ಉಡುಪಿ: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 15,410 ಮಂದಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಮಾ. 1ರಿಂದ 18ರ ವರೆಗೆ ಈ ಪರೀಕ್ಷೆ ನಡೆಯಲಿದ್ದು, ಈ ಬಗ್ಗೆ ಪೂರ್ವಸಿದ್ದತಾ ಸಭೆ ಮಂಗಳವಾರದಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಪ.ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುಬ್ರಹ್ಮಣ್ಯ ಜೋಶಿ ಅವರು ಮಾಹಿತಿ ನೀಡಿ ಪ್ರಶ್ನೆಪತ್ರಿಕೆಗಳು ಶೀಘ್ರದಲ್ಲೇ ಬರಲಿದ್ದು, ಅವುಗಳನ್ನು ಅತಿ ಭದ್ರತೆಯಲ್ಲಿ ಜಿಲ್ಲಾ ಖಜಾನೆಯ ಸ್ಟ್ರಾಂಗ್ ರೂಂನಲ್ಲಿ ಇಡಲಾಗುವುದು. ಪ್ರಶ್ನೆಪತ್ರಿಕೆಗಳನ್ನು ಆಯಾ ಪರೀಕ್ಷಾ ದಿನದಂದೇ ಬೆಳಗ್ಗೆ ಭದ್ರತೆಯಲ್ಲಿ ತಲುಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಪರೀಕ್ಷಾ ಕೇಂದ್ರಕ್ಕೆ ಅಪರಿಚಿತ ವ್ಯಕ್ತಿಗಳು ಪ್ರವೇಶಿಸದಂತೆ ಸಂಪೂರ್ಣ ನಿರ್ಬಂಧಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸೇರಿದಂತೆ ಯಾರಿಗೂ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಮೂಲಸೌಕರ್ಯಗಳ ಪರಿಶೀಲನೆ
ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಎಲ್ಲರೂ ದಕ್ಷತೆಯಿಂದ ಮತ್ತು ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೊಠಡಿಯಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸಬೇಕು. ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪರೀಕ್ಷೆಗೆ ಮುನ್ನವೇ ಪ್ರತೀ ಕೊಠಡಿಗೆ ತೆರಳಿ ಪ್ರತೀ ಡೆಸ್ಕ್, ಬೆಂಚುಗಳು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಪರಿಶೀಲಿಸಬೇಕು. ಪರೀಕ್ಷಾ ಕೇಂದ್ರದ ಸುತ್ತ ಮುತ್ತ ಸೆಕ್ಷನ್ 144 ಜಾರಿಗೆ ಬರಲಿದೆ.
– ಹೆಪ್ಸಿಬಾ ರಾಣಿ, ಜಿಲ್ಲಾಧಿಕಾರಿ