ನಾರ್ತ್ ಸೌಂಡ್: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ಆತಿಥೇಯ ಇಂಗ್ಲೆಂಡ್ ತಂಡವು ವೆಸ್ಟ್‌ಇಂಡೀಸ್ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಜಯ ಸಾಧಿಸಿದೆ.
ಈ ಗೆಲುವಿನಿಂದ ಮೂರು ಪಂದ್ಯಗಳ ಸರಣಿ 1-1 ಸಮಬಲದಲ್ಲಿ ನಿಂತಿದೆ. ಸರಣಿ ನಿರ್ಣಾಯಕ ಪಂದ್ಯ ಬ್ರಿಡ್ಜ್ಟೌನ್‌ನಲ್ಲಿ ಡಿ. 9ರಂದು ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ಜಯ ಸಾಧಿಸಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್‌ಇಂಡೀಸ್ ತಂಡವು ಶೈ ಹೋಪ್ ಮತ್ತು ಶೆರ್ಫಾನೆ ರುದರ್‌ಫೋರ್ಡ್ ಅವರ ಅರ್ಧಶತಕದ ನೆರವಿನಿಂದ 39.4 ಓವರ್‌ಗಳಲ್ಲಿ 202 ರನ್ನಿಗೆ ಆಲೌಟಾಯಿತು. ಹೋಪ್ 68 ಮತ್ತು ರುದರ್‌ಫೋರ್ಡ್ 63 ರನ್ ಹೊಡೆದರು. ಬಿಗು ದಾಳಿ ಸಂಘಟಿಸಿದ ಸ್ಯಾಮ್ ಕರನ್ ಮತ್ತು ಲಿಯಮ್ ಲಿವಿಂಗ್‌ಸ್ಟೋನ್ ತಲಾ ಮೂರು ವಿಕೆಟ್ ಉರುಳಿಸಿದರು.
ಗೆಲ್ಲಲು ಸುಲಭ ಸವಾಲು ಪಡೆದ ಇಂಗ್ಲೆಂಡ್ ತಂಡವು ವಿಲ್ ಜ್ಯಾಕ್ಸ್, ಹ್ಯಾರಿ ಬ್ರೂಕ್ ಮತ್ತು ಜೋಸ್ ಬಟ್ಲರ್ ಅವರ ಉತ್ತಮ ಆಟದಿಂದಾಗಿ 32.5 ಓವರ್‌ಗಳಲ್ಲಿ ಆರು ವಿಕೆಟಿಗೆ 206 ರನ್ ಗಳಿಸಿ ಜಯಭೇರಿ ಬಾರಿಸಿತು. ಜ್ಯಾಕ್ಸ್ 73 ರನ್ ಗಳಿಸಿದರೆ ಬ್ರೂಕ್ 43 ಮತ್ತು ಬಟ್ಲರ್ 58 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 90 ರನ್ ಪೇರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್ 39.4 ಓವರ್‌ಗಳಲ್ಲಿ 202 (ಹೋಪ್ 68, ರುದರ್‌ಫೋರ್ಡ್ 63, ಕರನ್ 33ಕ್ಕೆ 3, ಲಿವಿಂಗ್‌ಸ್ಟೋನ್ 39ಕ್ಕೆ 3), ಇಂಗ್ಲೆಂಡ್ 32.5 ಓವರ್‌ಗಳಲ್ಲಿ 206 (ಜ್ಯಾಕ್ಸ್ 73, ಬ್ರೂಕ್ 43 ಔಟಾಗದೆ, ಬಟ್ಲರ್ 58 ಔಟಾಗದೆ).