Advertisement

ರ‍್ಯಾಂಕ್‌ ಬಂದರೂ ಅಪ್ಪನೊಂದಿಗೆ ಹೊಲದಲ್ಲಿ ದುಡಿತಿದ್ದ..! ಭಾಗಪ್ಪ ಎಂಬ ಅನ್ನದಾತನ ಮಗನ ಸಾಧನೆ

04:51 PM Apr 21, 2023 | Team Udayavani |

ವಿಜಯಪುರ: ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟವಾಗಿ ರಾಜ್ಯಕ್ಕೆ 3ನೇ ರ‍್ಯಾಂಕ್‌ ಬಂದ ವಿಷಯ ತಿಳಿದಾಗ ಬಡ ಅನ್ನದಾತನ ಮಗನಿಗಾದ ಸಂಭ್ರಮ ಅಷ್ಟಿಷ್ಟಲ್ಲ. ರ‍್ಯಾಂಕ್‌ ಬಂದ ವಿಷಯ ತಿಳಿದ ಮೇಲೂ ಆತ ಊರಿಗೆಲ್ಲ ಸಿಹಿ ಹಂಚಿಕೊಂಡು ಓಡಾಡದೇ ತನ್ನ ಅಪ್ಪನೊಂದಿಗೆ ಮೆಣಸಿನ ಕಾಯಿ ಕೊಯ್ಲಿಗಾಗಿ ಹೊಲಕ್ಕೆ ಹೋಗಿದ್ದ.

Advertisement

ಇದು ರಾಜ್ಯಕ್ಕೆ ಕಲಾ ವಿಭಾಗದಲ್ಲಿ 3ನೇ ರ‍್ಯಾಂಕ್‌ ವಿಜೇತ ಭಾಗಪ್ಪ ಭಾಸಗಿ ಎಂಬ ರೈತನ ವಾಸ್ತವಿಕ ಕಥೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಜ್ಞಾನಭಾರತಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ, ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಾಧಕ ವಿದ್ಯಾರ್ಥಿಯ ಕಥೆ. ಸಾಧಕ ವಿದ್ಯಾರ್ಥಿ ಭಾಗಪ್ಪನ ಮೂಲ ಊರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮೋಹನಇಟಗಾ ಗ್ರಾಮ.

ಕಲಾ ವಿಭಾಗದಲ್ಲಿ ಭಾಗಪ್ಪ ರಾಜ್ಯಕ್ಕೆ 3ನೇ ರ‍್ಯಾಂಕ್‌ ಬಂದ ವಿಷಯವನ್ನು ಕಾಲೇಜಿನ ಪ್ರಾಚಾರ್ಯ ಜೆ.ಸಿ.ಪಾಟೀಲ ಮೊಬೈಲ್ ಕರೆ ಮೂಲಕ ಭಾಗಪ್ಪನಿಗೆ ತಿಳಿಸಿದಾಗ ಭಾಗಪ್ಪ ಹಿರಿಹಿರಿ ಹಿಗ್ಗಿದ್ದ. ಆದನ್ನು ಪಕ್ಕದಲ್ಲಿದ್ದ ಹೆತ್ತವರಿಗೂ ಹೇಳಿದ್ದ. ಆದರೆ ಅನಕ್ಷರಸ್ಥ ತಂದೆ ಗಂಗಪ್ಪ, ತಾಯಿ ಪೀರಮ್ಮ ಇಬ್ಬರಿಗೂ ಮಗ ತನ್ನ ಸಾಧನೆ ವಿವರಿಸಿದರೂ ಸಂಭ್ರಮದ ಅರಿವಾಗದ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು.

ಒಡಹುಟ್ಟಿದ ಅಣ್ಣ ಬಿಎಸ್ಸಿ ಓದುತ್ತಿರುವ ಶಿವರಾಜ ತಮ್ಮನ ಸಾಧನೆ ಅರಿವಾಗಿ ಸಂತಸ ವ್ಯಕ್ತಪಡಿಸಿ, ಹೆತ್ತವರಿಗೆ ವಿವರಿಸಿದ. ಆಗ ಮಗ ಏನೋ ಸಾಧನೆ ಮಾಡಿದ್ದಾನೆ ಎಂಬ ಅರಿವಾಯಿತೆ ಹೊರತು, ಏನು, ಎತ್ತ ಎಂಬ ನಿಖರತೆ ಅವರಿಗೆ ಇರಲಿಲ್ಲ. ರಾಜ್ಯಕ್ಕೆ ಕೀರ್ತಿ ತಂದ ಸಾಧಕ ಎಂಬ ದೊಡ್ಡತನವೂ ಅರಿವಾಗಲಿಲ್ಲ.

ಸರಿ ಫಲಿತಾಂಶ ಬಂದಾಯ್ತು, ರಾಜ್ಯಕ್ಕೆ ಟಾಪ್ ತ್ರಿ ಸ್ಥಾನ ಪಡೆದಾಯ್ತು. ದೊಡ್ಡ ಮಟ್ಟದ ಯಾವ ಸಂಭ್ರಮ ಆಚರಣೆಗೂ ಮುಂದಾಗದ ಭಾಗಪ್ಪ ತಂದೆ ಗಂಗಪ್ಪ ಅವರೊಂದಿಗೆ ಹೊಲಕ್ಕೆ ಹೊರಟು ನಿಂತಿದ್ದ. ಕುಟುಂಬಕ್ಕಿರುವ 2 ಎಕರೆ ಜಮೀನಿನಲ್ಲಿ ಕೊಯ್ಲಿಗೆ ಬಂದಿರುವ ಮೆಣಸಿನ ಹಣ್ಣಿ ಚೀಲ ಹೊರಲು ಹೆತ್ತವರಿಗೆ ನೆರವಾಗಲು ಮುಂದಾಗಿದ್ದ.

