ಗಂಗಾವತಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲು ಹೈಕಮಾಂಡ್ ಚಿಂತನೆ ನಡೆಸಿದ್ದು, ನೂತನ ಸಾರಥಿಗಾಗಿ ಹುಡುಕಾಟ ನಡೆದಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಅವರು ತಮ್ಮ ಅವಧಿಯನ್ನು ಯಶಸ್ವಿಯಾಗಿ ಮುಗಿಸಿದ್ದು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷದ ರಾಜ್ಯ ಘಟಕ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಲು ಈಗಾಗಲೇ ಚಿಂತನೆ ನಡೆಸಿದ್ದು, ಪಕ್ಷ ಸಂಘಟನೆ ಮತ್ತು ಸಂಘಪರಿವಾರದ ಜತೆ ನಿಕಟ ಸಂಪರ್ಕ ಹೊಂದಿರುವವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲು ಯೋಜಿಸಲಾಗಿದೆ.
ಕೊಪ್ಪಳ ಜಿಲ್ಲಾ ರಚನೆಯಾದಾಗಿನಿಂದ ಇಲ್ಲಿವರೆಗೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. ಈ ಭಾರಿ ಎಸ್‌ಸಿ, ಎಸ್‌ಟಿ ಅಥವಾ ಹಿಂದುಳಿದ ವರ್ಗದ ಹಿರಿಯ ನಾಯಕರಿಗೆ ಅಧ್ಯಕ್ಷ ಸ್ಥಾನ ವಹಿಸುವ ಸಾಧ್ಯತೆ ಇದ್ದು, ಯಲಬುರ್ಗಾ, ಕುಷ್ಟಗಿ ಮತ್ತು ಕಾರಟಗಿ ಭಾಗದ ಮುಖಂಡರಿಗೆ ಆದ್ಯತೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಾಸಕ ದಢೇೕಸು ಗೂರು ಬಸವರಾಜ, ನಾಗಪ್ಪ ಸಾಲೋಣಿ, ದೊಡ್ಡನಗೌಡ ಪಾಟೀಲ್, ಮುಖಂಡರಾದ ಬಸವಲಿಂಗಪ್ಪ ಭೂತೆ, ತಿಪ್ಪೇರುದ್ರಸ್ವಾಮಿ, ಸತ್ಯ ನಾರಾಯಣರಾವ್ ದೇಶಪಾಂಡೆ, ಸಂತೋಷ ಕೆಲೋಜಿ ಸೇರಿ ಹಲವರ ಹೆಸರು ಕೇಳಿ ಬರುತ್ತಿದ್ದು, ಇನ್ನೊಂದು ಅವಧಿಗೆ ಸಿಂಗನಾಳ ವಿರೂಪಾಕ್ಷಪ್ಪ ಕೂಡ ಪ್ರಯತ್ನ ನಡೆಸಿದ್ದಾರೆ.
ಈಗಾಗಲೇ ಕೊಪ್ಪಳ, ಯಲಬುರ್ಗಾ, ಗಂಗಾವತಿ ತಾಲೂಕಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಲಭಿಸಿದ್ದು ಕುಷ್ಟಗಿ, ಕಾರಟಗಿ, ಕನಕಗಿರಿ ತಾಲೂಕಿನವರು ಜಿಲ್ಲಾಧ್ಯಕ್ಷರಾಗಿಲ್ಲ. ಆದ್ದರಿಂದ ಆದ್ಯತೆ ನೀಡುವಂತೆ ಸ್ಥಳೀಯ ಮುಖಂಡರು ಹೈಕಮಾಂಡನ್ನು ಒತ್ತಾಯಿ ಸುತ್ತಿದ್ದಾರೆ. ಇನ್ನೂ 8 ತಿಂಗಳಲ್ಲಿ ಗ್ರಾಪಂ, ಒಂದುವರೆ ವರ್ಷದಲ್ಲಿ ತಾಪಂ, ಜಿಪಂ, ಎಪಿಎಂಸಿ ಚುನಾವಣೆ ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೂತನ ಅಧ್ಯಕ್ಷರ ಹೆಗಲಿಗೆ ಬೀಳಲಿದೆ. ಕೊಪ್ಪಳ, ಕುಷ್ಟಗಿಯಲ್ಲಿ ಕಾಂಗ್ರೆಸ್ ಶಾಸಕರಿದ್ದು, ಇವರಿಗೆ ಪೈಪೋಟಿ ನೀಡಲು ಸೂಕ್ತ ವ್ಯಕ್ತಿ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಬೇಕಿದೆ. ಬಿಜೆಪಿ ಅಥವಾ ಸರಕಾರದ ಮೇಲೆ ಹಿಡಿತ ಹೊಂದಿರುವ ಸಂಘ ಪರಿವಾರದ ಮುಖಂಡರು ಸೂಚಿಸುವ ವ್ಯಕ್ತಿಗಳು ಜಿಲ್ಲಾಧ್ಯಕ್ಷರಾಗಲಿದ್ದು, ಹೊಸ ಮುಖಕ್ಕೆ ಆದ್ಯತೆ ಸಿಗುವ ಸಾಧ್ಯತೆ ಹೆಚ್ಚಿದೆ.
•ಕೆ. ನಿಂಗಜ್ಜ