ನವದೆಹಲಿ: ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಗೆ ಸೇರಿದ ಎಎನ್-32 (ಆ್ಯಂಟನೊವ್-32) ವಿಮಾನದ ಹುಡುಕಾಟ ಮುಂದುವರಿದಿದೆ. ಭಾರತೀಯ ವಾಯುಪಡೆಯ ಹುಡುಕಾಟಕ್ಕೆ ಭೂ ಸೇನೆ, ನೌಕಾಪಡೆಯೂ ಕೈ ಜೋಡಿಸಿದ್ದು, ಮಂಗಳವಾರ ಸಂಜೆಯವರೆಗೂ ಪತ್ತೆಯಾಗಿಲ್ಲ. ವಿಮಾನವು ಪತನಗೊಂಡಿರುವ ಅನುಮಾನಗಳು ದಟ್ಟವಾಗಿವೆ.
ಹುಡುಕಾಟದ ವೇಳೆ, ಎಲ್ಲಿಯೂ ಅದರ ಅವಶೇಷ ಸಿಗದಿರುವುದು ಪ್ರಕರಣವನ್ನು ಮತ್ತಷ್ಟು ನಿಗೂಢವಾಗಿಸಿದ್ದು, ಇದೀಗ ಐಎಎಫ್ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮೊರೆ ಹೋಗಿದೆ. ಇಸ್ರೋ ಉಪಗ್ರಹಗಳ ಸಹಾಯ ದಿಂದ ವಿಮಾನ ಪತ್ತೆಗೆ ಯತ್ನಿಸಲಾಗುತ್ತಿದೆ. ಇಸ್ರೋ ಸಂಸ್ಥೆಯು “ರಿಸ್ಯಾಟ್-ರೇಡಾರ್ ಇಮೇಜಿಂಗ್ ಸ್ಯಾಟಲೈಟ್’ ಅನ್ನು ಇದಕ್ಕಾಗಿ ಬಳಸಿಕೊಂಡಿದೆ.
ಐಎಎಫ್ನ ಸರಕು ಸಾಗಣೆ ಮಾದರಿಯ ಈ ವಿಮಾನದಲ್ಲಿ 8 ಸಿಬ್ಬಂದಿ ಸೇರಿ ಒಟ್ಟು 13 ಜನರಿದ್ದರು. ಅಸ್ಸಾಂನ ಜೋರ್ಹತ್ ವಾಯು ನೆಲೆಯಿಂದ ಅರುಣಾಚಲ ಪ್ರದೇಶದ ಮೆಚುಕಾ ವಾಯು ನೆಲೆಗೆ ಸೋಮವಾರ ಮಧ್ಯಾಹ್ನ 12:23ಕ್ಕೆ ಈ ವಿಮಾನ ಪ್ರಯಾಣ ಬೆಳೆಸಿತ್ತು. ಆಕಾಶಕ್ಕೆ ಹಾರಿ 35 ನಿಮಿಷಗಳ ತರುವಾಯ ವಿಮಾನವು ನಿಯಂತ್ರಣ ಕೊಠಡಿಯ ಸಂಪರ್ಕ ಕಡಿದುಕೊಂಡಿತ್ತು.
ಯೋಧನ ಕುಟುಂಬದ ಪ್ರಾರ್ಥನೆ
ವಿಮಾನದಲ್ಲಿದ್ದ ಸಿಬ್ಬಂದಿಯಲ್ಲಿ ಮೋಹಿತ್ ಗಾರ್ಗ್ (27) ಎಂಬ ಐಎಎಫ್ ಯೋಧರೊಬ್ಬರೂ ಇದ್ದು, ಡೊಮಿನಿಕನ್ ರಿಪಬ್ಲಿಕ್‌ನಲ್ಲಿರುವ ಸಮನಾ ಎಂಬ ಪಟ್ಟಣದಲ್ಲಿರುವ ಅವರ ಕುಟುಂಬ ಅವರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದೆ. ಅಸ್ಸಾಂನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಜಲಂಧರ್ ಮೂಲದ ಯುವತಿಯನ್ನು ಎರಡು ವರ್ಷಗಳ ಹಿಂದಷ್ಟೇ ಇವರು ವಿವಾಹವಾಗಿದ್ದರು ಎಂದು ಅವರ ಕುಟುಂಬ ಹೇಳಿದೆ.