Advertisement

ನಗರದಲ್ಲಿ ಎರಡನೇ ದಿನವೂ ವಿಲೇವಾರಿಯಾಗದ ತ್ಯಾಜ್ಯ

10:15 AM Jun 16, 2018 | |

ಮಹಾನಗರ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ. ನಗರದ ಬಹುತೇಕ ಕಡೆ ಕಸದ ರಾಶಿ ಕಂಡುಬಂದಿದ್ದು, ವಿಲೇವಾರಿಯು ದೊಡ್ಡ ಸಮಸ್ಯೆಯಾಗಿ ಪರಿಸ್ಥಿತಿ ಕೂಡ ಬಿಗಡಾಯಿಸುವ ಹಂತಕ್ಕೆ ತಲುಪಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ
ಅಲ್ಲಲ್ಲಿ ರಾಶಿ ಬಿದ್ದಿರುವ ಕಸ ಈಗ ಕೊಳೆತು ಗಬ್ಬುನಾತ ಬೀರುತ್ತಿದೆ. 

Advertisement

ಗುತ್ತಿಗೆದಾರರ ಜತೆ ತುರ್ತು ಸಭೆ
ಮತ್ತೂಂದೆಡೆ ಪಾಲಿಕೆಯ ಆಡಳಿತ ಮಂಡಳಿ ಕಸ ವಿಲೇವಾರಿಯಾಗದೆ ತೊಂದರೆ ಆಗುವುದನ್ನು ತಪ್ಪಿಸಲು ಈ ಹಿಂದೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಗುತ್ತಿಗೆದಾರರ ಜತೆ ತುರ್ತು ಸಭೆ ನಡೆಸಿ ಶುಕ್ರವಾರವೇ ನಗರದೆಲ್ಲೆಡೆ ರಾಶಿ ಬಿದ್ದಿರುವ ಕಸವನ್ನು ವಿಲೇವಾರಿ ಮಾಡಲು ಸೂಚನೆ ನೀಡಿದೆ. ಆದರೆ, ಈಗಾಗಲೇ ಎರಡು ದಿನಗಳಿಂದ ನಗರದ ಕಸ ವಿಲೇವಾರಿಯಾಗದೆ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈಗ ತ್ಯಾಜ್ಯ ವಿಲೇವಾರಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಮೂಲಕ ನಗರದ ಸ್ವಚ್ಛತೆ-ನೈರ್ಮಲ್ಯ ಕಾಪಾಡುವುದು ಕೂಡ ಪಾಲಿಕೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಈ ಬಗ್ಗೆ ನಮ್ಮ ‘ಸುದಿನ’ ತಂಡವು ನಗರದೆಲ್ಲೆಡೆ ಪರಿಶೀಲಿಸಿದಾಗ ಸೆಂಟ್ರಲ್‌ ಮಾರ್ಕೆಟ್‌, ಮೀನು ಮಾರುಕಟ್ಟೆ, ಸ್ಟೇಟ್‌ಬ್ಯಾಂಕ್‌, ಬಂದರು ಪ್ರದೇಶ ಸೇರಿದಂತೆ ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್‌ ಪ್ರಮಾಣದ ಕಸ ರಾಶಿ ಬಿದ್ದಿರುವುದು ಕಂಡುಬಂದಿದ್ದು, ಶುಕ್ರವಾರ ಸಂಜೆಯವರೆಗೂ ಇದು ವಿಲೇವಾರಿಯಾಗಿರಲಿಲ್ಲ.

ಈ ನಡುವೆ, ಆ್ಯಂಟನಿ ಸಂಸ್ಥೆಯ ಕೆಲವು ಪೌರ ಕಾರ್ಮಿಕರು ಶುಕ್ರವಾರ ಮಧ್ಯಾಹ್ನದ ಅನಂತರ ಸುರತ್ಕಲ್‌, ಪಡೀಲ್‌ ಸೇರಿದಂತೆ ನಗರದ ಸುಮಾರು ಹತ್ತು ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಕಾರ್ಯ ಆರಂಭಿಸಿರುವುದಾಗಿ ಪಾಲಿಕೆ ಮೂಲಗಳು ಹೇಳಿವೆ. ಕಸ ವಿಲೇವಾರಿಯ ಗುತ್ತಿಗೆ ವಹಿಸಿಕೊಂಡ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ ಮೆಂಟ್‌ ಸಂಸ್ಥೆಯ ಆಡಳಿತ ನಿರ್ದೇಶಕರು ಶುಕ್ರವಾರ ಕಾರ್ಮಿಕರೊಂದಿಗೆ ವೀಡಿಯೋ ಕಾಲಿಂಗ್‌ ಮೂಲಕ ಸಂಭಾಷಣೆ ನಡೆಸಿದ್ದು, ಜೂ. 16ರಂದು ಅಪರಾಹ್ನ 3ಕ್ಕೆ ಕಾರ್ಮಿಕ ಮುಂದಾಳುಗಳೊಂದಿಗೆ ಮಾತುಕತೆ ನಡೆಸಿ ಸಭೆ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಆಡಳಿತ ನಿರ್ದೇಶಕರಿಂದ ಸಕಾರಾತ್ಮಕ ಭರವಸೆ ಸಿಕ್ಕಲ್ಲಿ ಕಾರ್ಮಿಕರು ಮತ್ತೆ ತಮ್ಮ ಕೆಲಸಕ್ಕೆ ಮರಳಲಿದ್ದಾರೆ.