Advertisement

ಬಡತನದ ಬೇಗೆಯಲ್ಲಿ ಬೇಯುತ್ತಿರುವ ಭಾಗಪ್ಪನ ಸಾಧನೆಗೆ ಆತ ಕಲಿತಿರುವ ಬ.ವಿ.ಪ್ರ. ಸಮಿತಿ ಭಾಗಪ್ಪನ ಮುಂದಿನ ಪದವಿ ಓದಿನ ಜವಾಬ್ದಾರಿ ನಿಭಾಯಿಸಲು ಮುಂದೆ ಬಂದಿದೆ. ಪದವಿ ಮುಗಿಸಿದ ಬಳಿಕ ತಮ್ಮನನ್ನು ಕೆಎಎಸ್-ಐಎಎಸ್ ತರಬೇತಿಗೆ ಕಳಿಸಲು ಅಣ್ಣ ಶಿವರಾಜ ಈಗಲೇ ಸಿದ್ಧತೆ ನಡೆಸಿದ್ದಾರೆ.

ಭಾಗಪ್ಪನಲ್ಲಿರುವ ಈ ಪ್ರತಿಭೆ ಹೊರ ಬರಲು ಪ್ರಮುಖ ಕಾರಣ ಆತನ ಗಂಗಪ್ಪ ಅವರ ತಮ್ಮ-ಭಾಗಪ್ಪನ ಚಿಕ್ಕಪ್ಪ ನಿವೃತ್ತ ಸೈನಿಕ ದವಲತ್ರಾಯ. ಅಣ್ಣನ ಮಗನಲ್ಲಿರುವ ಪ್ರತಿಭೆಯನ್ನು ಗುರುತಿಸಿದ್ದ ದವಲತ್ರಾಯ ನಿತ್ಯವೂ ಬೆಳಿಗ್ಗೆ ಮೊಬೈಲ್ ಕರೆ ಮಾಡಿ ಎಬ್ಬಿಸಿ ಓದಲು ಅಣಿಗೊಳಿಸುವುದು, ವಿಷಯದಲ್ಲಿ ಹಿಂದೆ ಬಿದ್ದಾಗ ಮಾರ್ಗದರ್ಶನ ಮಾಡುವುದು, ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದರು.

ಮತ್ತೊಂದೆಡೆ ಓದುವ ಹಂತದಲ್ಲಿ ಸಿಂದಗಿಯ ಕೋಣೆಯಲ್ಲಿದ್ದ ಬಿಎಸ್ಸಿ ಓದುವ ಅಣ್ಣ ಶಿವರಾಜನ ಜೊತೆಯೂ ಭಾಗಪ್ಪನಿಗೆ ಸಹಕಾರಿಯಾಗಿದೆ. ಓದಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ಭಾಗಪ್ಪ ಶಾಲೆಯಲ್ಲೂ ಶಿಸ್ತು-ಶ್ರದ್ದೆಯ ವಿದ್ಯಾರ್ಥಿಯಾಗಿದ್ದ.

ಹೆತ್ತವರು ಪಡುತ್ತಿರುವ ಬವಣೆಯ ಅರಿವು ಇದ್ದ ಕಾರಣವೇ ಆತನಲ್ಲಿ ಓದುವ ಹಾಗೂ ಸಾಧಿಸುವ ಛಲಗಾರಿಕೆ ಮೈಗೂಡಿದೆ ಎಂಬುದು ಒಡನಾಡಿಗಳು, ಒಡಹುಟ್ಟಿದವರ ಸೇರಿದಂತೆ ಭಾಗಪ್ಪನನ್ನು ಬಲ್ಲವರ ಮಾತು.

ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಯ ಸಾಧನೆ ಅವರ್ಣನೀಯ. ಕುಟುಂಬದ ಆರ್ಥಿಕ ಶಕ್ತಿಯ ಕೊರತೆಯ ಹಿನ್ನೆಲೆಯಲ್ಲಿ ಆತನ ಮುಂದಿನ ಓದಿಗೆ ನಮ್ಮ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿದೆ. ಪ್ರತಿ ವರ್ಷ ಒಂದಲ್ಲ ಒಂದು ರ‍್ಯಾಂಕ್‌ ಮೂಲಕ ಕಾಲೇಜಿಗೆ ಕೀರ್ತಿ ತರುತ್ತಿರುವ ಮಕ್ಕಳಿಗೆ ನಾವು ಸದಾ ಉಜ್ವಲ ಭವಿಷ್ಯಕ್ಕೆ ಹಾರೈಸುತ್ತೇವೆ ಎನ್ನುತ್ತಾರೆ ಸಿಂದಗಿ ಜ್ಞಾನಭಾರತಿ ಕಲಾ, ವಾಣಿಜ್ಯ-ವಿಜ್ಞಾನ ಪ್ರಾಚಾರ್ಯ ಜೆ.ಸಿ.ಪಾಟೀಲ ಎಂದರು.

ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next