Advertisement

ಸುರಕ್ಷಿತ ಪ್ರಯಾಣಕ್ಕೆ ಸೀಟ್‌ಬೆಲ್ಟ್  ಧಾರಣೆ ಅತ್ಯಗತ್ಯ 

12:45 AM Sep 02, 2021 | Team Udayavani |

ಮಂಗಳೂರು: ಸಣ್ಣಪುಟ್ಟ ಅಜಾಗರೂಕತೆ ಕೂಡ ಕೆಲವೊಂದು ಬಾರಿ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಅದೇ ರೀತಿ, ವಾಹನಗಳಲ್ಲಿ ಪ್ರಯಾಣಿಸುವಾಗ ಅವುಗಳಲ್ಲಿ ಲಭ್ಯವಿರುವ ಆಧುನಿಕ ಸೌಲಭ್ಯಗಳ ಉಪಯೋಗವನ್ನು ನಿರ್ಲಕ್ಷಿಸಿದರೆ ಅದರಿಂದ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಇಂತಹ  ಸನ್ನಿವೇಶ ಮಂಗಳವಾರವಷ್ಟೇ ಬೆಂಗಳೂರಿನಲ್ಲಿ ಘಟಿಸಿದ್ದು ಸುರಕ್ಷಿತ ಪ್ರಯಾಣಕ್ಕೆ ಚಾಲಕರು ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

Advertisement

ಬೆಂಗಳೂರಿನ ಕೋರಮಂಗಲದಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದು, ಇದಕ್ಕೆ ಸೀಟ್‌ಬೆಲ್ಟ್ ಹಾಕದೇ ಇರುವುದು ಕಾರಣ ಎಂಬ ಚರ್ಚೆ ಶುರುವಾಗಿದೆ. ಸೀಟ್‌ಬೆಲ್ಟ್ ಧರಿಸದ ಕಾರಣ ಕಾರಿನಲ್ಲಿದ್ದ ಏರ್‌ ಬ್ಯಾಗ್‌ ಕೂಡ ತೆರೆದುಕೊಂಡಿಲ್ಲ. ಇದರಿಂದಾಗಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಚಾಲಕರು ಮತ್ತು ಪ್ರಯಾಣಿಕರು ಅಗತ್ಯವಾಗಿ ಸೀಟ್‌ಬೆಲ್ಟ್ ಧರಿಸಬೇಕು. ಈ ಮೂಲಕ ಅಪಘಾತ ಉಂಟಾಗುವ ವೇಳೆ ಆಗುವ ಶೇ. 80ರಷ್ಟು ಗಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಕಾರು, ಜೀಪು ಸೇರಿದಂತೆ ಹೆಚ್ಚಿನ ವಾಹನಗಳಲ್ಲಿ ಸೀಟ್‌ ಬೆಲ್ಟ್‌ಗಳು ಇರುತ್ತವೆ. ಅದರಲ್ಲೂ ಕಾರುಗಳಲ್ಲಿ ಮುಂಬದಿ ಮತ್ತು ಹಿಂಬದಿ ಸೀಟುಗಳಲ್ಲಿ ಸೀಟ್‌ಬೆಲ್ಟ್ ಇರುತ್ತದೆ. ಸೀಟ್‌ಬೆಲ್ಟ್ ಧರಿಸಿ ಚಾಲನೆ ಮಾಡುವಾಗ ಚಾಲಕರಿಗೆ ಮುಖ್ಯವಾಗಿ ತನ್ನ ಚಾಲನೆಯಲ್ಲಿ ಕಂಫರ್ಟ್‌ ಇರುತ್ತದೆ. ಅದರಲ್ಲೂ ಇತ್ತೀಚಿನ ಕಾರುಗಳಲ್ಲಿ ಸೀಟ್‌ಬೆಲ್ಟ್ ಧರಿಸದೇ ಕುಳಿತುಕೊಂಡರೆ ಚಾಲನೆ ಮಾಡುವಾಗ ಅಲರ್ಟ್‌ ತಂತ್ರಜ್ಞಾನ ಬಂದಿದೆ.  ಅಪಘಾತ ಸಮಯದಲ್ಲಿ ಪ್ರಯಾಣಿಕ ಮುಂದಕ್ಕೆ ಅಥವಾ ಹಿಂದಕ್ಕೆ ಬಾಗುವುದರಿಂದ ಸೀಟ್‌ಬೆಲ್ಟ್ ರಕ್ಷಣೆ ನೀಡುತ್ತದೆ.

