Advertisement

ಕರಾವಳಿ ಮೀನುಗಾರರ ಬದುಕಿಗೆ “ಸಮುದ್ರ ಕಳೆ’ರಕ್ಷಣೆ-ಯಾವುದಕ್ಕೆ ಬಳಕೆ?

03:34 PM Mar 06, 2023 | Team Udayavani |

ಮಹಾನಗರ: ಮೀನುಗಾರಿಕೆಯನ್ನೇ ನಂಬಿರುವ ಕರಾವಳಿ ಮೀನುಗಾರರು ಇನ್ನು ಮುಂದೆ ಕಡಲ ತಟದಲ್ಲಿ ಸೀವೀಡ್‌ (ಸಮುದ್ರ ಕಳೆ) ಬೆಳೆಸಿ ಅದರಿಂದಲೇ ಮತ್ತಷ್ಟು ಆದಾಯ ಗಳಿಕೆಗೆ ಹೊಸ ದಾರಿ ಕಂಡುಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಶೇಷ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.

Advertisement

ದೇಶ-ವಿದೇಶದಲ್ಲಿ ಸೀವೀಡ್‌ಗೆ ಬಹು ಬೇಡಿಕೆ ಇರುವ ಕಾರಣದಿಂದ ಹಾಗೂ ಮೀನುಗಾರರಿಗೆ ಮತ್ತೂಂದು ಆದಾಯದ ಮೂಲ ಇದಾಗುವ ಕಾರಣದಿಂದ ಸೀವೀಡ್‌ ಬೆಳೆಯಲು ಸರಕಾರ ವಿಶೇಷ ಆಸಕ್ತಿ ವಹಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತವು ಹೊಸ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ. ಸೀವೀಡ್‌ ಬೆಳೆಯಲು ಮಾರ್ಗದರ್ಶನ, ಪ್ರೋತ್ಸಾಹ ನೀಡುವ ಮುಖೇನ ಮೀನುಗಾರರಿಗೆ ಹೊಸ ಬದುಕು ಕಲ್ಪಿಸಲು ವೇದಿಕೆ ರೂಪಿಸುವಂತೆ ಜಿಲ್ಲಾಡಳಿತದಿಂದ ಸರಕಾರಕ್ಕೆ ಪತ್ರ ಬರೆದು ಗಮನಸೆಳೆಯಲು ಉದ್ದೇಶಿಸಲಾಗಿದೆ.

ಸೀವೀಡ್‌-ಪ್ರಧಾನಿ ಆಶಯ
ಕರಾವಳಿ ತಟದಲ್ಲಿ ಸೀವೀಡ್‌ (ಸಮುದ್ರ ಕಳೆ) ಬೆಳೆಸಿ; ಗೊಬ್ಬರವಾಗಿಸಿ ಎಂದು 2017ರಲ್ಲಿ ಉಜಿರೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಮೀನುಗಾರಿಕಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿತ್ತು. “ಇದು ಕರಾವಳಿ ತೀರ. ಆದ್ದರಿಂದ ಇಲ್ಲಿ ಸೀವೀಡ್‌ (ಸಮುದ್ರಕಳೆ, ಕಡಲಕಳೆ) ಗಿಡ ಬೆಳೆಸಿ. ಇದರಿಂದ ಸಾವಯವ ಗೊಬ್ಬರ ತಯಾರಿಸಿದಂತಾಗುತ್ತದೆ. ಇದಕ್ಕೆಲ್ಲ ಸರಕಾರವನ್ನು ಕಾಯುತ್ತಾ ಕೂರಲಾಗದು. ನೀವು ಮಾಡಿ. ಸರಕಾರದ ಕಾನೂನು, ಕಟ್ಟಳೆಗಳಿಗೆ ಕಾಯಬೇಡಿ’ ಎಂದವರು ತಿಳಿಸಿದ್ದರು. ಇದರಂತೆ ರಾಜ್ಯದ ಕೆಲವೆಡೆ ಇದರ ಅನುಷ್ಠಾನದ ವಿಶೇಷ ಪ್ರಯತ್ನಗಳು ನಡೆದಿವೆ. ಆದರೆ ಸರಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಜಿಲ್ಲಾಡಳಿತದಿಂದ ಸರಕಾರಕ್ಕೆ ಪತ್ರ ಮುಖೇನ ವಿವರ ಸಲ್ಲಿಕೆ ಆಗುವುದರಿಂದ ಮೀನುಗಾರಿಕೆ ವಲಯದಲ್ಲಿ ಆಶಾವಾದ ಮೂಡಿದೆ.

