Advertisement
ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ನಗರ ವ್ಯಾಪ್ತಿಯ ಬಸ್‌ಗಳಲ್ಲೂ ಪರಿಚಯಿಸಲು ಬಿಎಂಟಿಸಿ ಉದ್ದೇಶಿಸಿದ್ದು, ಶೀಘ್ರದಲ್ಲೇ ಈ ವಿನೂತನ ವ್ಯವಸ್ಥೆ ನಗರದ ಬಸ್ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳ ಹಾವಳಿಯಿಂದ ಬಿಎಂಟಿಸಿ ಬಸ್‌ಗಳಿಂದ ವಿಮುಖರಾಗಿರುವ ಪ್ರಯಾಣಿಕರನ್ನು ಮತ್ತೆ ತನ್ನತ್ತ ಸೆಳೆಯಲು ಬಿಎಂಟಿಸಿ ಮಾಡಿರುವ ಹೊಸ ಐಡಿಯಾ ಇದು.
ನಗರದಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳು ಮತ್ತು ಮೆಟ್ರೋ ಸೇವೆ ಆರಂಭಗೊಂಡ ನಂತರ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಜಾರಿಗೆ ತರಲು ಬಿಎಂಟಿಸಿ ಚಿಂತನೆ ನಡೆಸಿದೆ. ಸೀಟ್ ಬುಕ್ ಮಾಡಿದರೆ ಹತ್ತಿರದ ಪಿಕ್‌ಅಪ್ ಪಾಯಿಂಟ್‌ಗೆ ಬರಲಿರುವ ಗಸ್ ಪ್ರಯಾಣಿಕರನ್ನು ಕರೆದೊಯ್ಯಲಿದೆ. ಆದರೆ, ಬುಕ್ಕಿಂಗ್ ಸಿಸ್ಟಂ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದರ ಬಗ್ಗೆ ಬಿಎಂಟಿಸಿ ಸಂಪೂರ್ಣ ಮಾಹಿತಿ ಬಿಟ್ಟುಕೊಟ್ಟಿಲ್ಲ. ಬಸ್‌ಗಳಿಂದ ವಿಮುಖರಾದ ಪ್ರಯಾಣಿಕರನ್ನು ಮತ್ತೆ ತನ್ನತ್ತ ಕರೆತರಲು ಹತ್ತುಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಗಡ ಟಿಕೆಟ್ ಬುಕಿಂಗ್ ವ್ಯವಸ್ಥೆ ಕೂಡ ಒಂದು. ಪ್ರಸ್ತುತ ಇದು ಇನ್ನೂ ಚರ್ಚೆ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಕೆಲವೇ ದಿನಗಳಲ್ಲಿ ಸಾಕಾರಗೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
Related Articles
ಆದರೆ, ಟಿಕೆಟ್ ಬುಕಿಂಗ್ ಸೇವೆ ಸದ್ಯಕ್ಕೆ ಹವಾನಿಯಂತ್ರಿತ ಬಸ್‌ಗಳಲ್ಲಿ ಸೀಮಿತವಾಗಿರಲಿದೆ. ಅದರಲ್ಲೂ ಮೊದಲ ಹಂತದಲ್ಲಿ ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವೋಲ್ವೊ ಬಸ್‌ಗಳಲ್ಲಿ ಈ ಯೋಜನೆಯನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ನಿಗಮದ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಸೀಟು ಬುಕಿಂಗ್ ಮಾಡಲು ಸೌಲಭ್ಯ ಕಲ್ಪಿಸಲಾಗುವುದು. ಸೀಟು ಬುಕಿಂಗ್ ಖಾತ್ರಿಯಾಗಿರುವ ಬಗ್ಗೆ ಆ ಪ್ರಯಾಣಿಕರ ಮೊಬೈಲ್‌ಗೆ ಸಂದೇಶ ಬರಲಿದೆ.
Advertisement
ಈ ಸಂದೇಶದಲ್ಲಿ ಆಯಾ ಬಸ್‌ನ ನಿರ್ವಾಹಕರ ಮೊಬೈಲ್ ಸಂಖ್ಯೆಯನ್ನೂ ನಮೂದಿಸಲಾಗಿರುತ್ತದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಸ್ತುತ ಬಿಎಂಟಿಸಿ ಮೊಬೈಲ್ ಆ್ಯಪ್ ಅನ್ನು ಸುಮಾರು ಒಂದು ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದು, ಬಹುತೇಕರು ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಬಸ್ ಮಾರ್ಗ, ಪ್ರಯಾಣ ದರ, ವೇಳಾಪಟ್ಟಿ ಮತ್ತಿತರ ಪ್ರಯಾಣಿಕ ಸ್ನೇಹಿ ಮಾಹಿತಿಗಳು ಲಭ್ಯ ಇವೆ.
ಬಿಎಂಟಿಸಿಯಿಂದ ವೋಲ್ವೊ ಮತ್ತು ಕರೋನ ಸೇರಿದಂತೆ 800 ಹವಾನಿಯಂತ್ರಿತ ಹಾಗೂ 5,300 ಸಾಮಾನ್ಯ ಬಸ್‌ಗಳು ನಗರದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಈ ಪೈಕಿ 90 ಹವಾನಿಯಂತ್ರಿತ ಬಸ್‌ಗಳು ನಗರದ 12 ಕಡೆಗಳಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಂಚರಿಸುತ್ತಿದ್ದು, ನಿತ್ಯ ಹತ್ತು ಸಾವಿರ ಜನ ಈ ಮಾರ್ಗದ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ.
ಇದೊಂದು ಸ್ವಾಗತಾರ್ಹ ಹೆಜ್ಜೆ. ನಗರದಲ್ಲಿ ಸಂಚರಿಸುವ ಎಲ್ಲ ಬಸ್‌ಗಳಲ್ಲೂ ಈ ಆನ್‌ಲೈನ್ ಸೀಟು ಬುಕಿಂಗ್ ವ್ಯವಸ್ಥೆ ಉಪಯೋಗಕ್ಕೆ ಬಾರದಿರಬಹುದು. ಆದರೆ, ವಿಮಾನ ನಿಲ್ದಾಣದಂತಹ ಹೆಚ್ಚು ದಟ್ಟಣೆ ಹಾಗೂ ದೂರದ ಪ್ರದೇಶಗಳ ನಡುವೆ ಓಡಾಡು ಪ್ರಯಾಣಿಕರಿಗೆ ಈ ಸೇವೆ ಸಾಕಷ್ಟು ಅನುಕೂಲ ಆಗಲಿದೆ. ಇದು ಯಶಸ್ಸು ಕಾಣುವುದರಲ್ಲಿ ಸಂಶಯವೇ ಇಲ್ಲ ಎಂದು ಬಸ್ ಪ್ರಯಾಣಿಕರ ವೇದಿಕೆ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.