ಏರ್‌ ಬ್ಯಾಗ್‌ ತೆರೆಯಲು  ಸೀಟ್‌ಬೆಲ್ಟ್ ಮುಖ್ಯ ಅಪಘಾತದಿಂದ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಇತ್ತೀಚಿನ ಕಾರುಗಳಲ್ಲಿ ಏರ್‌ಬ್ಯಾಗ್‌ ವ್ಯವಸ್ಥೆ ಇರುತ್ತದೆ. ಮುಂಬದಿಯ ಎರಡೂ ಸೀಟುಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿರುತ್ತದೆ. ಅಪಘಾತ ಸಮಯ ಸೀಟ್‌ಬೆಲ್ಟ್ ಧರಿಸಿದರೆ ಮಾತ್ರ ಏರ್‌ ಬ್ಯಾಗ್‌ನಿಂದ ಹೆಚ್ಚಿನ ಸುರಕ್ಷತೆ ಸಿಗುತ್ತದೆ. ಏರ್‌ ಬ್ಯಾಗ್‌ ತೆರೆದುಕೊಳ್ಳಲು ಕಾರಿಗೆ  ಸೆನ್ಸಾರ್‌ ಅಳವಡಿಸಿರುತ್ತಾರೆ. ಸೀಟ್‌ಬೆಲ್ಟ್ ಅಳವಡಿಸಿದ್ದರೆ ಅಪಘಾತವಾಗುವ ಸಮಯ ಚಾಲಕರು ಸ್ಟೇರಿಂಗ್‌ಗೆ ಬಾಗದಂತೆ ಇದು ಬಿಗಿದಿಟ್ಟುಕೊಳ್ಳು ತ್ತದೆ. ಆ ವೇಳೆ ಏರ್‌ ಬ್ಯಾಗ್‌ ತೆರೆದು ಅನಾಹುತ ಸಂಭವಿಸುವ ಸಾಧ್ಯತೆ ಕಡಿಮೆ ಮಾಡುತ್ತದೆ. ಒಂದು ವೇಳೆ ಸೀಟ್‌ಬೆಲ್ಟ್ ಧರಿಸದೇ ಇದ್ದರೆ ಏರ್‌ ಬ್ಯಾಗ್‌ ತೆರೆಯುವುದಿಲ್ಲ. ಅಲ್ಲದೆ, ಅಪಘಾತದ ತೀವ್ರತೆಗೆ ಅಥವಾ ಬ್ರೇಕ್‌ ಹಾಕುವಾಗ ತನ್ನ ಮುಖ, ಎದೆ ಭಾಗ ಕಾರಿನ ಸ್ಟೇರಿಂಗ್‌ ಅಥವಾ ಎದುರಿನ  ಗ್ಲಾಸ್‌ಗೆ ಹೊಡೆದು ಪೆಟ್ಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುರಕ್ಷಿತ ಪ್ರಯಾಣಕ್ಕೆ ಚಾಲಕರು ಸೀಟ್‌ಬೆಲ್ಟ್ ಧರಿಸುವುದು ಅತೀ ಮುಖ್ಯ.

