇಂತಹ ಕುತೂಹಲ ಸಹಜ. ಈ ಬಗ್ಗೆ ಜಗ್ಗೇಶ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.
94 ಕೆಜಿ ತೂಕ ಇದ್ದವನು 70 ಕೆಜಿಗೆ ಬಂದಿದ್ದೇನೆ. ಆಗ ನನಗೆ ವಿಪರೀತ ತಲೆನೋವು. ಅದಕ್ಕೆ ಚಿಕಿತ್ಸೆ ಬೇರೆ ಪಡೆಯುತ್ತಿದ್ದೆ. ಆಗ ಕಂಟ್ರೋಲ್ ತಪ್ಪಿ ತೂಕ ವಿಪರೀತವಾಗಿತ್ತು. ರಾಯದ ದಯೆಯಿಂದ, ನನ್ನ ಮಡದಿ ಪರಿಮಳ ಡಯೆಟ್ ಸಲಹೆ ಪಾಲಿಸಿ, ಇಂದು ನಾನೇ ರಾಜ, ಮಂತ್ರಿ, ಸೇನಾಧಿಪತಿ …ಬದುಕಿಗೆ ಆರೋಗ್ಯವೇ ಸಕಲೈಶ್ವರ್ಯ ಎಂದು ಟ್ವೀಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇವರ ಟ್ವೀಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಕೂಡಾ ಬಂದಿವೆ. ಸದ್ಯ ಜಗ್ಗೇಶ್ ನಾಯಕರಾಗಿ ನಟಿಸಿರುವ ತೋತಾಪುರಿ ಚಿತ್ರ ಸಿದ್ಧವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಕ್ಕೆ ವಿಜಯಪ್ರಸಾದ್ ನಿರ್ದೇಶನವಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿರುವ ನೀರ್‌ದೋಸೆ ಹಿಟ್ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಸಿನಿ ಮಾರುಕಟ್ಟೆಗೆ ತೋತಾಪುರಿ ತರಲು ಸಜ್ಜಾಗಿದೆ ಚಿತ್ರತಂಡ. ವಿಶೇಷವೆಂದರೆ ತೋತಾಪುರಿ ಎರಡು ಚಾಪ್ಟರ್‌ಗಳಲ್ಲಿ ತೆರೆಕಾಣಲಿದೆ.
ಮತ್ತೂಂದು ವಿಶೇಷವೆಂದರೆ ಶೂಟಿಂಗ್‌ಗೂ ಮುನ್ನವೇ ಎರಡು ಚಾಪ್ಟರ್‌ಗಳಲ್ಲಿ ಶೂಟ್ ಮಾಡಬೇಕೆಂದು ಸ್ಕ್ರಿಪ್ಟ್ ಬರೆದು ಚಿತ್ರೀಕರಿಸಿದ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದೆ. ಸುಮಾರು 150ಕ್ಕು ಹೆಚ್ಚು ದಿನಗಳ ಕಾಲ ಚಿತ್ರೀಕರಣ, ಜಗ್ಗೇಶ್, ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಅದಿತಿ ಪ್ರಭುದೇವ, ಹೇಮಾದತ್ ಹಾಗೂ ಪ್ರಮುಖ ಕಲಾವಿದರೆಲ್ಲಾ ಸೇರಿದಂತೆ ಇಡೀ ಚಿತ್ರದಲ್ಲಿ 80ಕ್ಕೂ ಹೆಚ್ಚು ಮಂದಿ ನಟಿಸಿದ್ದಾರೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ನಿರ್ಮಾಪಕ ಕೆ.ಎ.ಸುರೇಶ್.