Advertisement

ದ್ವಿತೀಯ ಪಿ.ಯು. ಪರೀಕ್ಷೆ: ಈ ಬಾರಿ ಆಯ್ಕೆಗಳು ಹೆಚ್ಚಿವೆ; ಉತ್ತರಿಸುವಾಗ ಎಚ್ಚರವೂ ಇರಲಿ

11:46 PM Apr 13, 2022 | Team Udayavani |

ಪರೀಕ್ಷಾ ಕೇಂದ್ರದಲ್ಲಿ ಪಠ್ಯದ ವಿಷಯ ಅಥವಾ ಪ್ರಶ್ನೋತ್ತರಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚೆ ಮಾಡಬೇಡಿ, ಇದರಿಂದ ನೀವು ಗೊಂದಲಕ್ಕೊಳಗಾಗಿ ನಿಮಗೆ ತಿಳಿದಿರುವ ಉತ್ತರದ ಬಗ್ಗೆ ಅನುಮಾನ ಸೃಷ್ಟಿಯಾಗಬಹುದು. ಒಂದು ಅಂಕದ ಪ್ರಶ್ನೆಗೆ ಸರಿಯಾದ ಒಂದೇ ಪದ ಬರೆದರೂ ಪೂರ್ತಿ ಅಂಕ ಸಿಗುತ್ತದೆ. ಇದರಿಂದ ಸಮಯವೂ ಉಳಿಯುತ್ತದೆ. ಈ ಬಾರಿ ಆಯ್ಕೆಗಳು ಸಾಕಷ್ಟಿವೆ. ಪ್ರಶ್ನೆಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಉತ್ತರ ಬರೆದರೆ ಪಾಸಾಗುವುದು ಕಷ್ಟಸಾಧ್ಯವೇನಲ್ಲ. ಇದು ವಿಷಯ ತಜ್ಞರು ವಿದ್ಯಾರ್ಥಿಗಳಿಗೆ ನೀಡಿರುವ ಕಿವಿಮಾತು.

Advertisement

ಮಣಿಪಾಲ: ಎ. 22ರಂದು ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ಪಠ್ಯದ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಸಂಶಯ, ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ, ಪಠ್ಯ ಕಡಿತ ಮಾಡಿರುವ ಬಗ್ಗೆ ಇರುವ ಗೊಂದಲಗಳ ಕುರಿತಂತೆ “ಉದಯವಾಣಿ” ಬುಧವಾರ ನಡೆಸಿದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಹೆತ್ತವರು ಕರೆ ಮಾಡಿ ಪರಿಹಾರ ಕಂಡುಕೊಂಡರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಮಾರುತಿ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಲ್ಪೆಯ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ವರ್ಗೀಸ್‌ ಅವರು, ವಾಣಿಜ್ಯ ವಿಷಯದ ಪ್ರಶ್ನೆಗಳಿಗೆ ಕಟಪಾಡಿ ಎಸ್‌ವಿಎಸ್‌ ಪಿಯು ಕಾಲೇಜಿನ ಪ್ರಾಂಶುಪಾಲ ಡಾ| ದಯಾನಂದ ಪೈ ಅವರು ಮತ್ತು ಕಲಾ ವಿಭಾಗದ ಪ್ರಶ್ನೆಗಳಿಗೆ ಕೊಕ್ಕರ್ಣೆ ಸರಕಾರಿ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕ ದೇವೇಂದ್ರ ಮೊಗೇರ ಅವರು ಉತ್ತರ ನೀಡಿದರು. ಜತೆಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದರು.