ಬೇಸಗೆಯಲ್ಲಿ ಕಸ ವಿಲೇವಾರಿ ಮಾಡದಿದ್ದರೆ ಸಮಸ್ಯೆ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ. ಅಂದರೆ ಬಿಸಿಲಿಗೆ ಕಸ ಒಣಗಿದಾಗ ತೊಂದರೆ ದೂರವಾಗುತ್ತದೆ. ಆದರೆ ಈಗ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಕಸ ದುರ್ನಾತ ಬೀರುವುದಲ್ಲದೆ ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ. 

Advertisement

ನಗರದ ಪ್ರಮುಖ ವಾಣಿಜ್ಯಪ್ರದೇಶವಾಗಿರುವ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಪ್ರದೇಶದಲ್ಲಿ ಕಸ ವಿಲೇವಾರಿಯಾಗದೆ ದೊಡ್ಡ ಪ್ರಮಾಣದ ರಾಶಿ ಕಂಡುಬಂದಿದೆ. ಹಣ್ಣು ತರಕಾರಿಗಳ ತ್ಯಾಜ್ಯಗಳು ಸೇರಿದಂತೆ ಇತರ ಅವಶೇಷಗಳು ರಾಶಿ ಬಿದ್ದು, ಪರಿಸರವೆಲ್ಲ ದುರ್ನಾತ ಬೀರುತ್ತಿದೆ. ಜತೆಗೆ ನೊಣಗಳು ಹಾರಾಡುತ್ತಿವೆ. ಕಸ ವಿಲೇವಾರಿಯಾಗದೆ ಇರುವ ಕುರಿತು ಸ್ಥಳೀಯ ವರ್ತಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದುರ್ನಾತದಿಂದ ಕುಳಿತುಕೊಳ್ಳಲಾಗದ ಸ್ಥಿತಿ ಇದೆ. ಜತೆಗೆ ಕಸ ರಾಶಿಯನ್ನು ತೋರಿಸಿ ಇದು ನಮ್ಮ ಸ್ವಚ್ಛ ಮಂಗಳೂರು ಎಂದು ವ್ಯಂಗ್ಯವಾಡುತ್ತಿದ್ದಾರೆ.

