Advertisement
ಪರೀಕ್ಷೆಗೆ 17,363 ವಿದ್ಯಾರ್ಥಿಗಳು: ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯು ಪರೀಕ್ಷೆಯ ಪೂರ್ವ ಸಿದ್ದತೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 30 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 7,731 ಬಾಲಕರು, 9,632 ಬಾಲಕಿಯರು ಸೇರಿದಂತೆ ಒಟ್ಟು 17,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.
Related Articles
Advertisement
ಮೊಬೈಲ್ ಬಳಕೆ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿಗಳು ಮೊಬೈಲ್ ಫೋನ್ ಹಾಗೂ ಇತರೆ ವಿದ್ಯುನ್ಮಾನ ಉಪಕರಣಗಳನ್ನು ಬಳಸುವಂತಿಲ್ಲ. ಆದರೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾತ್ರ ಬೇಸಿಕ್ ಸೆಟ್ ಬಳಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರಶ್ನೆ ಪತ್ರಿಕೆಗಳ ಗೌಪ್ಯ ಲಕೋಟೆಗಳ ಬಾಕ್ಸ್‌ಗಳನ್ನು ಬೆಳಗ್ಗೆ 9.45 ಕ್ಕೆ ತೆರೆಯುವಾಗ ಮುಖ್ಯ ಅಧೀಕ್ಷಕರು, ಸಹಮುಖ್ಯ ಅಧಿಕ್ಷಕರು, ಜಾಗೃತದಳದ ಸಿಬ್ಬಂದಿ ಸಮ್ಮುಖದಲ್ಲಿ ಮತ್ತು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ತೆರೆಯಬೇಕು. ಪರೀಕ್ಷೆ ಮುಕ್ತಾಯ ಅವಧಿ ಪೂರ್ಣವಾಗುವ ಮುನ್ನ ಪರೀಕ್ಷಾ ಕೊಠಡಿಯಿಂದ ಯಾವ ವಿದ್ಯಾರ್ಥಿಗಳು ಹೊರ ಹೋಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗಡಿಯಾರದ ವ್ಯವಸ್ಥೆ ಮಾಡಿ: ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರಗಳನ್ನು ಇಡಬೇಕು. ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ತಹಶೀಲ್ದಾರರು ಮತ್ತು ಪ್ರಾಂಶುಪಾಲರು ಪೊಲೀಸ್ ಸಿಬ್ಬಂದಿಯೊಂದಿಗೆ ಸರ್ಕಾರಿ ವಾಹನದ ಮೂಲಕ ಉತ್ತರ ಪತ್ರಿಕೆಗಳನ್ನು ಪೋಸ್ಟ್ ಆಫೀಸ್‌ಗೆ ಜಾಗ್ರತೆಯಿಂದ ತಲುಪಿಸುವಂತೆ ನಿರ್ದೇಶಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ. ಜವರಯ್ಯ, ಎಲ್ಲಾ ತಾಲೂಕುಗಳ ತಹಸೀಲ್ದಾರರು, ಪ್ರಾಂಶುಪಾಲರುಗಳು ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಿಸಿ ಕ್ಯಾಮರಾಗಳ ಮಾಹಿತಿ ನೀಡಿ: ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಾಲೇಜಿನ ಪ್ರಾಂಶುಪಾಲರು ಮಾಹಿತಿ ನೀಡಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿರ್ಬಂಧಿತ ಪ್ರದೇಶವೆಂದು ಘೋಷಿಸಬೇಕು, ಅಕ್ಕ-ಪಕ್ಕದ ಜೆರಾಕ್ಸ್ ಅಂಗಡಿಗಳು, ಟ್ಯೂಷನ್ ಸೆಂಟರ್, ಹಾಗೂ ಸೈಬರ್ ಕೇಂದ್ರಗಳ ಮೇಲೆ ನಿಗಾವಹಿಸಬೇಕು ಜಿಲ್ಲಾ ಧಿಕಾರಿ ಗಿರೀಶ್ ಹೇಳಿದರು.
ಸುರಕ್ಷಿತ ಪರೀಕ್ಷಾ ವಿಧಾನ: ಪಿಯು ಪರೀಕ್ಷೆಯನ್ನು ಕರ್ನಾಟಕ ಸೆಕ್ಯೂರ್ ಎಕ್ಸಾಮ್ ಸಿಸ್ಟಮ್ ಅಡಿಯಲ್ಲಿ ನಡೆಸಲಾಗುತ್ತಿದೆ. ಜಿಲ್ಲಾ ಖಜಾನೆಯ ಸ್ಟ್ರಾಂಗ್ ರೂಂ ಹಾಗೂ ಮುಖ್ಯ ದ್ವಾರದ ಬಳಿ ಸಿ.ಸಿ. ಕ್ಯಾಮೆರಾ ಅಳವಡಿಸುವುದರ ಜೊತೆಗೆ ಪೊಲೀಸ್ ಭದ್ರತೆಯಲ್ಲಿರಬೇಕು ಎಂದು ಆರ್. ಗಿರೀಶ್ ಹೇಳಿದರು.