ಪ್ರಶ್ನೆ ಪತ್ರಿಕೆಯಲ್ಲಿರುವ ಹೆಚ್ಚುವರಿ ಪ್ರಶ್ನೆಗಳಲ್ಲಿ ಯಾವುದನ್ನು ಬರೆಯಬೇಕು ಮತ್ತು ಯಾವುದನ್ನು ಬಿಟ್ಟರೆ ಉತ್ತಮ?
-ಶ್ರದ್ಧಾ, ಮಂಗಳೂರು
ಉ: ಪ್ರಶ್ನೆ ಪತ್ರಿಕೆಯ ಪ್ರತೀ ವಿಭಾಗದಲ್ಲಿ ಸ್ಪಷ್ಟ ಸೂಚನೆ ಇರುತ್ತದೆ. ಉದಾ: ಆರು ಪ್ರಶ್ನೆಗಳಲ್ಲಿ ನಾಲ್ಕನ್ನು ಮಾತ್ರ ಬರೆಯಿರಿ ಎಂದಿದ್ದರೆ ನಾಲ್ಕನ್ನು ಮಾತ್ರ ಬರೆದರೆ ಸಾಕಾಗುತ್ತದೆ. ಆರೂ ಕಡ್ಡಾಯ ಪ್ರಶ್ನೆಗಳಾಗಿದ್ದರೆ ಎಲ್ಲದಕ್ಕೂ ಉತ್ತರ ನೀಡಬೇಕು. ಈ ವರ್ಷ ಆಯ್ಕೆ ಹೆಚ್ಚಿದೆ. ಹೀಗಾಗಿ ಸಮಯಾವಕಾಶ ಉಳಿದರೆ ಮಾತ್ರ ಹೆಚ್ಚುವರಿ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಬಹುದು. ಪ್ರಶ್ನೆ ಪತ್ರಿಕೆಯಲ್ಲಿರುವ ಎಷ್ಟು ಪ್ರಶ್ನೆಗಳನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಅದರಲ್ಲಿ ಯಾವ ಪ್ರಶ್ನೆಗೆ ಸರಿಯಾದ ಉತ್ತರ ಬರೆಯಲಾಗಿದೆಯೋ ಅದಕ್ಕೆ ಅಂಕ ಕೊಡಲಾಗುವುದು. ಆದುದರಿಂದ ವಿದ್ಯಾರ್ಥಿಗಳು ತಮಗೆ ಸರಿಯಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಬೇಕು.

ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆ ಸಂಬಂಧ ನೀಡಿರುವ ಬ್ಲೂಪ್ರಿಂಟ್‌ ಅನುಸರಿಸಿ, ತಯಾರಿ ನಡೆಸಿದರೆ ಹೆಚ್ಚು ಅಂಕ ಗಳಿಸಬಹುದೆ?
-ಶಶಾಂಕ್‌, ಮೂಲ್ಕಿ, ಗಣೇಶ್‌ ಕುಂದಾಪುರ, ವಿಮಲಾ ಕಾರ್ಕಳ
ಉ: ಬ್ಲೂ ಪ್ರಿಂಟ್‌ ಅನ್ನು ಅನುಸರಿಸಿದರೆ ಈ ಬಾರಿ ಖಂಡಿತವಾಗಿಯೂ ಉತ್ತಮ ಅಂಕ ಪಡೆಯಬಹುದು. ಆದರೆ ಬ್ಲೂಪ್ರಿಂಟ್‌ನಲ್ಲಿ ಇರುವ ಪ್ರಶ್ನೆಗಳೇ ಬರುತ್ತವೆ ಎಂದು ಹೇಳಾಗದು. ಪ್ರಶ್ನೆ ಪತ್ರಿಕೆಯನ್ನು ಬ್ಲೂ ಪ್ರಿಂಟ್‌ ಆಧಾರದಲ್ಲಿಯೇ ರಚಿಸಲಾಗುತ್ತದೆ.

ಪಿಯುಸಿಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಸರಿಯೇ? ಪ್ರಶ್ನೆಗಳ ಆಯ್ಕೆ ಜಾಸ್ತಿ ಇರುವುದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಆಗುವುದಿಲ್ಲವೆ?
-ಹಮೀದ್‌, ವಿಟ್ಲ ಹಾಗೂ ರವಿ, ಬೆಳ್ತಂಗಡಿ
ಉ: ಈ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ಆಗಿಲ್ಲ. ಆದೇಶವೂ ಬಂದಿಲ್ಲ. ಕೊರೊನಾ ಸಹಿತವಾಗಿ ವಿವಿಧ ಕಾರಣದಿಂದ ವಿದ್ಯಾರ್ಥಿಗಳಿಗೆ ಈ ವರ್ಷ ಹೆಚ್ಚು ಆಯ್ಕೆ ನೀಡಲಾಗಿದೆ. ಇದರಲ್ಲಿ ಅನುಕೂಲ-ಅನನುಕೂಲ ಎರಡೂ ಇದೆ. ಆದರೆ ಎಲ್ಲ ಸಾಧಕ-ಬಾಧಕ ನೋಡಿ ಸರಕಾರ ನಿರ್ಧಾರ ತೆಗೆದುಕೊಂಡಿದೆ.

Advertisement

ಫಾರ್ಮುಲಾ, ವ್ಯಾಕರಣ, ಬರವಣಿಗೆಯಲ್ಲಿ ಭಾಷಾ ಆಯ್ಕೆ, ಗ್ರೇಸ್‌ ಮಾರ್ಕ್ಸ್ ಬಗ್ಗೆ ತಿಳಿಸುವಿರಾ?
– ಐಕಳ ಕೃಷ್ಣಾನಂದ ಶೆಟ್ಟಿ
ಉ: ಫಾರ್ಮುಲಾ ಎಲ್ಲ ಕಡೆಯೂ ಇರುವುದಿಲ್ಲ. ಫಾರ್ಮುಲಾ ಸರಿ ಇದ್ದರೆ ಅಂಕ ಕೊಡಲಾಗುತ್ತದೆ. ಗಣಿತಶಾಸ್ತ್ರದಲ್ಲಿ ವ್ಯಾಕರಣ ಇರುವುದಿಲ್ಲ. ಆದರೆ ಅಕ್ಷರ ದೋಷಕ್ಕೆ ಅಂಕ ಕಡಿತಗೊಳಿಸುವುದು ಬಹಳ ಕಡಿಮೆ. ಪ್ರಶ್ನೆಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಯನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ಉತ್ತರ ಬರೆಯಬೇಕು. ಇಲ್ಲಿ ಯಾವುದೇ ಗ್ರೇಸ್‌ ಮಾರ್ಕ್ಸ್ ಇರುವುದಿಲ್ಲ. ಆದುದರಿಂದ ವಿದ್ಯಾರ್ಥಿಗಳು ಬರೆದಿರುವ ಉತ್ತರಕ್ಕೆ ಮೌಲ್ಯಮಾಪಕರು ಸಮರ್ಪಕವಾಗಿ ನ್ಯಾಯಯುತವಾದ ಅಂಕವನ್ನು ಕೊಟ್ಟೇ ಕೊಡುತ್ತಾರೆ. ಕೊರೊನಾ ಬಂದ ನೆಲೆಯಲ್ಲಿ ವಿಷಯವಾರು ಪ್ರಶ್ನೆಗಳನ್ನು ಜಾಸ್ತಿ ಕೊಡಲಾಗಿದೆ. ಉದಾ: 12 ಪ್ರಶ್ನೆಗಳಲ್ಲಿ ವಿದ್ಯಾರ್ಥಿಯು ಎಂಟು ಪ್ರಶ್ನೆಗೆ ಮಾತ್ರ ಉತ್ತರಿಸಿದರೆ ಸಾಕು. ಉತ್ತರ ಬರೆಯಲು ಸಾಕಷ್ಟು ಸಮಯಾವಕಾಶವನ್ನೂ ಕೊಡಲಾಗಿದೆ. ಆದುದರಿಂದ ಲಭ್ಯವಿರುವ ಸಮಯಾವಕಾಶದಲ್ಲಿ ಸಂಯಮದಿಂದ ಉತ್ತರಿಸಿ ಹೆಚ್ಚು ಅಂಕ ಗಳಿಸಬಹುದು.