ಯಾವುದಕ್ಕೆ ಬಳಕೆ?
ಸಮುದ್ರದಲ್ಲಿ ಕಲ್ಲಿಗೆ ಅಂಟಿಕೊಂಡು ಬೆಳೆಯುವ ಪಾಚಿ ಜಾತಿಯ ಸೀವೀಡ್‌ಗಳಿವೆ. ಸಮುದ್ರದಾಳದಲ್ಲಿ ಮರದಷ್ಟು ಎತ್ತರ ಬೆಳೆಯುವ ಪ್ರಭೇದಗಳೂ ಇವೆ. ಸಮುದ್ರ ತೀರದಲ್ಲಿ ಹಗ್ಗ ಕಟ್ಟಿ ಅಥವಾ ಬಿದಿರಿನ ಗಳ ಇಟ್ಟು ಕೃತಕವಾಗಿ ಬೆಳೆಯಲು ಸಾಧ್ಯವಿದೆ. ವಾಣಿಜ್ಯ ದೃಷ್ಟಿಯಿಂದ ಇದು ಬಹು ಉಪಯೋಗಿ. ಔಷಧಗಳು, ಸೌಂದರ್ಯವರ್ಧಕಗಳು, ಪೈಂಟ್‌ಗಳಿಗೆ ಸೀವೀಡ್‌ ಬಳಸಲಾಗುತ್ತದೆ. ಆಹಾರ, ಜೈವಿಕ ಇಂಧನವಾಗಿಯೂ ಬಳಸಲು ಅವಕಾಶವಿದೆ. ಸಾವಯವ ಗೊಬ್ಬರವಾಗಿಯೂ ಬಳಸುತ್ತಾರೆ. ಕಾಂಪೋಸ್ಟ್‌ ಮಾಡಿ ಗೊಬ್ಬರವಾಗಿಸಿ ಗಿಡಗಳಿಗೆ ಹಾಕಬಹುದಾಗಿದೆ. ದೇಶ-ವಿದೇಶದಲ್ಲಿ ಇದಕ್ಕೆ ಬಹು ಬೇಡಿಕೆ ಇದೆ.

ಮಂಗಳೂರು ವ್ಯಾಪ್ತಿಯಲ್ಲಿ ಅನುಷ್ಠಾನ
ಶಾಸಕ ವೇದವ್ಯಾಸ ಕಾಮತ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಸಮುದ್ರ ಭಾಗದ ಉದ್ದಕ್ಕೂ ಸೀವೀಡ್‌ ಅನ್ನು ಬೆಳೆಯಲು ಅವಕಾಶವಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬಹು ಬೇಡಿಕೆಯಿದೆ. ತಿಂಡಿ ತಿನಿಸು, ಪದಾರ್ಥಗಳಿಗೆ ಇದನ್ನು ಬಳಸಲಾಗುತ್ತದೆ. ಗುಜರಾತ್‌ನಲ್ಲಿ ಇದನ್ನು ಏಳು ವರ್ಷದ ಹಿಂದೆಯೇ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಿಸಲಾಗಿದೆ. ಈ ಮೂಲಕ 12 ತಿಂಗಳು ಕೂಡ ಮೀನುಗಾರರಿಗೆ ಉದ್ಯೋಗ ದೊರಕಿಸುವ ವಿಶೇಷ ಪ್ರಯತ್ನ. ಇದನ್ನು ಮಂಗಳೂರು ವ್ಯಾಪ್ತಿಯಲ್ಲಿ ಅನುಷ್ಠಾನಿಸಲು ವಿಶೇಷ ಆದ್ಯತೆ ನೀಡಲಾಗುವುದು’ ಎನ್ನುತ್ತಾರೆ.

Advertisement

ಏನಿದು “ಸಮುದ್ರ ಕಳೆ’?
ಸಮುದ್ರದಲ್ಲಿ ಬೆಳೆಯುವ ಪಾಚಿ ಮಾದರಿಯ ಕಳೆಗಿಡ. ಕೆಲವು ತಳಿಗಳು ಸ್ವತಂತ್ರವಾಗಿ ತೇಲುತ್ತವೆ. ಕೆಲವು ಮುಳುಗಿ ಬೆಳೆಯುತ್ತವೆ. ಕಡಲಕಳೆ ಸಾಮಾನ್ಯವಾಗಿ ತೀರಕ್ಕೆ ಹತ್ತಿರವಿರುವ ಸಮುದ್ರದ ಭಾಗದಲ್ಲಿ, ಮರಳಿನಲ್ಲಿ ಅಥವಾ ನದಿ ಸೇರುವ ಸಮುದ್ರ ತೀರದಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ತೀರದಿಂದ ಸಮುದ್ರಕ್ಕೆ ಹಲವಾರು ಮೈಲುಗಳವರೆಗೆ ವಿಸ್ತರಿಸಬಹುದು. ಆಳವಾದ ಜೀವಂತ ಕಡಲಕಳೆಗಳು ಕೆಂಪು ಪಾಚಿಗಳ ಕೆಲವು ಪ್ರಭೇದಗಳಾಗಿವೆ.

ವಿಶೇಷ ಪ್ರೋತ್ಸಾಹ ಸೀವೀಡ್‌ಗಳನ್ನು ಸೌಂದರ್ಯ ವರ್ಧಕ ವಸ್ತುಗಳು, ಔಷಧಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ ಬಹು ಮೌಲ್ಯ ಇದಕ್ಕಿವೆ. ದೇಶ-ವಿದೇಶದಲ್ಲೂ ಬಹು ಬೇಡಿಕೆ ಇದೆ. ಹೀಗಾಗಿ ಅದನ್ನು ನಮ್ಮ ಮೀನುಗಾರರು ಬೆಳೆಯಲು ಸಂಪೂರ್ಣ ಸಹಕಾರ ನೀಡಬೇಕಾಗಿದೆ. ಇದಕ್ಕಾಗಿ ಸರಕಾರದಿಂದ ವಿಶೇಷ ಪ್ರೋತ್ಸಾಹ ಹಾಗೂ ಮಾರ್ಗದರ್ಶನವನ್ನು ನಿರೀಕ್ಷಿಸಿ ಸರಕಾರಕ್ಕೆ ಜಿಲ್ಲಾಡಳಿತದಿಂದ ಪತ್ರ ಬರೆಯಲಾಗುತ್ತದೆ.
– ರವಿಕುಮಾರ್‌ ಎಂ.ಆರ್‌. ಜಿಲ್ಲಾಧಿಕಾರಿ, ದ.ಕ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next