Advertisement

ಎರಡನೇ ದಿನದ ಕಲಾಪವೂ ಗದ್ದಲ

12:55 AM Feb 08, 2019 | |

ವಿಧಾನಮಂಡಲ: ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ಮುಂದುವರಿದ ಕಾರಣ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಕಲಾಪದಲ್ಲಿ ಗದ್ದಲ ಮರುಕಳಿಸಿತು.

Advertisement

ವಿಧಾನಸಭೆಯಲ್ಲಿ ಬುಧವಾರ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದ ಬಿಜೆಪಿ ಸದಸ್ಯರು ಗುರುವಾರವೂ ಪ್ರತಿಭಟನೆ ಮುಂದುವರಿಸಿ ‘ಸರ್ಕಾರಕ್ಕೆ ಬಹುಮತ ಇಲ್ಲ, ಕುಮಾರಸ್ವಾಮಿ ಗೋ ಬ್ಯಾಕ್‌, ಸಿಎಂ ಸ್ಟೆಪ್‌ ಡೌನ್‌’ ಎಂದು ಘೋಷಣೆ ಹಾಕಿದರು. ಇದರಿಂದ ಗದ್ದಲ ಉಂಟಾಗಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಒಮ್ಮೆ 10 ನಿಮಿಷ ಸದನ ಮುಂದೂಡಿದರು. ಮತ್ತೆ ಸದನ ಆರಂಭಗೊಂಡಾಗ ಪ್ರತಿಭಟನೆ, ಆಡಳಿತ ಪ್ರತಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ದಿಂದ ಗದ್ದಲದ ವಾತಾವರಣ ಉಂಟಾದ್ದರಿಂದ ಶುಕ್ರವಾರ ಬೆಳಗ್ಗೆ 12.30ಕ್ಕೆ ಸದನ ಮುಂದೂಡಿದರು.

ವಿಧಾನಸಭೆಯ ಕಲಾಪ 11 ಗಂಟೆಗೆ ನಿಗದಿಯಾಗಿ ತ್ತಾದರೂ 11.35ಕ್ಕೆ ಆರಂಭಗೊಂಡಿತು. ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾದರು. ಸ್ಪೀಕರ್‌ ರಮೇಶ್‌ಕುಮಾರ್‌ ಅವರು, ವಿಷಯವೇ ಇಲ್ಲದೆ ಸದನದ ಬಾವಿಗೆ ಇಳಿದರೆ ಸದನ ನಡೆಸುವುದು ಕಷ್ಟ. ದಯವಿಟ್ಟು ಪ್ರತಿಪಕ್ಷ ಸದಸ್ಯರು ಸದನ ನಡೆಯಲು ಆವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿ ದರು. ಆದರೆ, ಸ್ಪೀಕರ್‌ ಮನವಿಗೆ ಸ್ಪಂದಿಸದ ಬಿಜೆಪಿ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಮುಂದು ವರಿಸಿದರು. ಪ್ರತಿಭಟನೆ ನಡುವೆಯೇ ಸಭೆಯ ಮುಂದೆ ವಿವಿಧ ಸಚಿವರ ಹೆಸರಿನ ಕಾಗದ ಪತ್ರ ಮಂಡಿಸಲಾಯಿತು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಪ್ರಸ್ತಾವವನ್ನು ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ ಸೂಚಿಸಿದರು. ಜೆಡಿಎಸ್‌ನ ಎಚ್.ಕೆ.ಕುಮಾರಸ್ವಾಮಿ ಅನುಮೋದಿಸಿದರು. ಸದನವನ್ನು 10 ನಿಮಿಷ ಮುಂದೂಡಲಾಯಿತು. ನಂತರ, ಸದನ 12.25ಕ್ಕೆ ಆರಂಭಗೊಂಡಾಗ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಪರಸ್ಪರ ಮಾತಿನ ಸಮರದಿಂದ ಗದ್ದಲ-ಕೋಲಾಹಲದ ವಾತಾವರಣ ಉಂಟಾದಾಗ ಸದನವನ್ನು ಶುಕ್ರವಾರ ಬೆಳಗ್ಗೆ 12.30ಕ್ಕೆ ಮುಂದೂಡಲಾಯಿತು.