ಮೌಲ್ಯಮಾಪನದಲ್ಲಿ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸುವುದಕ್ಕೆ ಸಾಧ್ಯವೇ?
-ನಿತೀಶ್‌ ಪುತ್ತೂರು, ಶಿವರಾಮ ಉಡುಪಿ
ಉ: ಫ‌ಲಿತಾಂಶದ ಅನಂತರ ಮೌಲ್ಯಮಾಪನದಲ್ಲಿ ದೋಷ ಆಗಿರುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂಶಯ ಬಂದರೆ, ಆ ವಿದ್ಯಾರ್ಥಿ ನಿರ್ದಿಷ್ಟ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಲೋಷ ಇರುವುದು ಸಾಬೀತಾದಲ್ಲಿ ಶುಲ್ಕ ವಾಪಸ್‌ ನೀಡ ಲಾಗುತ್ತದೆ. ಮೌಲ್ಯಮಾಪಕರು ಸಮರ್ಪಕವಾಗಿಯೇ ಮೌಲ್ಯಮಾಪನ ಮಾಡುತ್ತಾರೆ. ಆದರೆ ಕೆಲವೊಮ್ಮೆ ಕಣ್ತಪ್ಪಿನಿಂದ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ದೋಷವಿಲ್ಲದೇ ಮೌಲ್ಯಮಾಪನ ನಡೆಸಲು ಹಲವು ಕ್ರಮ ಆಗುತ್ತಿದೆ.

ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿ ಗಳು, ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇದೆಯೇ?
-ಉಮೇಶ್‌ ಹೆಮ್ಮಾಡಿ
ಉ: ಹಾಜರಾತಿ ಕಾರಣದಿಂದ ಪ್ರಾಯೋಗಿಕ ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಪ್ರಾಯೋಗಿಕ ಪರೀಕ್ಷೆಗೆ ಪ್ರತ್ಯೇಕ ಅಂಕ ಹಾಗೂ ಥಿಯರಿಗೆ ಪ್ರತ್ಯೇಕ ಅಂಕ ಇರುತ್ತದೆ. ಇವೆರಡು ಅಂಕಗಳನ್ನು ಕ್ರೋಡೀಕರಿಸಿಯೇ ಫ‌ಲಿತಾಂಶ ಪ್ರಕಟಿಲಾಗುತ್ತದೆ.

ಬಿಸಿನೆಸ್‌ ಸ್ಟಡೀಸ್‌ನಲ್ಲಿ 2 ಮತ್ತು 8 ಅಂಕದ ಪ್ರಶ್ನೆಗೆ ಉತ್ತರ ಬರೆಯೋದು ಹೇಗೆ?
– ಅನನ್ಯಾ ಮಂಗಳೂರು
ಉ: ಎರಡು ಅಂಕದ ಪ್ರಶ್ನೆಗಳಿಗೆ ಎರಡೇ ವಾಕ್ಯದಲ್ಲಿ ಉತ್ತರ ಬರೆಯಬೇಕಾಗುತ್ತದೆ. 8 ಅಂಕದ ಪ್ರಶ್ನೆಗೆ ಹೆಚ್ಚು ಬರೆಯಬೇಕಾಗುತ್ತದೆ. ಪ್ರಶ್ನೆ ಯಾವುದು ಮತ್ತು ಹೇಗೆ ಕೇಳಿದ್ದಾರೆ ಎಂಬುದರ ಆಧಾರದಲ್ಲಿ ಉತ್ತರಿಸಬೇಕಾಗುತ್ತದೆ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ, ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಬ್ಲೂಪ್ರಿಂಟ್‌ ಆಧಾರವಾಗಿಟ್ಟುಕೊಂಡು ತಯಾರಿ ಮಾಡಬೇಕು.

