Advertisement

ಅಕ್ರಮವಾಗಿ ಬಂದವರಿಗೆ ಶೋಧ! ಕಾಲ್ನಡಿಗೆ, ದ್ವಿಚಕ್ರ ವಾಹನಗಳಲ್ಲಿ ರಾಜ್ಯಕ್ಕೆ ಪ್ರವೇಶ

07:55 AM May 15, 2020 | Sriram |

ಮಂಗಳೂರು: ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಪ್ರಸಕ್ತ ಕಾಲದಲ್ಲಿ ಇತರ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಅನೇಕ ವ್ಯಕ್ತಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಅಕ್ರಮವಾಗಿ ಕಾಲ್ನಡಿಗೆ, ದ್ವಿಚಕ್ರ ವಾಹನಗಳ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದಾರೆ.

Advertisement

ಎಲ್ಲ ಗಡಿಗಳಲ್ಲಿ, ನದಿ ಹಾಗೂ ಕಡಲ ತೀರದಲ್ಲಿಯೂ ಪೊಲೀಸ್‌, ಕರಾವಳಿ ಕಾವಲು ಪಡೆಯ ಕಣ್ಗಾವಲು ಇದ್ದರೂ ಅದನ್ನು ಮೀರಿ ಹೊರ ರಾಜ್ಯಗಳಿಂದ ಹಲವಾರು ಮಂದಿ ನುಸುಳಿದ್ದಾರೆ ಎಂಬ ಮಾಹಿತಿ ರಾಜ್ಯ ಸರಕಾರಕ್ಕೆ ಲಭಿಸಿದೆ. ಅಂಥವರ ಮೇಲೆ ಕಣ್ಣಿಡಲು ಹಾಗೂ ಕಡ್ಡಾಯವಾಗಿ ಕ್ವಾರಟೈನ್‌ಗೆ ಒಳಪಡಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಅವರು ಎಲ್ಲ ಗ್ರಾಮ ಪಂಚಾಯತ್‌ ಹಾಗೂ ಸ್ಥಳೀಯಾಡಳಿತಗಳಿಗೆ ಸೂಚಿಸಿದ್ದಾರೆ.

ತಲಾಶೆ ಆರಂಭಜಿಲ್ಲಾಡಳಿತ
ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ತಪಾಸಣೆ ಪ್ರಕ್ರಿಯೆಯಿಂದ ತಪ್ಪಿಸಿಕೊಂಡ, ಇತರ ರಾಜ್ಯಗಳಿಂದ ಹಿಂದಿರುಗಿದವರನ್ನು ಗ್ರಾಮೀಣ, ನಗರ ಪ್ರದೇಶಗಳಲ್ಲಿನ ಸ್ಥಳೀಯ ಅಧಿಕಾರಿಗಳು ತತ್‌ಕ್ಷಣ ಗುರುತಿಸಬೇಕಾಗಿದೆ. ಗ್ರಾ.ಪಂ.ನ ಕಾರ್ಯಪಡೆ ವಿಶೇಷ ಗಮನಹರಿಸಿ, ಆಯಾ ಜಿ.ಪಂ.ನ ಸಿಇಒಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ನಗರ ಪ್ರದೇಶದಲ್ಲಿ ಪತ್ತೆಹಚ್ಚುವ ಜವಾಬ್ದಾರಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳಿಗೆ ನೀಡಲಾಗಿದೆ. ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಮಾಹಿತಿ ನೀಡಬೇಕು.

ಇತರ ರಾಜ್ಯಗಳಲ್ಲಿ ಸಿಕ್ಕಿಬಿದ್ದು ರಾಜ್ಯಕ್ಕೆ ಹಿಂದಿರುಗುವ ಜನರ ಚಲನೆಯನ್ನು ದಾಖಲಿಸಲು ಕರ್ನಾಟಕದ ಪ್ರತೀ ಗಡಿ ಜಿಲ್ಲೆಯಲ್ಲಿಯೂ ಅಧಿಸೂಚಿತ ಪ್ರವೇಶ ಹಾಗೂ ನಿರ್ಗಮನ ಕೇಂದ್ರ ಗಳನ್ನು ಮಾಡಲಾಗಿದೆ. ಅನುಮತಿ ನೀಡಿರುವ ಗಡಿ ರಸ್ತೆಗಳನ್ನು ಹೊರತು ಇತರ ಅಂತಾರಾಜ್ಯ ಮಾರ್ಗಗಳ ಗಡಿ ಈಗಲೂ ಸಂಪೂರ್ಣ ಮುಚ್ಚಿಯೇ ಇದೆ. ಪೊಲೀಸರ ಜತೆಗೆ ಅರಣ್ಯ, ಅಬಕಾರಿ ಇಲಾಖೆಗಳ ಅಧಿಕಾರಿಗಳೂ ಕೈಜೋಡಿಸಿದ್ದಾರೆ.

