Advertisement

ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಗಳಿಗೆ ಶೋಧ

06:35 AM Oct 08, 2018 | |

ಬೆಂಗಳೂರು: ಅನಿರೀಕ್ಷಿತವಾಗಿ ಎದುರಾಗಿರುವ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ, ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದೆ.

Advertisement

ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗೆಗಿನ ಗೊಂದಲ ನಿವಾರಣೆಯಾಗಿದ್ದು, ಅಭ್ಯರ್ಥಿಯ ಘೋಷಣೆಯಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಬಿ.ಶ್ರೀರಾಮುಲು ಸೇರಿ ಸ್ಥಳೀಯ ಮುಖಂಡರು ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಮಾಜಿ ಸಂಸದರಾದ ಸಣ್ಣ ಫ‌ಕೀರಪ್ಪ, ಜೆ.ಶಾಂತಾ ಹಾಗೂ ನಿವೃತ್ತ ನ್ಯಾಯಾಧೀಶ ಎನ್‌.ವೈ. ಹನುಮಂತಪ್ಪ ಆಕಾಂಕ್ಷಿಗಳೆನಿಸಿದ್ದಾರೆ. ಇದೀಗ ಹನುಮಂತಪ್ಪ ಅವರ ಪುತ್ರನ ಹೆಸರು ಮುಂಚೂಣಿಗೆ ಬಂದಿದ್ದು, ಅವರನ್ನು ಕಣಕ್ಕಿಳಿಸುವ ಬಗ್ಗೆ ಹಿರಿಯ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಉಪಚುನಾ ವಣೆಗೆ ಸಂಬಂಧಪಟ್ಟಂತೆ ಸ್ಥಳೀಯ ಮುಖಂಡರೊಂದಿಗೂ ಚರ್ಚಿಸಿ, ವಸ್ತುಸ್ಥಿತಿ ಅವಲೋಕಿಸಿ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹಿರಿಯ ನಾಯಕರು ನಿರ್ಧರಿಸಿದ್ದಾರೆ.

ಈ ಮಧ್ಯೆ, ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ಅಭ್ಯರ್ಥಿಗಳ ಆಯ್ಕೆಗೆ ಚರ್ಚೆ
ಶುರುವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಸಂಘಟನೆಯಿಲ್ಲದ ರಾಮನಗರದಲ್ಲಿ ಪಕ್ಷ ಬಲವರ್ಧನೆಗೆ ಗಮನ ನೀಡಿರುವ ಬಿಜೆಪಿ,
ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌ನ ಸಿ.ಎಂ.ಲಿಂಗಪ್ಪ ಅವರ ಪುತ್ರನನ್ನು ಸೆಳೆಯಲು ಕಸರತ್ತು ನಡೆಸಿದೆ. ಜಮಖಂಡಿ ಕ್ಷೇತ್ರದ ಉಪಚುನಾವಣೆಗೂ ಸಮರ್ಥ ಅಭ್ಯರ್ಥಿ ಆಯ್ಕೆ ಲೆಕ್ಕಾಚಾರದಲ್ಲಿ ಮುಖಂಡರು ನಿರತರಾಗಿದ್ದಾರೆ. ಸೋಮವಾರ ಇಲ್ಲವೇ ಮಂಗಳವಾರ ಹಿರಿಯ ನಾಯಕರು ಸಭೆ ಸೇರಿ ಅಭ್ಯರ್ಥಿಗಳ ಆಯ್ಕೆ ಜತೆಗೆ ಚುನಾವಣೆ ಗೆಲ್ಲಲು ಅನುಸರಿಸಬೇಕಾದ ರಣತಂತ್ರದ ಬಗ್ಗೆಯೂ ಮಹತ್ವದ ಚರ್ಚೆ ನಡೆಸಲಿದ್ದಾರೆ. ಜತೆಗೆ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಉಸ್ತುವಾರಿ ಹಂಚಿಕೆ ಬಗ್ಗೆಯೂ ನಿರ್ಧಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next