ಈ ಬಾರಿ ಪರೀಕ್ಷೆಯಲ್ಲಿ ಮಾಸ್ಕ್ ಕಡ್ಡಾಯವೇ ?
– ರಾಘವೇಂದ್ರ, ಮೂಡುಬಿದಿರೆ
ಉ: ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು ಎಂಬ ಆದೇಶ ಇನ್ನು ಬಂದಿಲ್ಲ. ಆದರೆ ಕೊರೊನಾ ನಿಯಮಾನುಸಾರ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದಲ್ಲೇ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಧರಿಸಿ ಬಂದರೆ ಉತ್ತಮ.

ಹೆಚ್ಚೆಚ್ಚು ಅಂಕ ನೀಡುವುದರಿಂದ ವಿದ್ಯಾರ್ಥಿ ಗಳಿಗೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಮಸ್ಯೆ ಆಗುವುದಿಲ್ಲವೇ?
-ಸೂರಜ್‌ ಮೂಲ್ಕಿ, ಕಿರಣ್‌ ನಿಟ್ಟೆ
ಉ: ಎಸೆಸೆಲ್ಸಿ, ಪಿಯುಸಿಯಲ್ಲಿ ಸುಲಭವಾಗಿ ಅಂಕ ಸಿಗುತ್ತದೆ ಎಂಬ ಮಾನಸಿಕತೆಯಲ್ಲಿ ವಿದ್ಯಾರ್ಥಿಗಳು ಇರಬಾರದು. ಉತ್ತಮ ಅಂಕ ಬಂದ ಕೂಡಲೇ ಅಧ್ಯಯನ ಮಾಡುವುದನ್ನು ಕಡಿಮೆ ಮಾಡಬಾರದು. ಎಲ್ಲರೂ ಪಾಸಾಗಬೇಕು ಎಂಬ ಕಾರಣಕ್ಕೆ ಕೆಲವೊಂದು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳ ಹೆತ್ತವರು ಎಚ್ಚರ ವಹಿಸಬೇಕು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದು. ಅಂಕಗಳು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉತ್ಸಾಹ, ಪ್ರೇರಣೆಯಾಗಿರಬೇಕು. ಅಂಕ ಪಡೆದುಕೊಳ್ಳುವುದು ಅಹಂ ಆಗಬಾರದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೆತ್ತವರು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು.