14 ದಿನ ಕ್ವಾರಂಟೈನ್‌
ಹೊರರಾಜ್ಯದಿಂದ ಕರ್ನಾಟಕಕ್ಕೆ ಬರುವವರು “ಸೇವಾ ಸಿಂಧು’ ಪೋರ್ಟಲ್‌ ಮೂಲಕ ಅರ್ಜಿ ಹಾಕಬೇಕು. ಕುಟುಂಬದಲ್ಲಿ ಮರಣ ಸೇರಿದಂತೆ ತುರ್ತು ಆಗಮನ, ಗರ್ಭಿಣಿಯರು, ವೈದ್ಯಕೀಯ ಸೌಲಭ್ಯ ಬೇಕಾದವರು, ಪ್ರವಾಸಕ್ಕೆ ತೆರಳಿ ಬಾಕಿಯಾಗಿರುವವರು, ವಿದ್ಯಾರ್ಥಿಗಳು, ಹೊರ ದೇಶಗಳಿಂದ ಬಂದು ಇತರ ರಾಜ್ಯಗಳಲ್ಲಿ ಬಾಕಿಯಾದವರು, ವಜಾಗೊಂಡ ಕಾರ್ಮಿಕರು ಸೇರಿದಂತೆ ತುರ್ತು ಅಗತ್ಯಗಳ ಅರ್ಜಿಯನ್ನು ಮಾತ್ರ ಮೊದಲ ಆದ್ಯತೆಯಲ್ಲಿ ಪರಿಗಣಿಸಲಾಗುತ್ತದೆ.ಸೋಂಕು ಲಕ್ಷಣ ಕಂಡರೆ ಆಸ್ಪತ್ರೆಗೆ ಗಡಿಯಲ್ಲಿ ಆರೋಗ್ಯ ತಪಾಸಣೆ ನಡೆಸುವಾಗ ಕೋವಿಡ್ 19 ಶಂಕೆ ಕಂಡರೆ ಸಂಬಂಧಪಟ್ಟ ಆಸ್ಪತ್ರೆಗೆ, ಇಲ್ಲವಾದರೆ ಆಯಾ ಜಿಲ್ಲಾಡಳಿತ ನಡೆಸುವ 14 ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಗುವುದು.

Advertisement

ದ.ಕ. ಜಿಲ್ಲೆಗೆ ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳಿಂದ 25,000 ಮಂದಿ ಆಗಮಿಸುವ ನಿರೀಕ್ಷೆಯಿದೆ. ಬಂದವರೆಲ್ಲರನ್ನೂ ಕಡ್ಡಾಯವಾಗಿ ಜಿಲ್ಲಾಡಳಿತದ ಕ್ವಾರಂಟೈನ್‌ನಲ್ಲಿ ಇಡಲಾಗುವುದು. ಇದಕ್ಕಾಗಿ ಸರಕಾರದ ಸುಮಾರು 10,000 ಕೊಠಡಿಗಳ ವ್ಯವಸ್ಥೆ ಮಾಡಲಾಗುತ್ತಿದೆ. ವೆಚ್ಚವನ್ನು ಅವರೇ ನೀಡುವುದಾದರೆ ನಿಗದಿಪಡಿಸಿರುವ ಹೊಟೇಲ್‌ಗ‌ಳಲ್ಲೂ ಇರಬಹುದು.
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

ಹೊರರಾಜ್ಯದಿಂದ ಮಾಹಿತಿ ನೀಡದೆ ಬರುವವರನ್ನು ಆಯಾಯ ಗ್ರಾ.ಪಂ. ಮಟ್ಟದಲ್ಲಿ ಗುರುತಿಸಿ ಪ್ರತ್ಯೇಕಿಸುವಂತೆ ಸೂಚಿಸಲಾಗಿದೆ. ಎಲ್ಲ ಗ್ರಾ.ಪಂ.ನವರು ತುರ್ತಾಗಿ ಅಂತಹವರ ಬಗ್ಗೆ ವರದಿ ನೀಡಬೇಕು.
-ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next