ಪರ್ತ್ : ಇದೇ ಶುಕ್ರವಾರ ಇಲ್ಲಿ ಆರಂಭಗೊಳ್ಳಲಿರುವ ಆತಿಥೇಯ ಆಸ್ಟ್ರೇಲಿಯ ಎದುರಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ಆಫ್ ಸ್ಪಿನ್ನರ್ ಅಶ್ವಿನ್ ರವಿಚಂದ್ರನ್ ಮತ್ತು ಬ್ಯಾಟ್ಸ್ ಮ್ಯಾನ್ ರೋಹಿತ್ ಶರ್ಮಾ ಅವರು ಅನರ್ಹರಾಗಿ ಆಡುವ ತಂಡದಿಂದ ಹೊರಬಿದ್ದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ವಿಜಯ ಸಾಧಿಸಿದ್ದ ಭಾರತಕ್ಕೆ ಅಶ್ವಿನ್ ಮತ್ತು ರೋಹಿತ್ ಅವರ ಅಲಭ್ಯತೆ ಭಾರೀ ಹಿನ್ನಡೆ ಎಂದು ತಿಳಿಯಲಾಗಿದೆ. ಆರಂಭಕಾರ ಪ್ರಥ್ವಿ ಶಾ ಅವರು ಈಗಾಗಲೇ ಗಾಯದ ಕಾರಣ ಆಡುವ ತಂಡದಿಂದ ಹೊರಬಿದ್ದು ಅವರಿನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹದಿಮೂರು ಸದಸ್ಯರ ಭಾರತದ ಎರಡನೇ ಟೆಸ್ಟ್ ತಂಡಕ್ಕೆ ವೇಗಿ ಉಮೇಶ್ ಯಾದವ್, ಆಲ್ ರೌಂಡರ್ ಹನುಮ ವಿಹಾರಿ ಮತ್ತು ರವೀಂದ್ರ ಜಡೇಜ ಅವರನ್ನು ಸೇರಿಸಿಕೊಳ್ಳಲಾಗಿದೆ.
ಅಶ್ವಿನ್ ಅವರಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿರುವುದರಿಂದ ಅವರಿಗೆ ಆಡಲು ಸಾಧ್ಯವಾಗುತ್ತಿಲ್ಲ. ರೋಹಿತ್ ಶರ್ಮಾ ಅವರಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಇವರಿಬ್ಬರೂ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಎರಡನೇ ಟೆಸ್ಟ್ ತಂಡಕ್ಕೆ ಭಾರತದ 13 ಸದಸ್ಯರ ತಂಡ ಇಂತಿದೆ :
ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ) ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಇಶಾಂತ್ ಶರ್ಮಾ, ಮೊಹಮ್ಮದ ಶಮಿ, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಉಮೇಶ್ ಯಾದವ್.