ಉಳ್ಳಾಲ: ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ದ್ವಿತೀಯ ಪಿಯುಸಿಯ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆ ಇಂದು ನಡೆದಿದ್ದು ದ.ಕ.ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 1140 ಕೇರಳದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ದ.ಕ.ಜಿಲ್ಲಾಡಳಿತ ನೇತೃತ್ವದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಪ್ರಾಂಶುಪಾಲರ ಸಂಘದ ಸಹಯೋಗದೊಂದಿಗೆ ಕೇರಳ ಗಡಿಭಾಗದಿಂದ 32 ಕೆಎಸ್‍ಆರ್ ಟಿಸಿ ಬಸ್ ಮತ್ತು 15 ಖಾಸಗಿ ಬಸ್‍ಗಳ ಮೂಲಕ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ದು ಪರೀಕ್ಷೆ ಮುಗಿಸಿ ವಾಪಾಸ್ ಗಡಿ ಪ್ರದೇಶಗಳಿಗೆ ಯಶಸ್ವಿಯಾಗಿ ತಲುಪಿಸುವ ಮೂಲಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಿದೆ.
ದ.ಕ.ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಕೇರಳದ ಸುಮಾರು 1140 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅವರಲ್ಲಿ ಪ್ರಮುಖವಾಗಿ ತಲಪಾಡಿ ಗಡಿಭಾಗದ ಮೂಲಕ ಬರುವ 760 ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವುದು ಸವಾಲಾಗಿತ್ತು. ಕೇರಳದ ವಿವಿಧ ಪ್ರದೇಶಗಳಿಂದ ತಲಪಾಡಿ ಗಡಿಭಾಗಕ್ಕೆ ಬೆಳಗ್ಗೆ 7 ಗಂಟೆಗೆ ವಿದ್ಯಾರ್ಥಿಗಳು ತಲುಪಿದ್ದು, ಚೆಕ್ ಪೋಸ್ಟ್ ಬಳಿ ತಪಾಸಣೆಯ ಬಳಿಕ ಕುಂಜತ್ತೂರು ಮರಿಯಾಶ್ರಮ ಚರ್ಚ್ ಆವರಣದಲ್ಲಿ ಸೆಂಟರ್ ಗಳ ಆಧಾರದಲ್ಲಿ ಪ್ರತ್ಯೇಕ ವಿಭಜಿಸಲಾಯಿತು. ಅಲ್ಲಿಂದ ಬಸ್‍ಗಳ ಮೂಲಕ ಮಂಗಳೂರ, ಸುರತ್ಕಲ್‍ನ ವಿವಿಧ ಪರಿಕ್ಷಾ ಕೇಂದ್ರಗಳಿಗೆ ತಲುಪಿಸುವ ಕಾರ್ಯವನ್ನು ನಡೆಸಲಾಯಿತು.
ಗಡಿಭಾಗಕ್ಕೆ 47 ಮತ್ತು ಜಿಲ್ಲೆಯೊಳಗೆ 88 ಬಸ್ ವ್ಯವಸ್ಥೆ : ಪರೀಕ್ಷೆಗೆ ಹಾಜರಾದ 1140 ವಿದ್ಯಾರ್ಥಿಗಳಲ್ಲಿ ಗರಿಷ್ಠ 760 ವಿದ್ಯಾರ್ಥಿಗಳು ತಲಪಾಡಿ ಗಡಿ ಪ್ರದೇಶದ ಮೂಲಕ 22 ಕೆಎಸ್‍ಆರ್‍ಟಿಸಿ ಮತ್ತಯು 12 ಖಾಸಗಿ ಬಸ್‍ಗಳು (ಖಾಸಗಿ ಕಾಲೇಜುಗಳ ಬಸ್) ಮೂಲಕ ವಿದ್ಯಾರ್ಥಿಗಳನ್ನು 30 ವಿದ್ಯಾರ್ಥಿಗಳಂತೆ ತಲುಪಿಸುವ ಕಾರ್ಯ ನಡೆದರೆ, ಬಂಟ್ವಾಳ ತಾಲೂಕಿನ ಕೈರಂಗಳ ಪುಣ್ಯಕೋಟಿ ನಗರದ ಬಳಿ ಪಾತೂರುಮ ಸಾರಡ್ಕ, ಬಾಯಾರು, ಆನೆಕಲ್ಲು ವ್ಯಾಪ್ತಿಯಲ್ಲಿ ನಾಲ್ಕು ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಕರಿಕೆ, ಮತ್ತು ಆಲೆಟ್ಟಿ ಪ್ರದೇಶದಲ್ಲಿ ಎರಡು ಟೆಂಪೋ ವಾಹನಗಳ ವ್ಯವಸ್ಥೆಯನ್ನು ದ.