Advertisement

ದ್ವಿತೀಯ ಟೆಸ್ಟ್‌ನಿಂದ ಶೇ. 50 ವೀಕ್ಷಕರಿಗೆ ಪ್ರವೇಶ : ಮಾಧ್ಯಮದವರಿಗೂ ಎಂಟ್ರಿ

01:54 AM Feb 02, 2021 | Team Udayavani |

ಚೆನ್ನೈ: ಭಾರತದ ಕ್ರಿಕೆಟ್‌ ಪ್ರೇಮಿಗಳ ಹಾಗೂ ವೀಕ್ಷಕರ ಪಾಲಿಗೆ ಖುಷಿಯ ಸಮಾಚಾರವೊಂದು ಕೇಳಿಬಂದಿದೆ. ಭಾರತ-ಇಂಗ್ಲೆಂಡ್‌ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದ ಮೂಲಕ ವೀಕ್ಷಕರಿಗೆ ಮತ್ತು ಮಾಧ್ಯಮದವರಿಗೆ ಸ್ಟೇಡಿಯಂ ಬಾಗಿಲು ತೆರೆಯಲ್ಪಡಲಿದೆ. ಇದರೊಂದಿಗೆ ಕೊರೊನೋತ್ತರದ ಬಳಿಕ ಮೊದಲ ಬಾರಿಗೆ ಭಾರತದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕ್ರೀಡಾಂಗಣ ಪ್ರವೇಶಕ್ಕೆ ಪ್ರೇಕ್ಷಕರಿಗೆ ಅನುಮತಿ ಲಭಿಸಿದಂತಾಗುತ್ತದೆ.

Advertisement

ಬಿಸಿಸಿಐ ಮತ್ತು ತಮಿಳುನಾಡು ರಾಜ್ಯ ಕ್ರಿಕೆಟ್‌ ಮಂಡಳಿ (ಟಿಎನ್‌ಸಿಎ) ನಡುವಿನ ಮಾತುಕತೆಯ ಫಲವಾಗಿ ಈ ಬೆಳವಣಿಗೆ ಸಂಭವಿಸಿದೆ ಎಂದು ಟಿಎನ್‌ಸಿಎ ಉನ್ನತ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದಕ್ಕೂ ಮೊದಲು ಚೆನ್ನೈಯಲ್ಲಿ ನಡೆಯಲಿರುವ ಎರಡೂ ಟೆಸ್ಟ್‌ ಪಂದ್ಯಗಳ ವೇಳೆ ವೀಕ್ಷಕರಿಗೆ ನಿರ್ಬಂಧ ವಿಧಿಸಿ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅಹ್ಮದಾಬಾದ್‌ನ 3ನೇ ಹಾಗೂ 4ನೇ ಟೆಸ್ಟ್‌ ಪಂದ್ಯಗಳಿಗೆ ವೀಕ್ಷಕರಿಗೆ ಪ್ರವೇಶ ನೀಡುವುದಾಗಿ ನಿರ್ಧರಿಸಲಾಗಿತ್ತು.

ಆದರೆ ದೇಶದಲ್ಲಿ ಕೊರೊನಾ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದ್ದು, ಚಿತ್ರಮಂದಿರಗಳಿಗೂ ಪೂರ್ಣ ಸಾಮರ್ಥ್ಯದ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ. ಹೀಗಿರುವಾಗ ಕ್ರೀಡಾಂಗಣಗಳನ್ನು ಮುಚ್ಚುವುದರಲ್ಲಿ ಅರ್ಥವಿಲ್ಲ ಎಂದು ಅನೇಕರು ವಾದಿಸಿದ್ದರ ಫಲವಾಗಿ ಈ ಬೆಳವಣಿಗೆ ಸಂಭವಿಸಿದೆ.

