Advertisement

ದ್ವಿತೀಯ ಪಿಯುಸಿ ಪರೀಕ್ಷೆ; ಮೊದಲ ದಿನ ಸುಗಮ

06:36 PM Apr 22, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ ಆರಂಭವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಕೆಲವು ಸಣ್ಣ ಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಯಶಸ್ವಿಯಾಗಿ ನಡೆದಿದೆ.

Advertisement

ಉಡುಪಿಯಲ್ಲಿ ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಕಾಲೇಜಿಗೆ ಬಂದು ಪರೀಕ್ಷೆ ಬರೆಯಲು ಅವಕಾಶ ಮಾಡುವಂತೆ ಮನವಿ ಮಾಡಿದ್ದು, ಸರ್ಕಾರದ ನಿರ್ದೇಶನದ ಪ್ರಕಾರ ಹಿಜಾಬ್‌ ಮತ್ತು ಬುರ್ಕಾ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲವೆಂದು ಪ್ರಾಂಶುಪಾಲರು ಸ್ಪಷ್ಟವಾಗಿ ತಿಳಿಸಿದ್ದರಿಂದ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿಲ್ಲ. ಈ ಘಟನೆ ಹೊರತುಪಡಿಸಿ ಉಳಿದೆಡೆ ಸುಗಮವಾಗಿ ಪರೀಕ್ಷೆ ನಡೆದಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಬೆಂಗಳೂರಿನ ಕೆಲವೆಡೆ ವಿದ್ಯಾರ್ಥಿನಿಯರು ಕಾಲೇಜಿನವರೆಗೂ ಬುರ್ಕಾ ಮತ್ತು ಹಿಜಾಬ್‌ ಧರಿಸಿ ಬಂದಿದ್ದು, ನಂತರ ಕಾಲೇಜಿನ ಆವರಣ ಪ್ರವೇಶಿಸಿದ ಬಳಿಕ ಹಿಜಾಬ್‌ ಮತ್ತು ಬುರ್ಕಾ ಕಳಚಿಟ್ಟು ಪರೀಕ್ಷೆಗೆ ಹಾಜರಾಗಿದ್ದಾರೆ.
ಶುಕ್ರವಾರ ನಡೆದ ತರ್ಕಶಾಸ್ತ್ರ ವಿಷಯಕ್ಕೆ ನೋಂದಣಿ ಮಾಡಿಕೊಂಡಿದ್ದ 620 ವಿದ್ಯಾರ್ಥಿಗಳ ಪೈಕಿ 552 ಮಂದಿ ಹಾಜರಾಗಿದ್ದು, 68 ಮಂದಿ ಗೈರಾಗಿದ್ದಾರೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಸಾಕ್ಷಿ ಸಿಕ್ಕಿದೆ; ನಾಶ ಮಾಡಿಯೇ ಇಸ್ಲಾಂ ಬೆಳೆದಿರುವುದು: ಸಿ.ಟಿ.ರವಿ

ಬಿಸಿನೆಸ್‌ ಸ್ಟಡೀಸ್‌ ವಿಷಯದಲ್ಲಿ 2,38,764 ವಿದ್ಯಾರ್ಥಿಗಳ ಪೈಕಿ 11,311 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 1,303 ವಿದ್ಯಾರ್ಥಿಗಳು ಬೆಂ. ದಕ್ಷಿಣದಲ್ಲಿ 1,276, ತುಮಕೂರು 739, ಕೋಲಾರ 592, ಮೈಸೂರು 543 ಮತ್ತು ಉಡುಪಿ ಜಿಲ್ಲೆಯಲ್ಲಿ 141 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

Advertisement

ಕಳೆದ ವರ್ಷ ಬಿಸಿನೆಸ್‌ ಸ್ಟಡೀಸ್‌ ವಿಷಯದಲ್ಲಿ 7,926 ಹಾಗೂ ತರ್ಕಶಾಸ್ತ್ರದಲ್ಲಿ 38 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಪಿಯು ಇಲಾಖೆ ನಿರ್ದೇಶಕ ರಾಮಚಂದ್ರನ್‌ ಮಾಹಿತಿ ನೀಡಿದ್ದಾರೆ.

ಇನ್ನು ರಾಜ್ಯದ ಯಾವುದೇ ಪ್ರದೇಶದಲ್ಲಿ ಕೊರೊನಾ ಸೋಂಕಿತ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿರುವ ಬಗ್ಗೆ ಮತ್ತು ನಕಲು ನಡೆದಿರುವ ಬಗ್ಗೆ ಯಾವುದೇ ವರದಿಗಳಾಗಿಲ್ಲ.

ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಮಾಸ್ಕ್ ಧರಿಸಿ ಪರೀಕ್ಷೆ ಬರೆದಿದ್ದಾರೆ. ಶನಿವಾರ ಗಣಿತ ಶಾಸ್ತ್ರ ಮತ್ತು ಶಿಕ್ಷಣ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ನಾವು ನಿರೀಕ್ಷೆ ಮಾಡಿರುವುದಕ್ಕಿಂತ ಪ್ರಶ್ನೆಪತ್ರಿಕೆಯು ಸುಲಭವಾಗಿತ್ತು. ಕಳೆದ ವರ್ಷಕ್ಕಿಂತ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದರಿಂದ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ಬರೆಯಲು ಅನುಕೂಲವಾಯಿತು. ಉತ್ತಮ ಅಂಕಗಳನ್ನು ಗಳಿಸಲು ಸಹ ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next