ಕ. ಜಿಲ್ಲಾ ಪ್ರಾಂಶುಪಾಲರ ಸಂಘದ ವತಿಯಿಂದ ಮಾಡಿದರೆ, ಪುತ್ತೂರು ಸುಳ್ಯದ ಗಡಿಭಾಗವಾದ ಕಾಯರ್‍ಪದವವು ಪಂಜಿಕಲ್ಲು ಕಡೆಯಿಂದ ತಲಾ ಒಂದೊಂದು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಜಿಲ್ಲೆಯೊಳಗೆ ವಿವಿಧ ಪ್ರದೇಶಗಳಿಂದ ಒಟ್ಟು 88 ಬಸ್‍ಗಳ ವ್ಯವಸ್ಥೆಯನ್ನು ಮಾಡಿದ್ದು , ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಿಲ್ಲದೆ ಪರೀಕ್ಷೆಗೆ ಹಾಜರಾಗಲು ಶಿಕ್ಷಣ ಇಲಾಖೆಯೊಂದಿಗೆ ಪದವಿಪೂರ್ವ ಪ್ರಾಂಶುಪಾಲರ ಸಂಘ ಸಹಕಾರ ನೀಡಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿಯೋಜಿಸಿದ ನೋಡೆಲ್ ಅಧಿಕಾರಿ ವಿಠಲ್ ಅಬೂರ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ವ್ಹೀಲ್ ಚೇರ್ ನಲ್ಲಿ ಬಂದ ಗಾಯಾಳು ವಿದ್ಯಾರ್ಥಿನಿ: ವರ್ಕಾಡಿ ಸುಂಕದಕಟ್ಟೆ ಗಾಂಧಿ ನಗರ ನಿವಾಸಿ ಆಯೇಷಾ 15 ದಿನಗಳ ಹಿಂದೆ ಕಾಲಿಗೆ ಕತ್ತಿಯಿಂದ ಬಲವಾಗಿ ಏಟು ಬಿದ್ದಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ವಿದ್ಯಾರ್ಥಿನಿಯ ಮನೆಯಿಂದ ರಿಕ್ಷಾದಲ್ಲಿ ತಲಪಾಡಿ ಗಡಿ ಪ್ರದೇಶಕ್ಕೆ ಆಗಮಿಸಿದ್ದು ತಲಪಾಡಿ ತಲುಪಿದ ವಿದ್ಯಾರ್ಥಿನಿಯನ್ನು ಹಝ್ರತ್ ಸೈಯ್ಯದ್ ಮದಿನ ಕಾಲೇಜು ಪ್ರಾಂಶುಪಾಲೆ ಸಂಗೀತಾ ತಮ್ಮ ಕಾರಿನಲ್ಲೇ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವೀಲ್‍ಚೆಯರ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಮಧ್ಯಾಹ್ನ ವಾಪಾಸ್ ತಲಪಾಡಿ ಮೂಲಕ ಮನೆ ಸೇರಿದರು.
ಗಡಿ ಪ್ರದೇಶದಿಂದ ಕೇರಳ ಬಸ್: ಪರೀಕ್ಷೆ ಮುಗಿಸಿ ವಾಪಾಸಾದ ವಿದ್ಯಾರ್ಥಿಗಳಿಗೆ ತಲಪಾಡಿ ಗಡಿ ಪ್ರದೇಶದಲ್ಲಿ ಕೇರಳ ಸರಕಾರಿ ಬಸ್‍ಗಳಲ್ಲಿ ವಿದ್ಯಾರ್ಥಿಗಳ ಮನೆಗೆ ತಲುಪಲು ವ್ಯವಸ್ಥೆ ಮಾಡಿದ್ದು, ಗಡಿ ಭಾಗದಲ್ಲಿ ವಿದ್ಯಾರ್ಥಿಗಳ ಪಾಲಕರು ಯಾರು ಒಳಪ್ರವೇಶಿಸದಂತೆ ಕರ್ನಾಟಕ ಪೊಲೀಸರು ತಡೆಹಿಡಿದರು.