ತಜ್ಞರ ಸಲಹೆಗಳು
01. ಪರೀಕ್ಷಾ ಭಯದಿಂದ ದೂರವಿರಲು ಪರೀಕ್ಷೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಏನೇ ಡೌಟ್ಸ್‌ ಇದ್ದರೂ ನಿಮ್ಮ ಉಪನ್ಯಾಸಕರಲ್ಲಿ ಕೇಳಿ, ಬಗೆಹರಿಸಿಕೊಳ್ಳಬೇಕು.
02. ಈ ಬಾರಿ ಪ್ರತೀ ವಿಷಯದಲ್ಲಿ ಪ್ರಶ್ನೆಗಳ ಆಯ್ಕೆ ಹೆಚ್ಚಿದೆ. ಹಿಂದಿನ ವರ್ಷಗಳಲ್ಲಿ ಒಂದು ಅಂಕದ ಪ್ರಶ್ನೆಗೆ ಆಯ್ಕೆ (ಚಾಯ್ಸ) ಇರಲಿಲ್ಲ. ಈ ವರ್ಷ ಅದಕ್ಕೂ ಚಾಯ್ಸ ನೀಡಲಾಗುತ್ತದೆ. ಪ್ರತೀ ವಿಭಾಗದಲ್ಲೂ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆಯ್ಕೆಯೂ ಹೆಚ್ಚಾಗಲಿದೆ. ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ಪ್ರತ್ಯೇಕ ಕಾಲಾವಕಾಶ ಇರುತ್ತದೆ. ಆ ಸಂದರ್ಭದಲ್ಲಿ ಪ್ರಶ್ನೆ ಓದುತ್ತಿರುವಾಗಲೇ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಟಿಕ್‌ ಮಾಡಿಕೊಳ್ಳಬೇಕು. ಆಗ ಬರೆಯಲು ಸುಲಭವಾಗುತ್ತದೆ.
03. ಭಾಷಾ ವಿಷಯಕ್ಕೆ ಮಾತ್ರ ಶೇ.30ರಷ್ಟು ಪಠ್ಯ ಕಡಿತ ಮಾಡಲಾಗಿದೆ. ಬೇರೆ ಯಾವುದೇ ವಿಷಯದಲ್ಲೂ ಪಠ್ಯ ಕಡಿತ ಮಾಡಿಲ್ಲ. ಹೀಗಾಗಿ ಕೋರ್‌ ವಿಷಯದ ಎಲ್ಲ ಪಾಠವನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಾಗುತ್ತದೆ.
04. ಪಿಯು ಇಲಾಖೆ ನೀಡಿರುವ ಬ್ಲೂಪ್ರಿಂಟ್‌ ಕೇವಲ ಮಾರ್ಗದರ್ಶಿಯಷ್ಟೆ. ಅದರಲ್ಲಿ ಇರುವ ಅಂಶಗಳೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಹಿಂದಿನ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯ ಜತೆಗೆ ಬ್ಲೂಪ್ರಿಂಟ್‌ನ ಆಧಾರದಲ್ಲಿ ಅಧ್ಯಯನ ನಡೆಸಬೇಕು.
05. ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಎಷ್ಟು ಕೇಳಿದ್ದಾರೋ ಅಷ್ಟೇ ಬರೆಯಬೇಕು. ಒಂದೇ ವಾಕ್ಯದಲ್ಲಿ ಉತ್ತರಿಸಬೇಕು. ಎರಡು ಮೂರು ವಾಕ್ಯ ಎಂದಿದ್ದರೆ ಎರಡು ಮೂರು ವಾಕ್ಯದಲ್ಲೇ ಬರೆಯಬೇಕು.

ಕಲಾ, ವಾಣಿಜ್ಯ ವಿಭಾಗವೆಂಬ ತಾತ್ಸಾರ ಬೇಡ
ವಿಜ್ಞಾನ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಎಂಜಿನಿಯರಿಂಗ್‌, ವೈದ್ಯಕೀಯ ಮೊದಲಾದ ಕೋರ್ಸ್‌ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಅವಕಾಶ ಕಡಿಮೆ ಎಂಬ ಮಾನಸಿಕತೆಯಿದೆ. ಇದರಿಂದ ಹೊರಬೇಕು. ಆಯ್ಕೆ ಮಾಡಿಕೊಂಡಿರುವ ಕಾಂಬಿನೇಶನ್‌ನಲ್ಲಿ ಶ್ರದ್ಧೆಯಿಂದ ಓದಿ, ಉತ್ತಮ ಅಂಕ ಪಡೆದು ಪಾಸಾದರೆ ಖಂಡಿತ ಅವಕಾಶಗಳು ಇದ್ದೇ ಇರುತ್ತದೆ. ಕಲೆ ಮತ್ತು ವಾಣಿಜ್ಯ ವಿಭಾಗದ ಮಕ್ಕಳು ದಡ್ಡರು ಎಂಬ ಭ್ರಮೆ ದೂರ ಮಾಡಬೇಕು.
ದೇವೇಂದ್ರ ಮೊಗೇರ, ಹಿರಿಯ ಉಪನ್ಯಾಸಕರು