ಶುಕ್ರವಾರ ಕಸ ಸಂಗ್ರಹ ಮಾಡುವ ಸಿಬಂದಿ ನಗರದ ಕೂಳೂರಿನಲ್ಲಿರುವ ಯಾರ್ಡ್‌ನಲ್ಲಿ ಸೇರಿದ್ದು, ಪಾಲಿಕೆಯ ಆರೋಗ್ಯಾಧಿಕಾರಿ ಹಾಗೂ ಪರಿಸರ ಎಂಜಿನಿಯರ್‌ ಅವರು ಸಿಬಂದಿ ಜತೆ ಮಾತುಕತೆ ನಡೆಸಿದ್ದಾರೆ. ಆದರೆ ಅವರ ಮನವಿಗೂ ಸಿಬಂದಿ ಜಗ್ಗಿಲ್ಲ. ನಮ್ಮ ಸಂಸ್ಥೆಯ ಎಂಡಿ ಅವರು ತಿಂಗಳಿಗೊಮ್ಮೆ ಮಂಗಳೂರಿಗೆ ಬಂದು ಮೀಟಿಂಗ್‌ ನಡೆಸಿ ಹೋಗುತ್ತಾರೆ. ಆದರೆ ಅವರು ನಮಗೆ ಮಾತಿಗೆ ಸಿಗುವುದಿಲ್ಲ. ಹೀಗಾಗಿ ಅವರೇ ಬಂದು ನಮ್ಮ ಬಳಿ ಮಾತನಾಡಬೇಕು ಎಂದು ಪಟ್ಟು ಹಿಡಿದಿದ್ದೇವೆ. ಈ ಹಿಂದೆ ನಾವು ನಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೂಳೂರು ಯಾರ್ಡ್‌ನಿಂದ ಕಾರ್ಮಿಕರ ಕಚೇರಿ, ಅಲ್ಲಿಂದ ಪಾಲಿಕೆಗೆ ಪಾದಯಾತ್ರೆ ಪ್ರತಿಭಟನೆ ನಡೆಸಿದ್ದೆವು. ಆ ಸಂದರ್ಭ ಮುಂದೆ ಪಾಲಿಕೆಯಿಂದ ನೇರವಾಗಿ ಕಾರ್ಮಿಕರ ಖಾತೆಗೆ ವೇತನ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅದು ಈತನಕ ಈಡೇರಿಲ್ಲ. ಜತೆಗೆ ವೇತನ ಏರಿಕೆ ಮಾಡದೆ ನಾಲ್ಕು ವರ್ಷಗಳೇ ಕಳೆದಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಭರ್ತಿ ಸಂಬಳ ಬಂದಿದೆ
ಜೂ. 14ರಂದು ಕಾರ್ಮಿಕರು ಮೇ ತಿಂಗಳ ವೇತನ ಸಿಕ್ಕಿಲ್ಲ ಎಂದು ಕಸ ಸಂಗ್ರಹ ಮಾಡದೆ ಪ್ರತಿಭಟನೆ ಆರಂಭಿಸಿದ್ದು, ಶುಕ್ರವಾರ ಕಾರ್ಮಿಕರಿಗೆ ವೇತನ ಲಭಿಸಿದೆ. ಪ್ರತಿ ತಿಂಗಳ ವೇತನದಲ್ಲಿ ಸ್ವಲ್ಪ ಪ್ರಮಾಣದ ಮೊತ್ತ ಕಡಿತಗೊಂಡರೆ ಈ ಬಾರಿ ಪ್ರತಿಯೊಬ್ಬ ಸಿಬಂದಿಯೂ ಪೂರ್ತಿ ವೇತನ ಲಭಿಸಿದೆ. ಜತೆಗೆ ಪ್ರತಿಭಟನೆ ಮಾಡಿದ ಸಂದರ್ಭ ಪ್ರತಿಬಾರಿಯೂ ಪೂರ್ತಿ ವೇತನ ಲಭಿಸುತ್ತದೆ ಎಂದು ಕಾರ್ಮಿಕರು ತಿಳಿಸಿದ್ದಾರೆ. 

ಕಪ್ಪು ತೊಟ್ಟೆಯ ಕಟ್ಟು
ಕಸ ವಿಲೇವಾರಿಯ ಕಾರ್ಮಿಕರು ಗುರುವಾರ ಹಾಗೂ ಶುಕ್ರವಾರ ಕಸ ಸಂಗ್ರಹ ಮಾಡದೇ ಇರುವುದರಿಂದ ನಗರದ ಅಂಗಡಿ-ಮುಂಗಟ್ಟು, ಮನೆ, ಅಪಾರ್ಟ್‌ಮೆಂಟ್‌ಗಳ ಮುಂದೆ, ರಸ್ತೆ ಬದಿ, ಮಾಲ್‌ ಹೀಗೆ ಎಲ್ಲ ಕಡೆಯೂ ತ್ಯಾಜ್ಯದ ಕಪ್ಪು ಬಣ್ಣದ ಪ್ಲಾಸ್ಟಿಕ್‌ ಕಟ್ಟುಗಳು ಕಂಡುಬಂದಿವೆ. ಮನೆಯ ಮುಂದೆ ಪ್ಲಾಸ್ಟಿಕ್‌ನಲ್ಲಿ ಕಸ ಕಟ್ಟಿದ್ದರೆ, ಹೊಟೇಲ್‌, ಇತರ ದೊಡ್ಡ ಅಂಗಡಿಗಳ ಮುಂದೆ ದೊಡ್ಡ ಪ್ರಮಾಣದಲ್ಲಿ ಕಸ ರಾಶಿ ಬಿದ್ದಿವೆ.  

600 ಸಿಬಂದಿ; 125 ಗಾಡಿಗಳು!
ನಗರದ ಕಸ ವಿಲೇವಾರಿ ಕಾರ್ಯದಲ್ಲಿ ಸುಮಾರು 600 ಸಿಬಂದಿ ದುಡಿಯುತ್ತಿದ್ದು, 125 ಕಸ ಸಂಗ್ರಹ ವಾಹನಗಳಿವೆ. ಪ್ರತಿ ವಾಹನಗಳು ಕೂಡ ದಿನವೊಂದಕ್ಕೆ 4 ಟ್ರಿಪ್‌ಗ್ಳನ್ನು ನಡೆಸುತ್ತವೆ. ಆದರೆ ಈ ವಾಹನಗಳು 2 ದಿನಗಳಿಂದ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಇದು ಹೀಗೆ ಮುಂದುವರಿದರೆ ನಗರದ ಕಸದ ಸಮಸ್ಯೆಯನ್ನು ಊಹಿಸುವುದು ಅಸಾಧ್ಯ. 

Advertisement

Udayavani is now on Telegram. Click here to join our channel and stay updated with the latest news.

Next