  • ಒಂದುವೇಳೆ ಅಪಘಾತವಾದರೂ ಸೀಟ್‌ಬೆಲ್ಟ್ ಧರಿಸುವುದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಆಸನ ದಲ್ಲಿಯೇ ಉಳಿಯುತ್ತಾರೆ
  • ಸೀಟ್‌ಬೆಲ್ಟ್ ಧರಿಸಿದರೆ ಅಪಘಾತ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆ ಕಡಿಮೆ ಇರುತ್ತದೆ
  • ಸೀಟ್‌ಬೆಲ್ಟ್ ಧರಿಸದೇ ಇದ್ದರೆ ಕಾರುಗಳಲ್ಲಿ ಏರ್‌ಬ್ಯಾಗ್‌ ರಕ್ಷಣೆ ಸಿಗುವುದಿಲ್ಲ

ಕಾರುಗಳಲ್ಲಿ ಸೀಟ್‌ ಬೆಲ್ಟ್ ಧರಿಸಿಯೇ ವಾಹನ ಚಾಲನೆ ಮಾಡಬೇಕು. ಆಗ ಮಾತ್ರ ಸಂಭಾವ್ಯ ಅಪಘಾತವನ್ನು ತಡೆಯಲು ಸಾಧ್ಯ. ಅಪಘಾತ ವೇಳೆ ಹಠಾತ್‌ ಬ್ರೇಕ್‌ ಹಾಕಿದಾಗ ಸೀಟ್‌ ಬೆಲ್ಟ್ ನಮ್ಮನ್ನು ರಕ್ಷಿಸುತ್ತದೆ. ಪ್ರಯಾಣದ ವೇಳೆ ಜೀವ ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಕೂಡ ಸೀಟ್‌ ಬೆಲ್ಟ್ ಧರಿಸಬೇಕು.–  ಮಹೇಂದ್ರ ಜೈನ್‌,   ಸೀನಿಯರ್‌ ರಿಲೇಷನ್‌ಶಿಪ್‌ ಮ್ಯಾನೇಜರ್‌,  ಭಾರತ್‌ ಆಟೋ ಕಾರ್ ಲಿ. ಮಂಗಳೂರು

Advertisement

ಶೇ.80ರಷ್ಟು ಸುರಕ್ಷಿತ ಸೀಟ್‌ಬೆಲ್ಟ್ ಧರಿಸಿ ಚಾಲನೆ ಮಾಡುವುದರಿಂದ ಪ್ರಯಾಣಿಕರು ಶೇ.80ರಷ್ಟು ಸುರಕ್ಷಿತ ರಾಗುತ್ತಾರೆ. ಇತ್ತೀಚಿನ ಕೆಲವೊಂದು ಅಪಘಾತಕ್ಕೆ ಸೀಟ್‌ ಬೆಲ್ಟ್ ಧರಿಸದೇ ಇರುವುದು ಕೂಡ ಕಾರಣವಾಗುತ್ತಿದೆ. – ಪುರುಷೋತ್ತಮ ಕಮಿಲ,  ದ.ಕ. ಜಿಲ್ಲಾ ಗ್ರಾರೇಜ್‌ ಮಾಲಕರ   ಸಂಘದ ಪ್ರ. ಕಾರ್ಯದರ್ಶಿ

ಸೀಟ್‌ಬೆಲ್ಟ್ ಅಳವಡಿಕೆ ಅವಶ್ಯ ವಾಹನಗಳಲ್ಲಿ ಸೀಟ್‌ಬೆಲ್ಟ್ ಧರಿಸಿ ಚಾಲನೆ ಮಾಡಬೇಕು. ಹೊಸ ಕಾನೂನಿನ ಪ್ರಕಾರ ಸೀಟ್‌ಬೆಲ್ಟ್ ಧರಿಸದೆ ಚಾಲನೆ ಮಾಡುವವರಿಗೆ 1000 ರೂ. ದಂಡ ವಿಧಿಸಬಹುದಾಗಿದೆ. ಆದರೆ, ಕೋವಿಡ್‌ ಕಾರಣ ಸದ್ಯ 500 ರೂ. ದಂಡ ವಿಧಿಸಲಾಗುತ್ತಿದೆ.– ವರ್ಣೇಕರ್‌, ಮಂಗಳೂರು ಆರ್‌ಟಿಒ

Advertisement

Udayavani is now on Telegram. Click here to join our channel and stay updated with the latest news.

Next