ಪರೀಕ್ಷಾ ಕೇಂದ್ರದಲ್ಲಿ ಚರ್ಚೆ ಬೇಡ
ಪರೀಕ್ಷೆ ಹತ್ತಿರ ಬರುವ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ, ಭಯ ಇರುವುದು ಸಹಜ. ಹೆತ್ತವರು ಈ ಸಂದರ್ಭದಲ್ಲಿ ಮಕ್ಕಳಲ್ಲಿ ಹೆಚ್ಚೆಚ್ಚು ಪ್ರೋತ್ಸಾಹಕ ಅಂಶಗಳನ್ನೇ ತುಂಬಬೇಕು. ಯಾವುದೇ ಸಮಸ್ಯೆಯಿದ್ದರೂ ಉಪನ್ಯಾಸಕರೊಂದಿಗೆ ಹಂಚಿಕೊಂಡು ಬಗೆಹರಿಸಿಕೊಳ್ಳಬೇಕು. ಪರೀಕ್ಷೆ ಆರಂಭವಾಗುವ ಮೊದಲು ಪರೀಕ್ಷಾ ಕೇಂದ್ರದ ಆವರಣದಲ್ಲಿ ಪರೀಕ್ಷಾ ವಿಷಯದ ಕುರಿತು ಸ್ನೇಹಿತರೊಂದಿಗೆ ಚರ್ಚೆ ಮಾಡಬಾರದು. ಯಾವುದಾದರೂ ಪ್ರಶ್ನೆಗೆ ಉತ್ತರದ ಬಗ್ಗೆ ನಿಮಗೆ ತಿಳಿದಿಲ್ಲವಾದರೇ ಆತಂಕ ಹೆಚ್ಚುತ್ತದೆ. ಅಲ್ಲದೆ ಚರ್ಚೆಯ ಸಂದರ್ಭದಲ್ಲಿ ಉತ್ತರ ಬೇರೆಯಾದರೆ ಅದನ್ನೇ ಪರೀಕ್ಷೆಯಲ್ಲಿ ಬರೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ವಿಷಯದ ಚರ್ಚೆಗೆ ಇಳಿಯಬಾರದು. ಎಲ್ಲ ಚಿಂತೆಗಳನ್ನು ಬಿಟ್ಟು ಪ್ರಶ್ನೆಯನ್ನು ಸರಿಯಾಗಿ ಅರ್ಥೈಸಿಕೊಂಡು ಉತ್ತರ ಬರೆಯಬೇಕು.
-ವರ್ಗೀಸ್‌, ಪ್ರಾಂಶುಪಾಲ

ಸಮಯ ಪಾಲನೆ ಮುಖ್ಯ
ಪರೀಕ್ಷೆ ಬರೆಯುವಾಗ ಸಮಯ ಪಾಲನೆ ಅತೀ ಮುಖ್ಯವಾಗುತ್ತದೆ. ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಬೇಕು. ಒಂದು ಅಂಕ, ಎರಡು ಅಂಕ, ಐದು ಅಂಕ, 8 ಅಂಕ ಹೀಗೆ ಪ್ರಶ್ನೆಗಳು ಯಾವ ರೀತಿ ಇರುತ್ತದೆಯೋ ಅದಕ್ಕೆ ಸರಿಯಾಗಿ ನಿಮಗೆ ಗೊತ್ತಿರುವ ಉತ್ತವನ್ನು ಬರೆದು ಬಿಡಬೇಕು. ಏಕಾಗ್ರತೆ ಪಾಲಿಸಿ ಮುಕ್ತವಾಗಿ ಪರೀಕ್ಷೆ ಬರೆದರೆ ಉತ್ತಮ ಅಂಕ ಸಿಗುತ್ತದೆ.
-ಡಾ| ದಯಾನಂದ ಪೈ, ಪ್ರಾಂಶುಪಾಲ

ವಿದ್ಯಾರ್ಥಿಗಳು ಆಡಳಿತಾತ್ಮಕ ವಿಷಯವಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯಲು ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಶ್ರದ್ಧೆಯಿಂದ ಓದಿ, ಉತ್ತಮವಾಗಿ ಬರೆದು ಚೆನ್ನಾಗಿ ಅಂಕಗಳಿಸಿ.
– ಮಾರುತಿ, ಡಿಡಿಪಿಯು

Advertisement

Udayavani is now on Telegram. Click here to join our channel and stay updated with the latest news.

Next