ಪರಿಷತ್‌ನಲ್ಲೂ ಪ್ರತಿಭಟನೆ, ಧರಣಿ: ಬಿಜೆಪಿ ಸದಸ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಗುರುವಾರವೂ ವಿಧಾನ ಪರಿಷತ್‌ ಕಲಾಪ ಸುಸೂತ್ರವಾಗಿ ನಡೆಯಲಿಲ್ಲ. ಬೆಳಗ್ಗೆ 10.30ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನಿಂತು, ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದರು. ಇದೇ ವೇಳೆ, ಪ್ರತಿಪಕ್ಷದ ಸದಸ್ಯರು ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಪ್ರತಿಪಕ್ಷದವರು ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಊಹಿಸಿಕೊಂಡು ಮಾತನಾಡುತ್ತಿದ್ದಾರೆ ಎಂದರು. ಸಚಿವರಾದ ಜಮೀರ್‌ ಅಹ್ಮದ್‌, ವೆಂಕಟರಮಣಪ್ಪ, ಜಯಮಾಲಾ, ಜಿ.ಟಿ.ದೇವೇಗೌಡ ಸಹಿತವಾಗಿ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಉಪಮುಖ್ಯಮಂತ್ರಿಗೆ ಸಾಥ್‌ ನೀಡಿದರು.

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಾಸಕರು ರಾಜೀನಾಮೆ ನೀಡುತ್ತಿದ್ದು, ಸಂಖ್ಯಾಬಲ ಕುಸಿಯುತ್ತಿದೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು. ಆಗ ಆಡಳಿತ ಪಕ್ಷದ ಸದಸ್ಯ ಐವಾನ್‌ ಡಿಸೋಜಾ, ಅಜೆಂಡಾದಂತೆ ಕಲಾಪ ಆರಂಭಿಸಿ, ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಿ ಎಂದು ಸಭಾಪತಿಯನ್ನು ಕೋರಿಕೊಂಡರು. ಆದರೆ, ಬಿಜೆಪಿಯವರು ಭಿತ್ತಿಪತ್ರ ಗಳನ್ನು ಪ್ರದರ್ಶಿಸಿ, ಸಭಾಪತಿಯವರ ಪೀಠದ ಎದುರು ಧರಣಿ ಆರಂಭಿಸಿದರು. ಸಭಾಪತಿ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಿದರು. ಮಧ್ಯಾಹ್ನ 12.15ಕ್ಕೆ ಕಲಾಪ ಮರು ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಬಳಿಕ, ಮಧ್ಯಾಹ್ನ 3ಕ್ಕೆ ಕಲಾಪ ಮುಂದೂಡಲಾಯಿತು. ಮಧ್ಯಾಹ್ನ 3 ಗಂಟೆಗೆ ಕಲಾಪ ಪುನರ್‌ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಸಭಾಪತಿಯವರು ಕಲಾಪವನ್ನು ಶುಕ್ರವಾರ ಮಧ್ಯಾಹ್ನ 3ಕ್ಕೆ ಮುಂದೂಡಿದರು.

Advertisement

ಎರಡೂ ಪಕ್ಷಗಳ ನಾಯಕರಿಗೆ ಟೆನ್ಶನ್‌

ಸದನದಲ್ಲಿ ಗುರುವಾರವೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 8 ಸದಸ್ಯರು, ಇಬ್ಬರು ಪಕ್ಷೇತರರು ಸೇರಿ 10 ಸದಸ್ಯರು ಗೈರು ಹಾಜರಾಗಿದ್ದರಿಂದ ಎರಡೂ ಪಕ್ಷಗಳ ನಾಯಕರಿಗೆ ಟೆನ್ಶನ್‌ ಉಂಟಾಗಿತ್ತು. ಸದನ ಮುಗಿದ ನಂತರವೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್‌, ಎಚ್.ಡಿ.ರೇವಣ್ಣ ಕೆಲ ಹೊತ್ತು ಗಹನ ಚರ್ಚೆ ನಡೆಸಿದರು.

ಗೊಂದಲದ ನಡುವೆಯೂ ರಿಕ್ವೆಸ್ಟ್‌

ಗುರುವಾರ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸದನ ಮುಂದೂಡಲ್ಪಟ್ಟ ನಂತರ ಕರುಣಾಕರ ರೆಡ್ಡಿ, ಹರ್ಷವರ್ಧನ್‌ ಸೇರಿ ಕೆಲವು ಬಿಜೆಪಿ ಸದಸ್ಯರು ಮುಖ್ಯಮಂತ್ರಿಯವರ ಬಳಿ ಬಂದು ಬಜೆಟ್‌ನಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ಒದಗಿಸುವಂತೆ ಕೋರಿಕೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next