ನೂತನ ಮಾರ್ಗಸೂಚಿ
“ಬಿಸಿಸಿಐ ಜತೆ ಮಾತುಕತೆ ನಡೆಸಿ, ಕೇಂದ್ರದ ನೂತನ ಕೋವಿಡ್‌-19 ಮಾರ್ಗಸೂಚಿಯನ್ನು ಆವಲೋಕಿಸ ಲಾಗಿದೆ. ಇದರಲ್ಲಿ ಕ್ರೀಡಾಂಗಣಗಳಿಗೆ ವೀಕ್ಷಕರಿಗೆ ಅನುಮತಿ ನೀಡುವ ಕುರಿತು ಉಲ್ಲೇಖೀಸಲಾಗಿದೆ. ಜತೆಗೆ ರಾಜ್ಯ ಸರಕಾರದ ಸ್ಟ್ಯಾಂಡರ್ಡ್‌ ಆಪರೇಷನ್‌ ನಿಯಮಾ ವಳಿಯನ್ನೂ (ಎಸ್‌ಒಪಿ) ಪಾಲಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಇದರಂತೆ ದ್ವಿತೀಯ ಟೆಸ್ಟ್‌ನಿಂದ ಶೇ. 50ರಷ್ಟು ವೀಕ್ಷಕರಿಗೆ ಪ್ರವೇಶಾವಕಾಶ ನೀಡಲಾಗುವುದು’ ಎಂದು ಟಿಎನ್‌ಸಿಯ ಅಧಿಕಾರಿ ತಿಳಿಸಿದರು.

Advertisement

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ 50 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದ್ದು, ದಿನಂಪ್ರತಿ 25 ಸಾವಿರ ಮಂದಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಮಾಧ್ಯಮದವರಿಗೂ ಪ್ರವೇಶ
ದ್ವಿತೀಯ ಟೆಸ್ಟ್‌ ಪಂದ್ಯದಿಂದ ಮಾಧ್ಯಮದವರಿಗೂ ಪ್ರಸ್‌ ಬಾಕ್ಸ್‌ನಲ್ಲಿ ಕುಳಿತು ವರದಿ ಮಾಡಲು ಅವಕಾಶ ಲಭಿಸಲಿದೆ. ಆದರೆ ಪತ್ರಿಕಾಗೋಷ್ಠಿ ಮಾತ್ರ ವರ್ಚುವಲ್‌ ಆಗಿ ನಡೆಯಲಿದೆ. ಭಾರತ-ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ ಪಂದ್ಯ ಫೆ. 13ರಿಂದ ಆರಂಭವಾಗಲಿದೆ.

ಕ್ರಿಕೆಟಿಗರ ಕೊರೊನಾ ಟೆಸ್ಟ್‌ ಕ್ಲಿಯರ್‌
ಟೆಸ್ಟ್‌ ಸರಣಿಗೂ ಮುನ್ನ ನಡೆಸಲಾದ ಭಾರತ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ತಂಡಗಳ ಆಟಗಾರರ ಹಾಗೂ ಸದಸ್ಯರ 3ನೇ ಹಾಗೂ ಅಂತಿಮ ಕೊರೊನಾ ಪರೀಕ್ಷೆಯಲ್ಲಿ ಎಲ್ಲರ ಫ‌ಲಿತಾಂಶವೂ ನೆಗೆಟಿವ್‌ ಬಂದಿದೆ. ಮಂಗಳವಾರದಿಂದ ಎರಡೂ ತಂಡಗಳ ಆಟಗಾರರು ಮೂರು ದಿನಗಳ ಹೊರಾಂಗಣ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಅಹ್ಮದಾಬಾದ್‌ ಟೆಸ್ಟ್‌ ; ಪ್ರಧಾನಿ ಮೋದಿಗೆ ಆಹ್ವಾನ
ಭಾರತ-ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್‌ ಪಂದ್ಯ ಅಹ್ಮದಾಬಾದ್‌ನ ನವೀಕೃತ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ನಲ್ಲಿ ಅಹರ್ನಿಶಿಯಾಗಿ ನಡೆಯಲಿದೆ. ಇದು ವಿಶ್ವದ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣವಾಗಿದ್ದು, ಒಂದು ಲಕ್ಷದ ಹತ್ತು ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ. ಈ ಟೆಸ್ಟ್‌ ವೇಳೆ ಇದರ ಉದ್ಘಾಟನಾ ಸಮಾರಂಭವೂ ನಡೆಯಲಿದೆ.

ಈ ಸ್ಮರಣೀಯ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾಯಕರನೇಕರು ಸಾಕ್ಷಿಯಾಗುವ ಸಾಧ್ಯತೆ ಇದೆ. ಬಿಸಿಸಿಐ ಈಗಾಗಲೇ ಪ್ರಧಾನಿಯವರಿಗೆ ಆಹ್ವಾನ ನೀಡಿದೆ ಎಂದು ವರದಿಯಾಗಿದೆ. ಜತೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕ್ರೀಡಾ ಸಚಿವ ಕಿರಣ್‌ ರಿಜಿಜು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next